
ನವದೆಹಲಿ, ಅಕ್ಟೋಬರ್ 28: ಟಾಟಾ ಸನ್ಸ್ ಆಡಳಿತ ಮಂಡಳಿಯಲ್ಲಿ ಎನ್. ಚಂದ್ರಶೇಖರನ್ ಅವರ ಮರು ನೇಮಕಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಆಂತರಿಕ ನಾಯಕತ್ವ ಬಿಕ್ಕಟ್ಟಿನ ನಡುವೆಯೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಟಾಟಾ ಸಂಸ್ಥೆಯನ್ನು ಹೀನಾಯವಾಗಿ ನಾಶಪಡಿಸಲಾಗುತ್ತಿದೆ” ಎಂದು ಆರೋಪಿಸಿರುವ ಅವರು, ಉದ್ಯಮಿಗಳ ಮೌನವನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಟಾಟಾ ಸಂಸ್ಥೆಯನ್ನು ನಾಶಪಡಿಸಲಾಗುತ್ತಿದೆ, ಆದರೂ ಯಾವೊಬ್ಬ ಉದ್ಯಮಿಯೂ ಧ್ವನಿ ಎತ್ತಲು ಧೈರ್ಯ ಮಾಡುತ್ತಿಲ್ಲ. ಅವರು ನಿಮ್ಮನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳುವವರೆಗೆ ಇನ್ನೆಷ್ಟು ದಿನ ಮೌನವಾಗಿರುತ್ತೀರಿ?” ಎಂದು ಉದ್ಯಮಿಗಳಿಗೆ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: 10 ಸಾವಿರ ಕೋಟಿ ರೂ. ನಷ್ಟದ ಆತಂಕ: ನ. 1ರ ರ‍್ಯಾಲಿ ಮುಂದೂಡಲು ರಾಹುಲ್ ಗಾಂಧಿಗೆ ವ್ಯಾಪಾರಿಗಳ ಮನವಿ
ಉದ್ಯಮ ರಂಗ ಆಟದ ಬೊಂಬೆಯಲ್ಲ ಎಂದ ರಾಹುಲ್:
“ಭಾರತೀಯ ಉದ್ಯಮ ವಲಯವು ಬಿಜೆಪಿಯ ಆಟದ ಸಾಮಗ್ರಿಯಲ್ಲ. ಉದ್ಯಮಿಗಳಿಗೆ ಧೈರ್ಯದ ಕೊರತೆಯಿರಬಹುದು, ಆದರೆ ನಮಗಿಲ್ಲ. ಈ ಅಪರಾಧಗಳ ವಿರುದ್ಧ ಅವರಿಗೆ ನ್ಯಾಯ ಸಿಗುವಂತೆ ನಾವು ಹೋರಾಡುತ್ತೇವೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಏನಿದು ಟಾಟಾ ಸನ್ಸ್ ನಾಯಕತ್ವ ವಿವಾದ?:
ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರ ಮರು ನೇಮಕ ಪ್ರಕ್ರಿಯೆಯನ್ನು ಪ್ರಶ್ನಿಸಿ ಟಾಟಾ ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ ಅಕ್ಟೋಬರ್ 26ರಂದು ಸಂಸ್ಥೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಸೆಪ್ಟೆಂಬರ್ 17ರಂದು ನಡೆದ ಸಭೆಯಲ್ಲಿ ಚಂದ್ರಶೇಖರನ್ ಮರು ನೇಮಕದ ನಿರ್ಣಯವನ್ನು ಮಂಡಿಸಲಾಗಿತ್ತು. ಆದರೆ ಸಭೆಯ ಮೂಲ ಅಜೆಂಡಾದಲ್ಲಿ ಈ ವಿಷಯವೇ ಇರಲಿಲ್ಲ ಮತ್ತು ಸಂಸ್ಥೆಯ ‘ಆರ್ಟಿಕಲ್ಸ್ ಆಫ್ ಅಸೋಸಿಯೇಷನ್’ ಪ್ರಕಾರ ಅಗತ್ಯವಿದ್ದ ಆಯ್ಕೆ ಸಮಿತಿ ಅಥವಾ ಅವರ ಶಿಫಾರಸು ಇರಲಿಲ್ಲ ಎಂದು ನೋಯೆಲ್ ಟಾಟಾ ಆರೋಪಿಸಿದ್ದಾರೆ.
ಇದನ್ನೂ ಓದಿ: ಚಂದ್ರಶೇಖರನ್ ಮರುನೇಮಕಾತಿ ನಿರ್ಧಾರ ಕಾನೂನುಬದ್ಧ; ನೋಯೆಲ್ ಟಾಟಾಗೆ ಟಾಟಾ ಸನ್ಸ್ ಪತ್ರ; ಮಾಜಿ ಸಿಜೆಐ ಅಭಿಪ್ರಾಯವೂ ಉಲ್ಲೇಖ
ಸಭೆ ನಡೆದು 3 ವಾರಗಳು ಕಳೆದರೂ ಅದರ ವೀಡಿಯೊ/ಆಡಿಯೊ ರೆಕಾರ್ಡಿಂಗ್, ಅಂತಿಮ ನಡಾವಳಿ ಅಥವಾ ಪ್ರಮಾಣೀಕೃತ ಪ್ರತಿಯನ್ನು ತಮಗೆ ಒದಗಿಸಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ. 7 ದಿನಗಳ ಒಳಗಾಗಿ ಸಭೆಯ ಸಂಪೂರ್ಣ ಆಡಿಯೊ, ವೀಡಿಯೊ ಮತ್ತು ಸಭೆಯ ನಡಾವಳಿಗಳನ್ನು ತಮಗೆ ಒದಗಿಸುವಂತೆ ನೋಯೆಲ್ ಟಾಟಾ ಆಗ್ರಹಿಸಿದ್ದಾರೆ.
ಟಾಟಾ ಸಂಸ್ಥೆಯ ಈ ಆಂತರಿಕ ಕಾರ್ಪೊರೇಟ್ ಸಂಘರ್ಷವನ್ನು ಮುಂದಿಟ್ಟುಕೊಂಡು ವಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ದಾಳಿ ನಡೆಸಿದ್ದು, ಪ್ರಸ್ತುತ ದೇಶದ ರಾಜಕೀಯ ಮತ್ತು ಕಾರ್ಪೊರೇಟ್ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ