
ನವದೆಹಲಿ, ಡಿಸೆಂಬರ್ 4: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು 2 ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಇಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ (PM Narendra Modi) 23ನೇ ಭಾರತ-ರಷ್ಯಾ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಭೇಟಿಯ ಸಮಯದಲ್ಲಿ ರಕ್ಷಣೆ, ಇಂಧನ ಮತ್ತು ವ್ಯಾಪಾರದಂತಹ ಕ್ಷೇತ್ರಗಳನ್ನು ಒಳಗೊಂಡ ಹಲವಾರು ಪ್ರಮುಖ ಒಪ್ಪಂದಗಳನ್ನು ಮಾಡಿಕೊಳ್ಳುವ ನಿರೀಕ್ಷೆಯಿದೆ. ಪುಟಿನ್ ದೆಹಲಿಯ ಐಟಿಸಿ ಮೌರ್ಯದಲ್ಲಿ ಉಳಿದುಕೊಳ್ಳಲಿದ್ದಾರೆ. ಹೀಗಾಗಿ, ಅಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಪುಟಿನ್ ಐಟಿಸಿ ಮೌರ್ಯದ ಅತ್ಯಂತ ಐಷಾರಾಮಿ ಸೂಟ್ ಆಗಿರುವ ಚಾಣಕ್ಯ ಸೂಟ್‌ನಲ್ಲಿ ವಾಸಿಸುತ್ತಾರೆ. ಪುಟಿನ್ ಈ ಹಿಂದೆ 2022ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಪುಟಿನ್ ಅವರ ಭೇಟಿಗೆ ದೆಹಲಿಯಲ್ಲಿ ಭಾರೀ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಭೇಟಿಯ ಸಮಯದಲ್ಲಿ ಅವರು ದೆಹಲಿಯ ಐಟಿಸಿ ಮೌರ್ಯದಲ್ಲಿ ತಂಗಲಿದ್ದಾರೆ. ಪುಟಿನ್ ತಂಗಲಿರುವ ಮೌರ್ಯ ಹೋಟೆಲ್‌ನ ಸೂಟ್ 4,600 ಚದರ ಅಡಿಗಳನ್ನು ವ್ಯಾಪಿಸಿದೆ. ಇಲ್ಲಿ ಒಂದು ರಾತ್ರಿಗೆ ಬಾಡಿಗೆ ಅಂದಾಜು 8ರಿಂದ 10 ಲಕ್ಷ ರೂ. ಎನ್ನಲಾಗಿದೆ. ಈ ಹೋಟೆಲ್‌ನಲ್ಲಿ ಪುಟಿನ್ ಅವರ ನಿಯೋಗಕ್ಕೆ ಸಾಕಷ್ಟು ರೂಂಗಳನ್ನು ಬುಕ್ ಮಾಡಲಾಗಿದೆ.
ಪುಟಿನ್ ಅವರೊಂದಿಗೆ ದೊಡ್ಡ ನಿಯೋಗ ಕೂಡ ರಷ್ಯಾದಿಂದ ಆಗಮಿಸುತ್ತಿದೆ. ರಷ್ಯಾದ 7 ಸಚಿವರು ಪುಟಿನ್ ಅವರೊಂದಿಗೆ ಭಾರತಕ್ಕೆ ಬರುತ್ತಿದ್ದಾರೆ. ಅವರಿಗೂ ದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಪುಟಿನ್ ತಂಗಲಿರುವ ವಿಶೇಷ ಕೊಠಡಿಯ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಭಾರತ S-500 ವ್ಯವಸ್ಥೆ ಖರೀದಿಸಲು ಶ್ರಮಿಸಬೇಕು; ಪಾಟ್ನಾ ಮೂಲದ ರಷ್ಯಾದ ಶಾಸಕ ಅಭಯ್ ಸಿಂಗ್
ವರದಿಗಳ ಪ್ರಕಾರ, ಪುಟಿನ್ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ತಂಗಲಿದ್ದಾರೆ. ಅವರು 4,700 ಚದರ ಅಡಿ ವಿಸ್ತೀರ್ಣದ ಗ್ರ್ಯಾಂಡ್ ಪ್ರೆಸಿಡೆನ್ಶಿಯಲ್ ಸೂಟ್‌ನಲ್ಲಿ ತಂಗಲಿದ್ದಾರೆ. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾಜಿ ಅಧ್ಯಕ್ಷ ಜೋ ಬೈಡೆನ್ ಮತ್ತು ಬಿಲ್ ಕ್ಲಿಂಟನ್ ಕೂಡ ವಾಸ್ತವ್ಯ ಹೂಡಿದ್ದ ವಿಶೇಷ ರೂಂ ಆಗಿದೆ.
2 ಬೆಡ್ ರೂಂಗಳ ಸೂಟ್ ರಿಸೆಪ್ಷನ್ ಏರಿಯಾ, ಬೆಡ್ ರೂಂ, ಅಧ್ಯಯನ ಕೊಠಡಿ, 12 ಆಸನಗಳ ಖಾಸಗಿ ಡೈನಿಂಗ್ ರೂಂ, ಮಿನಿ-ಸ್ಪಾ ಮತ್ತು ಜಿಮ್ ಅನ್ನು ಒಳಗೊಂಡಿದೆ. ಹೋಟೆಲ್‌ನ ರೆಸ್ಟೋರೆಂಟ್‌ಗಳಲ್ಲಿ ರಷ್ಯಾದ ಅಧ್ಯಕ್ಷರ ನೆಚ್ಚಿನ ಆಹಾರಗಳನ್ನು ಸಿದ್ಧಪಡಿಸಲಾಗುತ್ತದೆ.
ಈ ಹೋಟೆಲ್‌ನಲ್ಲಿ ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಭದ್ರತೆಗಾಗಿ ಭಾರತೀಯ ಮತ್ತು ರಷ್ಯಾದ ಏಜೆನ್ಸಿಗಳನ್ನು ನಿಯೋಜಿಸಲಾಗಿದೆ. ವರದಿಗಳ ಪ್ರಕಾರ, ಭದ್ರತಾ ಕಾರಣಗಳಿಗಾಗಿ ಹೋಟೆಲ್‌ನ ಪ್ರವೇಶದ್ವಾರವನ್ನು ಬಿಳಿ ಪರದೆಗಳಿಂದ ಮುಚ್ಚಲಾಗಿದೆ. ಇಡೀ ಹೋಟೆಲ್ ಅನ್ನು ಸ್ಯಾನಿಟೈಸ್ ಮಾಡಲಾಗಿದೆ. ಎಲ್ಲಾ ಅತಿಥಿಗಳ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ.
ಇದನ್ನೂ ಓದಿ: ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ ಹಿನ್ನೆಲೆ ದೆಹಲಿಯಲ್ಲಿ ಕಟ್ಟೆಚ್ಚರ
ರಷ್ಯಾದ ನಿಯೋಗವು ಐಟಿಸಿ ಮೌರ್ಯ ಹೋಟೆಲ್ ಪಕ್ಕದ ತಾಜ್ ಪ್ಯಾಲೇಸ್‌ನಲ್ಲಿಯೂ ರೂಂಗಳನ್ನು ಕಾಯ್ದಿರಿಸಿದೆ ಎಂದು ಹಲವಾರು ಹೋಟೆಲ್ ಅಧಿಕಾರಿಗಳು ತಿಳಿಸಿದ್ದಾರೆ. ತಾಜ್ ಪ್ಯಾಲೇಸ್, ತಾಜ್ ಮಹಲ್, ಒಬೆರಾಯ್, ಲೀಲಾ ಮತ್ತು ಮೌರ್ಯ ಸೇರಿದಂತೆ ಮಧ್ಯ ದೆಹಲಿಯಲ್ಲಿರುವ ಎಲ್ಲಾ ಪ್ರಮುಖ ಪಂಚತಾರಾ ಹೋಟೆಲ್‌ಗಳು ಈ ವಾರ ಸಂಪೂರ್ಣವಾಗಿ ಬುಕ್ ಆಗಿವೆ. ಬುಧವಾರದವರೆಗೆ ಈ ಹೋಟೆಲ್ಗಳಲ್ಲಿ ಕೊಠಡಿ ದರ 50,000 ರಿಂದ 80,000 ರೂಪಾಯಿಗಳಷ್ಟಿತ್ತು. ಆದರೆ ಗುರುವಾರದಿಂದ ಅದು 85,000ರಿಂದ 1.3 ಲಕ್ಷ ರೂಪಾಯಿಗಳಿಗೆ ಏರಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ