Uttarakhand Election Results: ಮತ್ತೆ ಸರ್ಕಾರ ರಚಿಸುವತ್ತ ಬಿಜೆಪಿ ಚಿತ್ತ; ಆದರೆ ಸಿಎಂ ಅಭ್ಯರ್ಥಿ ಪುಷ್ಕರ್ ಸಿಂಗ್ ಧಾಮಿಗೆ ಸೋಲು
Uttarakhand Assembly Election Results 2022: ಉತ್ತರಾಖಂಡ್ ಮಾತ್ರವಲ್ಲದೆ ಉತ್ತರ ಪ್ರದೇಶದಲ್ಲಿಯೂ ಬಿಜೆಪಿ ಗೆಲುವಿನ ನಗೆ ಬೀರಿದೆ. ಗೋವಾ ಹಾಗೂ ಮಣಿಪುರದಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ ಗೆಲುವಿಗೆ ತಂತ್ರ ಹೆಣೆಯುತ್ತಿದೆ. ಇತ್ತ ಪಂಜಾಬ್ ಮಾತ್ರ ಆಪ್ ಪಾಲಾಗಿದೆ.
ಡೆಹ್ರಾಡೂನ್: ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ (Assembly Election Results 2022) ಹೊರಬಿದ್ದಿದೆ. ಉತ್ತರಾಖಂಡ್ನಲ್ಲಿ ಬಿಜೆಪಿ ಮೇಲುಗೈ (Uttarakhand Assembly Election Results 2022) ಸಾಧಿಸಿದೆ. ಭಾರತೀಯ ಜನತಾ ಪಾರ್ಟಿ ಸ್ಪಷ್ಟ ಬಹುಮತ ಪಡೆದು ತಾನು ಸರ್ಕಾರ ರಚಿಸುವ ಎಲ್ಲಾ ಸೂಚನೆ ಲಭಿಸಿದೆ. ಒಟ್ಟು 70 ವಿಧಾನಸಭಾ ಕ್ಷೇತ್ರಗಳಿರುವ ಉತ್ತರಾಖಂಡ್ನಲ್ಲಿ (4.30 ರ ವೇಳೆಗೆ) ಬಿಜೆಪಿ 48 ಸೀಟ್ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 18 ಸೀಟ್ಗಳ ಮುನ್ನಡೆಯೊಂದಿಗೆ 2ನೇ ಸ್ಥಾನದಲ್ಲಿದೆ. ಉಳಿದಂತೆ ಆಪ್ ಹಾಗೂ ಯುಕೆಡಿ ಯಾವುದೇ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿರುವುದು ಕಂಡುಬಂದಿಲ್ಲ. ಇತರೆ ಅಭ್ಯರ್ಥಿಗಳು 4 ಸ್ಥಾನಗಳಲ್ಲಿ ಮುನ್ನಡೆ ಹೊಂದಿದ್ದಾರೆ (Uttarakhand Election Results). ಉತ್ತರಾಖಂಡ್ ಮಾತ್ರವಲ್ಲದೆ ಉತ್ತರ ಪ್ರದೇಶದಲ್ಲಿಯೂ ಬಿಜೆಪಿ ಗೆಲುವಿನ ನಗೆ ಬೀರಿದೆ. ಗೋವಾ ಹಾಗೂ ಮಣಿಪುರದಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ ಗೆಲುವಿಗೆ ತಂತ್ರ ಹೆಣೆಯುತ್ತಿದೆ. ಇತ್ತ ಪಂಜಾಬ್ ಮಾತ್ರ ಆಪ್ ಪಾಲಾಗಿದೆ.
ಈ ಮಧ್ಯೆ, ಉತ್ತರಾಖಂಡ್ನ ಕಾಂಗ್ರೆಸ್ ಹಾಗೂ ಬಿಜೆಪಿ ಸಿಎಂ ಅಭ್ಯರ್ಥಿಗಳು ಇಬ್ಬರೂ ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋಲುಂಡಿದ್ದರೆ, ಕಾಂಗ್ರೆಸ್ ಸಿಎಂ ಅಭ್ಯರ್ಥಿ ಆಗಿದ್ದ ಹರೀಶ್ ರಾವತ್ (Harish Rawat) ಸೋತಿದ್ದಾರೆ. 2012 ರ ಚುನಾವಣೆ ಹಾಗೂ 2017 ರಲ್ಲಿ ಗೆಲುವು ಸಾಧಿಸಿದ್ದ ಧಾಮಿ ಈ ಬಾರಿ ಸೋಲೊಪ್ಪಿಕೊಳ್ಳಬೇಕಾಗಿ ಬಂದಿದೆ.
ಧಾಮಿಗೆ ಸೋಲು; ಮತ್ತೆ ಸುದ್ದಿಯಲ್ಲಿ ಈ ನಂಬಿಕೆ!
ಯಾರು ಮುಖ್ಯಮಂತ್ರಿ ಅಧಿಕೃತ ನಿವಾಸದಲ್ಲಿ ಉಳಿದುಕೊಳ್ಳುತ್ತಾರೋ ಅವರು ಮುಂದಿನ ಚುನಾವಣೆಯಲ್ಲಿ ಸೀಟು ಕಳೆದುಕೊಳ್ಳುತ್ತಾರೆ ಎಂಬುದು ಉತ್ತರಾಖಂಡ್ನ ನಂಬಿಕೆ ಆಗಿದೆ. ಅದರಂತೆ ಈ ಬಾರಿಯೂ ಧಾಮಿ ಸೋಲುಂಡಿದ್ದಾರೆ. ಚುನಾವಣೆಗೆ ಪೂರ್ವಭಾವಿಯಾಗಿ ಪೂಜೆ, ಪುನಸ್ಕಾರ, ವಾಸ್ತು ಹೋಮ ಇತ್ಯಾದಿ ನಡೆಸಿದ ನಂತರವೂ ಧಾಮಿಗೆ ಸೋಲಾಗಿದೆ. ಪುಷ್ಕರ್ ಸಿಂಗ್ ಧಾಮಿ ಈ ಬಾರಿ ಸೋತಿರುವುದರಿಂದ ಪಕ್ಷ ಗೆದ್ದರೂ ಅವರು ಮುಖ್ಯಮಂತ್ರಿ ಆಗುವುದು ಸಾಧ್ಯವಿಲ್ಲದಂತಾಗಿದೆ. ಉತ್ತರಾಖಂಡ್ ಬಿಜೆಪಿ ಮತ್ತು ಪುಷ್ಕರ್ ಸಿಂಗ್ ಧಾಮಿ ಮುಂದಿನ ನಡೆ ಏನು ಎಂಬುದನ್ನು ಇನ್ನು ಕಾದು ನೋಡಬೇಕಿದೆ.
ಕಾಂಗ್ರೆಸ್ ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ: ಹರೀಶ್ ರಾವತ್
ಸರಿಯಾದ ಪ್ರಚಾರ, ಚುನಾವಣಾ ತಂತ್ರದ ಕೊರತೆಯಿಂದ ನಾವು ಸೋಲಬೇಕಾಗಿ ಬಂದಿದೆ. ಕಾಂಗ್ರೆಸ್ ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ. ನಾನು ಕೂಡ ಜನರ ನಂಬಿಕೆ ಗಳಿಸಲು ವಿಫಲನಾಗಿದ್ದೇನೆ. ಚುನಾವಣೆ ಮತ್ತು ಪಕ್ಷಕ್ಕಾಗಿ ದುಡಿದ ಎಲ್ಲರಿಗೂ ಧನ್ಯವಾದಗಳು. ಅಲ್ಲದೆ, ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಅಭ್ಯರ್ಥಿಗಳಿಗೆ ಮತ್ತು ಗೆಲುವು ಸಾಧಿಸಿರುವ ಮಗಳಿಗೆ ಅಭಿನಂದನೆಗಳು ಎಂದು ಕಾಂಗ್ರೆಸ್ ಸೋಲಿನ ಬಳಿಕ ಕೈ ಪಕ್ಷದ ನಾಯಕ ಹರೀಶ್ ರಾವತ್ ಹೇಳಿಕೆ ನೀಡಿದ್ದಾರೆ. ಹರೀಶ್ ರಾವತ್ ಮಗಳು ಅನುಪಮಾ ರಾವತ್ ವಿಜಯದ ನಗೆ ಬೀರಿದ್ದಾರೆ.
ಉತ್ತರಾಖಂಡ್ನಲ್ಲಿ ನಿರೀಕ್ಷಿತ ಫಲಿತಾಂಶ ಲಭಿಸಿದೆ. ನರೇಂದ್ರ ಮೋದಿ ಹಾಗೂ ಪುಷ್ಕರ್ ಸಿಂಗ್ ಧಾಮಿ ನಾಯಕತ್ವದಲ್ಲಿ ಬಿಜೆಪಿ ಉತ್ತಮ ಕೆಲಸ ಮಾಡಿದೆ. ಈ ಬಾರಿಯೂ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ಇತ್ತ ಉತ್ತರಾಖಂಡ್ ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಮುನ್ನಡೆ ಲಭಿಸಿದೆ. ಉತ್ತರಾಖಂಡ್, ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿದೆ. ಈ ಹಿನ್ನೆಲೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡ್ ಬಿಜೆಪಿ ಚುನಾವಣಾ ಉಸ್ತುವಾರಿಯೂ ಆಗಿರುವ ಪ್ರಲ್ಹಾದ್ ಜೋಶಿ ಟಿವಿ9 ಜೊತೆಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇತ್ತ ಕಾಂಗ್ರೆಸ್ ಭದ್ರಕೋಟೆ ಎಂದು ಗುರುತಿಸಿಕೊಂಡಿದ್ದ ಪಂಜಾಬ್ನಲ್ಲಿ ಈ ಬಾರಿ ಆಪ್ ಜಯಭೇರಿ ಬಾರಿಸಿದೆ. ಹೀಗಾಗಿ ಪಂಚರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ.
ಇದನ್ನೂ ಓದಿ: LakhimpurKheri Result ರೈತರ ಪ್ರತಿಭಟನೆಗಳ ಮೂಲಕ ಸುದ್ದಿಯಾಗಿದ್ದ ಲಖೀಂಪುರ ಖೇರಿಯ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಮುನ್ನಡೆ
Published On - 3:07 pm, Thu, 10 March 22