‘ಆಕೆ ಈಗ ನನ್ನ ಸ್ನೇಹಿತೆ’, ಗೆಳತಿಯ ಬಗ್ಗೆ ಪ್ರಶ್ನಿಸಿದಾಗ ರಾಹುಲ್ ಗಾಂಧಿ ಕೊಟ್ಟ ಉತ್ತರ ವೈರಲ್
ರಾಹುಲ್ ಗಾಂಧಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಕಾಲೇಜು ದಿನಗಳ ಗೆಳತಿಯ ಬಗ್ಗೆ ಕೇಳಿದಾಗ, "ಅವಳು ಈಗ ನನ್ನ ಸ್ನೇಹಿತೆ" ಎಂದು ಉತ್ತರಿಸಿದ್ದು ವೈರಲ್ ಆಗಿದೆ. ಸೋನಿಯಾ ಗಾಂಧಿ ನಾಲ್ಕು ಬಾರಿ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿರುವುದನ್ನು ರಾಹುಲ್ ಬಹಿರಂಗಪಡಿಸಿದ್ದಾರೆ. ಜೊತೆಗೆ ರಾಜೀವ್-ಸೋನಿಯಾ ಪ್ರೇಮಕಥೆಯ ಕುರಿತು ರೋಚಕ ಸಂಗತಿಗಳನ್ನು ನೆನಪಿಸಿಕೊಂಡಿದ್ದಾರೆ.

ನವೆಂಬರ್ 17: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ವೈಯಕ್ತಿಕ ಜೀವನದ ಅಪರೂಪದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ತಾಯಿ ಸೋನಿಯಾ ಗಾಂಧಿ ಅವರ ನೆನಪಿನ ಚರಿತ್ರೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಕಾಲೇಜು ದಿನಗಳ ಗೆಳತಿಯ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಈ ವೇಳೆ ಗೆಳತಿಯ ಬಗ್ಗೆ ಕೇಳಿದ ಪ್ರಶ್ನೆಗೆ ರಾಹುಲ್ ನೀಡಿದ ಉತ್ತರ ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ತಮ್ಮ ತಂದೆ ರಾಜೀವ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಮೊದಲ ಬಾರಿ ಭೇಟಿಯಾಗಿದ್ದ ಕೇಂಬ್ರಿಡ್ಜ್‌ನ ರೆಸ್ಟೋರೆಂಟ್‌ಗೆ ತಾವು ಕೂಡ ಗೆಳತಿಯೊಂದಿಗೆ ಭೇಟಿ ನೀಡಿದ್ದ ಘಟನೆಯನ್ನು ರಾಹುಲ್ ನೆನಪಿಸಿಕೊಂಡಿದ್ದಾರೆ. ಹಲವು ವರ್ಷಗಳ ಹಿಂದೆ ನಡೆದ ಈ ಭೇಟಿಯ ಹಿಂದಿನ ಉದ್ದೇಶ ತಮ್ಮ ಪೋಷಕರ ಪ್ರೇಮಕಥೆ ಆರಂಭವಾದ ಸ್ಥಳವನ್ನು ಗೆಳತಿಗೆ ತೋರಿಸುವುದಾಗಿತ್ತು. ಈ ಘಟನೆಯನ್ನು ವಿವರಿಸಿದ ಬಳಿಕ ಕಾರ್ಯಕ್ರಮದಲ್ಲಿ ಪ್ರೇಕ್ಷಕರೊಬ್ಬರು ಆ ಗೆಳತಿಯ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ರಾಹುಲ್ ಗಾಂಧಿ ನಗುತ್ತಾ, ‘ಅವಳು ಈಗ ನನ್ನ ಸ್ನೇಹಿತೆ‘ಎಂದು ಉತ್ತರಿಸಿದ್ದಾರೆ. ಅವರ ಈ ಸರಳ ಉತ್ತರ ಸಭೆಯಲ್ಲಿ ನಗು ಮತ್ತು ಕುತೂಹಲ ಮೂಡಿಸಿದೆ.
ಅಪ್ಪ-ಅಮ್ಮ ಭೇಟಿಯಾದ ರೆಸ್ಟೋರೆಂಟ್‌ಗೆ ಗೆಳತಿಯೊಂದಿಗೆ ಭೇಟಿ
ರಾಹುಲ್ ಗಾಂಧಿ ತಮ್ಮ ನೆನಪನ್ನು ಹಂಚಿಕೊಳ್ಳುತ್ತಾ, ತಮ್ಮ ತಂದೆ-ತಾಯಿಯ ಪ್ರೇಮಕಥೆಯ ಬಗ್ಗೆ ಕುಟುಂಬದಲ್ಲಿ ಹಲವು ಕಥೆಗಳಿದ್ದವು ಎಂದು ಹೇಳಿದ್ದಾರೆ. ಅದರಲ್ಲಿ ಪ್ರಮುಖವಾದದ್ದು ಕೇಂಬ್ರಿಡ್ಜ್‌ನ ಯೂನಿವರ್ಸಿಟಿ ರೆಸ್ಟೋರೆಂಟ್‌ನಲ್ಲಿ ರಾಜೀವ್ ಮತ್ತು ಸೋನಿಯಾ ಗಾಂಧಿ ಮೊದಲ ಬಾರಿ ಭೇಟಿಯಾದ ಘಟನೆ.
ಇದನ್ನೂ ಓದಿ: ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಂದಿನ ಸಾಲಿನಲ್ಲಿ ಕುಳಿತ ಬಿಜೆಪಿಯ ಅಮರಿಂದರ್ ಸಿಂಗ್
“ಹಲವು ವರ್ಷಗಳ ನಂತರ ನಾನು ಕೇಂಬ್ರಿಡ್ಜ್‌ನಲ್ಲಿದ್ದೆ. ಆಗ ನನ್ನ ಗೆಳತಿಗೆ ವರ್ಸಿಟಿ ರೆಸ್ಟೋರೆಂಟ್‌ಗೆ ಹೋಗೋಣ ಎಂದು ಹೇಳಿದೆ. ನನ್ನ ತಂದೆ-ತಾಯಿ ಎಲ್ಲಿ ಭೇಟಿಯಾಗಿದ್ದರು ಎಂಬುದನ್ನು ಅವಳಿಗೆ ತೋರಿಸಬೇಕೆಂದು ಬಯಸಿದ್ದೆ” ಎಂದು ರಾಹುಲ್ ವಿವರಿಸಿದ್ದಾರೆ.
ರೆಸ್ಟೋರೆಂಟ್‌ಗೆ ಹೋದ ಬಳಿಕ ಅಲ್ಲಿನ ಸಿಬ್ಬಂದಿಗೆ ತಮ್ಮ ತಂದೆ-ತಾಯಿ ಇದೇ ಸ್ಥಳದಲ್ಲಿ ಭೇಟಿಯಾಗಿದ್ದರು ಎಂದು ಹೇಳಿದ್ದಾರೆ. ಇದನ್ನು ಕೇಳಿದ ಸಿಬ್ಬಂದಿ, “ಅವರಾ, ಅವರಿಬ್ಬರೂ ಯಾರೆಂದು ನನಗೆ ಚೆನ್ನಾಗಿ ಗೊತ್ತು” ಎಂದು ಪ್ರತಿಕ್ರಿಯಿಸಿದ್ದರಂತೆ. ಇಷ್ಟು ವರ್ಷಗಳಾದರೂ ರಾಜೀವ್ ಮತ್ತು ಸೋನಿಯಾ ಗಾಂಧಿ ಅವರ ಪರಿಚಯ ಸ್ಥಳೀಯರಿಗೆ ನೆನಪಿರುವುದು ರಾಹುಲ್ ಅವರಿಗೆ ಅಚ್ಚರಿ ಮೂಡಿಸಿತ್ತು.
ಸೋನಿಯಾ ಗಾಂಧಿ ಅವರ ಪ್ರೇಮಕಥೆ ಆರಂಭವಾಗಿದ್ದು ಹೇಗೆ?
ಸೋನಿಯಾ ಗಾಂಧಿ ಅವರು 1965ರಲ್ಲಿ ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಲ್ಲಿದ್ದಾಗ ರಾಜೀವ್ ಗಾಂಧಿ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದರು. ಆಗ ಸೋನಿಯಾ ಇಟಲಿಯಿಂದ ಇಂಗ್ಲೆಂಡ್‌ಗೆ ಬಂದಿದ್ದರು. ವರ್ಸಿಟಿ ಎಂಬ ಗ್ರೀಕ್ ರೆಸ್ಟೋರೆಂಟ್‌ನಲ್ಲಿ ಪರಸ್ಪರ ಸ್ನೇಹಿತರ ಮೂಲಕ ಇಬ್ಬರ ಪರಿಚಯವಾಗಿತ್ತು.
ಆ ಪರಿಚಯ ಸ್ನೇಹವಾಗಿ, ನಂತರ ಪ್ರೀತಿಗೆ ತಿರುಗಿತ್ತು. 1968ರ ಫೆಬ್ರವರಿ 25ರಂದು ಇಬ್ಬರೂ ವಿವಾಹವಾಗಿದ್ದರು. ಮುಂದೆ ರಾಜೀವ್ ಗಾಂಧಿ ಭಾರತದ ಪ್ರಧಾನಿಯಾದರು ಮತ್ತು ಸೋನಿಯಾ ಗಾಂಧಿ ದೇಶದ ಪ್ರಮುಖ ರಾಜಕೀಯ ನಾಯಕರಲ್ಲಿ ಒಬ್ಬರಾದರು. ಈ ಪ್ರೇಮಕಥೆಯ ಆರಂಭದ ನೆನಪುಗಳನ್ನೇ ಸೋನಿಯಾ ತಮ್ಮ ಆತ್ಮಕಥೆಯಲ್ಲಿ ದಾಖಲಿಸಿದ್ದಾರೆ.
ಸೋನಿಯಾ ಗಾಂಧಿ ನಾಲ್ಕು ಬಾರಿ ಕ್ಯಾನ್ಸರ್‌ನಿಂದ ಗೆದ್ದು ಬಂದಿದ್ದಾರೆ, ರಾಹುಲ್ ಬಹಿರಂಗ ಗೆಳತಿಯ ಕುರಿತ ತಮಾಷೆಯ ಮಾತುಗಳ ನಡುವೆ ರಾಹುಲ್ ಗಾಂಧಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಜೀವನದ ಮತ್ತೊಂದು ಕಠಿಣ ಅಧ್ಯಾಯವನ್ನೂ ಬಿಚ್ಚಿಟ್ಟಿದ್ದಾರೆ. ಸೋನಿಯಾ ಗಾಂಧಿ ತಮ್ಮ ಆತ್ಮಕಥೆಯಲ್ಲಿ ಆರೋಗ್ಯದ ಸಮಸ್ಯೆಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿಲ್ಲ. ಆದರೆ ಅವರು ನಾಲ್ಕು ಬಾರಿ ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿದ್ದಾರೆ ಎಂದು ರಾಹುಲ್ ಬಹಿರಂಗಪಡಿಸಿದ್ದಾರೆ.
“ನನ್ನ ತಾಯಿ ತಮ್ಮ ಜೀವನದಲ್ಲಿ ಎದುರಿಸಿದ ಆರೋಗ್ಯದ ಸವಾಲುಗಳನ್ನು ಪುಸ್ತಕದಲ್ಲಿ ಕಡಿಮೆ ವಿವರಿಸಿದ್ದಾರೆ. ಅವರು ಎರಡು ಅಥವಾ ಮೂರು ಬಾರಿ ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿದ್ದಾರೆ ಎಂದು ಬರೆದಿದ್ದಾರೆ. ಆದರೆ ವಾಸ್ತವವಾಗಿ ಅವರು ನಾಲ್ಕು ಬಾರಿ ಕ್ಯಾನ್ಸರ್‌ನಿಂದ ಗೆದ್ದು ಬಂದಿದ್ದಾರೆ. ನನ್ನ ಜೀವನದಲ್ಲಿ ಒಮ್ಮೆಯೂ ಅವರು ಭಯಪಟ್ಟಿದ್ದನ್ನು ಅಥವಾ ಸವಾಲುಗಳಿಗೆ ಹೆದರಿ ಹಿಂದೆ ಸರಿದಿದ್ದನ್ನು ನಾನು ನೋಡಿಲ್ಲ” ಎಂದು ರಾಹುಲ್ ಹೇಳಿದ್ದಾರೆ. ತಾಯಿಯ ಧೈರ್ಯ ಮತ್ತು ಜೀವನದಲ್ಲಿ ಎದುರಿಸಿದ ಕಷ್ಟಗಳನ್ನು ನೆನಪಿಸಿಕೊಂಡ ಅವರು ಭಾವುಕರಾಗಿದ್ದಾರೆ.
ರಾಜೀವ್ ಗಾಂಧಿ ಹತ್ಯೆಯ ಬಳಿಕ ಬದಲಾದ ರಾಹುಲ್ ಜೀವನ
1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಗಾಂಧಿ ಕುಟುಂಬದ ಬದುಕನ್ನೇ ಬದಲಿಸಿತು. ಈ ದುರಂತದ ಬಳಿಕ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಾದ ರಾಹುಲ್ ಹಾಗೂ ಪ್ರಿಯಾಂಕಾ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ರಾಜೀವ್ ಗಾಂಧಿ ಹತ್ಯೆಯಾದ ಕೆಲವು ತಿಂಗಳ ಬಳಿಕ ರಾಹುಲ್ ವಿದೇಶದಲ್ಲಿ ಉನ್ನತ ಶಿಕ್ಷಣ ಮುಂದುವರಿಸಲು ತೆರಳಬೇಕಾಯಿತು. ಈ ಸಂದರ್ಭದಲ್ಲಿ ಭದ್ರತೆಯ ಕಾರಣದಿಂದ ಅವರ ಶಿಕ್ಷಣದಲ್ಲಿಯೂ ಬದಲಾವಣೆ ಮಾಡಬೇಕಾಯಿತು ಎಂದು ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿವರಿಸಿದ್ದಾರೆ.
ರಾಹುಲ್ ಮೊದಲು ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರು. ಆದರೆ ಅಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸುವುದರಿಂದ ಇತರ ವಿದ್ಯಾರ್ಥಿಗಳಿಗೂ ಅಪಾಯ ಉಂಟಾಗಬಹುದು ಎಂಬ ಕಾರಣಕ್ಕೆ ವಿಶ್ವವಿದ್ಯಾಲಯ ಭದ್ರತಾ ವ್ಯವಸ್ಥೆಗೆ ಒಪ್ಪಿಗೆ ನೀಡಿರಲಿಲ್ಲ. ನಂತರ ಭಾರತದ ಮತ್ತು ಅಮೆರಿಕದ ಭದ್ರತಾ ಸಿಬ್ಬಂದಿ ಸಮಾಲೋಚಿಸಿ, ಅವರನ್ನು ಮತ್ತೊಂದು ಕಾಲೇಜಿಗೆ ವರ್ಗಾಯಿಸುವ ವ್ಯವಸ್ಥೆ ಮಾಡಿದರು. ಅಲ್ಲಿ ಅವರು ತಮ್ಮ ನಿಜವಾದ ಹೆಸರಿನ ಬದಲಿಗೆ ಬೇರೆ ಹೆಸರಿನಲ್ಲಿ ಓದಬೇಕಾಯಿತು.
ತಮ್ಮ ಕುಟುಂಬದ ಹಿನ್ನೆಲೆಯನ್ನು ಇತರರಿಗೆ ಹೇಳಿಕೊಳ್ಳಲು ಸಾಧ್ಯವಾಗದ ಕಾರಣ ಸ್ನೇಹಿತರೊಂದಿಗೆ ಬೆರೆಯುವುದೂ ಅವರಿಗೆ ಕಷ್ಟವಾಗಿತ್ತು. ಸಾಮಾನ್ಯ ವಿದ್ಯಾರ್ಥಿಯಂತೆ ಬದುಕಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿತ್ತು ಎಂದು ಸೋನಿಯಾ ಗಾಂಧಿ ನೆನಪಿಸಿಕೊಂಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




