ಪ್ರಧಾನಿ ಮೋದಿ ಸರ್ಕಾರದ ಒತ್ತಡದಿಂದ ಟ್ವಿಟರ್​ ಫಾಲೋವರ್​ಗಳ ಸಂಖ್ಯೆ ಸೀಮಿತಗೊಳಿಸುತ್ತಿದೆ: ರಾಹುಲ್ ಗಾಂಧಿ ಗಂಭೀರ ಆರೋಪ

| Updated By: shivaprasad.hs

Updated on: Jan 27, 2022 | 10:44 AM

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್​ಗೆ ಪತ್ರ ಬರೆದಿದ್ದಾರೆ. ಇದರಲ್ಲಿ ಅವರು ತಮ್ಮ ಟ್ವಿಟರ್ ಖಾತೆಯ ಕುರಿತು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಸರ್ಕಾರದ ಒತ್ತಡದಿಂದ ಟ್ವಿಟರ್​ ಫಾಲೋವರ್​ಗಳ ಸಂಖ್ಯೆ ಸೀಮಿತಗೊಳಿಸುತ್ತಿದೆ: ರಾಹುಲ್ ಗಾಂಧಿ ಗಂಭೀರ ಆರೋಪ
ರಾಹುಲ್ ಗಾಂಧಿ
Follow us on

ಪ್ರಧಾನಿ ನರೇಂದ್ರ ಮೋದಿ (PM Narendra Modi) ಸರ್ಕಾರದ ಒತ್ತಡದಿಂದ ತಮ್ಮ ಟ್ವಿಟರ್ ಫಾಲೋವರ್​​ಗಳ ಸಂಖ್ಯೆಯನ್ನು ಸೀಮಿತಗೊಳಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಟ್ವಿಟರ್​ನ ಸಿಇಒ ಪರಾಗ್ ಅಗರ್ವಾಲ್​ಗೆ (Parag Agarwal) ಪತ್ರ ಬರೆದಿದ್ದಾರೆ. ಡಿಸೆಂಬರ್ 27ರಂದು ರಾಹುಲ್ ಗಾಂಧಿ ಬರೆದ ಪತ್ರವನ್ನು ಉಲ್ಲೇಖಿಸಿ ಹಲವು ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ. ಅದರಲ್ಲಿ ರಾಹುಲ್ ಗಾಂಧಿ ತಮ್ಮ ಆರೋಪಕ್ಕೆ ಪೂರಕ ಅಂಕಿಅಂಶಗಳನ್ನೂ ಒದಗಿಸಿದ್ದಾರೆ. ಮೊದಲಿಗೆ ರಾಹುಲ್ ಗಾಂಧಿಯವರಿಗೆ ಪ್ರತಿ ತಿಂಗಳು ಸುಮಾರು 2 ಲಕ್ಷ ಹೊಸಬರು ಟ್ವಿಟರ್​ನಲ್ಲಿ ಫಾಲೋ ಮಾಡುತ್ತಿದ್ದರು. ಆದರೆ 2021ರ ಆಗಸ್ಟ್ ನಂತರ ಈ ಸಂಖ್ಯೆ ಕೇವಲ 2,500ರ ಆಸುಪಾಸಿನಲ್ಲಿದೆ. ಅರ್ಥಾತ್ ಸುಮಾರು 2,500 ಜನರು ಮಾತ್ರ ಪ್ರತಿ ತಿಂಗಳು ರಾಹುಲ್ ಗಾಂಧಿ ಖಾತೆಯನ್ನು ಹೊಸದಾಗಿ ಫಾಲೋ ಮಾಡುತ್ತಿದ್ದಾರೆ. ಅಲ್ಲದೇ ಕೆಲ ಸಮಯದಿಂದ ಟ್ವಿಟರ್ ಫಾಲೋವರ್​​ಗಳ ಸಂಖ್ಯೆ 19.5 ಮಿಲಿಯನ್​ನಲ್ಲೇ ಸ್ಥಿರವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಪರೇಶ್ ಅಗರವಾಲ್​ಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿ, ‘‘ಭಾರತದಲ್ಲಿ ನಿರಂಕುಶಾಧಿಕಾರದ ಬೆಳವಣಿಗೆಗೆ ಟ್ವಿಟರ್ ಸಕ್ರಿಯವಾಗಿ ಸಹಾಯ ಮಾಡದಂತೆ ನೋಡಿಕೊಳ್ಳುವ ಅಗಾಧ ಜವಾಬ್ದಾರಿ ನಿಮ್ಮ ಮೇಲಿದೆ’’ ಎಂದು ಬರೆದಿದ್ದಾರೆ. ‘‘ಜಗತ್ತಿನಾದ್ಯಂತ ಉದಾರವಾದಿ ಪ್ರಜಾಪ್ರಭುತ್ವ ಮತ್ತು ನಿರಂಕುಶಾಧಿಕಾರದ ನಡುವಿನ ಸೈದ್ಧಾಂತಿಕ ಯುದ್ಧವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ರೂಪಿಸಲಾಗುತ್ತಿದೆ. ಇದು ಟ್ವಿಟರ್‌ನಂತಹ ದೊಡ್ಡ ಕಂಪನಿಗಳ ಮೇಲೆ ಬಹುದೊಡ್ಡ ಜವಾಬ್ದಾರಿ ಹೊರಿಸಿದೆ’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಉಲ್ಲೇಖಿಸಿದೆ.

ಆಗಸ್ಟ್​​ನಲ್ಲಿ ರಾಹುಲ್ ಗಾಂಧಿ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಿದ್ದ ಟ್ವಿಟರ್ ಸಂಸ್ಥೆ:
ಆಗಸ್ಟ್‌ನಲ್ಲಿ ದೆಹಲಿಯ ಅತ್ಯಾಚಾರ ಸಂತ್ರಸ್ತೆಯೋರ್ವರ ಕುಟುಂಬದ ಫೋಟೋವನ್ನು ಟ್ವೀಟ್ ಮಾಡಿದ ನಂತರ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ಸಂಕ್ಷಿಪ್ತವಾಗಿ ಅಮಾನತುಗೊಳಿಸಲಾಗಿತ್ತು. ರಾಹುಲ್ ಗಾಂಧಿಯವರ ಟ್ವಿಟ್ಟರ್ ಪೋಸ್ಟ್‌ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು, ನಂತರ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್​ನ ನಿಯಮಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ಎಂಟು ದಿನಗಳ ಕಾಲ ಅವರ ಖಾತೆಯನ್ನು ಅಮಾನತುಗೊಳಿಸಲಾಗಿತ್ತು.

ವರದಿಗಳ ಪ್ರಕಾರ ಇತ್ತೀಚಿನ ದಿನಗಳಲ್ಲಿ ಮತದಾರರನ್ನು ತಲುಪುವಲ್ಲಿ ಪ್ರಮುಖ ಸಾಧನವಾಗಿ ಮಾರ್ಪಟ್ಟಿರುವ ಟ್ವಿಟರ್ ಮೂಲಕ ತನ್ನ ಸಾಮಾಜಿಕ ಮಾಧ್ಯಮ ವ್ಯಾಪ್ತಿಯನ್ನು ಹೆಚ್ಚಿಸುವಲ್ಲಿ ಕಾಂಗ್ರೆಸ್ ಪಕ್ಷವು ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಆರೋಪ ಹಾಗೂ ಪತ್ರ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ:

ಮಹಿಳೆಯರ ಅವಮಾನ ಮತ್ತು ಕೋಮುದ್ವೇಷದ ವಿರುದ್ಧ ದನಿಯೆತ್ತೋಣ: ರಾಹುಲ್ ಗಾಂಧಿ

ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 2,86,384 ಕೊರೊನಾ ಪ್ರಕರಣ ಪತ್ತೆ, 573 ಜನರು ಸೋಂಕಿನಿಂದ ಸಾವು

Published On - 10:00 am, Thu, 27 January 22