ದೆಹಲಿ: ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದಿಂದ ತೀವ್ರ ಪ್ರತಿಭಟನೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಾರ್ವಜನಿಕ ವಲಯದ ಬ್ಯಾಂಕ್ (public sector bank) ನವರಾತ್ರಿ ಆಚರಣೆ ವೇಳೆ ಉದ್ಯೋಗಿಗಳು ವಸ್ತ್ರ ಸಂಹಿತೆ ಪಾಲಿಸಬೇಕು ಎಂದು ಆದೇಶಿಸಿದ್ದ ನಿರ್ಧಾರವನ್ನು ಹಿಂತೆಗೆದುಕೊಂಡಿದೆ. ಮುಂಬೈನಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರ ಕಚೇರಿಯ ಡಿಜಿಟಲೀಕರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಎ.ಆರ್.ರಾಘವೇಂದ್ರ ಅವರು “ನವರಾತ್ರಿ ಆಚರಣೆ ಮತ್ತು ವಸ್ತ್ರಸಂಹಿತೆ” (Navratri Celebration and Dress Code)ಎಂಬ ಶೀರ್ಷಿಕೆಯ ಸುತ್ತೋಲೆ ಹೊರಡಿಸಿದ್ದರು. ಅಕ್ಟೋಬರ್ 7-15ರ ನಡುವೆ ನವರಾತ್ರಿ ಆಚರಣೆಗೆ ತನ್ನ ಎಲ್ಲಾ ಕೆಲಸಗಾರರು ವಸ್ತ್ರ ಸಂಹಿತೆ ಪಾಲಿಸಬೇಕು ಸುತ್ತೋಲೆ ನಿಯಮಗಳನ್ನು ಪಾಲಿಸದಿದ್ದರೆ ₹ 200 ದಂಡವನ್ನು ವಿಧಿಸಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿತ್ತು.
ಅಕ್ಟೋಬರ್ 1 ರಂದು ಹೊರಡಿಸಲಾದ ಈ ಸುತ್ತೋಲೆ ಪ್ರಕಾರ ಎಲ್ಲಾ ಉದ್ಯೋಗಿಗಳು ಗ್ರೂಪ್ ಫೋಟೊ ಕ್ಲಿಕ್ಕಿಸುವುದು ಕಡ್ಡಾಯ. ಹಳದಿ, ಹಸಿರು, ಕಿತ್ತಳೆ, ಬಿಳಿ, ರಾಯಲ್ ನೀಲಿ, ಗುಲಾಬಿ, ನೇರಳೆ, ಬೂದು, ಕೆಂಪು ಹೀಗೆ ಒಂಬತ್ತು ದಿನ ಈ ಕಲರ್ ಬಟ್ಟೆ ತೊಡಬೇಕು ಎಂದು ಬ್ಯಾಂಕ್ ತನ್ನ ಸೂಚನೆಗಳ ಪಟ್ಟಿಯಲ್ಲಿ ಹೇಳಿದೆ. ಚೆಕ್ ಶರ್ಟ್‌ಗಳಲ್ಲಿ, ಬೇಸ್ ಕಲರ್ ಅನ್ನು ಪರಿಗಣಿಸಲಾಗುವುದು ಎಂದು ಅದು ಹೇಳಿದೆ.
“ಕಚೇರಿಯಲ್ಲಿ ಧಾರ್ಮಿಕ ಹಬ್ಬವನ್ನು ಆಚರಿಸಲು ಅಧಿಕೃತ ಸೂಚನೆಯನ್ನು ನೀಡುವುದು, ವಸ್ತ್ರ ಸಂಹಿತೆ ಪಾಲಿಸುವಂತೆ ಹೇಳುವುದು ಮತ್ತು ದಂಡ ವಿಧಿಸುವುದು ಡಿಜಿಟಲೀಕರಣ ಇಲಾಖೆಯ ವಾಡಿಕೆಯ ಅಧಿಕೃತ ವಿಷಯವಲ್ಲ” ಎಂದು ಉದ್ಯೋಗಿಗಳ ಫೆಡರೇಶನ್ ಹೇಳಿದೆ.
ಈ ಆದೇಶವು ಜಾತ್ಯತೀತತೆಯ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಒಕ್ಕೂಟವು ಬ್ಯಾಂಕಿನ ಒತ್ತಡಹೇರಿತ್ತು.
“ನವರಾತ್ರಿಯು ಒಂದು ಧಾರ್ಮಿಕ ಹಬ್ಬವಾಗಿದೆ ಮತ್ತು ಇದನ್ನು ಖಾಸಗಿಯಾಗಿ ಆಚರಿಸಬೇಕು ಮತ್ತು ಅಧಿಕೃತವಾಗಿ ಸಾರ್ವಜನಿಕ ವಲಯದ ಬ್ಯಾಂಕಿನಲ್ಲಿ ನಮ್ಮ ಸಮಾಜದ ಜಾತ್ಯತೀತ ಬಟ್ಟೆಯ ಕಡೆಗೆ ಹೆಚ್ಚಿನ ಗೌರವವನ್ನು ಉಳಿಸಿಕೊಳ್ಳಬೇಕು. ಯಾವುದೇ ಹಬ್ಬವನ್ನು ಆಚರಿಸುವುದು ಯಾವುದೇ ಸೂಚನೆಗೆ ಅವಕಾಶವಿಲ್ಲದ ಸ್ವಯಂಪ್ರೇರಿತ ವಿದ್ಯಮಾನವಾಗಿದೆ. ಯಾವುದೇ ದಂಡ ವಿಧಿಸುವಂತಿರಬಾರದು ಎಂದು ಅಖಿಲ ಭಾರತ ಯೂನಿಯನ್ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಬರೆದ ಪತ್ರದಲ್ಲಿ ತಿಳಿಸಿದೆ.
ಇದು “ಬ್ಯಾಂಕಿನ 100 ವರ್ಷಗಳ ಇತಿಹಾಸದಲ್ಲಿ ಎಂದಿಗೂ ಸಂಭವಿಸಿಲ್ಲ” ಎಂದು ಅದು ಹೇಳಿದೆ.
ಇದನ್ನೂ ಓದಿ: Lakhimpur Kheri ಲಖಿಂಪುರ್ ಘಟನೆಯನ್ನು ಹಿಂದೂ- ಸಿಖ್ ನಡುವಿನ ಕದನ ಮಾಡಲು ಪ್ರಯತ್ನ ನಡೆಯುತ್ತಿದೆ: ವರುಣ್ ಗಾಂಧಿ
ಇದನ್ನೂ ಓದಿ: Shah Rukh Khan ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ: ಶಾರುಖ್ ಖಾನ್ ನಟಿಸಿದ ಜಾಹೀರಾತು ನಿಲ್ಲಿಸಿದ ಬೈಜೂಸ್
Published On - 4:09 pm, Sun, 10 October 21