ದೆಹಲಿ ಜೂನ್ 08: ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ (Lok Sabha Election) ವಯನಾಡ್ (Wayanad) ಮತ್ತು ರಾಯ್‌ಬರೇಲಿ (Rae Bareli) ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ರಾಹುಲ್ ಗಾಂಧಿ ಅವರು ಮುಂಬರುವ 18ನೇ ಲೋಕಸಭೆಯಲ್ಲಿ ತಾವು ಪ್ರತಿನಿಧಿಸುವ ಎರಡು ಸ್ಥಾನಗಳಲ್ಲಿ ಯಾವುದನ್ನು ಪ್ರತಿನಿಧಿಸಬೇಕು ಎಂಬುದನ್ನು ಮೂರ್ನಾಲ್ಕು ದಿನಗಳಲ್ಲಿ ನಿರ್ಧರಿಸಲಿದ್ದಾರೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ. ಯಾವುದೇ ಸಂದರ್ಭದಲ್ಲಿ ಜೂನ್ 17 ರ ಮೊದಲು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪಕ್ಷದ ಹಿರಿಯ ನಾಯಕ ಕೆಸಿ ವೇಣುಗೋಪಾಲ್ ಹೇಳಿದ್ದಾರೆ. 18ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 15ರ ಸುಮಾರಿಗೆ ಆರಂಭವಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಖಂಡಿತವಾಗಿಯೂ, ಆ ನಿರ್ಧಾರವನ್ನು 17 ರ ಮೊದಲು ತೆಗೆದುಕೊಳ್ಳಬೇಕಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಅವರು ನಿರ್ಧಾರ ಪ್ರಕಟಿಸುತ್ತಾರೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಸತತ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ. ಇಲ್ಲಿ ಅವರು 647,445 ಮತಗಳನ್ನು ಅಥವಾ ಒಟ್ಟು 60% ಮತಗಳನ್ನು ಪಡೆದರು, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI) ನ ಅನ್ನಿ ರಾಜಾ 283,023 (26% ಮತಗಳನ್ನು) ಪಡೆದು ಇಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.
ಮತ್ತೊಂದೆಡೆ, ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಲ್ಲಿ ರಾಹುಲ್ 687,649 (66%) ಮತಗಳನ್ನು ಗಳಿಸಿದರೆ, ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ 297,619 (29%) ಮತಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ರಾಹುಲ್ ಅವರ ತಾಯಿ ಮತ್ತು ಮಾಜಿ ಕಾಂಗ್ರೆಸ್ ಅಧ್ಯಕ್ಷೆ, 5 ಬಾರಿ ರಾಯ್ ಬರೇಲಿ ಸಂಸದೆ ಸೋನಿಯಾ ಗಾಂಧಿ ಅವರು ಸ್ಥಾನವನ್ನು ಬಿಟ್ಟಕೊಟ್ಟ ನಂತರ ರಾಹುಲ್ ಗಾಂಧಿ ಇಲ್ಲಿಂದ ಸ್ಪರ್ಧಿಸಿದ್ದರು.
ಇದನ್ನೂ ಓದಿ: ಮೋದಿ ಸಂಪುಟದಲ್ಲಿ ಯಾವುದೇ ಸ್ಥಾನ ಕೇಳುವುದಿಲ್ಲ ಎಂದ ಚಂದ್ರಬಾಬು ನಾಯ್ಡು, ಆದರೆ….
ಭಾರತದಲ್ಲಿ ಲೋಕಸಭೆ ಅಥವಾ ಅಸೆಂಬ್ಲಿ (ರಾಜ್ಯ) ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿ ಗರಿಷ್ಠ ಎರಡು ಸ್ಥಾನಗಳಿಂದ ನಿಲ್ಲಬಹುದು. ಎರಡನ್ನೂ ಗೆದ್ದರೆ ಒಂದನ್ನು ಬಿಡಬೇಕು. ಪರಿಣಾಮವಾಗಿ ತೆರವಾದ ಸ್ಥಾನವನ್ನು ತುಂಬಲು ಉಪಚುನಾವಣೆ ನಡೆಸಲಾಗುತ್ತದೆ.
2019 ರ ಸಾರ್ವತ್ರಿಕ ಚುನಾವಣೆಯಲ್ಲಿ, ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಠಿಯಿಂದ ಸ್ಪರ್ಧಿಸಿದ್ದರು. ಅಲ್ಲಿ ಅದನ್ನು 2004, 2009 ಮತ್ತು 2014 ರಲ್ಲಿ ಗೆದ್ದಿದ್ದರು. 2019ರಲ್ಲಿ ಅವರು ಅಮೇಠಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋತಿದ್ದು ವಯನಾಡಿನಲ್ಲಿ ಗೆಲುವು ಸಾಧಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ