5 State Election Results 2022: ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಮತ್ತೆ ಬಿಜೆಪಿ, ಗೋವಾ, ಮಣಿಪುರದಲ್ಲಿಯೂ ಬಿಜೆಪಿ ಮುನ್ನಡೆ, ಆಪ್​ಗೆ ಒಲಿದ ಪಂಜಾಬ್

| Edited By: ganapathi bhat

Updated on:Mar 11, 2022 | 7:59 AM

5 State Assembly Election Results 2022 Counting and Updates: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ದೇಶದ ಮಿನಿ ಮಹಾಚುನಾವಣೆ ಎಂದೇ ಪರಿಗಣಿಸುವುದು ವಾಡಿಕೆ. ಇಡೀ ದೇಶದ ಗಮನ ಸೆಳೆದಿರುವ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ತಾಜಾ ಮಾಹಿತಿ, ವಿಶ್ಲೇಷಣೆ ಇಲ್ಲಿದೆ.

5 State Election Results 2022: ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಮತ್ತೆ ಬಿಜೆಪಿ, ಗೋವಾ, ಮಣಿಪುರದಲ್ಲಿಯೂ ಬಿಜೆಪಿ ಮುನ್ನಡೆ, ಆಪ್​ಗೆ ಒಲಿದ ಪಂಜಾಬ್
ಚುನಾವಣೆ ಫಲಿತಾಂಶದ ಮೇಲೆ ಎಲ್ಲರ ಗಮನ ನೆಟ್ಟಿದೆ.

ಪ್ರಸ್ತುತ ನಾಲ್ಕು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತು ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಭವಿಷ್ಯ ಸಂಜೆ ವೇಳೆಗೆ ನಿರ್ಧಾರವಾಗಲಿದೆ. ಮಾರ್ಚ್ 10 ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಮತಗಳ ಎಣಿಕೆಯಲ್ಲಿ ಮೊದಲು ಬ್ಯಾಲೆಟ್ ಪೇಪರ್ ಮತಗಳನ್ನು ಎಣಿಕೆ ಮಾಡಲಾಯಿತು. ನಂತರ ಇವಿಎಂ ಮತಗಳನ್ನು ಎಣಿಕೆ ಮಾಡುವ ಕೆಲಸ ಆರಂಭವಾಯಿತು.  ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ಬಿಜೆಪಿಗೆ ಸ್ಪಷ್ಟ ಗೆಲುವು, ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಉತ್ತರಾಖಂಡ ಮತ್ತು ಗೋವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಐದು ರಾಜ್ಯಗಳ ಮತ ಎಣಿಕೆ ಪ್ರಾರಂಭವಾಗುತ್ತಿದ್ದಂತೆ, ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ – http://www.eci.gov.in ನಲ್ಲಿ ಫಲಿತಾಂಶಗಳು ಲಭ್ಯವಿರುತ್ತವೆ.

LIVE NEWS & UPDATES

The liveblog has ended.
 • 10 Mar 2022 05:39 PM (IST)

  ಉತ್ತರಾಖಂಡ್​​ನಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ

  20 ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ, 27 ಕ್ಷೇತ್ರಗಳಲ್ಲಿ ಮುನ್ನಡೆ. 6 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಜಯ, 13 ಕ್ಷೇತ್ರಗಳಲ್ಲಿ ಮುನ್ನಡೆ. BSPಗೆ ಒಂದು ಕ್ಷೇತ್ರದಲ್ಲಿ ಗೆಲುವು, 1 ಕ್ಷೇತ್ರದಲ್ಲಿ ಮುನ್ನಡೆ. ಉತ್ತರಾಖಂಡ್​​ನಲ್ಲಿ 2 ಕ್ಷೇತ್ರಗಳಲ್ಲಿ ಪಕ್ಷೇತರರಿಗೆ ಮುನ್ನಡೆ ಸಿಕ್ಕಿದೆ.

 • 10 Mar 2022 05:35 PM (IST)

  ಚುನಾವಣಾ ಫಲಿತಾಂಶ ನಮ್ಮ ಆತ್ಮಸ್ಥೈರ್ಯವನ್ನ ಹೆಚ್ಚಿಸಿದೆ -ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು

  ಚುನಾವಣಾ ಫಲಿತಾಂಶ ನಮ್ಮ ಆತ್ಮಸ್ಥೈರ್ಯವನ್ನ ಹೆಚ್ಚಿಸಿದೆ.ಕಾಂಗ್ರೆಸ್​ನಲ್ಲಿ ಸಿದ್ದು ಹಾಗೂ ಡಿಕೆಶಿ ಒಳಜಗಳ ಜೋರಾಗಿದೆ. ಒಬ್ಬರು ಶಾಲು ಕೊಡುವ್ತಾರೆ ಮತ್ತೊಬ್ಬರು ದಾಡಿ ತಿರುಚ್ತಾರೆ. ಸಿದ್ದರಾಮಯ್ಯರನ್ನ ದೂರವಿಡಲು ಡಿಕೆಶಿ ಪ್ರಯತ್ನಿಸುತ್ತಿದ್ದಾರೆ. ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನ ದೂರವಿಡುವ ಪ್ರಯತ್ನ ನಡೆದಿದೆ. ಇಂದು ಹತ್ತಾರು ಜನರು ನಮ್ಮ ಸಂಪರ್ಕದಲ್ಲಿದ್ದಾರೆ. ಸಿಎಂ, ನನಗೆ ಹಾಗೂ ಸಚಿವ ಶ್ರೀರಾಮುಲು ಸಂಪರ್ಕದಲ್ಲಿದ್ದಾರೆ. ನಾವು ನಿಮ್ಮ ಪಕ್ಷಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲು ಚುನಾವಣಾ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿದ್ದಾರೆ.

  ದೇಶದ ಹಳ್ಳಿ ಹಳ್ಳಿಯಲ್ಲೂ ಪ್ರಧಾನಿ ಮೋದಿಯನ್ನ ಒಪ್ಪಿದ್ದಾರೆ. 5 ರಾಜ್ಯಗಳ ಪೈಕಿ 4 ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಅಭೂತಪೂರ್ವವಾದ ಕಾಲ ನಮ್ಮದಾಗುತ್ತಿದೆ. ಕಾಂಗ್ರೆಸ್​​ ವಿದ್ಯುತ್ ಕಂಬ ನಿಲ್ಲಿಸಿದರೂ ಗೆಲ್ಲುತ್ತೆ ಅಂತಿದ್ರು. ಆದ್ರೀಗ ರಾಹುಲ್, ಸೋನಿಯಾ ಗಾಂಧಿ ಸ್ಪರ್ಧಿಸಿದ್ರೂ ಗೆಲ್ಲಲ್ಲ. ಇದೀಗ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನೂ ಗೆಲ್ಲುತ್ತಾನೆ. ಕಾಂಗ್ರೆಸ್​​ನ ಭ್ರಷ್ಟಾಚಾರ, ಕುಟುಂಬ ರಾಜಕಾರಣಕ್ಕೆ ವಿರೋಧವಿದೆ ಎಂದರು.

 • 10 Mar 2022 05:22 PM (IST)

  ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲುಗೆ ಸನ್ಮಾನ

  5 ರಾಜ್ಯಗಳ ಪೈಕಿ 4 ರಾಜ್ಯಗಳಲ್ಲಿ ಬಿಜೆಪಿಗೆ ಗೆಲುವು ಹಿನ್ನೆಲೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಲಾಗುತ್ತಿದ್ದು ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲುಗೆ ಸನ್ಮಾನ ಮಾಡಲಾಗಿದೆ. ಈ ವೇಳೆ ಮಾತನಾಡಿದ ಸಿಎಂ, ಈ ಫಲಿತಾಂಶ ಸಮಸ್ತ ದೇಶಕ್ಕೆ ಅತ್ಯಂತ ಸಂತೋಷದ ಸುದ್ದಿ. ಫಲಿತಾಂಶ ಭಾರತ ದೇಶ ಮುನ್ನಡೆಯುವ ದಿಕ್ಸೂಚಿಯಾಗಿದೆ. ಮೋದಿಯವರ ಯೋಜನೆಗಳ ಬಗ್ಗೆ ಎಲ್ಲರಿಗೂ ಗೌರವವಿದೆ. ಕೆಲ ಶಕ್ತಿಗಳು ಸ್ವಾರ್ಥಕ್ಕಾಗಿ ವಿಚಿತ್ರವಾಗಿ ನಡೆದುಕೊಳ್ತಿದ್ದರು. ಇವತ್ತು ವಿಚಿತ್ರಕಾರ್ಯ ಮಾಡುತ್ತಿದ್ದವರಿಗೆ ಸೋಲುಂಟಾಗಿದೆ. ಮೋದಿ ಮಾತಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವವಿದೆ ಎಂದು ಚುನಾವಣಾ ಫಲಿತಾಂಶ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

  ಯುಪಿಯಲ್ಲಿ ಮೋದಿ, ಆದಿತ್ಯನಾಥ್ ತಂತ್ರಗಳು ಫಲಿಸಿವೆ. ಯುಪಿಯಲ್ಲಿ ಕಾಂಗ್ರೆಸ್​ಗೆ ಒಂದು ಸ್ಥಾನ ಬರುವುದೂ ಡೌಟ್. ಮುಂದಿನ ಸಲ ಕಾಂಗ್ರೆಸ್​​ ಮುಳುಗುವುದು ಕರ್ನಾಟಕದಲ್ಲೇ. ಬಜೆಟ್​​ನಲ್ಲಿ ಘೋಷಿಸಿದ ಎಲ್ಲ ಯೋಜನೆ ಜಾರಿಗೊಳಿಸ್ತೇವೆ. ಇಡೀ ರಾಜ್ಯವನ್ನ ಯಡಿಯೂರಪ್ಪ ನೇತೃತ್ವದಲ್ಲಿ ಸುತ್ತುತ್ತೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನ ಛಿದ್ರಛಿದ್ರ ಮಾಡುತ್ತೇವೆ ಎಂದರು.

 • 10 Mar 2022 04:32 PM (IST)

  ದೇಶದಲ್ಲಿ ಕಾಂಗ್ರೆಸ್ ಧೂಳಿಪಟ ಆಗ್ತಿದೆ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕೂಡ ಧೂಳಿ ಪಟ ಆಗಬೇಕು -ಶ್ರೀರಾಮುಲು

  ಇಷ್ಟು ದಿನಗಳ ಕಾಲ‌ ಕಾಂಗ್ರೆಸ್ ಪಕ್ಷ ಅಂದ್ರೆ ದೊಡ್ಡ ಪಕ್ಷ ಅಂತಿದ್ದೆವು. ಆದ್ರೆ ಕಾಂಗ್ರೆಸ್ ದೇಶದಲ್ಲಿ ಮುಳುಗುತ್ತಿರೋ ಹಡಗು. ಬಿಜೆಪಿಗೆ ನಾಡಿನ, ದೇಶದ ಜನರು ಮ್ಯಾಂಡೇಟರಿ ನೀಡಿದ್ದಾರೆ. ಈ ಸಂಬಂಧಿಸಿದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸ್ತೇನೆ. ದೇಶದಲ್ಲಿ ಕಾಂಗ್ರೆಸ್ ಧೂಳಿಪಟ ಆಗ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕೂಡ ಧೂಳಿ ಪಟ ಆಗಬೇಕು. ಹಾಗಾಗಿ ಸಿಎಂ ಬೊಮ್ಮಾಯಿ, ಅಧ್ಯಕ್ಷ ಕಟೀಲ್ ನೇತೃತ್ವದಲ್ಲಿ ಚುನಾವಣೆ ಹೋಗ್ತೀವಿ. ನಮ್ಮ ನಾಯಕ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸ್ತೇವೆ. ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ ಎಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

 • 10 Mar 2022 04:21 PM (IST)

  ಪಂಚ ರಾಜ್ಯ ಚುನಾವಣಾ ಫಲಿತಾಂಶ ಬೆನ್ನಲ್ಲೇ ಸಭೆ ಕರೆದ ಸೋನಿಯಾ ಗಾಂಧಿ

  ಪಂಚ ರಾಜ್ಯ ಚುನಾವಣಾ ಫಲಿತಾಂಶ ಬೆನ್ನಲ್ಲೇ ಸೋನಿಯಾ ಗಾಂಧಿ ಹಿರಿಯ ಕಾಂಗ್ರೆಸ್​​ ನಾಯಕರ ಸಭೆ ಕರೆದಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್​​ ಸೋಲಿನ ಕುರಿತು ಪರಾಮರ್ಶೆ ಮಾಡಲಿದ್ದಾರೆ.

  Sonia Gandhi

  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ

 • 10 Mar 2022 04:18 PM (IST)

  ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿಗೆ ಸೋಲು

  ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿಗೆ ಸೋಲಾಗಿದೆ. ಬದೌರ್, ಚಮ್ಕೌರ್​ ಸೇರಿ ಎರಡೂ ಕ್ಷೇತ್ರಗಳಲ್ಲಿ ಚರಣ್‌ಜಿತ್ ಸಿಂಗ್ ಚನ್ನಿಗೆ ಸೋಲು.

 • 10 Mar 2022 04:00 PM (IST)

  ಪಂಚ ರಾಜ್ಯಗಳ ಫಲಿತಾಂಶದಿಂದ ನಾವು ಪಾಠ ಕಲಿತಿದ್ದೇವೆ -ರಾಹುಲ್‌ ಗಾಂಧಿ ಟ್ವೀಟ್‌

  5 ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲು ಬೆನ್ನಲ್ಲೆ ಜನರ ತೀರ್ಪನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇವೆ ಎಂದು ಫಲಿತಾಂಶದ ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ. ಪಂಚ ರಾಜ್ಯಗಳ ಫಲಿತಾಂಶದಿಂದ ನಾವು ಪಾಠ ಕಲಿತಿದ್ದೇವೆ. ದೇಶದ ಜನರ ಹಿತಕ್ಕಾಗಿ ಕಾಂಗ್ರೆಸ್ ಶ್ರಮಿಸಲಿದೆ. ‘ಕೈ’ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದವರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

 • 10 Mar 2022 03:57 PM (IST)

  ನೋಯ್ಡಾದಲ್ಲಿ ಪಂಕಜ್ ಸಿನ್ಹಾ ದಾಖಲೆ ಗೆಲುವು

  ಉತ್ತರ ಪ್ರದೇಶದ ನೋಯ್ಡಾದಲ್ಲಿ ದಾಖಲೆ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಪಂಕಜ್ ಸಿಂಗ್​ಗೆ ಗೆಲುವು ಸಿಕ್ಕಿದೆ. 1 ಲಕ್ಷದ 79 ಸಾವಿರ ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಪಂಕಜ್ ಸಿಂಗ್​, ಅಜಿತ್ ಪವಾರ್ ದಾಖಲೆ ಮುರಿದಿದ್ದಾರೆ. ಈ ಹಿಂದೆ ಎನ್​ಸಿಪಿಯ ಅಜಿತ್ ಪವಾರ್​ 1.65 ಮತಗಳನ್ನು ಪಡೆದಿದ್ದರು.

 • 10 Mar 2022 03:55 PM (IST)

  ಉತ್ತರಾಖಂಡ್​ ಸಿಎಂ ಪುಷ್ಕರ್ ಸಿಂಗ್ ಧಾಮಿಗೆ ಸೋಲು

  ಉತ್ತರಾಖಂಡ್​ನ ಖಾತಿಮಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಉತ್ತರಾಖಂಡ್​ ಸಿಎಂ ಪುಷ್ಕರ್ ಸಿಂಗ್ ಧಾಮಿಗೆ ಸೋಲು. ಕಾಂಗ್ರೆಸ್​ನ ಭುವನ್ ಚಂದ್ರ ವಿರುದ್ಧ ಸಿಎಂ ಧಾಮಿ ಸೋತಿದ್ದಾರೆ.

 • 10 Mar 2022 03:50 PM (IST)

  ಖ್ಯಾತ ನಟ ಸೋನು ಸೂದ್‌ ಸಹೋದರಿ ಮಾಳವಿಕಾ ಸೂದ್​ಗೆ ಸೋಲು

  ಪಂಜಾಬ್‌ನ ಮೊಗ ಕ್ಷೇತ್ರದಲ್ಲಿ ಖ್ಯಾತ ನಟ ಸೋನು ಸೂದ್‌ ಸಹೋದರಿ ಮಾಳವಿಕಾ ಸೂದ್‌ಗೆ ಸೋಲು. ಆಪ್ ಅಭ್ಯರ್ಥಿ ಡಾ.ಅಮನದೀಪ್ ಕೌರ್ ವಿರುದ್ಧ 20,000 ಮತಗಳ ಅಂತರದಿಂದ ಮಾಳವಿಕಾಗೆ ಹೀನಾಯ ಸೋಲಾಗಿದೆ.

 • 10 Mar 2022 03:47 PM (IST)

  ಗಾಂಧಿ ಫ್ಯಾಮಿಲಿ ಬಿಟ್ಟು ಹೊರಬರುವ ವರೆಗೂ ಕಾಂಗ್ರೆಸ್ ಉದ್ದಾರ ಆಗಲ್ಲ: ಸಂಸದ ಪ್ರತಾಪ್ ಸಿಂಹ

  ಸೆಮಿಫೈನಲ್​ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದೇವೆ. ಫೈನಲ್ 2024ರ ಲೋಕಸಭಾ ಚುನಾವಣೆಯನ್ನು ಗೆಲ್ಲುತ್ತೇವೆ. ಮಧ್ಯದಲ್ಲಿ ಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಕೂಡಾ ಜಯಭೇರಿ ಬಾರಿಸುತ್ತೇವೆ‌. ಜನ ಮತ್ತೊಮ್ಮೆ ಬಿಜೆಪಿ ಬಯಸಿದ್ದಾರೆ. ಮುಂದೆ ಬಿಜೆಪಿ ಪೂರ್ಣ ಪ್ರಮಾಣದ ಅಧಿಕಾರ ಹಿಡಿಯುತ್ತೆ. ಕಾಂಗ್ರೆಸ್ ಅವನತಿ ಆರಂಭವಾಗಿದೆ. ಪ್ರಿಯಾಂಕಾ ಗಾಂಧಿಯನ್ನ ಇಂದಿರಾಗಾಂಧಿಗೆ ಹೋಲಿಕೆ ಮಾಡಿ ಮೂರು ಬಾರಿ ಪ್ರಚಾರ ಮಾಡಿಸಿದ್ರಿ. ಆದರೂ ಏನೂ ವರ್ಕೌಟ್ ಆಗಿಲ್ಲ. ರಾಹುಲ್ ಗಾಂಧಿಯನ್ನು ಪದೇ ಪದೇ ಲಾಂಚ್ ಮಾಡಿ ಲಾಂಚ್ ಪ್ಯಾಡ್ ಮುರಿದುಹೋಗಿದೆ. ಹೀಗಾಗಿ ಕಾಂಗ್ರೆಸ್ ಲೀಡ್ ಮಾಡುವವರು ಯಾರು ಇಲ್ಲ. ಕರ್ನಾಟಕದ ಮೇಲೂ ಕಾಂಗ್ರೆಸ್ ಆಸೆ ಇಟ್ಟುಕೊಂಡಿದೆ. ಆದರೆ ಪರಿಸ್ಥಿತಿ ಅವರಿಗೆ ವಿರುದ್ಧವಾಗಿದೆ.ಕಾಂಗ್ರೆಸ್​ನವರನ್ನು ಕೇಳುವವರು ದಿಕ್ಕಿಲ್ಲ. ಗಾಂಧಿ ಫ್ಯಾಮಿಲಿ ಬಿಟ್ಟು ಹೊರಬರುವ ವರೆಗೂ ಕಾಂಗ್ರೆಸ್ ಉದ್ದಾರ ಆಗಲ್ಲ. ಕಾಂಗ್ರೆಸ್ ಹೊಸ ನಾಯಕತ್ವದ ಹುಡುಕಾಟದಲ್ಲಿದೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದ್ರು.

 • 10 Mar 2022 03:28 PM (IST)

  ಪಂಜಾಬ್‌ ಫಲಿತಾಂಶ ದೊಡ್ಡ ಕ್ರಾಂತಿ. ನಾನು ಭಯೋತ್ಪಾದಕನಲ್ಲ, ನಿಜವಾದ ದೇಶಭಕ್ತ -ದೆಹಲಿ ಸಿಎಂ ಕೇಜ್ರಿವಾಲ್‌

  ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿಗೆ ಪ್ರಚಂಡ ಬಹುಮತ ಸಿಕ್ಕಿದೆ. ಆಪ್‌ ಬೆಂಬಲಿಸಿದ್ದಕ್ಕೆ ಪಂಜಾಬ್‌ನ ಜನತೆಗೆ ಧನ್ಯವಾದಗಳು ಎಂದು ಆಪ್‌ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಕೇಜ್ರಿವಾಲ್‌ ಆಪ್ ಕಚೇರಿಯಲ್ಲಿ ವಿಜಯೋತ್ಸವ ಭಾಷಣದಲ್ಲಿ ಧನ್ಯವಾದ ತಿಳಿಸಿದ್ದಾರೆ. ಪಂಜಾಬ್‌ ಫಲಿತಾಂಶ ದೊಡ್ಡ ಕ್ರಾಂತಿ. ನಾನು ಭಯೋತ್ಪಾದಕನಲ್ಲ, ನಿಜವಾದ ದೇಶಭಕ್ತ. ನಾನು ನಿಜವಾದ ದೇಶಭಕ್ತನೆಂದು ಫಲಿತಾಂಶ ಸಾಬೀತುಪಡಿಸಿದೆ ಎಂದು ಹೇಳುವ ಮೂಲಕ ಭಯೋತ್ಪಾದಕನೆಂದು ಟೀಕಿಸಿದ್ದವರಿಗೆ ಕೇಜ್ರಿವಾಲ್ ತಿರುಗೇಟು ಕೊಟ್ಟಿದ್ದಾರೆ.

 • 10 Mar 2022 03:10 PM (IST)

  ಪಂಜಾಬ್ ಪಿಸಿಸಿ ಅಧ್ಯಕ್ಷ ಸಿಧುಗೆ ಸೋಲು

  ಪಂಜಾಬ್ ಪಿಸಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧುಗೆ ಸೋಲು. ಅಮೃತಸರ ಪೂರ್ವ ಕ್ಷೇತ್ರದ ಅಭ್ಯರ್ಥಿ ಸಿಧುಗೆ 6,750 ಮತಗಳಿಂದ ಹೀನಾಯ ಸೋಲಾಗಿದೆ.

 • 10 Mar 2022 03:07 PM (IST)

  ನಾನು ಭಗತ್‌ ಸಿಂಗ್‌ರವರ ಸ್ವಗ್ರಾಮ ಖಟ್ಕರ್‌ಕಾಲನ್​ನಲ್ಲಿ ಪ್ರಮಾಣವಚನ ಸ್ವೀಕರಿಸುವೆ -ಭಗವಂತ್‌ ಮಾನ್‌

  ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿಗೆ ಪ್ರಚಂಡ ಬಹುಮತ ಸಿಕ್ಕಿದೆ. ಆದ್ರೆ ರಾಜಭವನದಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲ್ಲ ಎಂದು ಆಪ್ ಸಿಎಂ ಅಭ್ಯರ್ಥಿ ಭಗವಂತ್‌ ಮಾನ್‌ ತಿಳಿಸಿದ್ದಾರೆ. ನಾನು ಹುತಾತ್ಮ ಭಗತ್ ಸಿಂಗ್ ಸ್ವಗ್ರಾಮದಲ್ಲಿ ಪ್ರಮಾಣವಚನ ಸ್ವೀಕರಿಸುವೆ. ಖಟ್ಕರ್‌ಕಾಲನ್‌ ಗ್ರಾಮದಲ್ಲಿ ಪ್ರಮಾಣವಚನ ಸ್ವೀಕರಿಸ್ತೇನೆ ಎಂದು ತಿಳಿಸಿದ್ದಾರೆ.

 • 10 Mar 2022 03:01 PM (IST)

  ಸಬ್ ಖಾ ಸಾತ್ ಸಬ್ ಖಾ ವಿಕಾಸ್ ಮಾತಿನಂತೆ ಅಕ್ಷರಶಃ ನಿಜವಾಗುತ್ತಿದೆ -ಸಿಎಂ ಬೊಮ್ಮಾಯಿ

  ಐದು ರಾಜ್ಯಗಳ ಫಲಿತಾಂಶ ಬಂದಿದೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯ ಸಾಧಿಸಿ, ಸರ್ಕಾರ ರಚನೆಗೆ ಜನರ ಆಶೀರ್ವಾದ ಪಡೆದಿದೆ. ಉತ್ತರ ಪ್ರದೇಶದಲ್ಲಿ ಹೆಚ್ಚು ಸ್ಥಾನ ಪಡೆದು, ಮೋದಿ ಹಾಗೂ ಯೋಗಿಯ ಡಬಲ್ ಇಂಜಿನ್ ಸರ್ಕಾರ ನಡೆಸಲು ಮುಂದಾಗಿದೆ ಎಂದು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಐದು ರಾಜ್ಯದ ಜನತೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲಾ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮೋದಿ, ಅಮಿತ್ ಶಾ ಅಭಿನಂದನೆ ಸಲ್ಲಿಸುತ್ತೇನೆ. ಕೊವಿಡ್ ನಿರ್ವಹಣೆ ಹಾಗೂ ಅಭಿವೃದ್ಧಿ ಕೆಲಸವನ್ನ ಜನ ಮೆಚ್ಚಿದ್ದಾರೆ. ವಿರೋಧ ಪಕ್ಷವನ್ನ ದೂಳಿಪಟ ಮಾಡಿದ್ದಾರೆ. ಬರುವ ದಿನಗಳಲ್ಲಿ ನವ ಭಾರತ ನಿರ್ಮಾಣವಾಗಲಿದೆ. ಸಬ್ ಖಾ ಸಾತ್ ಸಬ್ ಖಾ ವಿಕಾಸ್ ಮಾತಿನಂತೆ ಅಕ್ಷರಶಃ ನಿಜವಾಗುತ್ತಿದೆ. ಸಧೃಡ ದೇಶ ಕಟ್ಟುವ ಕೆಲಸ ಆಗುತ್ತಿದೆ. ಏಪ್ರಿಲ್ ತಿಂಗಳಲ್ಲಿ ಮೋದಿಜಿ ಕರ್ನಾಟಕಕ್ಕೆ ಬರ್ತಾರೆ. ಮೋದಿಜಿ ಮೂಲಕ ಕರ್ನಾಟಕ ಕಾರ್ಯಕ್ರಮಗಳನ್ನ ತರ್ತಿವಿ ಎಂದರು.

 • 10 Mar 2022 02:56 PM (IST)

  ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆಯಾಗುವುದು ಖಚಿತ -ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್

  ಪಂಚರಾಜ್ಯ ಚುನಾವಣೆ ಬಿಜೆಪಿ ಜಯಭೇರಿ ಹಿನ್ನಲೆ ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆಯಾಗುವುದು ಖಚಿತ ಎಂದು ಬೆಂಗಳೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಸಂಪುಟ ಬದಲಾವಣೆಯಾಗುತ್ತದೆ ಆದ್ರೆ ನಾಯಕತ್ವ ಬದಲಾವಣೆಯಾಗಲ್ಲ. ಅಭಿವೃದ್ಧಿ ಕಾರ್ಯ ಇನ್ನಷ್ಟು ಚುರುಕು ಪಡೆಯುತ್ತದೆ ಎಂದರು.

 • 10 Mar 2022 02:53 PM (IST)

  ಕಾಂಗ್ರೆಸ್ ಇನ್ನು ಮುಂದೆ ಭೂತಕಾಲದ ಪಾರ್ಟಿ.. ವರ್ತಮಾನದಲ್ಲಿ ಇಲ್ಲ ಭವಿಷ್ಯದಲ್ಲೂ ಕಾಂಗ್ರೆಸ್ ಇರಲ್ಲ

  ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲೂ ಧೂಳಿಪಟವಾಗಿದೆ. ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ. ಕೇವಲ ಎರಡು ಅಂಕೆಯನ್ನು ದಾಟಲು ಕಾಂಗ್ರೆಸ್ಸಿಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ಇನ್ನು ಮುಂದೆ ಭೂತಕಾಲದ ಪಾರ್ಟಿ. ವರ್ತಮಾನದಲ್ಲಿ ಇಲ್ಲ ಭವಿಷ್ಯದಲ್ಲೂ ಕಾಂಗ್ರೆಸ್ ಇರಲ್ಲ. ನಮ್ಮೆಲ್ಲಾ ಕಾರ್ಯಕರ್ತರಿಗೆ ಫಲಿತಾಂಶ ಉತ್ಸಾಹ ಕೊಟ್ಟಿದೆ. ಇದೇ ಉತ್ಸಾಹದಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾಗಲಿದೆ . ಇದಕ್ಕೆ ಬೇಕಾದ ಎಲ್ಲಾ ತಂತ್ರಗಾರಿಕೆ ಮಾಡುತ್ತೇವೆ. ಅಭಿವೃದ್ಧಿ, ಹಿಂದುತ್ವ, ದಕ್ಷ ಆಡಳಿತಕ್ಕೆ ಯುಪಿಯಲ್ಲಿ ಜಯ ಸಿಕ್ಕಿದೆ. ಯೋಗಿ ದಕ್ಷ ಆಡಳಿತ, ಮೋದಿ ಜನಪ್ರಿಯತೆ ಮತ್ತೆ ಯಶಸ್ವಿಯಾಗಿದೆ. ಉತ್ತರಕಾಂಡ ಗೋವಾ ಮಣಿಪುರದಲ್ಲಿ ಮರು ಆಯ್ಕೆಗೊಂಡಿದ್ದೇವೆ. ರಾಜ್ಯ ಮತ್ತು ರಾಷ್ಟ್ರ ರಾಜಕಾರಣಕ್ಕೆ ಫಲಿತಾಂಶ ದಿಕ್ಸೂಚಿಯಾಗಿದೆ. ರಾಹುಲ್ ಗಾಂಧಿ ನಾಯಕತ್ವ ಒಪ್ಪಲು ಸಾಧ್ಯವಿಲ್ಲ ಎಂದು ಜನತೆ ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ನಾವಿಕರಿಲ್ಲದ ದೋಣಿಯಾಗಿದೆ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.

 • 10 Mar 2022 02:49 PM (IST)

  ದೆಹಲಿಯ ಹನುಮಾನ್ ದೇವಾಲಯದಲ್ಲಿ ಅರವಿಂದ್ ಕೇಜ್ರಿವಾಲ್ ಪ್ರಾರ್ಥನೆ

  ಪಂಜಾಬ್​ನಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ದೆಹಲಿಯ ಹನುಮಾನ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.

 • 10 Mar 2022 02:30 PM (IST)

  ಗೋವಾದಲ್ಲಿ ಪಕ್ಷೇತರ ಅಭ್ಯರ್ಥಿಗಳೊಂದಿಗೆ ಬಿಜೆಪಿ ಮಾತುಕತೆ

  ಗೋವಾದಲ್ಲಿ ಅತಂತ್ರ ಫಲಿತಾಂಶದ ಸಾಧ್ಯತೆ ನಿಚ್ಚಳವಾಗಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಫಲಿತಾಂಶ ಘೋಷಣೆಗೆ ಮೊದಲೇ ಬಿಜೆಪಿ ಪಕ್ಷೇತರ ಅಭ್ಯರ್ಥಿಗಳೊಂದಿಗೆ ಮಾತುಕತೆಗೆ ಮುಂದಾಗಿದೆ. 40 ಸದಸ್ಯ ಬಲದ ಗೋವಾದಲ್ಲಿ ಬಿಜೆಪಿ 19, ಕಾಂಗ್ರೆಸ್ 12, ಟಿಎಂಸಿ 3, ಆಪ್ 2 ಮತ್ತು ಪಕ್ಷೇತರರು ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.

 • 10 Mar 2022 02:27 PM (IST)

  ಯೋಗಿ ಆದಿತ್ಯನಾಥ್ ವೇಷ ಧರಿಸಿ ಬಿಜೆಪಿ ಕಚೇರಿಗೆ ಬಂದ ಮಗು

  ಉತ್ತರ ಪ್ರದೇಶದ ಲಖನೌ ನಗರದಲ್ಲಿರುವ ಬಿಜೆಪಿ ಕಚೇರಿಗೆ ಒಂದೂವರೆ ವರ್ಷದ ಮಗು ನವ್ಯಾಳನ್ನು ಪೋಷಕರು ಯೋಗಿ ಆದಿತ್ಯನಾಥ್​ರ ರೀತಿ ವೇಷಭೂಷಣ ತೊಡಿಸಿ ಕರೆತಂದಿದ್ದಾರೆ. ಪುಟಾಣಿ ನವ್ಯಾ ತನ್ನ ಕೈಲಿ ಬುಲ್​ಡೋಜರ್ ಹಿಡಿದಿದ್ದು, ಫೋಟೊಗಳಿಗೆ ಪೋಸ್ ಕೊಡುತ್ತಿದ್ದಾಳೆ.

 • 10 Mar 2022 01:52 PM (IST)

  ಪಂಜಾಬ್​ನಲ್ಲಿ ಬಿಜೆಪಿ ಸೋತಿದೆ, ಜಂಬ ಅನಗತ್ಯ: ಸಿದ್ದರಾಮಯ್ಯ

  ಬೆಂಗಳೂರು: ಐದು ರಾಜ್ಯಗಳ ಚುನಾವಣೆಯ ಇನ್ನೂ ಪೂರ್ಣ ಪ್ರಮಾಣದಲ್ಲಿ ಪ್ರಕಟವಾಗಿಲ್ಲ. ಐದು ರಾಜ್ಯಗಳ ಪೈಕಿ ಪಂಜಾಬ್​ನಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಇತರ ರಾಜ್ಯಗಳಲ್ಲಿ ನಾವು ಅಧಿಕಾರದಲ್ಲಿ ಇರಲಿಲ್ಲ. ಉತ್ತರಖಂಡ ಮತ್ತು ಗೋವಾದಲ್ಲಿ ಅಧಿಕಾರಕ್ಕೆ ಬರುವ ನಿರೀಕ್ಷೆ ಇತ್ತು. ನಮ್ಮ ತಪ್ಪಿನಿಂದ ಪಂಜಾಬ್​ನಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

  ಪಂಜಾಬ್​ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ, ಅಧಿಕಾರಕ್ಕೆ ಬಂದಿರುವುದು ಆಪ್. ಈ ಚುನಾವಣೆಗಳಿಂದ ನಾನೇನು ಬಹಳ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಆದರೆ ಗೋವಾ ಮತ್ತು ಉತ್ತರಾಖಂಡದಲ್ಲಿ ಅಧಿಕಾರಕ್ಕೆ ಬರಬಹುದೆಂಬ ಅಂದಾಜು ಇತ್ತು. ಈ ಚುನಾವಣೆಯಿಂದ ಧೈರ್ಯ ಕಳೆದುವಂಥದ್ದೇನಿಲ್ಲ. ಅಧಿಕಾರ ಇದ್ದ ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ ಅಷ್ಟೇ. ಬಹಳ ಜಂಗ ಪಡುವುದು ಅನಗತ್ಯ ಎಂದರು.

  Leader of Opposition Siddaramaiah

  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

 • 10 Mar 2022 01:47 PM (IST)

  ಗೋವಾದಲ್ಲಿ ಇಬ್ಬರು ಆಪ್ ಅಭ್ಯರ್ಥಿಗಳಿಗೆ ಜಯ: ಅಭಿನಂದಿಸಿ ಟ್ವೀಟ್ ಮಾಡಿದ ಕೇಜ್ರಿವಾಲ್

  ಗೋವಾದ ಎರಡು ಕ್ಷೇತ್ರಗಳಲ್ಲಿ ಆಪ್ ಗೆಲುವು ಸಾಧಿಸಿದೆ. ಈ ಬೆಳವಣಿಗೆ ಸ್ವಾಗತಿಸಿರುವ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಗೋವಾದ ಮತದಾರರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ಕ್ಯಾಪ್ಟನ್ ವೆನ್​ಜಿ ಮತ್ತು ಎರ್ಕ್ರೂಸ್ ಅವರಿಗೆ ಶುಭವಾಗಲಿ. ಈ ಗೆಲುವು ಗೋವಾದಲ್ಲಿ ಪ್ರಾಮಾಣಿಕ ರಾಜಕಾರಣದ ಮುನ್ನುಡಿ ಬರೆದಿದೆ ಎಂದಿದ್ದಾರೆ.

 • 10 Mar 2022 01:38 PM (IST)

  ಅಯೋಧ್ಯೆ, ಕಾಶಿ ಮತ್ತು ಮಥುರಾದಲ್ಲಿ ವಿಜೃಂಭಿಸಿದ ಬಿಜೆಪಿ

  ಅಯೋಧ್ಯೆ, ವಾರಣಾಸಿ ಮತ್ತು ಮಥುರ ಸುತ್ತಮುತ್ತಲ 18 ಕ್ಷೇತ್ರಗಳ ಪೈಕಿ 14ರಲ್ಲಿ ಬಿಜೆಪಿ ಸ್ಪಷ್ಟ ಮುನ್ನಡೆ ದಾಖಲಿಸಿದೆ. ಬಿಜೆಪಿಯ ಮಿತ್ರಪಕ್ಷ ಅಪ್ನಾದಳ್ ಒಂದು ಕ್ಷೇತ್ರದಲ್ಲಿ ಮತ್ತು ಎಸ್​ಪಿ ಮೂರು ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದೆ. ಮಥುರ ಜಿಲ್ಲೆಯ ಎಲ್ಲ ಐದು, ಅರೋಧ್ಯೆಯ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ವಾರಣಾಸಿ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 7ರಲ್ಲಿ ಬಿಜೆಪಿ ಮುನ್ನಡೆ ದಾಖಲಿದೆ.

 • 10 Mar 2022 01:30 PM (IST)

  ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಶೇ 42ರಷ್ಟು ಮತ

  ಉತ್ತರ ಪ್ರದೇಶ ಚುನಾವಣೆಯಲ್ಲಿ ಮತಎಣಿಕೆ ವೇಗವಾಗಿ ನಡೆಯುತ್ತಿದೆ. ಈವರೆಗಿನ ಎಣಿಕೆ ಮಾಹಿತಿ ಪ್ರಕಾರ ಚಲಾವಣೆಯಾದ ಒಟ್ಟು ಮತಗಳ ಪೈಕಿ ಬಿಜೆಪಿಗೆ ಶೇ 42, ಸಮಾಜವಾದಿ ಪಕ್ಷಕ್ಕೆ ಶೇ 32, ಬಿಎಸ್​ಪಿಗೆ ಸೇ 13ರಷ್ಟು ಮತಗಳು ಸಿಕ್ಕಿವೆ.

 • 10 Mar 2022 01:24 PM (IST)

  Punjab Assembly Election Results: ಪಂಜಾಬ್​ ಮುಖ್ಯಮಂತ್ರಿ ಗದ್ದುಗೆ ಏರಲಿದ್ದಾರೆ ಭಗವಂತ್ ಮಾನ್

  ಪಂಜಾಬ್​ ಮುಖ್ಯಮಂತ್ರಿ ಗದ್ದುಗೆ ಕಾಮಿಡಿಯನ್​ ಪಾಲಿಗೆ

  ಭಗವಂತ್ ಮಾನ್​ ತಮ್ಮ ಹಾಸ್ಯವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ರಾಜಕೀಯಕ್ಕೆ ಧುಮುಕಿದರು. ಇವರು ಮೊದಲು ಸೇರಿದ್ದು ಪೀಪಲ್ಸ್ ಪಾರ್ಟಿ ಆಫ್​ ಪಂಜಾಬ್ ಪಕ್ಷಕ್ಕೆ. ಆಪ್​ಗೆ ಸೇರ್ಪಡೆಯಾಗಿದ್ದು 2014ರಲ್ಲಿ. ಭಗವಂತ್ ಮಾನ್ ಬದುಕಿನ ವಿವರ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

  ಪಂಜಾಬ್​ ಮುಖ್ಯಮಂತ್ರಿ ಗದ್ದುಗೆ ಕಾಮಿಡಿಯನ್​ ಪಾಲಿಗೆ

 • 10 Mar 2022 01:18 PM (IST)

  Photo Gallery: ಚಿಕ್ಕ ವಯಸ್ಸಿನಲ್ಲೇ ಸನ್ಯಾಸ ಸ್ವೀಕರಿಸಿದ ಯೋಗಿ ಆದಿತ್ಯನಾಥ್ ಉತ್ತಮ ವಾಗ್ಮಿಯೂ ಹೌದು

  1998ರಲ್ಲಿ ಯೋಗಿ ಭಾರತೀಯ ಜನತಾ ಪಕ್ಷದ ಟಿಕೆಟ್‌ ಪಡೆದು ಮೊದಲ ಬಾರಿಗೆ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು. ಗೆಲುವು ಸಾಧಿಸಿ ಲೋಕಸಭೆ ಪ್ರವೇಶಿಸಿದ ಅವರು, ಆ ಅವಧಿಯ ಅತ್ಯಂತ ಕಿರಿಯ ಸಂಸದರಾಗಿದ್ದರು. ಫೋಟೊ ಗ್ಯಾಲರಿ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.

  ಚಿತ್ರಗಳಲ್ಲಿ ಯೋಗಿ ಬದುಕಿನ ಚಿತ್ರಣ

 • 10 Mar 2022 01:13 PM (IST)

  Uttar Pradesh Assembly Election: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬದುಕಿನ ವಿವರಗಳು ಇಲ್ಲಿವೆ

  ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಸಿಎಂ ಆಗುವುದು ಖಚಿತವಾಗಿದೆ. ಉತ್ತರ ಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ರಾಜಕೀಯಕ್ಕೆ ಪ್ರವೇಶ ಕೊಡುವ ಮೊದಲು ಹೇಗಿದ್ದರು? ಏನು ಮಾಡುತ್ತಿದ್ದರು? ಅವರ ಪೂರ್ವಾಶ್ರಮದ ಹೆಸರೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.

  ಪ್ರಭಾವಿ ನಾಯಕನ ಜೀವನ ಚಿತ್ರಣ

 • 10 Mar 2022 01:06 PM (IST)

  ಹುಬ್ಬಳ್ಳಿಯಲ್ಲಿ ಆಪ್ ಕಾರ್ಯಕರ್ತರ ಸಂಭ್ರಮ

  ಪಂಜಾಬ್​ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಗೆಲುವು ದೊರೆತ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಆಪ್ ಕಾರ್ಯಕರ್ತರು ಸಂಭ್ರಮ ಹಂಚಿಕೊಂಡರು. ಚೆನ್ನಮ್ಮ ವೃತ್ತದ ಬಳಿ ಪರಸ್ಪರ ಬಣ್ಣ ಹಚ್ಚಿಕೊಂಡು ಖುಷಿ ಹಂಚಿಕೊಂಡರು. ಕೇಜ್ರಿವಾಲ್ ಜಿಂದಾಬಾದ್, ದಿಲ್ಲಿಗೂ ಬಂದಾನ, ಪಂಜಾಬ್​ಗೂ ಬಂದಾನ, ಮುಂದ ಕರ್ನಾಟಕಕ್ಕೂ ಬರ್ತಾನಾ ಎಂದು ಘೋಷಣೆಗಳನ್ನು ಕೂಗಿದರು.

 • 10 Mar 2022 01:00 PM (IST)

  ಕರ್ನಾಟಕದ ಮೇಲೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಪ್ರಭಾವ: ಯಡಿಯೂರಪ್ಪ

  ಬೆಂಗಳೂರು: ಕರ್ನಾಟಕದ ಮೇಲೆಯೂ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಭಾವ ಬೀರಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಮುಂದಿನ ದಿನಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 130 ಕ್ಷೇತ್ರಗಳಲ್ಲಿ ಗೆಲ್ಲುವುದು ನಿಶ್ಚಿತ. ಕಾಂಗ್ರೆಸ್ ನಾಯಕತ್ವ ಇಲ್ಲದ ಪಕ್ಷವಾಗಿದೆ. ಗೋವಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಾಯಲು ಡಿಕೆಶಿ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.

  ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನು ಎಂಬುದು ಇದರಿಂದ ಗೊತ್ತಾಗುತ್ತದೆ. ನಾವು ಯಾರನ್ನೂ ಬನ್ನಿ ಎಂದು ಕರೆಯುತ್ತಿಲ್ಲ, ಬಿಜೆಪಿ ತತ್ವ ಸಿದ್ಧಾಂತ, ಮೋದಿ ನಾಯಕತ್ವ ಮೆಚ್ಚಿ ಬಂದರೆ ಸ್ವಾಗತ. ರಾಜ್ಯದಲ್ಲಿ ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸುತ್ತೇವೆ ಎಂದರು.

  BS Yediyurappa BJP

  ಬಿಎಸ್ ಯಡಿಯೂರಪ್ಪ (ಸಂಗ್ರಹ ಚಿತ್ರ)

 • 10 Mar 2022 12:53 PM (IST)

  ಜನರ ಮಾತು ದೇವವಾಣಿ: ಸಿಧು ಟ್ವೀಟ್

  ಪಂಜಾಬ್​ನಲ್ಲಿ ಜನರು ನೀಡಿರುವ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಜನರ ಮಾತು ದೇವವಾಣಿಯಿದ್ದಂತೆ ಎಂದು ಪಂಜಾಬ್​ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಟ್ವೀಟ್ ಮಾಡಿದ್ದಾರೆ.

 • 10 Mar 2022 12:37 PM (IST)

  ಗೋವಾದಲ್ಲಿ ರಾಜ್ಯಪಾಲರ ಭೇಟಿಗೆ ಸಮಯ ಕೋರಿದ ಬಿಜೆಪಿ

  ಗೋವಾದಲ್ಲಿ ಸರ್ಕಾರ ರಚನೆಗಾಗಿ ಹಕ್ಕು ಮಂಡಿಸಲು ಬಿಜೆಪಿ ಮುಂದಾಗಿದೆ ಗೋವಾ ರಾಜ್ಯಪಾಲರ ಭೇಟಿಗೆ ಬಿಜೆಪಿ ನಾಯಕರು ಸಮಯ ಕೋರಿದ್ದಾರೆ. ಗೋವಾದ 40 ಕ್ಷೇತ್ರಗಳ ಪೈಕಿ 19ರಲ್ಲಿ ಬಿಜೆಪಿಗೆ ಮುನ್ನಡೆ ಸಿಕ್ಕಿದೆ.

 • 10 Mar 2022 12:34 PM (IST)

  ಬಿಜೆಪಿ ಪರ ಒಲವು ತೋರಿದ ಗೋವಾದ ಕ್ರಿಶ್ಚಿಯನ್ನರು: ತೇಜಸ್ವಿ ಸೂರ್ಯ ಹರ್ಷ

  ಗೋವಾದಲ್ಲಿಯೂ ಬಿಜೆಪಿಗೆ ಉತ್ತಮ ಸಾಧನೆ ಮಾಡಿರುವುದು ಬಿಜೆಪಿ ನಾಯಕರ ಸಂಭ್ರಮ ಹೆಚ್ಚಿಸಿದೆ. ಜಯನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಸದ ತೇಜಸ್ವಿ ಸೂರ್ಯ, ಗೋವಾದ ಕ್ರಿಶ್ಚಿಯನ್ ಮತದಾರರು ಸಹ ಮೂರನೇ ಬಾರಿ ಬಿಜೆಪಿಗೆ ಗೆಲವು ನೀಡಿದ್ದಾರೆ. ಇದು ಐತಿಹಾಸಿಕ ಫಲಿತಾಂಶ. ನರೇಂದ್ರ ಮೋದಿಯವರ ಸಾಧನೆಯನ್ನು ಅಲ್ಲಿನ ಜನ ಮೆಚ್ಚಿದ್ದಾರೆ. ದೇಶದ 4 ರಾಜ್ಯಗಳಲ್ಲೂ ಅಧಿಕಾರಕ್ಕೆ ಬರುತ್ತೇವೆ ಎಂದರು.

  ಉತ್ತರ ಪ್ರದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಮ್ಮೆ ಅಧಿಕಾರ ನಡೆಸಿದ ಪಕ್ಷಕ್ಕೆ ಸತತ ಎರಡನೇ ಬಾರಿಗೆ ಅವಕಾಶ ಸಿಕ್ಕಿದೆ. ಈ ವಿಜಯಕ್ಕೆ ಕಾರಣ ಡಬ್ಬಲ್ ಎಂಜಿನ್ ಸರ್ಕಾರ. ಸಂಸ್ಕೃತಿ ಉಳಿವಿಗೆ ಯೋಗಿ ಸರ್ಕಾರ ಕೆಲಸ ಮಾಡಿದ್ದು ಜನರಿಗೆ ಇಷ್ಟವಾಗಿದೆ. ಈ ಹಿಂದೆ ಮಣಿಪುರದಲ್ಲಿ ಪ್ರತಿದಿನ ಹಿಂಸೆಗಳಾಗುತ್ತಿತ್ತು. ಕಳೆದ 5 ವರ್ಷಗಳಲ್ಲಿ ಯಾವುದೇ ಹಿಂಸೆಯಾಗಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಶಯವನ್ನು ಜನರು ಮೆಚ್ಚಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

 • 10 Mar 2022 12:29 PM (IST)

  ಪಂಜಾಬ್ ಜನರಿಗೆ ಕೃತಜ್ಞತೆ ಅರ್ಪಿಸಿದ ಅರವಿಂದ್ ಕೇಜ್ರಿವಾಲ್

  ಆಮ್ ಆದ್ಮಿ ಪಕ್ಷಕ್ಕೆ ಬಹುಮತ ತಂದುಕೊಟ್ಟಿರುವ ಪಂಜಾಬ್​ನ ಜನರಿಗೆ ದೆಹಲಿ ಮುಖ್ಯಮಂತ್ರಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅಭಿನಂದಿಸಿದ್ದಾರೆ. ‘ಈ ಕ್ರಾಂತಿಗಾಗಿ ಪಂಜಾಬ್ ಜನರಿಗೆ ಅಭಿನಂದನೆಗಳು’ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

 • 10 Mar 2022 12:21 PM (IST)

  ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಬಿಜೆಪಿಗೆ ಮನ್ನಣೆ

  ರೈತ ಹೋರಾಟದಿಂದ ದೇಶವ್ಯಾಪಿ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಬಿಜೆಪಿ ಸ್ಪಷ್ಟ ಮುನ್ನಡೆ ದಾಖಲಿಸಿದೆ. ಒಂದು ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷವು ಮುಂದಿದೆ. ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರೊಂದಿಗೆ ನಡೆದಿದ್ದ ವಾಗ್ವಾದ ಮತ್ತು ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಗೃಹ ಇಲಾಖೆಯ ರಾಜ್ಯದರ್ಜೆ ಸಚಿವ ಅಜಯ್ ಮಿಶ್ರಾ ತೆನಿ ಅವರ ಮಗ ಆಶೀಶ್ ಮಿಶ್ರಾ ಸಹ ಆರೋಪ ಎದುರಿಸುತ್ತಿದ್ದಾರೆ. ಹಿಂಸಾಚಾರ ನಡೆದಿದ್ದ ಟಿಕುನಿಯಾ ಕ್ಷೇತ್ರದಲ್ಲಿ ಬಿಜೆಪಿಯ ಶಶಾಂಕ್ ವರ್ಮಾ 39,975 ಮತ ಪಡೆದು ಮುಂದಿದ್ದಾರೆ. ಎಸ್​ಪಿ ನಾಯಕ ಆರ್​.ಎಸ್.ಕುಶ್ವಾಹ 24,527 ಮತ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.

 • 10 Mar 2022 12:15 PM (IST)

  ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್‌ ಸಿಂಗ್‌ಗೆ ಸೋಲು

  ಪಂಜಾಬ್​ನ ಪಟಿಯಾಲ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್‌ ಸಿಂಗ್ ಸೋತಿದ್ದಾರೆ. ಆಮ್ ಆದ್ಮಿ ಪಕ್ಷದ ಅಜಿತ್ ಪಾಲ್ ಸಿಂಗ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

  Amarinder Singh

  ಕ್ಯಾಪ್ಟನ್ ಅಮರಿಂದರ್ ಸಿಂಗ್

 • 10 Mar 2022 12:13 PM (IST)

  ಮತಗಟ್ಟೆ ಸಮೀಕ್ಷೆಯನ್ನು ಸತ್ಯಗೊಳಿಸಿದ ಫಲಿತಾಂಶ: ಎಚ್​ಡಿಕೆ

  ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆ ವೇಳೆ ಪ್ರಕಟಗೊಂಡಿದ್ದ ಮತಗಟ್ಟೆ ಸಮೀಕ್ಷೆಯನ್ನು ಚುನಾವಣೆ ಫಲಿತಾಂಶವು ಸತ್ಯಗೊಳಿಸಿದೆ. ನೂರಾರು ವರ್ಷಗಳ ಇತಿಹಾಸ ಇದೆ ಎನ್ನುವ, ಪ್ರಾದೇಶಿಕ ಪಕ್ಷವನ್ನು ಮುಗಿಸುತ್ತೇವೆ ಎನ್ನುವ ಕಾಂಗ್ರೆಸ್​ಗೆ ಜ್ಞಾನೋದಯ ಮಾಡಿಸಬೇಕಾದ ಫಲಿತಾಂಶ ಇದು ಎಂದು ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

  ಬಿಜೆಪಿಗೆ ಪೈಪೋಟಿ ನೀಡಲು ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾಧ್ಯ ಎನ್ನುವುದನ್ನು ಈ ಫಲಿತಾಂಶ ಸಾಬೀತು ಮಾಡಿದೆ. ಪಂಜಾಬ್ ಮತ್ತು ಪಶ್ಚಿಮ ಬಂಗಾಳದ ಫಲಿತಾಂಶ ನಮಗೆ ಸ್ಪೂರ್ತಿ ನೀಡಲಿದೆ. ಐದು ರಾಜ್ಯಗಳ ಫಲಿತಾಂಶವೇ ಬೇರೆ. ಅಲ್ಲಿನ ಪರಿಸ್ಥಿತಿಗಳೇ ಬೇರೆ. ನಮ್ಮ ರಾಜ್ಯದ ಪರಿಸ್ಥಿತಿಯೇ ಬೇರೆ. ಗೋವಾ, ಪಂಜಾಬ್​ನಲ್ಲಿ ಸರ್ಕಾರ ರಚನೆ ಮಾಡುತ್ತೇವೆ ಎನ್ನುವ ವಿಶ್ವಾಸ ಕಾಂಗ್ರೆಸ್ ಪಕ್ಷಕ್ಕೆ ಇತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ. ಕರ್ನಾಟಕದ ಸೂತ್ರಧಾರರನ್ನು ಗೋವಾಗೆ ಕಳುಹಿಸಿದ್ದ ಕಾಂಗ್ರೆಸ್ ಪಕ್ಷವು ಸಾಧಿಸಿದ್ದೇನೆ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟರು.

 • 10 Mar 2022 12:04 PM (IST)

  ಕರ್ನಾಟಕದ ಬಿಜೆಪಿ ಕಚೇರಿಯಲ್ಲಿಯೂ ಸಂಭ್ರಮಾಚರಣೆ

  ಬೆಂಗಳೂರು: ಉತ್ತರ ಪ್ರದೇಶ ಚುನಾವಣೆಯ ಗೆಲುವು ಸಂಭ್ರಮಿಸಿ, ಮಲ್ಲೇಶ್ವರದಲ್ಲಿರುವ ಬಿಜೆಪಿ ಕರ್ನಾಟಕ  ಘಟಕದ ರಾಜ್ಯ ಕಚೇರಿಯಲ್ಲಿಯೂ ಕಾರ್ಯಕರ್ತರು ಸಂಭ್ರಮಪಟ್ಟರು. ಭಾವುರಾವ್ ದೇಶಪಾಂಡೆ ಚಿತ್ರಪಟಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಮುನಿರತ್ನ, ಶಾಸಕರಾದ ವಿಶ್ವನಾಥ್, ಬೆಳ್ಳಿ ಪ್ರಕಾಶ್ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಬಿಜೆಪಿ ಕಚೇರಿ ಮುಂದೆ ಮೋದಿ‌ ಪೋಟೊ ಹಾಗೂ ಬಿಜೆಪಿ ಧ್ವಜ ಹಿಡಿದು ಕಾರ್ಯಕರ್ತರು ಕುಣಿದರು.

 • 10 Mar 2022 12:00 PM (IST)

  ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಜಯಭೇರಿ: ಬೆಂಗಳೂರಿನಲ್ಲಿ ಸಂಭ್ರಮಾಚರಣೆ

  ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಹದೇವಪುರ ಕ್ಷೇತ್ರದ ಹೂಡಿ ಗ್ರಾಮದ ಶಿವ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕಾರ್ಯಕರ್ತರು ಸಂಭ್ರಮಪಟ್ಟರು. ಮಂಜುನಾಥ್ ನೇತೃತ್ವದಲ್ಲಿ ಸಿಹಿ ಹಂಚಲಾಯಿತು. ಯೋಗಿ ಆಧಿತ್ಯನಾಥ್ ಮತ್ತೊಮ್ಮೆ ಸಿಎಂ ಆಗಬೇಕೆಂದು ಮಂಜುನಾಥ್ ಅವರು ಧರ್ಮಸ್ಥಳಕ್ಕೆ ಫೆಬ್ರವರಿಯಲ್ಲಿ 11 ದಿನಗಳ ಕಾಲ 320 ಕಿ.ಮೀ ಪಾದಯಾತ್ರೆ ನಡೆಸಿದ್ದರು.

 • 10 Mar 2022 11:44 AM (IST)

  ಆಪ್ ಆಡಳಿತಕ್ಕೆ ಜನಮೆಚ್ಚುಗೆ: ಪಂಜಾಬ್ ಗೆಲುವೇ ಸಾಕ್ಷಿಯೆಂದ ಮನೀಶ್ ಸಿಸೋಡಿಯಾ

  ಆಮ್ ಅದ್ಮಿ ಪಕ್ಷವು ಪಂಜಾಬ್​ನಲ್ಲಿ ಅಕ್ಷರಶಃ ಸ್ವೀಪ್ ಮಾಡಿದೆ. ಪಂಜಾಬ್​ಗೆ ಸಿಕ್ಕಿರುವ ಈ ಮನ್ನಣೆಯು ದೆಹಲಿಯಲ್ಲಿ ಆಪ್ ಆಡಳಿತದ ಮಾದರಿಯನ್ನು ದೇಶ ಮೆಚ್ಚಿಕೊಂಡಿರುವುದಕ್ಕೆ ಸಾಕ್ಷಿ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದರು. ಇದು ದೇಶದಲ್ಲಿ ಆಮ್ ಆದ್ಮಿಯ (ಸಾಮಾನ್ಯ ಜನರ) ವಿಜಯವಾಗಿದೆ. ದೇಶದ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ಕಂಡು ಬರುವ ಬದಲಾವಣೆಗೆ ಇದು ಮುನ್ನುಡಿ ಬರೆಯಲಿದೆ ಎಂದಿದ್ದಾರೆ.

  ಪಂಜಾಬ್​ ಚುನಾವಣೆ ಫಲಿತಾಶವು ಭಾರತದ ರಾಜಕಾರಣದಲ್ಲಿ ಹಲವು ದೂರಗಾಮಿ ಪರಿಣಾಮಗಳಿಗೆ ಕಾರಣವಾಗುವ ಸಾಧ್ಯತೆಯಿದೆ. ಪ್ರಾದೇಶಿಕ ಪಕ್ಷವೊಂದು ತವರು ರಾಜ್ಯದಿಂದ ಆಚೆಗಿನ ರಾಜ್ಯವೊಂದರಲ್ಲಿ ಇದೇ ಮೊದಲ ಬಾರಿಗೆ ಗಮನಾರ್ಹ ಸಾಧನೆ ಮಾಡಿದೆ. ರಾಷ್ಟ್ರ ರಾಜಕಾರಣದಲ್ಲಿ ಹಲವು ಪಲ್ಲಟಗಳಿಗೂ ಈ ಬೆಳವಣಿಗೆ ಕಾರಣವಾಗಲಿದೆ.

  Manish Sisodia

  ಮನೀಶ್ ಸಿಸೋಡಿಯಾ

 • 10 Mar 2022 11:24 AM (IST)

  ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರದಿಂದ ಹೊಸ ವೇಗ ಅಭಿವೃದ್ಧಿ

  ಬೆಂಗಳೂರು: ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಆಡಳಿತ ಇರುವ ಡಬಲ್ ಎಂಜಿನ್ ಸರ್ಕಾರಗಳು ಇರಬೇಕೆಂದು ಜನರು ನಿರ್ಧರಿಸಿದ್ದಾರೆ. ಚುನಾವಣೆ ನಡೆದ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಜನರು ಬಿಜೆಪಿಗೆ ಇದೇ ಕಾರಣಕ್ಕೆ ಆಶೀರ್ವಾದ ಮಾಡಿದ್ದಾರೆ ಎಂದು ಕರ್ನಾಟಕದ ಬಿಜೆಪಿ ನಾಯಕರು ವಿಶ್ಲೇಷಿಸಿದ್ದಾರೆ. ಜಾತಿ ರಾಜಕಾರಣ ಮಾಡುವ ಕಾಂಗ್ರೆಸ್​ಗೆ ಪಂಜಾಬ್​ನಲ್ಲಿ ಮುಖಭಂಗವಾಗಿದೆ. ಜನರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

 • 10 Mar 2022 11:21 AM (IST)

  ಜನರ ಹಿತ ಕಾಯುವ ಫಲಿತಾಂಶ ಇದು: ಸಚಿವ ಸೋಮಣ್ಣ

  ಬೆಂಗಳೂರು: ಅಭಿವೃದ್ಧಿ ಮತ್ತು ದೇಶದ ಹಿತ ಕಾಯುವ ಚುನಾವಣಾ ಫಲಿತಾಂಶ ಇದಾಗಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು. ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥರ ಪರವಾದ, ಮುಂದಿನ ಅಭ್ಯೂದಯಕ್ಕೆ ನಿದರ್ಶನವಾದ ಫಲಿತಾಂಶ ಇದು. ಪಂಚ ರಾಜ್ಯಗಳ ಚುನಾವಣೆ ಪ್ರಕ್ರಿಯೆಯು ರಾಜ್ಯದ ಆಡಳಿತದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಬೊಮ್ಮಾಯಿ ಆಡಳಿತ ಸ್ಥಿರ ಹಾಗೂ ಗಟ್ಟಿಯಾಗಿದೆ. ಮುಂದಿನ ಚುನಾವಣೆಯೂ ಬೊಮ್ಮಾಯಿಯವರ ನಾಯಕತ್ವದಲ್ಲೇ ನಡೆಯಲಿದೆ ಎಂದರು.

 • 10 Mar 2022 10:58 AM (IST)

  ಪಾದಯಾತ್ರೆ ಬೇಡ, ತೀರ್ಥಯಾತ್ರೆ ಮಾಡಿ: ಕಾಂಗ್ರೆಸ್​ಗೆ ಜನರ ಸಂದೇಶ ಎಂದ ಸಚಿವ ಅಶೋಕ್

  ಬೆಂಗಳೂರು: ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರಗಳಲ್ಲಿ ಬಿಜೆಪಿ ಮುನ್ನಡೆ ದೃಢಪಟ್ಟ ನಂತರ ಪ್ರತಿಕ್ರಿಯಿಸಿರುವ ಸಚಿವ ಆರ್.ಅಶೋಕ್, ಚುನಾವಣೆ ನಡೆದ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಜಯಗಳಿಸಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದುದು ಪಂಜಾಬ್​ನಲ್ಲಿ ಮಾತ್ರ. ಈಗ ಅಲ್ಲಿಯೂ ಸೋಲುತ್ತಿದೆ. ಈ ಮೂಲಕ ಪಾದಯಾತ್ರೆ ಬೇಡ ತೀರ್ಥಯಾತ್ರೆ ಮಾಡಿ ಎಂದು ಕಾಂಗ್ರೆಸ್​ಗೆ ಜನರು ಸಂದೇಶ ನೀಡಿದ್ದಾರೆ ಎಂದು ಸಚಿವ ಆರ್.ಅಶೋಕ್ ಹೇಳಿದರು. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿಯೂ ಇದೇ ಮಾದರಿಯ ಫಲಿತಾಂಶ ಬರಲಿದೆ. ಕಾಂಗ್ರೆಸ್ ನಾಯಕರು ಪಂಜಾಬ್​​ನಲ್ಲಿ ಅಬ್ಬರದ ಪ್ರಚಾರ ಮಾಡಿದ್ದರು. ಆದರೂ ಪ್ರಯೋಜನವಾಗಿಲ್ಲ. ಸಾರ್ವತ್ರಿಕ ಚುನಾವಣೆಯು ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲೂ ಬಿಜೆಪಿ ಪರ ಅಲೆ ಏಳಲಿದೆ ಎಂದು ವಿಶ್ಲೇಷಿಸಿದರು.

 • 10 Mar 2022 10:35 AM (IST)

  Punjab Election Result 2022 Live: ಪಂಜಾಬ್​ನಲ್ಲಿ ಪ್ರಮುಖ ನಾಯಕರ ಹಿನ್ನಡೆ

  ಪಂಜಾಬ್​ನಲ್ಲಿ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ ಚಮಕ್​ಪುರ್ ಸಾಹಿಬ್ ಮತ್ತು ಭಾದೌರ್ ಕ್ಷೇತ್ರಗಳಲ್ಲಿ ಹಿಂದೆ ಬಿದ್ದಿದ್ದಾರೆ. ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಅಮರಿಂದರ್ ಸಿಂಗ್ ಮತ್ತು ರಾಜಿಂದರ್ ಕೌರ್ ಭಟ್ಟಲ್ ಸಹ ಹಿಂದೆ ಬಿದ್ದಿದ್ದಾರೆ. ಶಿರೋಮಣಿ ಅಕಾಲಿ ದಳ ಅಧ್ಯಕ್ಷ ಸುಖ್​​ಬಿರ್ ಸಿಂಗ್ ಜಲಾಲಾಬಾದ್ ಕ್ಷೇತ್ರದಲ್ಲಿ ಸಹಸ್ಪರ್ಧಿಗಳಿಗಿಂತ ಹಿಂದೆ ಬಿದ್ದಿದ್ದಾರೆ. 117 ಸದಸ್ಯ ಬಲದ ಪಂಜಾಬ್​ನಲ್ಲಿ ಸರ್ಕಾರ ರಚನೆಗೆ 59 ಸ್ಥಾನ ಗಳಿಸಬೇಕು. ಪ್ರಸ್ತುತ ಆಪ್​ 88, ಕಾಂಗ್ರೆಸ್ 13 ಮತ್ತು ಶಿರೋಮಣಿ ಅಕಾಲಿದಳ 10 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿದೆ.

 • 10 Mar 2022 10:29 AM (IST)

  Uttarakhand Election Result 2022 Live: ಉತ್ತರಾಖಂಡದಲ್ಲಿ ಅಧಿಕಾರದ ಸನಿಹಕ್ಕೆ ಬಿಜೆಪಿ

  ಉತ್ತರಾಖಂಡದಲ್ಲಿಯೂ ಬಿಜೆಪಿ ಪಕ್ಷವು ಅಧಿಕಾರ ರಚನೆಗೆ ಬೇಕಿರುವ ಸಂಖ್ಯೆಯನ್ನು ತಲುಪಿದಿದೆ. 70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಯಲ್ಲಿ ಅಧಿಕಾರ ರಚಿಸಲು 31 ಸದಸ್ಯ ಬಲ ಬೇಕು. ಬಿಜೆಪಿ ಪ್ರಸ್ತುತ 41 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 25 ಕ್ಷೇತ್ರಗಳಲ್ಲಿ ಮುಂದಿದೆ

 • 10 Mar 2022 10:19 AM (IST)

  Uttar Pradesh Election Result 2022 Live: ಉತ್ತರ ಪ್ರದೇಶದಲ್ಲಿ ನಿಚ್ಚಳ ಬಹುಮತದತ್ತ ಬಿಜೆಪಿ

  ಉತ್ತರ ಪ್ರದೇಶದಲ್ಲಿ ಬಿಜೆಪಿ ನಿಚ್ಚಳ ಬಹುಮತದತ್ತ ಹೆಜ್ಜೆ ಹಾಕುತ್ತಿದೆ. 2ನೇ ಸ್ಥಾನದಲ್ಲಿರುವ ಸಮಾಜವಾದಿ ಪಕ್ಷ ಮೂರಂಕಿ ತಲುಪುವ ಸಾಧ್ಯತೆ ಎದ್ದು ಕಾಣುತ್ತಿದೆ. 403 ಸದಸ್ಯ ಬಲದ ಉತ್ತರ ಪ್ರದೇಶದಲ್ಲಿ ಅಧಿಕಾರ ರಚನೆಗೆ 202 ಸ್ಥಾನಗಳು ಸಾಕು. ಬಿಜೆಪಿಯು ಪ್ರಸ್ತುತ 245 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, 96 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ, ಬಿಎಸ್​ಪಿ ಮತ್ತು ಕಾಂಗ್ರೆಸ್​ ತಲಾ 6 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿದೆ.

 • 10 Mar 2022 10:08 AM (IST)

  ಉತ್ತರಾಖಂಡ್​ನ ಬಿಜೆಪಿ, ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಗಳಿಬ್ಬರಿಗೂ ಹಿನ್ನಡೆ

  ಉತ್ತರಾಖಂಡ್ ವಿಧಾನಸಭಾ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಗಳು ಇಬ್ಬರೂ ಕೂಡ ಹಿನ್ನಡೆ ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯದ ಮಾಹಿತಿ ಪ್ರಕಾರ ಬಿಜೆಪಿಯ ಪುಷ್ಕರ್ ಸಿಂಗ್ ಧಾಮಿ ಖಾತಿಮಾದಿಂದ ಹಾಗೂ ಕಾಂಗ್ರೆಸ್​ನ ಹರೀಶ್ ರಾವತ್ ಲಾಲ್​ಕುವಾದಿಂದ ಹಿನ್ನಡೆ ಸಾಧಿಸಿದ್ದಾರೆ. ಈಗಿನ ಟ್ರೆಂಡ್ ಪ್ರಕಾರ ಉತ್ತರಾಖಂಡ್​ನಲ್ಲಿ ಬಿಜೆಪಿ 44 ಹಾಗೂ ಕಾಂಗ್ರೆಸ್ 22 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

 • 10 Mar 2022 09:59 AM (IST)

  ಆಪ್​ಗೆ ಮಾನ್ಯತೆ ಕೊಡುವ ಅವಶ್ಯಕತೆ ಇಲ್ಲ: ಸಚಿವ ಅಶ್ವಥ್ ನಾರಾಯಣ

  ಧಾರವಾಡ: ಪಂಜಾಬ್‌ನಲ್ಲಿ ಆಮ್ ಆದ್ಮಿ ಮುನ್ನಡೆ ವಿಚಾರವಾಗಿ ಸಚಿವ ಅಶ್ವಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ. ಆಪ್ ದೆಹಲಿಯಂಥ ಸಿಟಿಯಲ್ಲಿ ರಾಜಕೀಯ ಮಾಡಿದೆ. ಉಚಿತ ವಿದ್ಯುತ್, ಶಾಲೆ ಮಾಡಿದ್ದೇವೆ ಅಂತಾರೆ. ಅದೆಲ್ಲವೂ ನಗರ ಪ್ರದೇಶದಲ್ಲಿ ನಡೆದಿರುವುದು. ಪಂಜಾಬ್‌ದಂಥ ರಾಜ್ಯದಲ್ಲಿ ಅವರಿಗೆ ಪ್ರಾರಂಭ ಅಷ್ಟೇ. ಸರ್ಕಾರ ಬಂದರೂ ಒಂದೇ ಸರ್ಕಾರದಲ್ಲಿ ಕೊನೆಯಾಗುತ್ತದೆ. ಪ್ರಾರಂಭವೇ ಅವರಿಗೆ ಕೊನೆ ಆಗುತ್ತದೆ. ಇಂಥ ಪಕ್ಷಗಳು ಅಲ್ಲಿ ನೆಲೆಯೂರಲು ಸಾಧ್ಯವಿಲ್ಲ. ಇಂಥ ಪಕ್ಷಗಳು ಬರುತ್ತವೆ, ಹೋಗುತ್ತವೆ. ಆ ಪಕ್ಷಕ್ಕೆ ಮಾನ್ಯತೆ ಕೊಡುವ ಅವಶ್ಯಕತೆ ಇಲ್ಲ. ಈ ಪಕ್ಷಕ್ಕೆ ಭವಿಷ್ಯವಿಲ್ಲ. ಯಾವ ಸಿದ್ಧಾಂತ, ದಿಕ್ಕಿಲ್ಲ, ಸ್ಪಷ್ಟತೆಯೂ ಇಲ್ಲ. ಸಣ್ಣ ಮಟ್ಟದಲ್ಲಿ ನಗರದ ಪ್ರದೇಶದಲ್ಲಿ ಕೆಲಸ ಮಾಡಿದೆಯಷ್ಟೇ ಎಂದು ಹೇಳಿದ್ದಾರೆ.

 • 10 Mar 2022 09:47 AM (IST)

  ಗೋವಾದಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣ ಸಾಧ್ಯತೆ; ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ ಕಾಂಗ್ರೆಸ್

  ಗೋವಾದಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣ ಸಾಧ್ಯತೆ ಹಿನ್ನೆಲೆ ಮಧ್ಯಾಹ್ನ 3ಕ್ಕೆ ರಾಜ್ಯಪಾಲರ ಭೇಟಿಗೆ ಕಾಂಗ್ರೆಸ್ ಅವಕಾಶ ಕೇಳಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

 • 10 Mar 2022 09:45 AM (IST)

  ನಾಲ್ಕು ರಾಜ್ಯದಲ್ಲಿ ನಮ್ಮ ಸರ್ಕಾರ ರಚನೆಯಾಗುತ್ತೆ: ಅಶ್ವತ್ಥ್ ನಾರಾಯಣ ಭರವಸೆ

  ಧಾರವಾಡ: ಪಂಚರಾಜ್ಯ ಚುನಾವಣೆ ಫಲಿತಾಂಶ ಹಿನ್ನೆಲೆ ಧಾರವಾಡದಲ್ಲಿ ಸಚಿವ ಅಶ್ವಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಖಂಡಿತ ಫೋರ್ ಹೊಡೆಯುತ್ತೇವೆ. ಐದರ ಪೈಕಿ ನಾಲ್ಕು ರಾಜ್ಯದ ಬಗ್ಗೆ ಭರವಸೆ ಇದೆ. ಒಳ್ಳೇ ಫಲಿತಾಂಶದ ಭರವಸೆ ಇದೆ. ನಾಲ್ಕು ರಾಜ್ಯದಲ್ಲಿ ನಮ್ಮ ಸರ್ಕಾರ ರಚನೆಯಾಗುತ್ತೆ. ಒಂದು ರಾಜ್ಯದಲ್ಲಿ ಮಾತ್ರ ಹಿನ್ನೆಡೆ ಇದೆ ಎಂದು ಹೇಳಿದ್ದಾರೆ.

  ಪ್ರತಿಪಕ್ಷ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಲ್ಲರಿಗೂ ಗೊತ್ತಿದೆ. ರಾಷ್ಟ್ರೀಯ ಪಕ್ಷದ ಸ್ವರೂಪವನ್ನೇ ಅದು ಕಳೆದುಕೊಂಡಿದೆ. ಜನ ಸಹ ಆ ಪಕ್ಷದ ಮೇಲೆ ಭರವಸೆ ಇಟ್ಟಿಲ್ಲ. ನಮ್ಮ ರಾಜ್ಯದಲ್ಲಿಯೂ ಕಾಂಗ್ರೆಸ್ ಇರುವುದಿಲ್ಲ. 2023ಕ್ಕೆ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ. ಪಂಜಾಬ್‌ದಲ್ಲಿ ನಮ್ಮದು ಪಾಲ್ಗೊಳ್ಳುವಿಕೆ ಹೆಚ್ಚಿರಲಿಲ್ಲ. ಅಲ್ಲಿನ ಜನಾಭಿಪ್ರಾಯ ಸ್ವೀಕರಿಸುತ್ತೇವೆ. ಮುಂದಿನ ದಿನಗಳಲ್ಲಿಯೂ ಪಂಜಾಬ್ ಸಹ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.

 • 10 Mar 2022 09:28 AM (IST)

  Goa Election Results: ಗೋವಾದಲ್ಲಿ ಬಿಜೆಪಿ-ಕಾಂಗ್ರೆಸ್​ ಸಮಬಲದ ಮುನ್ನಡೆ

  ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 17 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿದ್ದು ಅಂತಿಮ ಫಲಿತಾಂಶದ ಬಗ್ಗೆ ಕುತೂಹಲ ವ್ಯಕ್ತವಾಗಿದೆ. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್​ ಮತ ಎಣಿಕೆ ಪ್ರಗತಿಯಾದಂತೆ ತುಸು ಕಳಾಹೀನವಾದಂತೆ ಕಂಡು ಬಂದಿದೆ. ಗೋವಾದಲ್ಲಿ ಖಾತೆ ತೆರೆಯಲು ಟಿಎಂಸಿ ಯಶಸ್ವಿಯಾಗಬಹುದು ಎಂಬ ನಿರೀಕ್ಷೆಗಳು ಹುಟ್ಟಿವೆ.

 • 10 Mar 2022 09:25 AM (IST)

  ಕ್ಯಾಪ್ಟನ್ ಅಮರಿಂದರ್ ಸಿಂಗ್​ಗೆ ಹಿನ್ನಡೆ

  ಪಂಜಾಬ್​ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮೊದಲ ಸುತ್ತಿನ ಮತಎಣಿಕೆಯಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಪಾಟಿಯಾಲ ಕ್ಷೇತ್ರದಲ್ಲಿ ಆಪ್​ನ ಅಜಿತ್​ಪಾಲ್ ಕೊಹ್ಲಿ ಮುನ್ನಡೆ ದಾಖಲಿಸಿದ್ದಾರೆ.

 • 10 Mar 2022 09:19 AM (IST)

  5 State Assembly Election Results 2022: ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರದಲ್ಲಿ ಬಿಜೆಪಿ, ಗೋವಾದಲ್ಲಿ ಕಾಂಗ್ರೆಸ್, ಪಂಜಾಬ್​ನಲ್ಲಿ ಆಪ್ ಮುನ್ನಡೆ

  ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಮತಎಣಿಕೆ ಭರದಿಂದ ಸಾಗಿದೆ. ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ಬಿಜೆಪಿ, ಗೋವಾದಲ್ಲಿ ಕಾಂಗ್ರೆಸ್ ಮತ್ತು ಪಂಜಾಬ್​ನಲ್ಲಿ ಆಪ್ ಮುನ್ನಡೆ ದಾಖಲಿಸಿವೆ. ಮುಂಜಾನೆ 9.15ರ ಮಾಹಿತಿ ಪ್ರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿ 150, ಎಸ್​ಪಿ 73, ಬಿಎಸ್​ಪಿ 2, ಉತ್ತರಾ ಖಂಡದಲ್ಲಿ ಬಿಜೆಪಿ 30, ಕಾಂಗ್ರೆಸ್ 24, ಗೋವಾದಲ್ಲಿ ಕಾಂಗ್ರೆಸ್ 18, ಬಿಜೆಪಿ 17, ಪಂಜಾಬ್​​ನಲ್ಲಿ ಆಪ್ 55, ಕಾಂಗ್ರೆಸ್ 16, ಮಣಿಪುರದಲ್ಲಿ ಬಿಜೆಪಿ 22, ಕಾಂಗ್ರೆಸ್ 4 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿತ್ತು.

 • 10 Mar 2022 09:12 AM (IST)

  Punjab Election Result 2022: ಪಂಜಾಬ್ ಭಾದೌರ್ ಕ್ಷೇತ್ರದಲ್ಲಿ ಸಿಎಂ ಚನ್ನಿ ಮುನ್ನಡೆ

  ಪಂಜಾಬ್​ನ ಹಾಲಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಚರಣ್​ಜಿತ್ ಸಿಂಗ್ ಚನ್ನಿ ಭಾದೌರ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಪಂಜಾಬ್​ನಲ್ಲಿ ಈವರೆಗಿನ ಮಾಹಿತಿ ಪ್ರಕಾರ ಕಾಂಗ್ರೆಸ್ 17, ಬಿಜೆಪಿ 3, ಆಪ್ 48, ಶಿರೋಮಣಿ ಅಕಾಲಿದಳ 11 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿವೆ.

 • 10 Mar 2022 09:08 AM (IST)

  Punjab Election Result 2022: ಫಲಿತಾಂಶಕ್ಕೆ ಆಪ್​ನ ಭಗವಂತ್ ಮಾನ್ ಸಿದ್ಧತೆ

  ಆದ್ಮಿ ಪಕ್ಷದ (AAP) ಮುಖ್ಯಮಂತ್ರಿ ಅಭ್ಯರ್ಥಿ ಫಲಿತಾಂಶದ ದಿನವಾದ ಗುರುವಾರ (ಮಾರ್ಚ್ 10) ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅವರ ಮನೆಯಲ್ಲಿ ಫಲಿತಾಂಶದ ನಂತರದ ಸಂಭ್ರಮಕ್ಕಾಗಿ ಸಡಗರದ ಸಿದ್ಧತೆಗಳು ನಡೆಯುತ್ತಿವೆ.

 • 10 Mar 2022 09:02 AM (IST)

  Uttar Pradesh Election Result 2022 Live: ಬಿಜೆಪಿ 131, ಎಸ್​ಪಿ 69 ಸ್ಥಾನಗಳಲ್ಲಿ ಮುನ್ನಡೆ

  ಆರಂಭಿಕ ಟ್ರೆಂಡ್‌ಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿ 132 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಎಸ್​ಪಿ 69 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

 • 10 Mar 2022 08:55 AM (IST)

  Uttar Pradesh Election Result 2022: ಉತ್ತರ ಪ್ರದೇಶದ 102 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ

  ಉತ್ತರ ಪ್ರದೇಶದಲ್ಲಿ ಆರಂಭಿಕ ಮತಎಣಿಕೆ ಮಾಹಿತಿ ಪ್ರಕಾರ ಬಿಜೆಪಿ 102, ಎಸ್​ಪಿ 67, ಬಿಎಸ್​ಪಿ 2 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿದೆ.

 • 10 Mar 2022 08:54 AM (IST)

  5 State Election Results 2022 Live: ಗೋವಾದಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಸಿದ್ಧತೆ

  ಗೋವಾದಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ಈಗಿನ ಟ್ರೆಂಡ್ ಪ್ರಕಾರ 20 ಕ್ಷೇತ್ರಗಳಲ್ಸಿ ಕೈ ಮುನ್ನಡೆ ಸಾಧಿಸಿದೆ. ಗೋವಾದಲ್ಲಿ ಅಧಿಕಾರ ನಡೆಸಲು ಮ್ಯಾಜಿಕ್ ನಂಬರ್ 21 ಸ್ಥಾನ ಬೇಕಿದೆ.

 • 10 Mar 2022 08:54 AM (IST)

  5 State Election Results 2022 Live: ಗೋವಾದಲ್ಲಿ ಕಾಂಗ್ರೆಸ್, ಮಣಿಪುರದಲ್ಲಿ ಬಿಜೆಪಿ ಮುನ್ನಡೆ

  ಆರಂಭಿಕ ಮತ ಎಣಿಕೆ ಮಾಹಿತಿ ಪ್ರಕಾರ ಗೋವಾ, ಉತ್ತರಾಖಂಡ ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು ಮಣಿಪುರದಲ್ಲಿ ಬಿಜೆಪಿ ಅಭ್ಯರ್ಥಗಳು ಹೆಚ್ಚಿನ ಸಂಖ್ಯೆಯಲ್ಲಿ ಮುನ್ನಡೆ ದಾಖಲಿಸಿದ್ದಾರೆ. ಗೋವಾದಲ್ಲಿ ಕಾಂಗ್ರೆಸ್ 20, ಬಿಜೆಪಿ 15, ಉತ್ತರಾಖಂಡದಲ್ಲಿ ಕಾಂಗ್ರೆಸ್ 19, ಬಿಜೆಪಿ 15, ಮಣಿಪುರದಲ್ಲಿ ಬಿಜೆಪಿ 16, ಕಾಂಗ್ರೆಸ್ 1 ಸ್ಥಾನದಲ್ಲಿ ಮುನ್ನಡೆ ದಾಖಲಿಸಿದೆ.

 • 10 Mar 2022 08:21 AM (IST)

  Uttar Pradesh Election Result 2022: ಮತ್ತೆ ಸದ್ದು ಮಾಡಿದ ಮತಯಂತ್ರ ವಿವಾದ

  ಬಹುತೇಕ ಮತಗಟ್ಟೆ ಸಮೀಪಕ್ಷೆಗಳು ಬಿಜೆಪಿಗೆ ಮುನ್ನಡೆ ಸಿಗಲಿದೆ ಎಂದು ಹೇಳಿದ್ದರೂ ಸಮಾಜವಾದಿ ಪಕ್ಷವೂ ಸಾಕಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂದಿವೆ. ವಿದ್ಯುನ್ಮಾನ ಮತಯಂತ್ರಗಳ (Electronic Voting Machine – EVM) ಬಗ್ಗೆಯೇ ಎರಡೂ ಪಕ್ಷಗಳು ವಾಗ್ವಾದಕ್ಕೆ ಇಳಿದಿವೆ.

 • 10 Mar 2022 07:57 AM (IST)

  5 State Election Results 2022 Live: ಪಂಚರಾಜ್ಯಗಳ​​ ವಿಧಾನಸಭಾ ಚುನಾವಣೆ ಮತ ಎಣಿಕೆ ಆರಂಭ

  ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಪಂಜಾಬ್, ಗೋವಾ ಪಂಚರಾಜ್ಯಗಳ​​ ವಿಧಾನಸಭಾ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಅಂಚೆ ಮತಗಳನ್ನು ಸಿಬ್ಬಂದಿ ಎಣಿಕೆ ಮಾಡುತ್ತಿದ್ದಾರೆ.

 • 10 Mar 2022 07:54 AM (IST)

  5 State Election Results 2022 Live: ಮತ ಎಣಿಕೆಗೂ ಮುನ್ನವೇ ಸಂಭ್ರಮಾಚರಣೆ

  ಮತ ಎಣಿಕೆಗೂ ಮುನ್ನವೇ ಸಂಭ್ರಮಾಚರಣೆಗೆ ಸಿದ್ಧತೆ ಮಾಡಲಾಗತ್ತಿದೆ. ಪಂಜಾಬ್‌ನ AAP ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಮನೆ ಮುಂದೆ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಮನೆ ಬಳಿ ಸಿಹಿ ತಯಾರಿ, ಮನೆಗೆ ಹೂವಿನಿಂದ ಅಲಂಕಾರ ಮಾಡಲಾಗಿದೆ.

 • 10 Mar 2022 07:48 AM (IST)

  5 State Election Results 2022 Live: ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ

  ಇಂದು ಪಂಚರಾಜ್ಯಗಳ​​ ವಿಧಾನಸಭಾ ಚುನಾವಣೆ ಮತ ಎಣಿಕೆ ನಡಯಲಿದ್ದು,  ಮತ ಎಣಿಕೆ ಕೇಂದ್ರಗಳಿಗೆ ಅಧಿಕಾರಿಗಳು ಆಗಮಿಸುತ್ತಿದ್ದಾರೆ. ಮತ ಎಣಿಕೆಗೆ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮತ ಎಣಿಕೆ ಕೇಂದ್ರಗಳ ಸುತ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಪಂಚರಾಜ್ಯಗಳ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದ್ದು, ಸ್ಟ್ರಾಂಗ್ ರೂಮ್‌ಗಳನ್ನು ಓಪನ್ ಮಾಡಿದ್ದು, ಸಿಬ್ಬಂದಿಗಳು  ಮತ ಎಣಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮೊದಲಿಗೆ ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಲಿದೆ.

 • 10 Mar 2022 07:44 AM (IST)

  5 State Election Results 2022 Live: ಮತ ಎಣಿಕೆ ಹಿನ್ನೆಲೆ ಗುರುದ್ವಾರಕ್ಕೆ ಭೇಟಿ ನೀಡಿದ ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ

  ಇಂದು ಪಂಚ ರಾಜ್ಯಗಳ ಚುನಾವಣೆ ಮುಗಿದಿದ್ದು, ಮತ ಎಣಿಕೆ ನಡೆಯಲಿದೆ. ಪಂಜಾಬ್​​ ವಿಧಾನಸಭಾ ಚುನಾವಣೆ ಮತ ಎಣಿಕೆ ಹಿನ್ನೆಲೆ, ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ.

 • 10 Mar 2022 07:23 AM (IST)

  Manipur Election Result 2022: ಉಳಿಯಲಿದೆಯೇ ಎನ್​ಡಿಎ ಮೈತ್ರಿಕೂಟದ ಒಗ್ಗಟ್ಟು

  ಮಣಿಪುರದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಿತು. 60 ಸ್ಥಾನಗಳ ವಿಧಾನಸಭೆಗೆ 265 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಪ್ರಸ್ತುತ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಆಡಳಿತ ನಡೆಸುತ್ತಿದೆ. ಆದಾಗ್ಯೂ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಈ ಬಾರಿ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಚುನಾವಣೋತ್ತರ ಸಮೀಕ್ಷೆಗಳು ಮಣಿಪುರದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಬಹುದು ಎಂದು ಭವಿಷ್ಯ ನುಡಿದಿವೆ.

 • 10 Mar 2022 07:21 AM (IST)

  Uttarakhand Election Result 2022: ಬಿಜೆಪಿ vs ಕಾಂಗ್ರೆಸ್​: ಪೈಪೋಟಿ ನಿರೀಕ್ಷಿತ

  ಉತ್ತರಾಖಂಡ ವಿಧಾನಸಭೆಯ 70 ಸ್ಥಾನಗಳ ಮತ ಎಣಿಕೆ ನಡೆಯಲಿದೆ. ಒಟ್ಟು 632 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕೆಲವು ಬಿಜೆಪಿ ಬಹುಮತ ಪಡೆಯುತ್ತದೆ ಎಂದು ಹೇಳಿದ್ದರೆ, ಕೆಲವು ಸಮೀಕ್ಷೆಗಳು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗಬಹುದು ಎಂದಿವೆ.

 • 10 Mar 2022 07:19 AM (IST)

  Goa Election Result 2022: ಗೋವಾ ಮತದಾರನ ಒಲವು ಯಾರ ಕಡೆಗೆ

  ಫೆ.14ರಂದು ರಾಜ್ಯವು ಒಂದೇ ಹಂತದಲ್ಲಿ ಮತ ಚಲಾಯಿಸಿತು. ಗೋವಾದಲ್ಲಿ 40 ಸ್ಥಾನಗಳಿದ್ದು, 332 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್-ಜಿಎಫ್‌ಪಿ ತಲಾ 40 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಆಮ್ ಆದ್ಮಿ ಪಕ್ಷದಿಂದ 39 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳು ಗೋವಾದಲ್ಲಿ ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದಿವೆ.

 • 10 Mar 2022 07:16 AM (IST)

  Punjab Election Result 2022: ಪಂಜಾಬ್​ನಲ್ಲಿ ನಿರೀಕ್ಷೆ ಹುಟ್ಟಿಸಿದ ಆಮ್ ಆದ್ಮಿ ಪಕ್ಷ

  ಪಂಜಾಬ್ ಚುನಾವಣೆ ಬಗ್ಗೆ ಬಹುತೇಕ ಎಲ್ಲ ಪ್ರಮುಖ ಚುನಾವಣೋತ್ತರ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷಕ್ಕೆ ಪ್ರಚಂಡ ವಿಜಯವನ್ನು ಭವಿಷ್ಯ ನುಡಿದಿವೆ. ಒಟ್ಟು 117 ಕ್ಷೇತ್ರಗಳಲ್ಲಿ 1304 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಬಾರಿ ಪಂಜಾಬ್ ಮತದಾರರು ಮತದಾನಕ್ಕೆ ಹೆಚ್ಚು ಉತ್ಸಾಹ ತೋರಿರಲಿಲ್ಲ.

 • 10 Mar 2022 07:12 AM (IST)

  Uttar Pradesh Election Result 2022: ಏಳು ಹಂತಗಳಲ್ಲಿ ನಡೆದ ಚುನಾವಣೆ

  ಉತ್ತರ ಪ್ರದೇಶದಲ್ಲಿ ಫೆಬ್ರುವರಿ 10ರಿಂದ ಮಾರ್ಚ್ 7ರವರೆಗೆ 7 ಹಂತಗಳಲ್ಲಿ ನಡೆದ ವಿಧಾನಸಭಾ ಚುನಾವಣೆ ನಡೆಯಿತು. 403 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಒಟ್ಟು 4,441 ಅಭ್ಯರ್ಥಿಗಳ ಭವಿಷ್ಯವನ್ನು ಇಂದಿನ ಫಲಿತಾಂಶ ನಿರ್ಧರಿಸುತ್ತದೆ. ಚುನಾವಣೋತ್ತರ ಸಮೀಕ್ಷೆಗಳು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸ್ಪಷ್ಟ ಗೆಲುವು ಮತ್ತು ಸಮಾಜವಾದಿ ಪಕ್ಷಕ್ಕೆ ಕೆಲವು ಕ್ಷೇತ್ರಗಳಲ್ಲಿ ಹೆಚ್ಚಿನ ಲಾಭ ಪಡೆಯಲಿದೆ ಎಂದು ಭವಿಷ್ಯ ನುಡಿದಿವೆ.

Published On - Mar 10,2022 7:02 AM

Follow us
ಮಂಡ್ಯದಿಂದ ಸ್ಪರ್ಧಿಸುವ ಯೋಚನೆ ಸದ್ಯಕ್ಕಂತೂ ಇಲ್ಲ: ನಿಖಿಲ್ ಕುಮಾರಸ್ವಾಮಿ
ಮಂಡ್ಯದಿಂದ ಸ್ಪರ್ಧಿಸುವ ಯೋಚನೆ ಸದ್ಯಕ್ಕಂತೂ ಇಲ್ಲ: ನಿಖಿಲ್ ಕುಮಾರಸ್ವಾಮಿ
ಬಿಜೆಪಿ ಜತೆ ದೀರ್ಘಾವಧಿಯ ಮೈತ್ರಿ ನಮ್ಮಉದ್ದೇಶವಾಗಿದೆ: ಕುಮಾರಸ್ವಾಮಿ
ಬಿಜೆಪಿ ಜತೆ ದೀರ್ಘಾವಧಿಯ ಮೈತ್ರಿ ನಮ್ಮಉದ್ದೇಶವಾಗಿದೆ: ಕುಮಾರಸ್ವಾಮಿ
ಬಿಜೆಪಿ ವರಿಷ್ಠರೊಂದಿಗೆ ಮೈತ್ರಿ ಮಾತುಕತೆ ನಡೆಸಿ ಹಿಂತಿರುಗಿದ ಕುಮಾರಸ್ವಾಮಿ
ಬಿಜೆಪಿ ವರಿಷ್ಠರೊಂದಿಗೆ ಮೈತ್ರಿ ಮಾತುಕತೆ ನಡೆಸಿ ಹಿಂತಿರುಗಿದ ಕುಮಾರಸ್ವಾಮಿ
ಆದೇಶ ಧಿಕ್ಕರಿಸಿದರೆ ಏನಾಗುತ್ತೆ ಅಂತ ಕುಮಾರಸ್ವಾಮಿಗೆ ಗೊತ್ತು: ಪರಮೇಶ್ವರ್
ಆದೇಶ ಧಿಕ್ಕರಿಸಿದರೆ ಏನಾಗುತ್ತೆ ಅಂತ ಕುಮಾರಸ್ವಾಮಿಗೆ ಗೊತ್ತು: ಪರಮೇಶ್ವರ್
ಪೌರಕಾರ್ಮಿಕರ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್
ಪೌರಕಾರ್ಮಿಕರ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್
ತುಮಕೂರು: ಅಕ್ಷರ ದಾಸೋಹ ಯೋಜನೆ ಅಕ್ಕಿ ಕದ್ದ ಸರ್ಕಾರೀ ಶಾಲೆ ಅಡುಗೆ ಸಿಬ್ಬಂದಿ
ತುಮಕೂರು: ಅಕ್ಷರ ದಾಸೋಹ ಯೋಜನೆ ಅಕ್ಕಿ ಕದ್ದ ಸರ್ಕಾರೀ ಶಾಲೆ ಅಡುಗೆ ಸಿಬ್ಬಂದಿ
ಈ ಉರಗತಜ್ಞ ಒಂದೇ ಸಲಕ್ಕೆ ನಾಲ್ಕು ಹೆಬ್ಬಾವುಗಳನ್ನು ಹಿಡಿದು ಆಡಿಸುತ್ತಾನೆ
ಈ ಉರಗತಜ್ಞ ಒಂದೇ ಸಲಕ್ಕೆ ನಾಲ್ಕು ಹೆಬ್ಬಾವುಗಳನ್ನು ಹಿಡಿದು ಆಡಿಸುತ್ತಾನೆ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಶಾಲೆ ಆವರಣದಲ್ಲಿ ವಾಮಾಚಾರ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಶಾಲೆ ಆವರಣದಲ್ಲಿ ವಾಮಾಚಾರ
ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ
ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ