Navjot Singh Sidhu: ಅಮೃತಸರದಲ್ಲಿ 62 ಶಾಸಕರ ಪ್ರಾಬಲ್ಯ ಪ್ರದರ್ಶಿಸಿದ ನೂತನ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು

|

Updated on: Jul 21, 2021 | 3:08 PM

Punjab Politics: ಪಂಜಾಬ್​ನ ಕಾಂಗ್ರೆಸ್ ಪಕ್ಷದ ಎಲ್ಲ 77 ಶಾಸಕರನ್ನೂ ಅಮೃತಸರದ ಗೋಲ್ಡನ್ ಟೆಂಪಲ್​ಗೆ ಬರಲು ಸೂಚಿಸಿದ್ದರು. ಆದರೆ, ಅವರಲ್ಲಿ 62 ಶಾಸಕರು ನವಜೋತ್ ಸಿಂಗ್ ಬಣದಲ್ಲಿ ಗುರುತಿಸಿಕೊಂಡಿದ್ದು, ಉಳಿದ 15 ಶಾಸಕರು ಸಿಎಂ ಅಮರೀಂದರ್ ಸಿಂಗ್ ಪರ ಇದ್ದಾರೆ.

Navjot Singh Sidhu: ಅಮೃತಸರದಲ್ಲಿ 62 ಶಾಸಕರ ಪ್ರಾಬಲ್ಯ ಪ್ರದರ್ಶಿಸಿದ ನೂತನ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು
62 ಕಾಂಗ್ರೆಸ್ ಶಾಸಕರ ಜೊತೆ ನವಜೋತ್ ಸಿಂಗ್ ಸಿಧು
Follow us on

ಅಮೃತಸರ: ಪಂಜಾಬ್ ರಾಜ್ಯದ ನೂತನ ಕಾಂಗ್ರೆಸ್ ಅಧ್ಯಕ್ಷರಾಗಿ ನವಜೋತ್ ಸಿಂಗ್ ಸಿಧು ನೇಮಕಗೊಂಡಿದ್ದಾರೆ. ಸಿಧು ಅವರನ್ನು ಕಾಂಗ್ರೆಸ್ ಅಧ್ಯಕ್ಷ ಪಟ್ಟದಲ್ಲಿ ಕೂರಿಸಲು ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಆ ವಿರೋಧದ ನಡುವೆಯೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಮುಖ್ಯಮಂತ್ರಿ ಅಮರೀಂದರ್ ಸಿಂಗ್ (Punjab Chief Minister Amarinder Singh) ಅವರಿಗೆ ತನ್ನ ಪ್ರಾಬಲ್ಯ ತೋರಿಸಲು ನಿರ್ಧರಿಸಿದ್ದ ಸಿಧು ಪಂಜಾಬ್​ನ ಕಾಂಗ್ರೆಸ್ ಪಕ್ಷದ ಎಲ್ಲ 77 ಶಾಸಕರನ್ನೂ ಅಮೃತಸರದ ಗೋಲ್ಡನ್ ಟೆಂಪಲ್​ಗೆ ಬರಲು ಸೂಚಿಸಿದ್ದರು. ಆದರೆ, ಅವರಲ್ಲಿ 62 ಶಾಸಕರು ನವಜೋತ್ ಸಿಂಗ್ (Navjot Singh Sidhu) ಬಣದಲ್ಲಿ ಗುರುತಿಸಿಕೊಂಡಿದ್ದು, ಉಳಿದ 15 ಶಾಸಕರು ಸಿಎಂ ಅಮರೀಂದರ್ ಸಿಂಗ್ ಬಣದಲ್ಲಿದ್ದಾರೆ. ಈ ಮೂಲಕ ತಮ್ಮ ನಾಯಕತ್ವವನ್ನು ಒಪ್ಪಿಕೊಂಡ ಶಾಸಕರ ಸಂಖ್ಯೆ ಹೆಚ್ಚಾಗಿದೆ ಎಂಬ ಸಂದೇಶವನ್ನು ತಮ್ಮ ಎದುರಾಳಿ ಬಣಕ್ಕೆ ನವಜೋತ್ ಸಿಂಗ್ ಸಿಧು ತಲುಪಿಸಿದ್ದಾರೆ.

ಪಂಜಾಬ್​ ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಈಗಾಗಲೇ ಚುನಾವಣಾ ಸಿದ್ಧತೆಯನ್ನು ಆರಂಭಿಸಿವೆ. ಪಂಜಾಬ್​ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ಭಾರೀ ವಿರೋಧದ ನಡುವೆಯೇ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷನನ್ನಾಗಿ ನೇಮಕ ಮಾಡಲಾಗಿದೆ. ಭಾನುವಾರ ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಆದೇಶ ಹೊರಡಿಸಿದೆ.

ನವಜೋತ್ ಸಿಂಗ್ ಅವರನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ವಿರೋಧ ವ್ಯಕ್ತಪಡಿಸಿದ್ದರು. ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ನಡುವೆ ಇತ್ತೀಚೆಗೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿತ್ತು. ಹೀಗಾಗಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದ ನವಜೋತ್ ಸಿಂಗ್ ತಮಗೆ ಪಕ್ಷದಲ್ಲಿ ಗುರುತರ ಜವಾಬ್ದಾರಿ ನೀಡಲು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನವಜೋತ್ ಸಿಂಗ್ ಅವರನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಸೋನಿಯಾ ಗಾಂಧಿ ನೇಮಕ ಮಾಡಿದ್ದಾರೆ.

ತಮ್ಮ ಪರವಾಗಿರುವ 62 ಕಾಂಗ್ರೆಸ್ ಶಾಸಕರೊಂದಿಗೆ ಅಮೃತಸರದ ಗೋಲ್ಡನ್ ಟೆಂಪಲ್​ಗೆ ಭೇಟಿ ನೀಡಿರುವ ನವಜೋತ್ ಸಿಂಗ್ ಸಿಧು ಫೋಟೋಗಳು ವೈರಲ್ ಆಗಿವೆ. ಇದಕ್ಕೆ ಆಟ ಶುರುವಾಗಿದೆ. ನವಜೋತ್ ಸಿಂಗ್ ಸಿಧು 62, ಕ್ಯಾಪ್ಟನ್ ಅಮರೀಂದರ್ ಸಿಂಗ್ 15 ರನ್ ಪಡೆದಿದ್ದಾರೆ ಎಂದು ಬಿಜೆಪಿ ನಾಯಕ ಆರ್​ಪಿ ಸಿಂಗ್ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಈ ಬಾರಿ ಕಾಂಗ್ರೆಸ್​ನ ಹಿರಿಯ ನಾಯಕರಾದ ಪ್ರತಾಪ್ ಸಿಂಗ್ ಬಾಜ್ವಾ ಅವರೇ ಪಂಜಾಬ್​ನ ಕಾಂಗ್ರೆಸ್​ ಅಧ್ಯಕ್ಷರಾಗಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿದ್ದವು. ಆದರೆ, ನವಜೋತ್​ ಸಿಂಗ್ ಸಿಧುಗೆ ಮಣೆ ಹಾಕಿರುವ ಕಾಂಗ್ರೆಸ್ ಹೈಕಮಾಂಡ್ ನಡೆಯಿಂದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಅಸಮಾಧಾನ ಹೆಚ್ಚಾಗಿದೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರೊಂದಿಗೆ ನಾಲ್ವರು ಕಾರ್ಯಾಧ್ಯಕ್ಷರನ್ನು ಕೂಡ ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದೆ. ಸಂಗತ್ ಸಿಂಗ್ ಗಿಲ್ಝಿಯಾನ್, ಸುಖ್ವಿಂದರ್ ಸಿಂಗ್ ದನ್ನಿ, ಪವನ್ ಗೋಯಲ್ ಹಾಗೂ ಕುಲ್ಜಿತ್ ಸಿಂಗ್ ನಗ್ರಾ ಪಂಜಾಬ್​ನ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಈ ಬಾರಿಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಮ್ಮ ಬೆಂಬಲಿಗರಾದ ವಿಜಯೇಂದರ್ ಸಿಂಗ್ ಸಿಂಗ್ಲಾ, ಮನೀಷ್ ತಿವಾರಿ, ಸಂತೋಷ್ ಚೌಧರಿ, ಡಾ. ರಾಜ್​ಕುಮಾರ್ ವರ್ಕ ಅವರನ್ನು ಶಿಫಾರಸು ಮಾಡಿದ್ದರು. ಆದರೆ, ಅವರ್ಯಾರಿಗೂ ಕಾಂಗ್ರೆಸ್ ಹೈಕಮಾಂಡ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನ ನೀಡದಿರುವುದು ಕ್ಯಾಪ್ಟನ್ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧುಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ; ಅಮರೀಂದರ್ ಸಿಂಗ್​ಗೆ ಭಾರೀ ಹಿನ್ನಡೆ

(Punjab Congress Chief Navjot Singh Sidhu Parades MLAs in Show of Strength in Amritsar Golden Temple)