ದೆಹಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಮಂಗಳವಾರ (ಜೂನ್ 21) ರಾಹುಲ್ ಗಾಂಧಿ (Rahul Gandhi) ಮತ್ತೆ ಜಾರಿ ನಿರ್ದೇಶನಾಲಯದ (Enforcement Directorate – ED) ವಿಚಾರಣೆಗೆ ಹಾಜರಾಗಲಿದ್ದಾರೆ. ಇದು ಐದನೇ ದಿನದ ವಿಚಾರಣೆಯಾಗಿದ್ದು, ಈವರೆಗೆ 40 ಗಂಟೆಗಳ ಕಾಲ ರಾಹುಲ್ ವಿಚಾರಣೆ ಎದುರಿಸಿದ್ದಾರೆ. ನಿನ್ನೆಯೂ (ಜೂನ್ 20) ರಾಹುಲ್ ವಿಚಾರಣೆಗೆ ಹಾಜರಾಗಿದ್ದರು. ನಿನ್ನೆ ವಿಚಾರಣೆಗೆ ಹಾಜರಾಗುವ ಮೊದಲು ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರ ತಾಯಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಸಮಯ ಕಳೆಯಲು ರಾಹುಲ್ ಗಾಂಧಿ ಅವರಿಗೆ ಅವಕಾಶ ನೀಡಲಾಗಿತ್ತು. ಸೋನಿಯಾ ಗಾಂಧಿ ಅವರು ಸೋಂಕಿನಿಂದ ಚೇತರಿಸಿಕೊಂಡಿದ್ದ ಡಿಸ್ಚಾರ್ಜ್ ಆಗಿದ್ದಾರೆ. ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗಲು ಜೂನ್ 23ರವರೆಗೆ ಕಾಲಾವಕಾಶ ನೀಡಿದೆ.
ಈ ಮೊದಲು ಜೂನ್ 13 ಮತ್ತು 15ರಂದು ರಾಹುಲ್ ಗಾಂಧಿ ವಿಚಾರಣೆ ನಡೆದಿತ್ತು. ಈವರೆಗೆ ಸುಮಾರು 30 ತಾಸುಗಳ ಅವಧಿಗೆ ರಾಹುಲ್ ವಿಚಾರಣೆ ನಡೆದಿದೆ. ತಮ್ಮ ನಾಯಕನ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ದೇಶದ ವಿವಿಧೆಡೆ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ಜೂನ್ 17ರಂದು ರಾಹುಲ್ ಗಾಂಧಿ ಅವರಿಗೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ತಮ್ಮ ತಾಯಿಯ ಅನಾರೋಗ್ಯದ ಕಾರಣವನ್ನು ಮುಂದಿಟ್ಟು ರಾಹುಲ್ ಗಾಂಧಿ ಅವರು ವಿಚಾರಣೆ ಮುಂದೂಡಬೇಕು ಎಂದು ವಿನಂತಿಸಿದ್ದರು. ಕೊವಿಡ್ ಸೋಂಕಿನಿಂದ ಬಳಲುತ್ತಿರುವ ಸೋನಿಯಾಗಾಂಧಿ ಕಳೆದ ಜೂನ್ 12ರಿಂದ ಆಸ್ಪತ್ರೆಯಲ್ಲಿದ್ದಾರೆ. ರಾಹುಲ್ ಅವರ ವಿನಂತಿ ಒಪ್ಪಿಕೊಂಡಿದ್ದ ಜಾರಿ ನಿರ್ದೇಶನಾಲಯವು ವಿಚಾರಣೆಯನ್ನು ಸೋಮವಾರಕ್ಕೆ (ಜೂನ್ 20) ಮುಂದೂಡಿತ್ತು.
ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ?
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವವನ್ನು ಹೊಂದಿರುವ ಯಂಗ್ ಇಂಡಿಯನ್‌ನಲ್ಲಿ ಪಕ್ಷದ ಪ್ರಚಾರದಲ್ಲಿ ಹಣಕಾಸು ಅಕ್ರಮಗಳ ಕುರಿತು ಇಡಿ ತನಿಖೆಗೆ ಈ ಪ್ರಕರಣವು ಸಂಬಂಧಿಸಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಪ್ರಕಟಿಸಿದೆ. ಇಡಿ ಇತ್ತೀಚೆಗೆ ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪವನ್ ಬನ್ಸಾಲ್ ಅವರನ್ನು ಕೂಡ ಈ ಪ್ರಕರಣದಲ್ಲಿ ಪ್ರಶ್ನಿಸಿತ್ತು.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಇತರೆ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಸೇರಿ 1938ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಶುರು ಮಾಡಿದ್ದರು. ದೇಶದ ಸ್ವಾತಂತ್ರ್ಯ ಚಳುವಳಿಗೆ ಬೆನ್ನೆಲುಬಾಗಿ ನಿಲ್ಲುವುದು ಈ ಪತ್ರಿಕೆಯ ಪ್ರಮುಖ ಉದ್ದೇಶವಾಗಿತ್ತು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಪ್ರಕಟಿಸಿರುವ ಈ ಪತ್ರಿಕೆ ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಮುಖವಾಣಿಯಾಗಿ ಬದಲಾಗಿತ್ತು. ಕಾಂಗ್ರೆಸ್ ಪಕ್ಷದ ನಿಲುವು, ಅಭಿಪ್ರಾಯಗಳನ್ನು ಇದರಲ್ಲಿ ಪ್ರಕಟ ಮಾಡಲಾಗುತ್ತಿತ್ತು. 1938ರ ಸೆಪ್ಟೆಂಬರ್ 9ರಂದು ಲಕ್ನೋದಲ್ಲಿ ಇಂಗ್ಲೀಷ್ ಭಾಷೆಯ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಟಣೆ ಆರಂಭವಾಗಿತ್ತು. ಬಳಿಕ ಹಿಂದಿ ಭಾಷೆಯ ನವಜೀವನ್ ಮತ್ತು ಉರ್ದು ಭಾಷೆಯ ಕ್ವಾಮಿ ಆವಾಜ್ ಪತ್ರಿಕೆಯನ್ನೂ ಆರಂಭ ಮಾಡಿತ್ತು. ಈ ಮೂರೂ ಪತ್ರಿಕೆಗಳ ಒಡೆತನ ಎಜಿಎಲ್ ಹೆಸರಿನಲ್ಲಿತ್ತು.
ನೆಹರು ಅವರು ಕಟ್ಟಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಕಂಪನಿಯು ಯಾವುದೇ ಒಬ್ಬ ವ್ಯಕ್ತಿಗೆ ಸೇರುವುದಿಲ್ಲ. 2010ರ ವೇಳೆಗ ಎಜಿಎಲ್ 1057 ಷೇರುದಾರರನ್ನು ಹೊಂದಿತ್ತು, ಆದರೆ, ತೀವ್ರ ನಷ್ಟದಲ್ಲಿದ್ದ ಈ ಕಂಪನಿಯ ಷೇರುಗಳನ್ನು 2011ರಲ್ಲಿ ಯಂಗ್ ಇಂಡಿಯಾ ಸಂಸ್ಥೆಗೆ ವರ್ಗಾವಣೆ ಮಾಡಲಾಗಿತ್ತು. ನೆಹರು ಪ್ರಧಾನಿಯಾಗಿದ್ದಾಗ ಎಜಿಎಲ್ ಗೆ ಭಾರೀ ಪ್ರಮಾಣದಲ್ಲಿ ದೇಣಿಗೆ ಹರಿದುಬರುತ್ತಿತ್ತು. ಪ್ರಧಾನಿಯ ಅಧಿಕಾರ ಬಳಸಿಕೊಂಡು ದೇಶದ ವಿವಿದೆಡೆ ಭೂಮಿಯನ್ನೂ ಮಂಜೂರು ಮಾಡಿದ್ದರು. ಎಜಿಎಲ್ ಆರ್ಥಿಕ ಸಂಕಷ್ಟದಲ್ಲಿದ್ದರೂ, ಈ ಕಂಪನಿ ಹೊಂದಿದ್ದ ಆಸ್ತಿಯ ಮೌಲ್ಯ ಅಂದಾಜು 2 ರಿಂದ 5 ಸಾವಿರ ಕೋಟಿ ಎಂದು ಹೇಳಲಾಗಿದೆ. 2007ರ ಏಪ್ರಿಲ್ 1 ರಂದು ತಾತ್ಕಾಲಿಕವಾಗಿ ಈ ಪತ್ರಿಕೆಯ ಪ್ರಕಟಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ವಿಫಲ, ಜಾಹೀರಾತು ಆದಾಯದ ಕೊರತೆಯಿಂದಾಗಿ 2008ರಲ್ಲಿ ಎಜಿಎಲ್ ಅನ್ನು ಮುಚ್ಚಲಾಗಿತ್ತು. ಬಳಿಕ 2016ರ ಜನವರಿ 21 ರಿಂದ ಮತ್ತೊಮ್ಮೆ ಮುದ್ರಣ ಆರಂಭಿಸಲಾಗಿತ್ತು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:00 am, Tue, 21 June 22