Pulwama Encounter: ಪುಲ್ವಾಮಾದಲ್ಲಿ ಲಷ್ಕರ್ ಇ ತೊಯ್ಬಾದ ಕಮಾಂಡರ್ ಸೇರಿ ಮೂವರು ಉಗ್ರರ ಹತ್ಯೆ
ಉಗ್ರರು ಅಡಗಿದ್ದಾರೆಂಬ ಮಾಹಿತಿ ಬಂದ ತಕ್ಷಣ ಅವರನ್ನು ಹುಡುಕಿ ಬಂಧಿಸಲು ನಾವು ಹೋಗಿದ್ದು. ಆದರೆ ಅಡಗಿದ್ದ ಉಗ್ರರು ಒಂದೇ ಸಮ ನಮ್ಮ ಮೇಲೆ ದಾಳಿ ಮಾಡಲು ಶುರು ಮಾಡಿದರು ಎಂದು ಕಾಶ್ಮೀರ ವಲಯದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾಗಿ ಕಾಶ್ಮೀರ ವಲಯದ ಪೊಲೀಸರು ಇಂದು ಬೆಳಗ್ಗೆ ಮಾಹಿತಿ ನೀಡಿದ್ದಾರೆ. ಬುಧವಾರ ಮುಂಜಾನೆಯಿಂದಲೂ ಉಗ್ರರು ಮತ್ತು ರಕ್ಷಣಾ ಪಡೆಗಳ ನಡುವೆ ಗುಂಡಿನಚಕಮಕಿ ನಡೆಯುತ್ತಿತ್ತು. ಅಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಮತ್ತು ಸೇನಾ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಸ್ಥಳವನ್ನು ಸುತ್ತುವರಿದಿದ್ದರು. ತಮ್ಮನ್ನು ಸೆರೆ ಹಿಡಿಯಲು ಬಂದ ಪೊಲೀಸ್ ಸಿಬ್ಬಂದಿ ಮೇಲೆ ಭಯೋತ್ಪಾದಕರೂ ಗುಂಡಿನ ದಾಳಿ ನಡೆಸಿದ್ದರು.
ಪಾಕಿಸ್ತಾನದ ಲಷ್ಕರ್ ಇ ತೊಯ್ಬಾ ಉಗ್ರಸಂಘಟನೆಯ ಕಮಾಂಡರ್ ಐಜಾಜ್ ಅಲಿಯಾಸ್ ಅಬು ಹುರೈರಾ ಮತ್ತು ಇಬ್ಬರು ಸ್ಥಳೀಯ ಭಯೋತ್ಪಾದಕರನ್ನು ಹತ್ಯೆಗೈದಿದ್ದಾಗಿ ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಲಷ್ಕರ್ ಇ ತೊಯ್ಬಾ ಕಮಾಂಡರ್ ಸತ್ತಿದ್ದಕ್ಕೆ ನಿಜಕ್ಕೂ ರಕ್ಷಣಾ ಪಡೆಗಳಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಕಾಶ್ಮೀರ ವಲಯದ ಐಜಿಪಿ ಟ್ವೀಟ್ ಮಾಡಿದ್ದಾರೆ.
ಉಗ್ರರು ಅಡಗಿದ್ದಾರೆಂಬ ಮಾಹಿತಿ ಬಂದ ತಕ್ಷಣ ಅವರನ್ನು ಹುಡುಕಿ ಬಂಧಿಸಲು ನಾವು ಹೋಗಿದ್ದು. ಆದರೆ ಅಡಗಿದ್ದ ಉಗ್ರರು ಒಂದೇ ಸಮ ನಮ್ಮ ಮೇಲೆ ದಾಳಿ ಮಾಡಲು ಶುರು ಮಾಡಿದರು. ಅನಿವಾರ್ಯವಾಗಿ ನಾವೂ ಅದಕ್ಕೆ ಪ್ರತಿಕ್ರಿಯೆ ನೀಡಬೇಕಾಯಿತು. ಅದು ಎನ್ಕೌಂಟರ್ಗೆ ತಿರುಗಿತು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶೀಘ್ರದಲ್ಲೇ ಚಂದ್ರನಿಂದ ಭೂಮಿಗೆ ಕಾದಿದೆ ಕಂಟಕ: ವಿಜ್ಞಾನಿಗಳಿಂದ ಎಚ್ಚರಿಕೆ
LeT commander 2 militants killed By encounter In Pulwama