ಗೋವಾ ಕಾಂಗ್ರೆಸ್ ನಾಯಕರೊಂದಿಗೆ ರಾಹುಲ್ ಗಾಂಧಿ ಸಭೆ, ಮುಂಬರುವ ವಿಧಾನ ಸಭೆ ಚುನಾವಣೆ ಸಿದ್ಧತೆ ಕುರಿತು ಚರ್ಚೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 23, 2021 | 12:58 AM

ಸ್ಥಳೀಯ ಸಂಘ-ಸಂಸ್ಥೆಗಳಿಗೆ ನಡೆದ ಚುನಾವಣೆಗಳಲ್ಲಿ ಪಕ್ಷದ ಕಳಾಹೀನ ಪ್ರದರ್ಶನಕ್ಕೆ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಗಿರೀಶ್ ಚೋದನ್​ಕರ್ ಕಾರಣವೆಂದು ಬಹಿರಂಗವಾಗಿ ದೂಷಿಸಿ ಅವರನ್ನು ಸ್ಥಾನದಿಂದ ಕೆಳಗಿಳಿಸಬೇಕು ಅಂತ ಹೇಳಿದ್ದ ಸರ್ದಿನ್ಹಾ, ಚೋದನ್​ಕರ್ ಅವರಿಂದ ಪಕ್ಷದ ಸಂಘಟನೆ ಸಾಧ್ಯವಿಲ್ಲ ಎಂದಿದ್ದರು.

ಗೋವಾ ಕಾಂಗ್ರೆಸ್ ನಾಯಕರೊಂದಿಗೆ ರಾಹುಲ್ ಗಾಂಧಿ ಸಭೆ, ಮುಂಬರುವ ವಿಧಾನ ಸಭೆ ಚುನಾವಣೆ ಸಿದ್ಧತೆ ಕುರಿತು ಚರ್ಚೆ
ಗೋವಾ ಕಾಂಗ್ರೆಸ್ ನಾಯಕರೊಂದಿಗೆ ರಾಹುಲ್ ಗಾಂಧಿ
Follow us on

ನವದೆಹಲಿ:  ವಿಧಾನ ಸಭೆ ಚುನಾವಣೆಗಳಯ ನೆತ್ತಿಯ ಮೇಲಿರುವಾಗಲೇ ಕೆಲ ರಾಜ್ಯಗಳ ಕಾಂಗ್ರೆಸ್ ಘಟಕಗಳಲ್ಲಿ ಜಾರಿಯಲ್ಲಿರುವ ಒಳಜಗಳ, ಕಚ್ಚಾಟಗಳಿಂದ ಬೇಸತ್ತಿರುವ ಹೈಕಮಾಂಡ್ ತೇಪೆ ಹಚ್ಚುವ ಪ್ರಯತ್ನ ಮಾಡುತ್ತಿದೆಯಾದರೂ ತೇಪೆ ಬಹಳ ದಿನಗಳವರೆಗೆ ಉಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಹಿರಿಯ ನಾಯಕ ರಾಹುಲ್ ಗಾಂಧಿ, ಗುರುವಾರ ಗೋವಾದ ಹಲವಾರು ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.ಮುಂಬರುವ ವಿಧಾನ ಸಭೆ ಚುನಾವಣಾ ತಯಾರಿ ಮೇಲೆ ಮಾತುಕತೆ ಕೇಂದ್ರಿತವಾಗಿತ್ತು ಮತ್ತು ಸಭೆಯಲ್ಲಿ ನಾಯಕರಿಗೆ ಮುಕ್ತವಾಗಿ ಮಾತಾಡುವ ಅವಕಾಶ ಕಲ್ಪಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

‘ರಾಹುಲ್ ಗಾಂಧಿಯವರು ಪ್ರತಿಯೊಬ್ಬರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು ಮತ್ತು ತಮ್ಮ ಮನಸ್ಸಿನಲ್ಲರುವುದನ್ನು ನಿರ್ಭಿಡೆಯಿಂದ ಹೇಳಲು ಎಲ್ಲರಿಗೂ ತಿಳಿಸಿದರು. ಗೋವಾದಲ್ಲಿ ಪಕ್ಷ ಬಲಗೊಳ್ಳಲು ಏನು ಮಾಡಬಹುದು ಎನ್ನುವುದನ್ನು ಅವರಿಗೆ ನಾನು ತಿಳಿಸಿದೆ,’ ಎಂದು ದಕ್ಷಿಣ ಗೋವಾ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಫ್ರಾನ್ಸಿಸ್ಕೋ ಸರ್ದಿನ್ಹಾ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿದರು.

ಸ್ಥಳೀಯ ಸಂಘ-ಸಂಸ್ಥೆಗಳಿಗೆ ನಡೆದ ಚುನಾವಣೆಗಳಲ್ಲಿ ಪಕ್ಷದ ಕಳಾಹೀನ ಪ್ರದರ್ಶನಕ್ಕೆ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಗಿರೀಶ್ ಚೋದನ್​ಕರ್ ಕಾರಣವೆಂದು ಬಹಿರಂಗವಾಗಿ ದೂಷಿಸಿ ಅವರನ್ನು ಸ್ಥಾನದಿಂದ ಕೆಳಗಿಳಿಸಬೇಕು ಅಂತ ಹೇಳಿದ್ದ ಸರ್ದಿನ್ಹಾ, ಚೋದನ್​ಕರ್ ಅವರಿಂದ ಪಕ್ಷದ ಸಂಘಟನೆ ಸಾಧ್ಯವಿಲ್ಲ ಎಂದಿದ್ದರು.

ಗೋವಾನಲ್ಲಿ ಪಕ್ಷದ ವೀಕ್ಷಕರಾಗಿರುವ ದಿನೇಶ್ ಗುಂಡೂರಾವ್ ಅವರು, ‘ಗೋವಾದಲ್ಲಿ ರಾಜಕೀಯ ಸ್ಥಿತಿ ಮತ್ತು ಮುಂಬರುವ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಲು ಅಳವಡಿಸಿಕೊಳ್ಳಬೇಕಿರುವ ರಣನೀತಿಯ ಬಗ್ಗೆ ಚರ್ಚಿಸಲಾಯಿತು,’ ಎಂದು ಹೇಳಿದರು.

ಸರ್ದಿನ್ಹಾ ಅವರಲ್ಲದೆ, ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ದಿಗಂಬರ್ ಕಾಮತ್, ಗಿರೀಶ್ ಚೋದನ್​ಕರ್, ಶಾಸಕರಾದ ಅಲೆಕ್ಸಿಯೊ ಲೌರೆಂಕೊ, ಲೌಜಿನ್ಹೊ ಫಲೆರಿಯೊ ಮತ್ತು ಮಾಜಿ ಕೇಂದ್ರ ಸಚಿವ ಹಾಗೂ ಪಕ್ಷದ ಸಮನ್ವಯ ಸಮಿತಯ ಉಸ್ತವಾರಿ ಹೊತ್ತಿರುವ ರಮಾಕಾಂತ್ ಖಲಾಪ್ ಅವರನ್ನೂ ಇಂದಿನ ಸಭೆಗೆ ಕರೆಸಲಾಗಿತ್ತು.

ನಾಯಕತ್ವ ವಿಷಯದ ಜೊತೆಗೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ, ಗೋವಾ ನಾಯಕರ ಅಭಿಪ್ರಾಯಗಳನ್ನು ಹೈಕಮಾಂಡ್ ಕೇಳಿತು.

ಸಭೆ ನಂತರ ಟ್ವೀಟ್​ ಮಾಡಿದ ಕಾಮತ್, ಸಲಹೆ ಮತ್ತು ಮಾರ್ಗದರ್ಶನ ನೀಡಿದ ರಾಹುಲ್ ಗಾಂಧಿಗೆ ಧನ್ಯವಾದಗಳನ್ನು ತಿಳಿಸಿದರು.

‘ನಿಮ್ಮ ಅಮೂಲ್ಯ ಸಲಹೆ ಮತ್ತು ಮಾರ್ಗದರ್ಶನಕ್ಕೆ ಧನ್ಯವಾದಗಳು@RahulGandhi. ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಮತೀಯ, ಅಸಂವಿಧಾನಿಕ ಮತ್ತು ಪ್ರಜಾತಂತ್ರ ವಿರೋಧಿ ಶಕ್ತಿಗಳನ್ನು ಸೋಲಿಸಿ @INCGoa ಗೆಲುವು ದೊರಕುವಂತಾಗಲು ನಾವು ಒಟ್ಟಾಗಿ ಶ್ರಮಿಸೋಣ,’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಗೋವಾದಲ್ಲಿ ಪಕ್ಷದ ಸ್ಥಿತಿಯನ್ನು ಅಧ್ಯಯನ ಮಾಡಲು ಕಾಂಗ್ರೆಸ್ ಹೈಕಮಾಂಡ್ ಕೆಲ ಕೇಂದ್ರೀಯ ನಾಯಕರನ್ನು ಕಳಿಸಿದ ಕೆಲವೇ ದಿನಗಳ ನಂತರ ಇಂದಿನ ಸಭೆಯನ್ನು ಆಯೋಜಿಸಲಾಗಿತ್ತು. ದಿನೇಶ್ ಗುಂಡೂರಾವ್ ಅವರು ನಾಲ್ಕು ದಿನಗಳ ಕಾಲ ಗೋವಾದಲ್ಲಿ ಕ್ಯಾಂಪ್ ಹೂಡಿ ಎಲ್ಲ ಪ್ರಮುಖ ನಾಯಕರ ಜೊತೆ ಮಾತುಕತೆ ನಡೆಸಿದ ನಂತರ ಡಾ ಶಮಾ ಮೊಹಮ್ಮದ್ ಮತ್ತು ಅಲ್ಕಾ ಲಂಬಾ ಸಹ ಗೋವಾಗೆ ಭೇಟಿ ನೀಡಿ ಚುನಾವಣೆಗೆ ಪಕ್ಷದ ಸಿದ್ಧತೆ ಮತ್ತು ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಹೈಕಮಾಂಡ್​ಗೆ ವರದಿ ಸಲ್ಲಿಸಿದ್ದರು.

ಕಳೆದ 5 ವರ್ಷಗಳಿಂದ ಸರ್ಕಾರ ನಡೆಸುತ್ತಿರುವ ಬಿಜೆಪಿಗೆ ತನ್ನ 13 ಶಾಸಕರನ್ನು ಕಳೆದುಕೊಂಡಿರುವ ಕಾಂಗ್ರೆಸ್​ಗೆ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಹೊಸ ಸವಾಲುಗಳನ್ನು ಒಡ್ಡುತ್ತಿದ್ದು ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡಿದ್ದ ಕ್ಷೇತ್ರಗಳನ್ನು ಅದು ಗುರಿಮಾಡಿಕೊಂಡಿದೆ.

ಇದನ್ನೂ ಓದಿ: AAP: ಗೋವಾದಲ್ಲಿ ಅಧಿಕಾರ ಸ್ಥಾಪಿಸಲು ಸಜ್ಜಾದ ಅರವಿಂದ್​ ಕೇಜ್ರಿವಾಲ್​; ಜನರಿಗೆ ದಿನದ 24 ಗಂಟೆಯೂ ಉಚಿತ ವಿದ್ಯುತ್ ಭರವಸೆ