Pushkar Singh Dhami ಉತ್ತರಾಖಂಡ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಪುಷ್ಕರ್ ಸಿಂಗ್ ಧಾಮಿ

| Updated By: ರಶ್ಮಿ ಕಲ್ಲಕಟ್ಟ

Updated on: Mar 21, 2022 | 6:13 PM

ಪುಷ್ಕರ್ ಸಿಂಗ್ ಧಾಮಿ ಖತಿಮಾ ವಿಧಾನಸಭಾ ಕ್ಷೇತ್ರದಲ್ಲಿ ಸ್ವಂತ ಸ್ಥಾನವನ್ನು ಕಳೆದುಕೊಂಡಿದ್ದರೂ, ಈ ನಿರ್ಧಾರವು 46 ವರ್ಷದ ನಾಯಕನಿಗೆ ಸಿಕ್ಕಿದ ಮನ್ನಣೆಯಾಗಿದೆ ಎಂದು ಪರಿಗಣಿಸಲಾಗಿದೆ.

Pushkar Singh Dhami ಉತ್ತರಾಖಂಡ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಪುಷ್ಕರ್ ಸಿಂಗ್ ಧಾಮಿ
ಪುಷ್ಕರ್ ಸಿಂಗ್ ಧಾಮಿ
Follow us on

ಡೆಹ್ರಾಡೂನ್‌:  ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಉತ್ತರಾಖಂಡದ (Uttarakhand) ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಸೋಮವಾರ ನಡೆದ ಬಿಜೆಪಿ (BJP) ಶಾಸಕಾಂಗ ಪಕ್ಷದ ಸಭೆಯ ನಂತರ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ರಾಜ್ಯ ಬಿಜೆಪಿಯ ಕೇಂದ್ರ ವೀಕ್ಷಕರು, ಕೇಂದ್ರ ಸಚಿವ ರಾಜನಾಥ್ ಸಿಂಗ್ ಮತ್ತು ಹಿರಿಯ ನಾಯಕಿ ಮೀನಾಕ್ಷಿ ಲೇಖಿ ಡೆಹ್ರಾಡೂನ್‌ನಲ್ಲಿರುವ ರಾಜ್ಯ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.ಧಾಮಿ ಖತಿಮಾ ವಿಧಾನಸಭಾ ಕ್ಷೇತ್ರದಲ್ಲಿ ಸ್ವಂತ ಸ್ಥಾನವನ್ನು ಕಳೆದುಕೊಂಡಿದ್ದರೂ, ಈ ನಿರ್ಧಾರವು 46 ವರ್ಷದ ನಾಯಕನಿಗೆ ಸಿಕ್ಕಿದ ಮನ್ನಣೆಯಾಗಿದೆ ಎಂದು ಪರಿಗಣಿಸಲಾಗಿದೆ. ಉತ್ತರಾಖಂಡದಲ್ಲಿ ಧಾಮಿ ಬಿಜೆಪಿ ಪ್ರಚಾರವನ್ನು ಮುನ್ನಡೆಸಿದ್ದು, ಅದು ಪಕ್ಷವನ್ನು ಎರಡನೇ ಬಾರಿಗೆ ಅಧಿಕಾರಕ್ಕೇರುವಂತೆ ಮಾಡಿತ್ತು. ಧಾಮಿ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಹೊರಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ಹಿರಿಯ ನಾಯಕ ಸತ್ಪಾಲ್ ಮಹಾರಾಜ್ ಅವರನ್ನು ಒಳಗೊಂಡ ರೇಸ್‌ನಲ್ಲಿ ಧಾಮಿ ಮುಂಚೂಣಿಯಲ್ಲಿದ್ದರು. ಆದಾಗ್ಯೂ, ಧಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಲವಾದ ಬೆಂಬಲವನ್ನು ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ. ನಿನ್ನೆ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಪ್ರಧಾನಿ ಮೋದಿಯವರಿಂದ ಅನುಮೋದನೆಯ ಮುದ್ರೆ ಬಿದ್ದಿತ್ತು ಎಂದು ಎನ್​​ಡಿ​​ಟಿವಿ ವರದಿ ಮಾಡಿದೆ.


ಯಾರು ಪುಷ್ಕರ್ ಸಿಂಗ್ ಧಾಮಿ?

ಪುಷ್ಕರ್ ಸಿಂಗ್ ಧಾಮಿ ಪಿತೋರಘರ್ ಜಿಲ್ಲೆಯ ತುಂಡಿ ಎಂಬ ಹಳ್ಳಿಯಲ್ಲಿ 16 ಸಪ್ಟೆಂಬರ್, 1975 ರಲ್ಲಿ ಜನಿಸಿದರು. ಅಲ್ಲೇ ಅವರು ಬಾಲ್ಯದ ಶಿಕ್ಷಣ ಪಡೆದುಕೊಂಡರು. ಬಳಿಕ ಅವರ ಕುಟುಂಬ ನಾಗ್ಲ ತರಾಯ್ ಭಾಬರ್ ಎಂಬಲ್ಲಿಗೆ ಸ್ಥಳಾಂತರವಾಯಿತು. ಧಾಮಿ ಲಕ್ನೋ ಯುನಿವರ್ಸಿಟಿಯಿಂದ ಪದವಿ ಪಡೆದರು. ಬಳಿಕ ಅದೇ ವಿಶ್ವವಿದ್ಯಾಲಯದಿಂದ ಎಲ್​ಎಲ್​ಬಿ ಪೂರ್ಣಗೊಳಿಸಿದರು.

ಧಾಮಿ ಅವರ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರು ಸುಬೇದಾರ್ ಆಗಿ ಕಾರ್ಯನಿರ್ವಹಿಸಿದ್ದರು. ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡ್​ನ ಮುಖ್ಯಮಂತ್ರಿ ಅಧಿಕಾರಕ್ಕೆ ಏರುವ ಮೊದಲು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ಸಲಹೆಗಾರರಾಗಿಯೂ ಕೆಲಸ ನಿರ್ವಹಿಸಿದ್ದರು.

ಎಬಿವಿಪಿಯಿಂದ ಉತ್ತರಾಖಂಡ್​ನ ಮುಖ್ಯಮಂತ್ರಿವರೆಗೆ

ಪುಷ್ಕರ್ ತಮ್ಮ1990 ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ಗೆ ಸೇರ್ಪಡೆಗೊಂಡರು. ಆ ಮೂಲಕ ತಮ್ಮ ಸಾಮಾಜಿಕ ಹಾಗೂ ರಾಜಕೀಯ ಜೀವನವನ್ನು ಆರಂಭಿಸಿದರು. ಅವರು 2008ರ ವರೆಗೆ ಭಾರತೀಯ ಜನತಾ ಯುವ ಮೋರ್ಚಾದ ಅಧ್ಯಕ್ಷರೂ ಆಗಿದ್ದರು. ಆ ವೇಳೆ, ರಾಜ್ಯದ ಕೈಗಾರಿಕೆಗಳಲ್ಲಿ ಶೇಕಡಾ 70 ರಷ್ಟು ಉದ್ಯೋಗವನ್ನು ಸ್ಥಳೀಯ ಯುವಕರಿಗೆ ನೀಡಬೇಕು ಎಂದು ಜಾರಿ ಆಗುವಂತೆ ಕಾರ್ಯ ಸಾಧಿಸಿದ ಹೆಗ್ಗಳಿಕೆ ಧಾಮಿ ಅವರ ಪಾಲಿನದು.

ನಂತರ, ಜುಲೈ 3, 2021 ರಂದು ಉತ್ತರಾಖಂಡ್​ನ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಅಧಿಕಾರ ಸ್ವೀಕಾರ ಮಾಡಿದರು. ತೀರಥ್ ಸಿಂಗ್ ರಾವತ್ ಬಳಿಕ ತಮ್ಮ 45ನೇ ವರ್ಷ ವಯಸ್ಸಿನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಏರುವ ಮೂಲಕ ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡ್​ನ ಅತಿ ಕಿರಿಯ ಮುಖ್ಯಮಂತ್ರಿ ಎಂಬ ಕೀರ್ತಿಗೂ ಬಾಜನರಾಗಿದ್ದರು.

ಇದನ್ನೂ ಓದಿ: N Biren Singh ಮಣಿಪುರದ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಎನ್ ಬಿರೇನ್ ಸಿಂಗ್

Published On - 5:44 pm, Mon, 21 March 22