ಕಾಂಗ್ರೆಸ್ ಅಧ್ಯಕ್ಷತೆಯನ್ನು ರಾಹುಲ್ ಗಾಂಧಿಯೇ ವಹಿಸಿಕೊಳ್ಳಬೇಕು, ಸೊನಿಯಾರಿಗೆ ಹುಷಾರಿಲ್ಲ: ಸಿದ್ದರಾಮಯ್ಯ
ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅಸಮರ್ಥರು ಎಂದು ನಾನು ಹೇಳುತ್ತಿಲ್ಲ. ಅವರ ಆರೋಗ್ಯ ಸರಿಯಿಲ್ಲ ಎನ್ನುವುದು ನನ್ನ ಕಾಳಜಿ ಎಂದು ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು: ಸೋನಿಯಾ ಗಾಂಧಿ ಅವರ ಆರೋಗ್ಯ ಸರಿಯಿಲ್ಲದ ಕಾರಣ ರಾಹುಲ್ ಗಾಂಧಿ ಅವರು ಆದಷ್ಟೂ ಬೇಗ ಕಾಂಗ್ರೆಸ್ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡು ಪಕ್ಷವನ್ನು ಮುನ್ನಡೆಸಬೇಕು ಎಂದು ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ಮಾಡಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅಧಿಕಾರ ಸ್ವೀಕರಿಸಬೇಕು ಎಂದು ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಪ್ರತಿಕ್ರಿಯಿಸಿದ್ದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅಸಮರ್ಥರು ಎಂದು ನಾನು ಹೇಳುತ್ತಿಲ್ಲ. ಅವರ ಆರೋಗ್ಯ ಸರಿಯಿಲ್ಲ ಎನ್ನುವುದು ನನ್ನ ಕಾಳಜಿ. ಹೀಗಾಗಿಯೇ ನಾನು ರಾಹುಲ್ ಗಾಂಧಿ ಪಕ್ಷದ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಸಲಹೆ ಮಾಡುತ್ತಿದ್ದೇನೆ ಎಂದರು.
ಕರ್ನಾಟಕದಲ್ಲಿ ಕಲ್ಲಿದ್ದಲು ಕೊರತೆಯ ಪರಿಣಾಮಗಳ ಕುರಿತು ಕೇಳಿದ ಪ್ರಶ್ನಿಗೆ ಪ್ರತಿಕ್ರಿಯಿಸಿದ ಅವರು, ಕಲ್ಲಿದ್ದಲು ಕೊರತೆಯಿಲ್ಲ ಎಂದು ಕೇಂದ್ರ ಸರ್ಕಾರವು ಈಗಾಗಲೇ ಸ್ಪಷ್ಟಪಡಿಸಿದೆ. ಕರ್ನಾಟಕದಲ್ಲಿ ಜಲವಿದ್ಯುತ್ ಘಟಕಗಳು, ಸೋಲಾರ್ ಮತ್ತು ವಾಯುಯಂತ್ರದ ಮೂಲಕವೂ ಗಣನೀಯ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಹೀಗಾಗಿ ಶಾಖೋತ್ಪನ್ನ ಘಟಕಗಳ ಮೇಲೆ ಹೆಚ್ಚು ಒತ್ತಡವಿಲ್ಲ ಎಂದು ಹೇಳಿದರು. ದೇಶದ ಕಲ್ಲಿದ್ದಲು ಪರಿಸ್ಥಿತಿ ಕುರಿತು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟನೆ ನೀಡಿದೆ ಎಂದು ತಿಳಿಸಿದರು.
ನಾನು ಸಂಗ್ರಹಿಸಿರುವ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿಯೂ ಕಲ್ಲಿದ್ದಲು ಕೊರತೆಯಿಲ್ಲ. ಒಂದು ವೇಳೆ ಸರ್ಕಾರವು ಕಲ್ಲಿದ್ದಲು ಕೊರತೆಯಿದೆ ಎಂದು ಹೇಳಿದರೆ ಅದು ಕೃತಕ ಕೊರತೆ. ಏಕೆಂದರೆ ವಿದ್ಯುತ್ ಉತ್ಪಾದನೆ ಅಷ್ಟೊಂದು ಪ್ರಮಾಣದ ಕಲ್ಲಿದ್ದಲು ಅಗತ್ಯವಿಲ್ಲ ಎಂದು ಹೇಳಿದರು.
ಕರ್ನಾಟಕದಲ್ಲಿ ಕಲ್ಲಿದ್ದಲು ಕೊರತೆ ಕೃತಕವೋ ಅಥವಾ ಸ್ವಾಭಾವಿಕವೋ ಎಂಬ ಬಗ್ಗೆ ಮೊದಲು ಗೊತ್ತಾಗಬೇಕು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ. ಕರ್ನಾಟಕದಲ್ಲಿ ಈವರೆಗೆ ವಿದ್ಯುತ್ ಅಭಾವ ಇರಲಿಲ್ಲ. ಯಾವಾಗಲೂ ವಿದ್ಯುತ್ ಉತ್ಪಾದನೆಯು ಅಗತ್ಯ ಪ್ರಮಾಣಕ್ಕಿಂತ ಹೆಚ್ಚಾಗಿಯೇ ಆಗುತ್ತಿತ್ತು. ಇದೀಗ ನಮ್ಮಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳು ಸ್ಥಗಿತವಾಗಿರುವುದರಿಂದ ರಾಜ್ಯಕ್ಕೆ ಕಲ್ಲಿದ್ದಲಿನ ಅಗತ್ಯವೂ ಹೆಚ್ಚೇನೂ ಇಲ್ಲ. ಆದರೆ ವಿದ್ಯುತ್ ಉತ್ಪಾದಕಾ ಘಟಕಗಳನ್ನು ಖಾಸಗಿಯವರಿಗೆ ನೀಡುವ ಉದ್ದೇಶದಿಂದ ಸರ್ಕಾರ ಕೃತಕ ಅಭಾವ ಸೃಷ್ಟಿ ಮಾಡಬಾರದು. ಹಾಗೇನಾದರೂ ಸರ್ಕಾರ ಮಾಡಿದರೆ ನಾನು ಅದನ್ನು ಖಂಡಿಸುತ್ತೇನೆ ಎಂದು ಹೇಳಿದರು.
ವಿದ್ಯುತ್ ಘಟಕಗಳನ್ನು ಖಾಸಗೀಕರಣ ಮಾಡಬಾರದು. ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಒಮ್ಮೆ ಖಾಸಗೀಕರಣಗೊಂಡರೆ ರೈತರಿಗೆ ಪೂರೈಕೆಯಾಗುತ್ತಿರುವ ಉಚಿತ ವಿದ್ಯುತ್ ಸ್ಥಗಿತಗೊಳ್ಳುವ ಅಪಾಯವಿದೆ ಎಂದರು.
ಅ.12ರಿಂದ ಸಿದ್ದರಾಮಯ್ಯ ಕಲಬುರ್ಗಿ ಪ್ರವಾಸ ಕಲಬರ್ಗಿ ಜಿಲ್ಲೆಯಲ್ಲಿ ಎರಡು ದಿನ ಸಿದ್ದರಾಮಯ್ಯ ಪ್ರವಾಸ ಮಾಡಲಿದ್ದಾರೆ. ಅ.12ರಂದು ಬೆಳಿಗ್ಗೆ 9.45ಕ್ಕೆ ಕಲಬುರ್ಗಿ ಜಿಲ್ಲೆಗೆ ಬರಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಆಳಂದದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಕಲಬುರಗಿ ನಗರದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ.
ಅ.13ರಂದು ಮುಂಜಾನೆ ಹತ್ತು ಗಂಟೆಗೆ ಅಫಜಲಪುರ ಪಟ್ಟಣಕ್ಕೆ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಶಾಸಕ ಎಂ.ವೈ.ಪಾಟೀಲ್ ಆಯೋಜಿಸಿರುವ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ನಂತರ, ಕೊರಬು ಪೌಂಡೇಶನ್ನಿಂದ ನೀಡುತ್ತಿರುವ ಫುಡ್ಕಿಟ್ಗಳನ್ನು ವಿತರಿಸಲಿದ್ದಾರೆ. ತೆಲ್ಲೂರು ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಮರಳಿ ಕಲಬುರಗಿ ನಗರಕ್ಕೆ ಆಗಮಿಸಿ, ಸಂಜೆ 4.20ಕ್ಕೆ ಕಲಬುರಗಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕಿತ್ತು: ಎಚ್ ವಿಶ್ವನಾಥ್ ಇದನ್ನೂ ಓದಿ: Siddaramaiah: ಬಿ.ಎಸ್.ಯಡಿಯೂರಪ್ಪ ಅವರಲ್ಲಿ ನನಗೆ ಪ್ರೀತಿಯೂ ಇಲ್ಲ, ದ್ವೇಷವೂ ಇಲ್ಲ: ಸಿದ್ದರಾಮಯ್ಯ