‘ಯಾರೆಲ್ಲ ಆಲ್ಕೋಹಾಲ್ ಕುಡಿಯುತ್ತೀರಿ?’; ರಾಹುಲ್ ಗಾಂಧಿ ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ನಾಯಕರು ತಬ್ಬಿಬ್ಬು!

ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ 'ಇಲ್ಲಿ ಯಾರೆಲ್ಲ ಮದ್ಯಪಾನ ಮಾಡುತ್ತೀರಿ?' ಎಂದು ಕೇಳಿದ ಪ್ರಶ್ನೆ ಅಲ್ಲಿದ್ದ ಕೈ ನಾಯಕರ ಮುಖವನ್ನು ಕೆಂಪಾಗಿಸಿದೆ.

ಯಾರೆಲ್ಲ ಆಲ್ಕೋಹಾಲ್ ಕುಡಿಯುತ್ತೀರಿ?; ರಾಹುಲ್ ಗಾಂಧಿ ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ನಾಯಕರು ತಬ್ಬಿಬ್ಬು!
ರಾಹುಲ್ ಗಾಂಧಿ
Updated By: ಸುಷ್ಮಾ ಚಕ್ರೆ

Updated on: Oct 27, 2021 | 1:55 PM

ನವದೆಹಲಿ: ರಾಜಕಾರಣಿಗಳೆಂದ ಮೇಲೆ ಒತ್ತಡ, ಹಲವು ವ್ಯವಹಾರಗಳು ಎಲ್ಲ ಇದ್ದಿದ್ದೇ. ತಮ್ಮ ಒತ್ತಡವನ್ನು ನಿವಾರಿಸಿಕೊಳ್ಳಲು ಗುಂಡು ಪಾರ್ಟಿ ಮಾಡುವುದು ರಾಜಕಾರಣದಲ್ಲೇನೂ ಹೊಸ ವಿಷಯವಲ್ಲ. ಯಾರಾದರೂ ರಾಜಕಾರಣಿಗಳು ಧೂಮಪಾನ, ಮದ್ಯಪಾನ ಮಾಡುವುದಿಲ್ಲ ಎಂದರೆ ಅದು ಅಚ್ಚರಿಯ ವಿಷಯವಾಗುತ್ತದೆ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಮದ್ಯಪಾನದಿಂದ ದೂರ ಉಳಿದವರು ಇರಬಹುದು. ಆದರೆ, ಮುಕ್ಕಾಲು ಭಾಗ ರಾಜಕಾರಣಿಗಳು ಈ ಪಾರ್ಟಿ ಸಂಸ್ಕೃತಿಗೆ ಹೊರತಾಗಿಲ್ಲ. ಮದ್ಯಪಾನ, ಧೂಮಪಾನ ಮಾಡದವರು ಮಾತ್ರ ರಾಜಕಾರಣದಲ್ಲಿರಬೇಕು ಎನ್ನುವ ನಿಯಮ ನಿಜಕ್ಕೂ ಚಾಲ್ತಿಗೆ ಬಂದರೆ ಎಲ್ಲೋ ಬೆರಳೆಣಿಕೆಯಷ್ಟು ರಾಜಕಾರಣಿಗಳು ಮಾತ್ರ ಉಳಿಯಬಹುದು. ಭಾರತದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್‌ನಲ್ಲಿ ಮೊದಲೆಲ್ಲ ಆಲ್ಕೋಹಾಲ್ ಕುಡಿಯಬಾರದು, ಖಾದಿ ಬಟ್ಟೆಯನ್ನು ಧರಿಸಬೇಕೆಂಬ ನಿಯಮಗಳಿದ್ದವು. ಆ ಹಳೆಯ ನಿಯಮ ಇದೀಗ ಮತ್ತೆ ಕಾಂಗ್ರೆಸ್ ಸಭೆಯಲ್ಲಿ ಚರ್ಚೆಯಾಗಿದೆ.

ಅಂದಹಾಗೆ, ಕಾಂಗ್ರೆಸ್ ಸದಸ್ಯತ್ವ ಪಡೆಯಬೇಕೆಂದರೆ ನಾನು ಮದ್ಯಪಾನ ಮಾಡುವುದಿಲ್ಲ, ಡ್ರಗ್ಸ್​ ಸೇವಿಸುವುದಿಲ್ಲ ಎಂದು ವಾಗ್ದಾನ ಮಾಡಿ, ಪತ್ರಕ್ಕೆ ಸಹಿ ಹಾಕುವುದು ಕಡ್ಡಾಯ. ನವೆಂಬರ್ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ‘ಇಲ್ಲಿ ಯಾರೆಲ್ಲ ಮದ್ಯಪಾನ ಮಾಡುತ್ತೀರಿ?’ ಎಂದು ಕೇಳಿದ ಪ್ರಶ್ನೆ ಅಲ್ಲಿದ್ದ ಕೈ ನಾಯಕರ ಮುಖವನ್ನು ಕೆಂಪಾಗಿಸಿದೆ.

ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ ‘ನಿಮ್ಮಲ್ಲಿ ಯಾರೆಲ್ಲ ಮದ್ಯಪಾನ ಮಾಡುತ್ತೀರಿ?’ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಯಿಂದ ಕಾಂಗ್ರೆಸ್ ನಾಯಕರು ತಬ್ಬಿಬ್ಬಾಗಿ ಕುಳಿತಿದ್ದಾರೆ. ಈ ಹಿಂದೆ 2007ರಲ್ಲಿ ಇದೇ ರೀತಿಯ ಸಭೆಯೊಂದರಲ್ಲಿ ಕೂಡ ರಾಹುಲ್ ಗಾಂಧಿ ಇದೇ ಪ್ರಶ್ನೆಯನ್ನು ಕೇಳಿದ್ದರು. ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನಕ್ಕಾಗಿ ನಡೆದ ಸಭೆಯಲ್ಲಿ ಮತ್ತೊಮ್ಮೆ ಈ ಬಗ್ಗೆ ಅವರು ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಪಕ್ಷದಲ್ಲಿ ಜಾರಿಯಲ್ಲಿದ್ದ ಮದ್ಯಪಾನ ನಿಷೇಧ ಹಾಗೂ ಖಾದಿ ಉಡುಗೆ ಬಳಕೆಯ ನಿಯಮಗಳನ್ನು ಯಾರೆಲ್ಲ ಪಾಲಿಸುತ್ತಿದ್ದೀರಿ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಯಿಂದ ಸಭೆಯಲ್ಲಿ ಭಾಗಿಯಾಗಿದ್ದ ನಾಯಕರು ಮುಜುಗರದಿಂದ ತಲೆ ತಗ್ಗಿಸಿ ಕುಳಿತಿದ್ದಾರೆ. ಆಗ ಉತ್ತರಿಸಿದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು, “ನಮ್ಮ ರಾಜ್ಯದಲ್ಲಿ ಹೆಚ್ಚಿನ ಕಾಂಗ್ರೆಸ್ ನಾಯಕರು ಕುಡಿಯುತ್ತಾರೆ” ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಉತ್ತರ ನೀಡಿದರು.

ಕಾಂಗ್ರೆಸ್​ನಲ್ಲಿ ಮಹಾತ್ಮಾ ಗಾಂಧಿಯವರ ಕಾಲದಿಂದಲೂ ಮದ್ಯಪಾನ ಮಾಡಬಾರದು ಎಂಬ ನಿಯಮವು ಪುಸ್ತಕಗಳಲ್ಲಿ ಉಳಿದಿದೆ. ಈ ನಿಯಮದ ಪ್ರಸ್ತುತತೆ ಮತ್ತು ಪ್ರಾಯೋಗಿಕ ಅಂಶವನ್ನು 2007ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಸದ್ಯಕ್ಕೆ, ಈ ನಿಯಮವು ನವೆಂಬರ್ 1ರಿಂದ ಜಾರಿಗೆ ಬರಲಿದ್ದು, ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನದ ಸದಸ್ಯತ್ವದ ಫಾರ್ಮ್​ನಲ್ಲಿ ಈ ಬಗ್ಗೆ ಘೋಷಣೆ ಮಾಡಿಕೊಳ್ಳಬೇಕು.

ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆಯಲು ಹೊಸತಾಗಿ 10 ನಿಮಯಗಳನ್ನು ಜಾರಿಗೆ ತರಲಾಗಿದೆ. ನವೆಂಬರ್ 1ರಿಂದ ಇದು ಅನ್ವಯವಾಗಲಿದೆ. ಪಕ್ಷದ ಸದಸ್ಯತ್ವದ ಅರ್ಜಿ ಭರ್ತಿ ಮಾಡುವವರು ಮದ್ಯಪಾನ ಹಾಗೂ ಮಾದಕ ದ್ರವ್ಯಗಳಿಂದ (ಡ್ರಗ್ಸ್) ದೂರವಿರುತ್ತೇವೆ ಎಂದು ಘೋಷಿಸಿಕೊಳ್ಳಬೇಕು. ನಾನು ಖಾದಿ ಬಟ್ಟೆಯನ್ನು ತೊಡುತ್ತೇನೆ, ಸಾಮಾಜಿಕ ಅಸಮಾನತೆಯನ್ನು ಪಾಲಿಸುವುದಿಲ್ಲ, ಕಾನೂನಿಗೆ ವಿರುದ್ಧವಾಗಿ ಅಕ್ರಮ ಆಸ್ತಿಯನ್ನು ಹೊಂದಿಲ್ಲ, ಪಕ್ಷವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಟೀಕೆ ಮಾಡುವುದಿಲ್ಲ ಎಂಬಿತ್ಯಾದಿ 10 ನಿಯಮಗಳಿರುವ ಅರ್ಜಿಗೆ ಸಹಿ ಹಾಕಿದ ನಂತರವೇ ಕಾಂಗ್ರೆಸ್ ಸದಸ್ಯತ್ವ ಸಿಗಲಿದೆ.

ನವೆಂಬರ್ 1ರಿಂದ ಈ ನಿಯಮಗಳು ಮತ್ತೆ ಜಾರಿಗೆ ಬರಲಿದ್ದು, ರಾಷ್ಟ್ರವ್ಯಾಪಿ ತಳಮಟ್ಟದಲ್ಲಿ ಈ ಬಗ್ಗೆ ಪ್ರಚಾರ ನಡೆಯಬೇಕಿದೆ. ಈ ಆಂದೋಲನವನ್ನು ನವೆಂಬರ್ 14ರಿಂದ ಪ್ರಾರಂಭಿಸಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷತೆಯನ್ನು ರಾಹುಲ್ ಗಾಂಧಿಯೇ ವಹಿಸಿಕೊಳ್ಳಬೇಕು, ಸೊನಿಯಾರಿಗೆ ಹುಷಾರಿಲ್ಲ: ಸಿದ್ದರಾಮಯ್ಯ

Siddaramaiah: ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷರಾಗಬೇಕು, ನಾನೆಂದೂ ಪ್ರಧಾನಿಯಾಗುವ ಕನಸು ಕಂಡಿಲ್ಲ; ಸಿದ್ದರಾಮಯ್ಯ

Published On - 1:54 pm, Wed, 27 October 21