AAP: ಗೋವಾದಲ್ಲಿ ಅಧಿಕಾರ ಸ್ಥಾಪಿಸಲು ಸಜ್ಜಾದ ಅರವಿಂದ್ ಕೇಜ್ರಿವಾಲ್; ಜನರಿಗೆ ದಿನದ 24 ಗಂಟೆಯೂ ಉಚಿತ ವಿದ್ಯುತ್ ಭರವಸೆ
ಗೋವಾ ರಾಜ್ಯದಲ್ಲಿನ ಜನರಿಗೆ ಉಚಿತವಾಗಿ ವಿದ್ಯುತ್ ಸಿಗಬೇಕು. ಹೀಗಾಗಿ ಎಎಪಿ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೂ ತಿಂಗಳಿಗೆ 300 ಯುನಿಟ್ ವಿದ್ಯುತ್ ಉಚಿತವಾಗಿ ಸರಬರಾಜು ಮಾಡಲಾಗುವುದು: ಅರವಿಂದ್ ಕೇಜ್ರಿವಾಲ್
ಗೋವಾ: ಗೋವಾ ರಾಜ್ಯಕ್ಕೆ ಎರಡು ದಿನಗಳ ಪ್ರವಾಸದ ನಿಮಿತ್ತ ಆಗಮಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಸಂಚಲನ ಮೂಡಿಸಿದ್ದಾರೆ. ಗೋವಾದಲ್ಲಿ (Goa) 2022ರಲ್ಲಿ ನಡೆಯಬೇಕಿರುವ ವಿಧಾನಸಭಾ ಚುನಾವಣೆಗೆ (Assembly Election) ಸನ್ನದ್ಧವಾಗುತ್ತಿರುವ ಎಎಪಿ (AAP) ಪಕ್ಷವನ್ನು ಬಲಗೊಳಿಸುವ ಸಲುವಾಗಿ ಮಹತ್ವದ ಘೋಷಣೆಗಳನ್ನು ಮಾಡಿರುವ ಅರವಿಂದ್ ಕೇಜ್ರಿವಾಲ್, ಮುಂಬರುವ ಚುನಾವಣೆಯಲ್ಲಿ ಎಎಪಿ ಗೋವಾದಲ್ಲಿ ಅಧಿಕಾರ ಹಿಡಿದರೆ, ರಾಜ್ಯದ ಜನರಿಗೆ ಉಚಿತ ವಿದ್ಯುತ್ (Free Electricity) ಸರಬರಾಜು ಮಾಡುವುದಾಗಿ ಹೇಳಿದ್ದಾರೆ. ಅಲ್ಲದೇ ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲ ಮಹತ್ತರ ನಿರ್ಣಯಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ನಾನು ಈ ಸಂದರ್ಭದಲ್ಲಿ ಈಡೇರಿಸುವ ಭರವಸೆಗಳನ್ನು ನೀಡುತ್ತಿದ್ದೇನೆ. ಎಎಪಿ ಅಥವಾ ಅರವಿಂದ್ ಕೇಜ್ರಿವಾಲ್ ನೀಡುವ ಭರವಸೆಗಳು ಇತರೆ ಪಕ್ಷದ ನಾಯಕರು ಚುನಾವಣೆಗೆ ಮಾತ್ರ ಮೀಸಲಾಗಿ ನೀಡುವ ಆಶ್ವಾಸನೆಗಳಂತೆ ಅಲ್ಲ. ನಾನು ಒಮ್ಮೆ ಘೋಷಣೆ ಮಾಡಿದ ನಂತರ ಅದನ್ನು ಈಡೇರಿಸದೇ ಬಿಡುವುದಿಲ್ಲ. ಗೋವಾ ರಾಜ್ಯದ ಜನತೆಗೆ ನಾನು ನೀಡುತ್ತಿರುವ ಮೊದಲ ಭರವಸೆ ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಪಟ್ಟಿರುವುದಾಗಿದೆ ಮತ್ತು ಅದು ಖಂಡಿತವಾಗಿಯೂ ಈಡೇರುತ್ತದೆ ಎಂದು ಹೇಳಿದ್ದಾರೆ.
ಗೋವಾ ರಾಜ್ಯದಲ್ಲಿನ ಜನರಿಗೆ ಉಚಿತವಾಗಿ ವಿದ್ಯುತ್ ಸಿಗಬೇಕು. ಹೀಗಾಗಿ ಎಎಪಿ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೂ ತಿಂಗಳಿಗೆ 300 ಯುನಿಟ್ ವಿದ್ಯುತ್ ಉಚಿತವಾಗಿ ಸರಬರಾಜು ಮಾಡಲಾಗುವುದು. ಪ್ರಸ್ತುತ ದೆಹಲಿಯ ಶೇ.73ರಷ್ಟು ಭಾಗ ಉಚಿತ ವಿದ್ಯುತ್ ಪಡೆಯುತ್ತಿದೆ. ಅದು ಗೋವಾದಲ್ಲೂ ಸಾಕಾರಗೊಳ್ಳಲಿದ್ದು, ನಾವು ಅಧಿಕಾರ ವಹಿಸಿದ ನಂತರ, ನೀವು ಪಾವತಿಸಬೇಕಾದ ಮೊತ್ತ ಸೊನ್ನೆ ಎಂದು ವಿದ್ಯುತ್ ಬಿಲ್ನಲ್ಲಿ ಕಾಣಿಸಲಿದೆ ಎಂದು ತಿಳಿಸಿದ್ದಾರೆ.
ಎಎಪಿ ಅಧಿಕಾರ ಹಿಡಿದ ತಕ್ಷಣ ಇದನ್ನು ಜಾರಿಗೆ ತರಲಿದೆ. ಆರಂಭದಲ್ಲೇ ರಾಜ್ಯದ ಶೇ.87ರಷ್ಟು ಭಾಗದಲ್ಲಿ ಉಚಿತ ವಿದ್ಯುತ್ ನೀಡಲಾಗುವುದು. ಅಲ್ಲದೇ ಇನ್ನೊಂದು ಭರವಸೆಯೇನೆಂದರೆ ಈವರೆಗೆ ಬಾಕಿ ಉಳಿಸಿದ ವಿದ್ಯುತ್ ಮೊತ್ತವನ್ನೂ ಮನ್ನಾ ಮಾಡಲಾಗುವುದು. ನಾವು ದೆಹಲಿಯಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿದ ಯೋಜನೆಗಳನ್ನೇ ಗೋವಾದಲ್ಲೂ ಜಾರಿ ಮಾಡುತ್ತೇವೆ. ಜತೆಗೆ, ಗೋವಾವನ್ನು ಸ್ವಚ್ಛ ರಾಜ್ಯವನ್ನಾಗಿಸುವತ್ತ ಹೆಜ್ಜೆ ಹಾಕುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
Goa is ready for change, AAP National Convenor Shri @ArvindKejriwal making an Important announcement | LIVE https://t.co/4FSI6I65zk
— AAP (@AamAadmiParty) July 14, 2021
ಇದೇ ಸಂದರ್ಭದಲ್ಲಿ ಇನ್ನೊಂದು ಮಹತ್ವದ ಘೋಷಣೆ ಮಾಡಿದ ಅವರು, ಗೋವಾದ ಎಲ್ಲಾ ಜನತೆಗೂ ದಿನದ 24 ಗಂಟೆಯೂ ನಿರಂತರ ವಿದ್ಯುತ್ ಸಂಪರ್ಕ ನೀಡುವುದಾಗಿ ತಿಳಿಸಿದ್ದಾರೆ. ದೆಹಲಿಯಲ್ಲಿ ಈ ಯೋಜನೆಯೂ ಯಶಸ್ವಿಯಾಗಿದ್ದು ಪವರ್ ಕಟ್ ಪದ್ಧತಿಯೇ ಹೊರಟುಹೋಗಿದೆ. ಅದನ್ನು ಗೋವಾದಲ್ಲೂ ಜಾರಿ ಮಾಡುವುದು ನಮ್ಮ ಗುರಿ ಎಂದಿದ್ದಾರೆ. ಅಂತೆಯೇ, ರೈತರಿಗೂ ಉಚಿತ ವಿದ್ಯುತ್ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಪಂಜಾಬ್ನಲ್ಲಿ ಉಚಿತ ವಿದ್ಯುತ್ ಭರವಸೆ, ಎಎಪಿಯಿಂದಲೇ ಮ್ಯಾಜಿಕ್ ಸಾಧ್ಯ: ಅರವಿಂದ್ ಕೇಜ್ರಿವಾಲ್