ಭಾರತ, ಜಪಾನ್, ಅಮೆರಿಕಾ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳನ್ನು ಒಳಗೊಂಡ ಕ್ವಾಡ್ ಒಕ್ಕೂಟದ ಸಭೆಗೆ ನಾಳೆ ಮುಹೂರ್ತ ಒದಗಿ ಬಂದಿದೆ. ಆನ್ಲೈನ್ ಮೂಲಕ ನಡೆಯಲಿರುವ ಈ ಮಹತ್ತರ ಸಭೆಯಲ್ಲಿ ನಾಲ್ಕೂ ದೇಶಗಳ ಪ್ರಧಾನ ಮಂತ್ರಿಗಳು ಭಾಗವಹಿಸಲಿದ್ದು ಬಹುಮುಖ್ಯ ಅಂಶಗಳನ್ನು ಚರ್ಚಿಸಲಿದ್ದಾರೆ. ಆ ಪೈಕಿ ಚೀನಾ ದೇಶದ ಆಕ್ರಮಣಕಾರಿ ಸ್ವಭಾವದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನುವುದು ವಿದೇಶಾಂಗ ತಜ್ಞರ ಬಲವಾದ ನಂಬಿಕೆ. ಈ ಬಗ್ಗೆ ಯಾವೊಂದು ರಾಷ್ಟ್ರಗಳೂ ಮುಕ್ತವಾಗಿ ಒಪ್ಪಿಕೊಳ್ಳುತ್ತಿಲ್ಲವಾದರೂ ಇದೊಂದು ಬಹಿರಂಗ ಗುಟ್ಟಿನಂತೆ ಆಗಿರುವ ಕಾರಣ ಸಭೆಯಲ್ಲಿ ಏನಾಗಬಹುದೆಂದು ಎಲ್ಲರೂ ಕುತೂಹಲಭರಿತರಾಗಿ ನೋಡುತ್ತಿದ್ದಾರೆ.
ಸುಮಾರು ಒಂದೂವರೆ ದಶಕದ ಹಿಂದೆ ಅಂದರೆ 2004ರ ಸುನಾಮಿ ದುರಂತದ ಸಂದರ್ಭದಿಂದಲೂ ಕ್ವಾಡ್ ಬಗ್ಗೆ ಪ್ರಸ್ತಾಪವಾಗುತ್ತಿದೆಯಾದರೂ ಅದನ್ನು ಅಧಿಕೃತವಾಗಿ ಆರಂಭಿಸಲು ಕಾಲ ಕೂಡಿಬಂದಿರಲಿಲ್ಲ. ನಂತರ 2007ರಲ್ಲಿ ಉಮೇದಿಗೆ ಬಿದ್ದು ಈ ಕಾರ್ಯವನ್ನು ಕೈಗೆತ್ತಿಕೊಂಡರಾದರೂ ಮೊದಲ ಸಭೆ 2021ರಲ್ಲಿ ಆಗುತ್ತಿದೆ. ಪ್ರಸ್ತುತ ಈ ನಾಲ್ಕು ರಾಷ್ಟ್ರಗಳು ಇಷ್ಟು ಗಂಭೀರವಾಗಿ ಕ್ವಾಡ್ ಬಗ್ಗೆ ಯೋಚಿಸಲು ಚೀನಾವೇ ಕಾರಣ ಎನ್ನುವುದು ಅನೇಕ ತಜ್ಞರ ವಿಶ್ಲೇಷಣೆ. ಏಷ್ಯಾ ಭಾಗದಲ್ಲಿ ಆಕ್ರಮಣಕಾರಿ ನಡೆಯನ್ನು ತೋರಿಸುತ್ತಾ ಎಲ್ಲರನ್ನೂ ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ಹುನ್ನಾರದಲ್ಲಿರುವ ಚೀನಾಕ್ಕೆ ತಕ್ಕ ಪಾಠ ಕಲಿಸಲೆಂದೇ ನಾಲ್ಕು ರಾಷ್ಟ್ರಗಳು ಈ ನಿರ್ಧಾರ ತಳೆದಿವೆ ಎನ್ನಲಾಗುತ್ತಿದೆ.
ನೆರೆಹೊರೆಯ ರಾಷ್ಟ್ರಗಳ ಭೂಭಾಗವನ್ನು ಅತಿಕ್ರಮಿಸಲು ಪ್ರಯತ್ನಿಸುವ ಚೀನಾ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದಕ್ಷಿಣ ಚೀನಾ ಸಮುದ್ರ ಹಾಗೂ ಪಶ್ಚಿಮ ಫೆಸಿಫಿಕ್ ಸಾಗರದಲ್ಲಿ ಪ್ರಾಬಲ್ಯ ಸಾಧಿಸಲು ಗಮನ ಹರಿಸುತ್ತಿದೆ. ಚೀನಾದ ಈ ನಿಲುವು ಇತರೆ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಕ್ವಾಡ್ ಮೂಲಕ ಭಾರತ, ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಜಪಾನ್ ರಾಷ್ಟ್ರಗಳು ಚೀನಾವನ್ನು ತಣ್ಣಗಾಗಿಸಲು ಗಟ್ಟಿ ನಿರ್ಧಾರ ತೆಗೆದುಕೊಳ್ಳುವುದು ಬಹುತೇಕ ಖಚಿತ ಎಂಬಂತಿದೆ.
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮೆರಿಕಾದ ಅಧ್ಯಕ್ಷ ಜೋ ಬೈಡನ್, ಜಪಾನ್ ಅಧ್ಯಕ್ಷ ಯೋಶಿಹಿಡೆ ಸೂಗ ಮತ್ತು ಆಸ್ಟ್ರೇಲಿಯಾ ಅಧ್ಯಕ್ಷ ಸ್ಕಾಟ್ ಮಾರಿಸನ್ ನಾಳೆ ಆನ್ಲೈನ್ ಮೂಲಕ ನಡೆಯಲಿರುವ ಕ್ವಾಡ್ ಸಭೆಯಲ್ಲಿ ಈ ಎಲ್ಲಾ ವಿಚಾರಗಳ ಕುರಿತು ಮಾತನಾಡಲಿದ್ದಾರೆ. ಒಂದೆಡೆ ಈ ನಾಲ್ಕು ದೇಶಗಳು ಹತ್ತಿರಾಗುತ್ತಿರುವುದು ಚೀನಾಕ್ಕೆ ಕೊಂಚ ಕಸಿವಿಸಿ ಉಂಟುಮಾಡುತ್ತಿದ್ದು ಕ್ವಾಡ್ ಸಭೆಯ ನಂತರ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಕುತೂಹಲವೂ ಇದೆ.
ಕ್ವಾಡ್ ಬಗ್ಗೆ ಇಷ್ಟೆಲ್ಲಾ ಕುತೂಹಲಗಳಿದ್ದರೂ ಭಾರತ ಸೇರಿದಂತೆ ಮಿಕ್ಕೆಲ್ಲಾ ರಾಷ್ಟ್ರಗಳೂ ಇದು ಚೀನಾವನ್ನು ಗುರಿಯಾಗಿಟ್ಟುಕೊಂಡು ಮಾಡುತ್ತಿರುವ ಒಕ್ಕೂಟವಾಗಲೀ, ಸಭೆಯಾಗಲೀ ಅಲ್ಲ. ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಪ್ರಾಕೃತಿಕ ಬದಲಾವಣೆಗಳು, ಹವಾಮಾನ ವೈಪರಿತ್ಯ ಸೇರಿದಂತೆ ಹಲವು ವಿಚಾರಗಳ ಕುರಿತು ಕಾಳಜಿ ಇಟ್ಟುಕೊಂಡು ಚರ್ಚಿಸಲಿದ್ದೇವೆ. ಇಲ್ಲಿ ಯಾವುದೇ ಯುದ್ಧದ ಒಪ್ಪಂದವಾಗಲೀ, ಆಕ್ರಮಣಕಾರಿ ನಿಲುವಾಗಲೀ ಇರುವುದಿಲ್ಲ. ಇದೊಂದು ಸೌಹಾರ್ದಯುತ ಸಭೆ ಎಂದಿದ್ದಾರೆ.
ಇದನ್ನೂ ಓದಿ:
ವಿಶ್ವದ ಸೂತ್ರ ಚೀನಾದ ಕೈಗೆ ಸಿಗಲು ಅವಕಾಶ ಕೊಡಲ್ಲ: ಅಮೆರಿಕ ಅಧ್ಯಕ್ಷ ಜೋ ಬೈಡೆನ್
ತಾನೇ ಸಿದ್ಧಪಡಿಸಿದ ಕೊವಿಡ್ ಪ್ರಾಥಮಿಕ ವರದಿ ತಿರಸ್ಕರಿಸಿದ ವಿಶ್ವಸಂಸ್ಥೆ; ಅಮೇರಿಕಾ ಒತ್ತಡವೋ, ಚೀನಾದ್ದೋ?
Published On - 7:38 pm, Thu, 11 March 21