ದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಮಾಡುತ್ತಿರುವ ನಿರಂತರ ಹೋರಾಟಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕೂಡಾ ಕೈ ಜೋಡಿಸಿದ್ದು, ಇಂದು ಟ್ರ್ಯಾಕ್ಟರ್ (Tractor) ಚಲಾಯಿಸಿಕೊಂಡು ಸಂಸತ್ತಿಗೆ (Parliament) ಆಗಮಿಸುವ ಮೂಲಕ ಕೃಷಿ ಕಾಯ್ದೆ (Farm Laws) ವಿರೋಧಿ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು. ಎಲ್ಲಾ ಮೂರು ಕಾಯ್ದೆಗಳನ್ನೂ ಹಿಂಪಡೆಯಿರಿ ಎಂಬ ಘೋಷ ವಾಕ್ಯವನ್ನು ಟ್ರ್ಯಾಕ್ಟರ್ ಮುಂಭಾಗಕ್ಕೆ ಕಟ್ಟಲಾಗಿದ್ದು, ರಾಹುಲ್ ಗಾಂಧಿಗೆ ಅನೇಕರು ಜತೆಯಾದರು.
ಮುಂಗಾರು ಅಧಿವೇಶನದ ವೇಳೆ ಸಂಸತ್ತಿನತ್ತ ಆಗಮಿಸಿದ ವಯನಾಡು ಸಂಸದ ರಾಹುಲ್ ಗಾಂಧಿ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಕೃಷಿ ಕಾಯ್ದೆ ವಿರೋಧಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ಗಮನ ಸೆಳೆಯಿತು. ಈ ವೇಳೆ, ಅವರಿಗೆ ಜತೆಯಾದ ಪಂಜಾಬ್, ಹರಿಯಾಣದ ಕಾಂಗ್ರೆಸ್ ಸಂಸದರಾದ ದೀಪೆಂದರ್ ಹೂಡಾ, ರವ್ನೀತ್ ಸಿಂಗ್ ಬಿಟ್ಟು, ಪ್ರತಾಪ್ ಸಿಂಗ್ ಬಾಜ್ವಾ ಕೂಡಾ ವಿವಾದಾಸ್ಪದ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಕೃಷಿ ಕಾಯ್ದೆಗಳನ್ನು ವಿರೋಧಿಸಿದ ಅವರು ಕೈಯಲ್ಲಿ ಭಿತ್ತಿಪತ್ರಗಳನ್ನು ಹಿಡಿದು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು, ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಸಂಸತ್ತಿನತ್ತ ಆಗಮಿಸಿದ ಟ್ರ್ಯಾಕ್ಟರ್ ಮುಂಭಾಗದಲ್ಲಿ ದೊಡ್ಡ ಬ್ಯಾನರ್ ಒಂದನ್ನು ಕಟ್ಟಲಾಗಿದ್ದು, ಎಲ್ಲಾ ಮೂರು ಕಾಯ್ದೆಗಳನ್ನೂ ಹಿಂಪಡೆಯಿರಿ ಎಂಬ ವಾಕ್ಯ ಎದ್ದು ಕಾಣುತ್ತಿತ್ತು.
ಟ್ರ್ಯಾಕ್ಟರ್ ಚಲಾಯಿಸುವ ವೇಳೆ ಎನ್ 95 ಮಾಸ್ಕ್ ಧರಿಸಿದ್ದ ರಾಹುಲ್ ಗಾಂಧಿ, ತಮ್ಮ ಪಕ್ಷದ ಸಂಸದರೊಂದಿಗೆ ಮಾತನಾಡುತ್ತಾ ಸಂಸತ್ತಿನತ್ತ ಆಗಮಿಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರ ರೈತರ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದ್ದು ಅವರ ಪರವಾಗಿ ಆಗಮಿಸಿದ್ದಾಗಿ ತಿಳಿಸಿದರು. ಸರ್ಕಾರ ಸಂಸತ್ತಿನಲ್ಲಿ ಈ ವಿಚಾರವನ್ನು ಮಾತನಾಡುವುದಕ್ಕೆ ಸಿದ್ಧವಿಲ್ಲ. ಆದರೆ, 2-3 ದೊಡ್ಡ ದೊಡ್ಡ ಉದ್ಯಮಿಗಳ ಪರವಾಗಿ ತರುತ್ತಿರುವ ಈ ಕಾಯ್ದೆಯನ್ನು ಅವರು ಹಿಂಪಡೆಯಲೇಬೇಕಾಗುತ್ತದೆ. ಅವರು ಇದನ್ನು ಯಾರಿಗೋಸ್ಕರ ಜಾರಿ ಮಾಡುತ್ತಿದ್ದಾರೆ ಎನ್ನುವುದು ಇಡೀ ದೇಶಕ್ಕೆ ಗೊತ್ತಾಗಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ:
ಕೇಂದ್ರದ ಹೊಸ ಕೃಷಿ ಕಾಯ್ದೆಗಳ ಫಲ: ಪಂಜಾಬ್ ರೈತರ ಗೋಧಿ ಖರೀದಿಸಿ ನೇರವಾಗಿ ಅವರ ಖಾತೆಗೆ ಹಣ ವರ್ಗಾಯಿಸಿದ ಕೇಂದ್ರ ಆಹಾರ ನಿಗಮ
(Rahul Gandhi reaches parliament on tractor protesting against new farm laws)
Published On - 11:19 am, Mon, 26 July 21