Wrestlers Protest: ಪ್ರತಿಭಟನಾನಿರತ ಕುಸ್ತಿಪಟುಗಳು ಇಲ್ಲಿಯವರೆಗೆ ಗೆದ್ದ ಪದಕಗಳೆಷ್ಟು?
ಭಾರತೀಯ ಕುಸ್ತಿಫೆಡರೇಷನ್ ಅಧ್ಯಕ್ಷ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಇಂದು(ಮಂಗಳವಾರ) ಸಂಜೆ 6 ಗಂಟೆಗೆ ತಾವು ಗೆದ್ದ ಪದಕಗಳನ್ನು ಗಂಗಾ ನದಿಗೆ ಬಿಸಾಡಲು ನಿರ್ಧರಿಸಿದ್ದಾರೆ. ಪ್ರತಿಭಟನಾನಿರತರಾಗಿರುವ ಕುಸ್ತಿಪಟುಗಳು ಗೆದ್ದ ಪದಕಗಳೆಷ್ಟು?, ಪ್ರಶಸ್ತಿಗಳು ಯಾವುವು? ಇಲ್ಲಿದೆ ಮಾಹಿತಿ
Updated on:May 30, 2023 | 2:41 PM

ಸಾಕ್ಷಿ ಮಲಿಕ್ ಫ್ರೀಸ್ಟೈಲ್ ಕುಸ್ತಿಪಟು. 2016 ರ ಸಮ್ಮರ್ ಒಲಿಂಪಿಕ್ಸ್‌ನಲ್ಲಿ,58 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸಾಕ್ಷಿ ಮಲಿಕ್ 2014ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಹಾಗೂ 2015ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಪದ್ಮಶ್ರೀ (2017),ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ (2016) ಪ್ರಶಸ್ತಿ ಗಳಿಸಿದ್ದಾರೆ ಸಾಕ್ಷಿ.

ವಿನೇಶ್ ಫೋಗಟ್ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಎರಡರಲ್ಲೂ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು. ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಒಂದಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದ ಏಕೈಕ ಭಾರತೀಯ ಮಹಿಳಾ ಕುಸ್ತಿಪಟು. 2019 ರಲ್ಲಿ ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್‌ಗೆ ನಾಮನಿರ್ದೇಶನಗೊಂಡ ಮೊದಲ ಭಾರತೀಯ ಅಥ್ಲೀಟ್ ಈಕೆ.

ವಿಶ್ವ ಚಾಂಪಿಯನ್‌ಶಿಪ್ 2019 ರಲ್ಲಿ ವಿನೇಶ್ ತಮ್ಮ ಮೊದಲ ವಿಶ್ವ ಚಾಂಪಿಯನ್‌ಶಿಪ್ ಪದಕವನ್ನು (ಕಂಚಿನ) ಪಡೆದರು. 2018 ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ, ಅರ್ಜುನ ಪ್ರಶಸ್ತಿ ಪಡೆದಿದ್ದಾರೆ.

ಬಜರಂಗ್ ಪುನಿಯಾ ಫ್ರೀಸ್ಟೈಲ್ ಕುಸ್ತಿಪಟು, ಇವರು 65-ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸುತ್ತಾರೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುನಿಯಾ ಕಂಚಿನ ಪದಕವನ್ನು ಗೆದ್ದರು. ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 4 ಪದಕಗಳನ್ನು ಗೆದ್ದ ಏಕೈಕ ಭಾರತೀಯ ಕುಸ್ತಿಪಟು ಪುನಿಯಾ. ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, FICCI ಇಂಡಿಯಾ ಸ್ಪೋರ್ಟ್ಸ್ ಅವಾರ್ಡ್ 2020 ಗಳಿಸಿದ್ದಾರೆ.

Brij Bhushan Sharan

ಏಪ್ರಿಲ್ 23 ರಂದು ಜಂತರ್ ಮಂತರ್‌ನಲ್ಲಿ ಪ್ರಾರಂಭವಾದ ಪ್ರತಿಭಟನೆಯು ಹೊಸ ಸಂಸತ್ ಭವನದ ಉದ್ಘಾಟನೆಯ ದಿನದಂದು ಹೃದಯ ವಿದ್ರಾವಕ ದೃಶ್ಯಗಳನ್ನು ಕಂಡಿತು. ಪ್ರತಿಭಟನಾ ಮೆರವಣಿಗೆ ಹೊರಟಿದ್ದ ಕುಸ್ತಿಪಟುಗಳನ್ನು ಪೊಲೀಸರು ಹಿಡಿದು ಎಳೆದಾಡಿ ಪೊಲೀಸ್ ವ್ಯಾನ್ ಗೆ ತಳ್ಳಿದ್ದರು.

ಭಾರತೀಯ ಕುಸ್ತಿಫೆಡರೇಷನ್ ಅಧ್ಯಕ್ಷ ವಿರುದ್ಧ ಪ್ರತಿಭಟನೆ ನಡೆಸಿತ್ತಿರುವ ಕುಸ್ತಿಪಟುಗಳು ಇಂದು(ಮಂಗಳವಾರ) ಸಂಜೆ 6 ಗಂಟೆಗೆ ತಾವು ಗೆದ್ದ ಪದಕಗಳನ್ನು ಗಂಗಾದಲ್ಲಿ ಹರಿಬಿಡಲು ನಿರ್ಧರಿಸಿದ್ದಾರೆ. ಇದಾದನಂತರ ಇಂಡಿಯಾ ಗೇಟ್ ಬಳಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದ್ದಾರೆ. WFI ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕುಸ್ತಿಪಟುಗಳು ಪಟ್ಟು ಹಿಡಿದಿದ್ದಾರೆ.
Published On - 2:40 pm, Tue, 30 May 23
























