ನವಜೋತ್ ಸಿಂಗ್ ಸಿಧು- ಅಮರೀಂದರ್ ಸಿಂಗ್ ನಡುವಿನ ಶೀತಲ ಸಮರ ಅಂತ್ಯ; ನಾಳೆಯ ಟೀ ಪಾರ್ಟಿಗೆ ಹೋಗ್ತಾರಂತೆ ಪಂಜಾಬ್ ಸಿಎಂ

ಪಂಜಾಬ್​ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ನಾಳೆ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಟೀ ಪಾರ್ಟಿ ಆಯೋಜನೆ ಮಾಡಿದ್ದಾರೆ.

ನವಜೋತ್ ಸಿಂಗ್ ಸಿಧು- ಅಮರೀಂದರ್ ಸಿಂಗ್ ನಡುವಿನ ಶೀತಲ ಸಮರ ಅಂತ್ಯ; ನಾಳೆಯ ಟೀ ಪಾರ್ಟಿಗೆ ಹೋಗ್ತಾರಂತೆ ಪಂಜಾಬ್ ಸಿಎಂ
ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿದ್ಧು

ಅಮೃತಸರ: ಪಂಜಾಬ್​ನ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ (CM Amarinder Singh) ನಡುವಿನ ಶೀತಲ ಸಮರಕ್ಕೆ ಕೊನೆಗೂ ತೆರೆ ಬೀಳುವ ಲಕ್ಷಣಗಳು ಕಾಣುತ್ತಿವೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ತೀವ್ರ ವಿರೋಧದ ನಡುವೆಯೂ ನವಜೋತ್ ಸಿಂಗ್ ಸಿಧುಗೆ ಕಾಂಗ್ರೆಸ್ (Congress) ಅಧ್ಯಕ್ಷ ಸ್ಥಾನ ನೀಡಿರುವ ಹೈಕಮಾಂಡ್ ವಿರುದ್ಧ ಪಂಜಾಬ್ ಸಿಎಂ ಮುನಿಸಿಕೊಂಡಿದ್ದರು. ಅಮರೀಂದರ್ ಸಿಂಗ್ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದಕ್ಕೆ ಕ್ಷಮಾಪಣೆ ಕೇಳುವವರೆಗೂ ನೂತನ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿರುವ ನವಜೋತ್ ಸಿಂಗ್ ಸಿಧು (Navjot Singh Sidhu) ಅವರನ್ನು ಭೇಟಿ ಮಾಡುವುದಿಲ್ಲ ಎಂದು ಅಮರೀಂದರ್ ಸಿಂಗ್ ಬಣದವರು ಘೋಷಿಸಿದ್ದರು. ಇದಕ್ಕೆ ಪ್ರತಿಸವಾಲು ಹಾಕಿರುವ ಸಿಧು ಬಣದವರು ಸಿಎಂ ಅಮರೀಂದರ್ ಸಿಂಗ್ ಬಳಿ ನವಜೋತ್ ಸಿಂಗ್ ಸಿಧು ಕ್ಷಮಾಪಣೆ ಕೇಳಲು ಸಾಧ್ಯವೇ ಇಲ್ಲ ಎಂದಿದ್ದರು. ಆದರೆ, ಇದೀಗ ಅವರಿಬ್ಬರೂ ನಾಳೆ ನಡೆಯುವ ಟೀ ಪಾರ್ಟಿಯಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ವೈರತ್ವಕ್ಕೆ ಪೂರ್ಣ ವಿರಾಮ ಇಡಲು ಮುಂದಾಗಿದ್ದಾರೆ.

ಪಂಜಾಬ್​ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ನಾಳೆ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಟೀ ಪಾರ್ಟಿ ಆಯೋಜನೆ ಮಾಡಿದ್ದಾರೆ. ಆ ಟೀ ಪಾರ್ಟಿಗೆ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರನ್ನೂ ಆಹ್ವಾನಿಸಿದ್ದಾರೆ. ಆ ಆಹ್ವಾನವನ್ನು ಸ್ವೀಕರಿಸಿರುವ ಅಮರೀಂದರ್ ಸಿಂಗ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮ ಮತ್ತು ಪಂಜಾಬ್​ ಭವನದಲ್ಲಿ ನಡೆಯುವ ಟೀ ಪಾರ್ಟಿಗೆ ಬರುವುದಾಗಿ ತಿಳಿಸಿದ್ದಾರೆ.

ನವಜೋತ್ ಸಿಂಗ್ ಪಂಜಾಬ್​ನ ಸಿಎಂ ಅಮರೀಂದರ್ ಸಿಂಗ್ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದರು. ‘ಆ ಟ್ವೀಟ್​ಗೆ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳುವವರೆಗೂ ನಾನು ಸಿಧು ಅವರನ್ನು ಭೇಟಿಯಾಗುವುದಿಲ್ಲ’ ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಳೆದ ವಾರ ನಡೆದ ಪಕ್ಷದ ಸಭೆಯಲ್ಲಿ ಹೇಳಿದ್ದರು. ಆದರೆ, ಕ್ಷಮಾಪಣೆ ಕೇಳುವ ಮಾತೇ ಇಲ್ಲ ಎಂದು ಸಿಧು ಬಣದವರು ತಿರುಗೇಟು ನೀಡಿದ್ದರು. ನಿನ್ನೆಯಷ್ಟೇ ಪಂಜಾಬ್​ನ ಕಾಂಗ್ರೆಸ್ ಪಕ್ಷದ 77 ಶಾಸಕರನ್ನು ಇಂದು ಅಮೃತಸರದ ಗೋಲ್ಡನ್ ಟೆಂಪಲ್​ಗೆ ತನ್ನೊಡನೆ ಬರಲು ಪಂಜಾಬ್ ನೂತನ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಧು ಕೋರಿದ್ದರು. ಅವರಲ್ಲಿ 62 ಶಾಸಕರು ಇಂದು ಸಿಧು ಜೊತೆ ಅಮೃತಸರಕ್ಕೆ ತೆರಳುವ ಮೂಲಕ ಅಮರೀಂದರ್ ಸಿಂಗ್​ಗೆ ಶಾಕ್ ಕೊಟ್ಟಿದ್ದರು.

ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರಿಗೆ ತನ್ನ ಪ್ರಾಬಲ್ಯ ತೋರಿಸಲು ನಿರ್ಧರಿಸಿದ್ದ ಸಿಧು ಪಂಜಾಬ್​ನ ಕಾಂಗ್ರೆಸ್ ಪಕ್ಷದ ಎಲ್ಲ 77 ಶಾಸಕರನ್ನೂ ಅಮೃತಸರದ ಗೋಲ್ಡನ್ ಟೆಂಪಲ್​ಗೆ ಬರಲು ಸೂಚಿಸಿದ್ದರು. ಆದರೆ, ಅವರಲ್ಲಿ 62 ಶಾಸಕರು ನವಜೋತ್ ಸಿಂಗ್ ಅವರ ಬಣದಲ್ಲಿ ಗುರುತಿಸಿಕೊಂಡಿದ್ದು, ಉಳಿದ 15 ಶಾಸಕರು ಸಿಎಂ ಅಮರೀಂದರ್ ಸಿಂಗ್ ಬಣದಲ್ಲಿದ್ದಾರೆ. ಈ ಮೂಲಕ ತಮ್ಮ ನಾಯಕತ್ವವನ್ನು ಒಪ್ಪಿಕೊಂಡ ಶಾಸಕರ ಸಂಖ್ಯೆ ಹೆಚ್ಚಾಗಿದೆ ಎಂಬ ಸಂದೇಶವನ್ನು ತಮ್ಮ ಎದುರಾಳಿ ಬಣಕ್ಕೆ ನವಜೋತ್ ಸಿಂಗ್ ಸಿಧು ತಲುಪಿಸಿದ್ದರು. ಅವರಿಬ್ಬರ ನಡುವಿನ ವೈರತ್ವ ನಾಳೆ ಶಮನವಾಗುವ ಲಕ್ಷಣಗಳಿದ್ದು, ಪಂಜಾಬ್​ನ ಕಾಂಗ್ರೆಸ್ ಪಕ್ಷದೊಳಗಿನ ಬಿಕ್ಕಟ್ಟು ಬಗೆಹರಿಯುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಸಿಎಂ ಅಮರೀಂದರ್ ಸಿಂಗ್ ಬಳಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ; ನವಜೋತ್ ಸಿಂಗ್ ಸಿಧು ಬಣದಿಂದ ಸ್ಪಷ್ಟ ಸಂದೇಶ