Delhi Chalo ರೈತರ ಪ್ರತಿಭಟನೆ ಅಂತ್ಯಗೊಳಿಸಲು ಕ್ಯಾಪ್ಟನ್ ಅಮರೀಂದರ್ ಸಿಂಗ್ ಪ್ರಯತ್ನ
ದೆಹಲಿ ಚಲೋ ಅಂತ್ಯ ಕಾಣದಿರುವುದು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ರ ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆ ಮುಂದಿನ ವಿಧಾನಸಭಾ ಚುನಾವಣೆ ಅವರ ಎದುರಿಗಿನ ಬೃಹತ್ ಸವಾಲಾಗಿದೆ ಪರಿಣಮಿಸಿದೆ.
ಚಂಡೀಗಢ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷದ ನಾಯಕರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ಕೇಂದ್ರದ ಮೇಲೆ ಒತ್ತಡ ಹೇರುತ್ತಿರುವಾಗಲೇ, ರಾಜ್ಯದ ರೈತರ ದೆಹಲಿ ಚಲೋ ಚಳುವಳಿಯನ್ನು ಅಂತ್ಯಗೊಳಿಸಲು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸತತ ಪ್ರಯತ್ನದಲ್ಲಿ ನಿರತರಾಗಿದ್ದಾರೆ.
ಡಿಸೆಂಬರ್ನಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ರನ್ನು ಭೇಟಿಯಾದ ಬೆನ್ನಲ್ಲೆ ಪಂಜಾಬ್ನಿಂದ ಮೂವರು ತಜ್ಞರನ್ನು ಸಿಎಂ ಅಮರೀಂದರ್ ಸಿಂಗ್ ದೆಹಲಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಇಬ್ಬರು ಹಿರಿಯ IPS ಅಧಿಕಾರಿಗಳು ಮತ್ತು ಓರ್ವ ಕೃಷಿ ತಜ್ಞರನ್ನು ಒಳಗೊಂಡ ಸಮಿತಿಯನ್ನು ಕ್ಯಾಪ್ಟನ್ ಅಮರೀಂದರ್ ಸಿಂಗ್ ಚಳುವಳಿ ನಿರತ ರೈತರ ಬಳಿ ರವಾನಿಸಿದ್ದಾರೆ. ಕೇಂದ್ರ ಸರ್ಕಾರದ ಸಲಹೆಯಂತೆ ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸದೇತಿದ್ದುಪಡಿ ತಂದು ರೈತರನ್ನು ಒಪ್ಪಿಸುವ ಜವಾಬ್ದಾರಿಯನ್ನು ಈ ಸಮಿತಿಗೆ ವಹಿಸಲಾಗಿದೆ.
IPS ಅಧಿಕಾರಿಗಳು ಏನಂತಾರೆ? ಚಳುವಳಿಯನ್ನು ರೈತರು ಇನ್ನಷ್ಟು ಕಾಲ ಮುಂದುವರೆಸಲು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ತಿದ್ದುಪಡಿ ಪ್ರಸ್ತಾಪಕ್ಕೂ ಒಪ್ಪುತ್ತಿಲ್ಲ. ರೈತರು ಮತ್ತು ಅವರ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಕೃಷಿ ಕಾಯ್ದೆ ರದ್ದುಗೊಳಿಸದೇ ರೈತರು ಚಳುವಳಿ ನಿಲ್ಲಿಸಲು ಒಪ್ಪುವ ಸ್ಥಿತಿಯಲ್ಲಿಲ್ಲ ಎಂದು ಪಂಜಾಬ್ನಿಂದ ಚಳುವಳಿ ಶಮನಗೊಳಿಸಲು ನಿಯೋಜಿತರಾದ ಅಧಿಕಾರಿಗಳು ತಿಳಿಸುತ್ತಾರೆ.
ಏಕೆ ಈ ಕಳವಳ? ಪಂಜಾಬ್ನಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ ವರ್ಷವಷ್ಟೇ ಬಾಕಿಯಿರುವುದು ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ರ ತಲೆನೋವಿಗೆ ಕಾರಣವಾಗಿದೆ. ಅಲ್ಲದೇ. ಬಿಜೆಪಿ ಮೇಲಿನ ರೈತರ ಆಕ್ರೋಶವನ್ನು ಆಮ್ಆದ್ಮಿ ಪಕ್ಷ ಬಳಸಿಕೊಳ್ಳುವ ಆತಂಕವೂ ಅವರಲ್ಲಿದೆ. ಆದಷ್ಟು ಬೇಗ ಚಳುವಳಿ ಅಂತ್ಯವಾದಷ್ಟು ಒಳ್ಳೆಯದು ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಪಂಜಾಬ್ನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕುರಿತು ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಇತ್ತೀಚಿಗೆ ಕಳವಳ ವ್ಯಕ್ತಪಡಿಸಿದ್ದರು. ದೆಹಲಿ ಚಲೋ ಕಾನೂನು ಸುವ್ಯವಸ್ಥೆ ಮತ್ತು ಆರ್ಥಿಕ ಕುಸಿತಕ್ಕೆ ಕಾರಣವಾಗಲಿದೆ ಎಂಬುದು ಅವರ ಆತಂಕ. ದೆಹಲಿ ಚಲೋ ಬೆಂಬಲಿತ ಸಿಖ್ ಜನಾಂಗ ಮತ್ತು ಬಿಜೆಪಿ ಬೆಂಬಲಿತ ಹಿಂದೂಪರ ಕಾರ್ಯಕರ್ತರ ನಡುವೆ ಇತ್ತೀಚಿಗೆ ಕಲಹ ಏರ್ಪಟ್ಟಿತ್ತು. ರೈತರ ಚಳುವಳಿ ಇಂತಹ ಸಂಘರ್ಷವನ್ನು ಇನ್ನಷ್ಟು ಹೆಚ್ಚುವ ಸಾಧ್ಯತೆಯಿದ್ದು, ಪಂಜಾಬ್ನಲ್ಲಿ ಅಶಾಂತಿ ತಲೆದೋರುವ ಸಾಧ್ಯತೆಯಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ. ಬಿಜೆಪಿ ನಾಯಕ, ಮಾಜಿ ಸಚಿವರೋರ್ವರ ಮನೆ ಆವರಣದೊಳಗೆ ಸಗಣಿ ಎರಚಿದ ಘಟನೆ ನಡೆದಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.
ದೆಹಲಿ ಚಲೋ ಆರ್ಥಿಕತೆಗಷ್ಟೇ ಅಲ್ಲ.. ಮುಂದೆ ದೇಶದ ಭದ್ರತೆಗೇ ಧಕ್ಕೆ ತರಲಿದೆ: ಅಮರೀಂದರ್ ಎಚ್ಚರಿಕೆ