ಲಿಂಗಾಯತ ಸಮುದಾಯದ ನಾಯಕತ್ವ ತಮ್ಮ ಕುಟುಂಬದ ಆಚೆಗೆ ಹೋಗದಿರಲು ಹೈಕಮಾಂಡ್ಗೆ ಷರತ್ತು ವಿಧಿಸಿದರೆ ಯಡಿಯೂರಪ್ಪ?
ಯಾವ ಅಸ್ತ್ರ ಬಳಸಿ ಯಡಿಯೂರಪ್ಪ ಅವರನ್ನು ಕಟ್ಟಿ ಹಾಕಲು ಹೈಕಮಾಂಡ್ ಪ್ರಯತ್ನಿಸಿತೋ, ಅದೇ ಅಸ್ತ್ರವನ್ನು ಈಗ ಯಡಿಯೂರಪ್ಪ ತಮ್ಮ ಪರವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಕರ್ನಾಟಕ ರಾಜಕಾರಣದಲ್ಲಿ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ನಡೆಯುತ್ತಿವೆ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಯುವುದು ಬಹುತೇಕ ನಿಶ್ಚಿತ ಎಂಬ ವಾತಾವರಣ ನಿರ್ಮಾಣವಾಗಿದ್ದು ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಚಾಲ್ತಿಗೆ ಬಂದಿದೆ. ಅಧಿಕಾರದ ಮೊಗಸಾಲೆಯಲ್ಲಿ ಕೇಳಿಬರುತ್ತಿರುವ ಮಾತುಗಳನ್ನೇ ಆಧರಿಸಿ ವಿಶ್ಲೇಷಿಸುವುದಾದರೆ ಬಿಜೆಪಿಯ ಮುಂದಿನ ಎರಡು ವರ್ಷಗಳ ಆಡಳಿತದಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಮತ್ತೊಬ್ಬ ಮುಖ್ಯಮಂತ್ರಿ ಅಧಿಕಾರಕ್ಕೆ ಬರುವುದು ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಲ್ಕುಲ್ ಇಷ್ಟವಿಲ್ಲ. ಈ ವಿಚಾರವನ್ನು ಯಡಿಯೂರಪ್ಪ ಈಗಾಗಲೇ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತೊಬ್ಬ ಲಿಂಗಾಯತ ಮುಖ್ಯಮಂತ್ರಿ ಬೇಡ ಎಂದು ಯಡಿಯೂರಪ್ಪ ಷರತ್ತು ವಿಧಿಸಿರುವುದನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ ಹಲವು ವಿಚಾರಗಳು ಮುನ್ನೆಲೆಗೆ ಬರುತ್ತವೆ. ಅದರಲ್ಲಿ ಅತ್ಯಂತ ಪ್ರಮುಖ ಅಂಶ, ಮಕ್ಕಳ ಭವಿಷ್ಯ. ಕರ್ನಾಟಕದ ಪ್ರಬಲ ಸಮುದಾಯ ಎನಿಸಿರುವ ಲಿಂಗಾಯತ ಸಮುದಾಯದ ವಿಶ್ವಾಸವನ್ನು ಹಲವು ವರ್ಷಗಳಿಂದ ಯಡಿಯೂರಪ್ಪ ಹೊಂದಿದ್ದಾರೆ. ತಮ್ಮ ನಂತರ ತಮ್ಮ ಮಕ್ಕಳಿಗೆ ಈ ವಿಶ್ವಾಸ ಸಾಗಿಬರಬೇಕು ಎನ್ನುವುದು ಅವರ ಇರಾದೆ. ಕರ್ನಾಟಕದ ರಾಜಕಾರಣದಲ್ಲಿ ಅದರಲ್ಲೂ ಬಿಜೆಪಿ ಪಕ್ಷದಲ್ಲಿ ತಮ್ಮ ಕುಟುಂಬಕ್ಕೆ ಹೊರತಾದ ಮತ್ತೋರ್ವ ಲಿಂಗಾಯತ ನಾಯಕ ಪ್ರವರ್ಧಮಾನಕ್ಕೆ ಬರುವುದನ್ನು ಇದೇ ಕಾರಣಕ್ಕೆ ಯಡಿಯೂರಪ್ಪ ಇಷ್ಟಪಡುತ್ತಿಲ್ಲ ಎಂಬ ವಿಶ್ಲೇಷಣೆ ಚಾಲ್ತಿಯಲ್ಲಿದೆ.
ಒಂದು ವೇಳೆ ಮತ್ತೋರ್ವ ಲಿಂಗಾಯತ ನಾಯಕ ಬಿಜೆಪಿಯಲ್ಲಿ, ಕರ್ನಾಟಕದಲ್ಲಿ ಪ್ರವರ್ಧಮಾನಕ್ಕೆ ಬಂದರೆ ಮಕ್ಕಳಾದ ಬಿ.ವೈ.ವಿಜಯೇಂದ್ರ ಮತ್ತು ಬಿ.ವೈ.ರಾಘವೇಂದ್ರ ಅವರ ರಾಜಕೀಯ ಭವಿಷ್ಯ ಅಪಾಯವಾಗಬಹುದು ಎಂಬ ಆತಂಕ ಯಡಿಯೂರಪ್ಪ ಅವರನ್ನು ಕಾಡುತ್ತಿರುವಂತಿದೆ. ಅಷ್ಟು ಮಾತ್ರವಲ್ಲ, ಲಿಂಗಾಯತ ಜಾತಿಯ ಮತ್ತೊಬ್ಬ ಮುಖ್ಯಮಂತ್ರಿಯನ್ನು ಹೈಕಮಾಂಡ್ ಅಧಿಕಾರಕ್ಕೆ ತಂದರೆ ಹೊಸ ಮುಖ್ಯಮಂತ್ರಿಯ ವಿರುದ್ಧ ತಮ್ಮ ಅಸ್ತ್ರಗಳನ್ನು ನಿರ್ದಾಕ್ಷಿಣ್ಯವಾಗಿ ಪ್ರಯೋಗಿಸಲೂ ಯಡಿಯೂರಪ್ಪ ಅವರಿಗೆ ಕಷ್ಟವಾಗಬಹುದು. ಒಂದು ವೇಳೆ ಅಂಥ ಸಂದರ್ಭ ಬಂದು, ಮತ್ತೋರ್ವ ಲಿಂಗಾಯತ ಮುಖ್ಯಮಂತ್ರಿಯೇ ಪ್ರಮಾಣವಚನ ಸ್ವೀಕರಿಸಿದರು ಎಂದಿಕೊಟ್ಟುಕೊಳ್ಳೋಣ. ಆಗ ಯಡಿಯೂರಪ್ಪ ಅವರ ಯಾವುದೇ ನಡೆಯಿಂದ ಅವರಿಗೆ ಅಥವಾ ಪಕ್ಷಕ್ಕೆ ಧಕ್ಕೆಯಾದರೆ ಲಿಂಗಾಯತ ಸಮುದಾಯದ ವಿರೋಧವನ್ನು ಯಡಿಯೂರಪ್ಪ ಮತ್ತು ಅವರ ಮಕ್ಕಳು ಏಕಾಂಗಿಯಾಗಿ ಎದುರಿಸಬೇಕಾಗುತ್ತದೆ.
ಅದೇ ಬೇರೆ ಸಮುದಾಯದ ಮುಖ್ಯಮಂತ್ರಿಯಿದ್ದರೆ ಯಡಿಯೂರಪ್ಪ ತಮ್ಮ ದಾಳಗಳನ್ನು ಉರುಳಿಸುವುದು ಸುಲಭವಾಗುತ್ತದೆ. ಅಧಿಕಾರ ಕಳೆದುಕೊಂಡ ನಮ್ಮ ಜಾತಿಯವ ಎಂಬ ಅಭಿಮಾನ ಮತ್ತು ಅನುಕಂಪದ ಅಲೆಯೂ ಯಡಿಯೂರಪ್ಪ ಪರ ಇರುವುದರಿಂದ ಮಕ್ಕಳ ಭವಿಷ್ಯವನ್ನು ಸುಭದ್ರಗೊಳಿಸುವುದು ಯಡಿಯೂರಪ್ಪ ಅವರಿಗೆ ಸುಲಭವಾಗುತ್ತದೆ. ಮತ್ತೊಬ್ಬ ಲಿಂಗಾಯತ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದು, ಬಂದವರು ಪ್ರಬಲರೂ, ಬುದ್ಧಿವಂತರು ಮತ್ತು ಚಾಕಚಕ್ಯತೆ ಇರುವವರೂ ಆಗಿದ್ದರೆ ಯಡಿಯೂರಪ್ಪ ಕುಟುಂಬದ ರಾಜಕೀಯ ಭವಿಷ್ಯಕ್ಕೆ ತೊಂದರೆ ಎಂಬುದು ಯಡಿಯೂರಪ್ಪ ಆಪ್ತರ ಲೆಕ್ಕಾಚಾರ.
ಇಷ್ಟುದಿನ ರಾಜೀನಾಮೆ ವಿಚಾರವಾಗಿ ಸಂದಿಗ್ಧದ ಹೇಳಿಕೆಗಳನ್ನು ನೀಡುತ್ತಿದ್ದ ಯಡಿಯೂರಪ್ಪ ಇದೀಗ ರಾಜೀನಾಮೆ ಕೊಟ್ಟೇ ಬಿಡುತ್ತಾರೆ ಎಂಬ ಸ್ಥಿತಿಗೆ ಬಂದಿರುವುದರ ಹಿಂದೆಯೂ ಮಕ್ಕಳ ಭವಿಷ್ಯದ ಪ್ರಶ್ನೆಯೇ ಕೆಲಸ ಮಾಡಿದೆ ಎನ್ನಲಾಗುತ್ತಿದೆ. ನಿರ್ದೇಶಿತ ದಿನಾಂಕಕ್ಕೆ ರಾಜೀನಾಮೆ ಕೊಡಬೇಕು, ಮುಂದಿನ ಮುಖ್ಯಮಂತ್ರಿಗೆ ಯಾವುದೇ ತೊಂದರೆ ಕೊಡಬಾರದು. ಒಂದು ವೇಳೆ ಅಂಥ ಬೆಳವಣಿಗೆಗಳು ನಡೆದರೆ ನಿಮ್ಮ ಮಕ್ಕಳ ರಾಜಕೀಯ ಭವಿಷ್ಯ ಮಸುಕಾದೀತು ಎಂಬ ಪರೋಕ್ಷ ಎಚ್ಚರಿಕೆ ಈಗಾಗಲೇ ಯಡಿಯೂರಪ್ಪ ಅವರಿಗೆ ಹೈಕಮಾಂಡ್ನಿಂದ ರವಾನೆಯಾಗಿದೆ ಎನ್ನಲಾಗಿದೆ.
ಮಕ್ಕಳ ಭವಿಷ್ಯ ಎಂಬ ಒಂದೇ ಅಸ್ತ್ರವನ್ನು ಯಡಿಯೂರಪ್ಪ ಮತ್ತು ಹೈಕಮಾಂಡ್ ತಮ್ಮ ಮೂಗಿನ ನೇರಕ್ಕೆ ಮತ್ತು ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ಯಾವ ಅಸ್ತ್ರ ಬಳಸಿ ಯಡಿಯೂರಪ್ಪ ಅವರನ್ನು ಕಟ್ಟಿ ಹಾಕಲು ಹೈಕಮಾಂಡ್ ಪ್ರಯತ್ನಿಸಿತೋ, ಅದೇ ಅಸ್ತ್ರ ಬಳಸಿ ಭವಿಷ್ಯದ ಮುಖ್ಯಮಂತ್ರಿ ಪಟ್ಟ ಲಿಂಗಾಯತೇತರ ಸಮುದಾಯಕ್ಕೆ ಸೇರಿದವರಿಗೆ ಸಿಗಬೇಕು ಎಂದು ಯಡಿಯೂರಪ್ಪ ಪ್ರತ್ಯಸ್ತ್ರ ಹೂಡಿದ್ದಾರೆ ಎಂಬ ಮಾತುಗಳು ಪ್ರಬಲವಾಗಿ ಕೇಳಿ ಬರುತ್ತಿವೆ.
(Karnataka Political analysis inside view BS Yediyurappa accepts to resign with a condition of non lingayat chief minister)
ಇದನ್ನೂ ಓದಿ: Karnataka Politics: ಸಿಎಂ ಸ್ಥಾನ ಉಳಿಸಿಕೊಳ್ಳಲು ವಲಸಿಗ ಸಚಿವರ ಮೂಲಕ ಒತ್ತಡ ಹಾಕಿದರಾ ಯಡಿಯೂರಪ್ಪ?
ಇದನ್ನೂ ಓದಿ: Karnataka Politics: ಯಡಿಯೂರಪ್ಪ ಮುಂದಿನ 2 ವರ್ಷ ಸಿಎಂ ಆಗಿ ಮುಂದುವರೆಯಲಿ: ಕುಮಾರಸ್ವಾಮಿ ಹಾರೈಕೆ
Published On - 6:59 pm, Thu, 22 July 21