ದೆಹಲಿ: ಹೊಸದಾಗಿ 1,02,400 ಆಕ್ಸಿಜನ್ ಸಿಲಿಂಡರ್ ಖರೀದಿಸಲಾಗಿದ್ದು, ಅವುಗಳನ್ನು ವಿವಿಧ ರಾಜ್ಯಗಳಿಗೆ ನೀಡುತ್ತೇವೆ ಎಂದು ಕೇಂದ್ರದ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ತಿಳಿಸಿದರು. ದೇಶಾದ್ಯಂತ 162 ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 52 ಮೆಡಿಕಲ್ ಆಕ್ಸಿಜನ್ ಘಟಕ ಆರಂಭಿಸಲಾಗಿದೆ. 162 ಉತ್ಪಾದನಾ ಘಟಕಗಳಿಂದ 154 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಮಾಡಲಾಗುವುದು. ಶೀಘ್ರಗತಿಯಲ್ಲಿ ಎಲ್ಲಾ ಘಟಕಗಳ ಆರಂಭಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. 1.27 ಲಕ್ಷ ಆಕ್ಸಿಜನ್ ಸಿಲಿಂಡರ್ ಖರೀದಿಗೆ ಏಪ್ರಿಲ್ 21 ರಂದು ಬೇಡಿಕೆ ಇಡಲಾಗಿದ್ದು, ಏಪ್ರಿಲ್ ಅಂತ್ಯದೊಳಗೆ ಈ ಪ್ರಮಾಣದ ಸಿಲಿಂಡರ್ಗಳು ಲಭ್ಯವಾಗಲಿವೆ ಎಂದರು.
ದೇಶದಲ್ಲಿ ಆಕ್ಸಿಜನ್ ಟ್ಯಾಂಕರ್ಗಳನ್ನು ಹೆಚ್ಚಿಸಲು ಸಹ ಸರ್ಕಾರ ಬದ್ಧವಾಗಿದೆ. 1,224ರಿಂದ 2,000 ಆಕ್ಸಿಜನ್ ಟ್ಯಾಂಕರ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಅವರು ವಿವರಿಸಿದರು.
ರಾಜ್ಯಗಳು ಎಲ್ಲ ಆಸ್ಪತ್ರೆಗಳಲ್ಲಿ ಮೆಡಿಕಲ್ ಆಕ್ಸಿಜನ್ ಆಡಿಟ್ ನಡೆಸಲು ಸೂಚನೆ ನೀಡಲಾಗಿದೆ. ಅವಶ್ಯಕತೆ ಇರುವ ಕಡೆ ಮಾತ್ರ ಆಕ್ಸಿಜನ್ ಬಳಸಬೇಕು ಎಂದು ಅವರು ಆಸ್ಪತ್ರೆಗಳಿಗೆ ನಿರ್ದೇಶನ ನೀಡಿದರು. ದೇಶದಲ್ಲಿ ಇದುವರೆಗೆ 15.2 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಅದರಲ್ಲಿ 12.55 ಕೋಟಿ ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 2.67 ಕೋಟಿ ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 3ನೇ ಹಂತದಲ್ಲಿ 18ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರದ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳ ಕಾರಣ ಅಂತರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಮೇ 31ರವರೆಗೂ ನಿರ್ಬಂಧ ವಿಧಿಸಿ ನಾಗರಿಕರ ವಿಮಾನಯಾನ ಸಚಿವಾಲಯ ಆದೇಶಿಸಿದೆ.
ಇದನ್ನೂ ಓದಿ: Covid Helpline Numbers: ಆಕ್ಸಿಜನ್, ರೆಮ್ಡೆಸಿವರ್ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ
(Quick action to increase production of unit Oxygen cylinder and units says ICMR joint secretary Lav Agarwal )
Published On - 6:32 pm, Fri, 30 April 21