ಡೆಹ್ರಾಡೂನ್: ಡೆಹ್ರಾಡೂನ್ ಮೂಲದ ಪುಷ್ಪಾ ಮುಂಜಿಯಾಲ್ (Pushpa Munjiyal) ಅವರು ತಮ್ಮ ಉಯಿಲಿನಲ್ಲಿ(will) ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯ (Rahul Gandhi) ಹೆಸರನ್ನು ಬರೆಯುವ ಮೂಲಕ ರಾಷ್ಟ್ರವನ್ನು ಅಚ್ಚರಿಗೊಳಿಸಿದ್ದರು. ಅಂದಹಾಗೆ ರಾಹುಲ್ ಈ ಬಗ್ಗೆ ಏನು ಪ್ರತಿಕ್ರಿಯಿಸುತ್ತಾರೆ ಎಂಬುದು 79 ವರ್ಷ ವಯಸ್ಸಿನ ಮಹಿಳೆಗೆ ಗೊತ್ತಿಲ್ಲ. ಯಾಕೆಂದರೆ ಇಲ್ಲಿಯವರೆಗೆ ರಾಹುಲ್ ಈ ಮಹಿಳೆಯ ಕೈಯಿಂದ ಉಡುಗೊರೆ ಸ್ವೀಕರಿಸಿಲ್ಲ. “ಅವರು ದೊಡ್ಡ ನಾಯಕ ಬ್ಯುಸಿಯಾಗಿರುತ್ತಾರೆ ಎಂದು ನನಗೆ ತಿಳಿದಿದೆ. ಅವನು ತನ್ನೆಲ್ಲ ಕೆಲಸಗಳನ್ನು ಬಿಟ್ಟು ಇಲ್ಲಿಗೆ ಬರುತ್ತಾರೆ ಎಂದು ನಾನು ನಿರೀಕ್ಷಿಸುವುದಿಲ್ಲ. ರಾಹುಲ್ ಅವರ ಪ್ರಾಮಾಣಿಕತೆ ಮತ್ತು ಅವರ ಪ್ರಾಮಾಣಿಕ ರಾಜಕಾರಣದ ಮೇಲಿನ ನಂಬಿಕೆಯಿಂದಾಗಿ ಅವರ ಹೆಸರಿನಲ್ಲಿ ನನ್ನ ಉಯಿಲು ಬರೆದಿದ್ದೇನೆ. ರಾಹುಲ್ ನನ್ನನ್ನು ಭೇಟಿಯಾದರೆ ನಾನು ಅವರಿಗೆ ದೀರ್ಘಾಯುಷ್ಯ ಮತ್ತು ಭಾರತವನ್ನು ಮುನ್ನಡೆಸಲು ಆಶೀರ್ವದಿಸುತ್ತೇನೆ ಎಂದು ದಿ ಪ್ರಿಂಟ್ ಜತೆ ಮಾತನಾಡಿದ ಮುಂಜಿಯಾಲ್ ಹೇಳಿದ್ದಾರೆ. ಪುಷ್ಪಾ ಅವರು ಗಾಂಧಿಯನ್ನು ಭೇಟಿಯಾಗಲು ಯಾವುದೇ ಭರವಸೆಯನ್ನು ಹೊಂದಿಲ್ಲವಾದರೂ, ಅವರ ಕುಟುಂಬವು ಕಾಂಗ್ರೆಸ್ ನಾಯಕನೊಂದಿಗಿನ ಹಳೆಯ ನಂಟು ಹೊಂದಿದೆ. ರಾಹುಲ್ ಗಾಂಧಿಯವರ ಮುತ್ತಜ್ಜ ಮತ್ತು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು, 1947 ರಲ್ಲಿ ದೇಶ ವಿಭಜನೆಯಾದ ನಂತರ ಭಾರತದಲ್ಲೇ ಇರುವಂತೆ ಮುಂಜಿಯಾಲ್ ಅವರ ತಂದೆಯನ್ನು ಮನವೊಲಿಸಿದ್ದರು ಎಂದು ಪುಷ್ಪಾ ಹೇಳಿದ್ದಾರೆ.
“ವಿಭಜನಾಪೂರ್ವ ದಂಗೆಗಳ ಸಮಯದಲ್ಲಿ ನಾವು ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಭಾರತಕ್ಕೆ ವಲಸೆ ಬಂದಿದ್ದೇವೆ. ನನ್ನ ತಂದೆ ಮೇಘರಾಜ್ ಮುಂಜಿಯಾಲ್ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಆದರೆ ವಿಭಜನೆಯ ಸಮಯದಲ್ಲಿ ತಮ್ಮ ಕುಟುಂಬದೊಂದಿಗೆ ತಮ್ಮ ಬದುಕಿಗಾಗಿ ಓಡಬೇಕಾಯಿತು. ನಾವು ಇತರ 100 ಹಿಂದೂಗಳೊಂದಿಗೆ ಇಲ್ಲಿಗೆ ಬಂದಿದ್ದೇವೆ ಎಂದು ಮುಂಜಿಯಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ನನ್ನ ತಂದೆ ಜವಾಹರಲಾಲ್ ನೆಹರು ಅವರನ್ನು ಭೇಟಿ ಮಾಡಿದಾಗ ಕ್ವೆಟ್ಟಾದಲ್ಲಿ ನಾವು ಹೇಗೆ ಎಲ್ಲವನ್ನೂ ಕಳೆದುಕೊಂಡಿದ್ದೇವೆ ಮತ್ತು ನಮ್ಮ ಮನೆಯನ್ನು ಬರಿಗೈಯಲ್ಲಿ ಬಿಡಬೇಕಾಯಿತು ಎಂದು ಹೇಳಿದರು. ಗಲಭೆಯ ನಂತರ ಕ್ವೆಟ್ಟಾಗೆ ಹಿಂತಿರುಗಲು ನನ್ನ ತಂದೆ ಬಯಸಿದ್ದರು. ಏಕೆಂದರೆ ಅಲ್ಲಿ ನಮಗೆ ಸಾಕಷ್ಟು ಆಸ್ತಿ ಇತ್ತು. ನಮಗೆ ಭಾರತದಲ್ಲಿ ಏನೂ ಇಲ್ಲ, ಬಲೂಚಿಸ್ತಾನಕ್ಕೆ ಹಿಂತಿರುಗುತ್ತೇವೆ ಎಂದು ಅವರು ನೆಹರೂಗೆ ಹೇಳಿದರು. ನನ್ನ ಕುಟುಂಬದವರು ನಮ್ಮ ಮನೆಯ ಸಮೀಪದಲ್ಲಿ ಒಂದು ದೊಡ್ಡ ಲಕ್ಷ್ಮೀ ನಾರಾಯಣ ದೇವಸ್ಥಾನವನ್ನು ನಿರ್ಮಿಸಿದ್ದರು. ಆದರೆ ನೆಹರೂ ಹಿಂತಿರುಗಬೇಡಿ, ನಿಮ್ಮ ಹೆಂಗಸರು ಮತ್ತು ಹೆಣ್ಣುಮಕ್ಕಳು ಅಲ್ಲಿ ಸುರಕ್ಷಿತವಾಗಿರುವುದಿಲ್ಲ ಎಂದು ಹೇಳಿದರು. ಇದು ನಾವು ಭಾರತದಲ್ಲಿಯೇ ಉಳಿಯುವಂತೆ ಮಾಡಿತು. ನನ್ನ ತಂದೆ ತನ್ನ ಆರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನೊಂದಿಗೆ ಡೆಹ್ರಾಡೂನ್‌ಗೆ ಬಂದರು ಎಂದು ಹೇಳಿದ್ದಾರೆ. ಆದಾಗ್ಯೂ, ಮುಂಜಿಯಾಲ್ ಅವರು ನೆಹರೂ-ಗಾಂಧಿ ಕುಟುಂಬದ ಯಾರನ್ನೂ ಭೇಟಿಯಾಗಿಲ್ಲ.
ಈಗ ಎರಡು ದಶಕಗಳಿಂದ ಮುಂಜಿಯಾಲ್‌ನ ಪ್ರಪಂಚವು ಡೆಹ್ರಾಡೂನ್‌ನ ಪ್ರೇಮ್‌ಧಾಮ್‌ನಲ್ಲಿರುವ ಪಾವತಿಸಿದ ವೃದ್ಧಾಶ್ರಮದ ಒಂದು ಸಣ್ಣ ಕೋಣೆಗೆ ಸೀಮಿತವಾಗಿದೆ, ಅಲ್ಲಿ ಅವರು 1999 ರಿಂದ ವಾಸಿಸುತ್ತಿದ್ದು ವಯೋಸಹಜವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ.
ನಿವೃತ್ತ ಶಾಲಾ ಶಿಕ್ಷಕರಾದ ಮುಂಜಿಯಾಲ್ ಮದುವೆಯಾಗಿರಲಿಲ್ಲ ಮತ್ತು ಅವರ ಕುಟುಂಬವು ಡೆಹ್ರಾಡೂನ್‌ನಲ್ಲಿ ಯಾವುದೇ ಮನೆಯನ್ನು ಹೊಂದಿರಲಿಲ್ಲ. ಬಾಡಿಗೆ ಮನೆಯಲ್ಲೇ ಅವರು ವಾಸಿಸಿದ್ದು ಚಹಾ ವ್ಯಾಪಾರವನ್ನು ಮಾಡುತ್ತಿದ್ದರು. ಕ್ಯಾನ್ಸರ್‌ನಿಂದ ನಿಧನರಾದ ನನ್ನ ಹಿರಿಯ ಸಹೋದರ ಗಿರ್ಧಾರಿಲಾಲ್ ಮುಂಜಿಯಾಲ್ ಅವರು ಕ್ವೆಟ್ಟಾದಲ್ಲಿ ವಿಭಜನೆಯ ಗಲಭೆಗಳ ಸಮಯದಲ್ಲಿ ನಮ್ಮ ಆಸ್ತಿಯನ್ನು ಕಳೆದುಕೊಂಡ ನಂತರ ಸ್ವಂತ ಮನೆ ಬೇಡ ಎಂದು ನಿರ್ಧರಿಸಿದ್ದರು. ಆದಾಗ್ಯೂ, ಒಂದು ದಶಕಕ್ಕೂ ಹೆಚ್ಚು ಕಾಲ ತಮ್ಮಲ್ಲಿದ್ದದ್ದನ್ನು ಕಾಂಗ್ರೆಸ್ ನಾಯಕರಿಗೆ ನೀಡಿದ್ದನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರು ಮೊಮ್ಮಕ್ಕಳ ಮೇಲೆ ಅಜ್ಜಿ ತೋರಿಸುವ ಅದೇ ಪ್ರೀತಿ,ಕಾಳಜಿಯನ್ನು ತೋರಿಸುತ್ತಿದ್ದಾರೆ. ಮುಂಜಿಯಾಲ್ ಅವರು ಕಳೆದ 10 ವರ್ಷಗಳಿಂದ ವಿವಿಧ ಬ್ಯಾಂಕ್‌ಗಳಲ್ಲಿ ತನ್ನ ಎಲ್ಲಾ 16 ಸ್ಥಿರ ಠೇವಣಿ ಖಾತೆಗಳಲ್ಲಿ ಗಾಂಧಿಯನ್ನು ನಾಮಿನಿಯಾಗಿ ಮಾಡುತ್ತಿರುವುದಾಗಿ ಹೇಳಿದರು. ಅವರ ಇಚ್ಛೆಯ ಪ್ರಕಾರ ಒಟ್ಟು ಠೇವಣಿ 18,00,000 ರೂ. ಇದೆ.
ಆಕೆಯ ಒಡೆತನದ 10 ತೊಲಗಳ (115 ಗ್ರಾಂಗಿಂತ ಹೆಚ್ಚು) ಚಿನ್ನ ರಾಹುಲ್ ಗಾಂಧಿ ಹೆಸರಿಗೆ ಬರೆದು ಕೊಡಲಾಗಿದೆ.ಜೊತೆಗೆ ಎನ್ಎಸ್ಇ ಪ್ರಮಾಣಪತ್ರಗಳು ಮತ್ತು ಮಾಸಿಕ ಬಡ್ಡಿ ಯೋಜನೆಗಳಲ್ಲಿ ಮಾಡಿದ ಹೂಡಿಕೆಗಳು ಇವೆ. ಮುಂಜಿಯಾಲ್ ಅವರು ತಮ್ಮ ಒಡೆತನದ 25 ಲಕ್ಷ ರೂ.ಗಳನ್ನು ಡೂನ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್‌ಗೆ ನೀಡಿದ ಹಿಂದಿನ ಉಯಿಲನ್ನು ರದ್ದುಗೊಳಿಸಿದ್ದಾರೆ.
ಮುಂಜಿಯಾಲ್ ಗಾಂಧಿಗೆ ಬಿಟ್ಟು ಕೊಟ್ಟಿರುವ ಆಸ್ತಿ ಸುಮಾರು 50 ಲಕ್ಷ ರೂಪಾಯಿಗಳು. ಇದು ಅವರು ದುಡಿದು ಸಂಪಾದಿಸಿದ್ದು ಮತ್ತು ಅವರ ನಿವೃತ್ತಿಯ ನಂತರದ ಪಿಂಚಣಿಗಳಿಂದ ಮಾಡಿದ ಉಳಿತಾಯವಾಗಿದೆ” ಎಂದು ಅವರು ಹೇಳಿದರು. ದಿ ಪ್ರಿಂಟ್ ಗೆ ಸಿಕ್ಕಿರುವ ಉಯಿಲಿನ ಪ್ರತಿ ಪ್ರಕಾರ ಭವಿಷ್ಯದಲ್ಲಿ ಮುಂಜಿಯಾಲ್ ಈ ಉಯಿಲಿನಲ್ಲಿ ಉಲ್ಲೇಖಿಸದ ಯಾವುದೇ ಇತರ ಚರ ಅಥವಾ ಸ್ಥಿರ ಆಸ್ತಿಯ ಮಾಲೀಕರೆಂದು ಕಂಡುಬಂದರೆ, ಅದು ಸಹ ಗಾಂಧಿಯವರಿಗೆ ಸೇರಿದ್ದು ಎಂದು ಉಲ್ಲೇಖಿಸಲಾಗಿದೆ.
ಗಾಂಧಿಯವರ ನಿಲುವುಗಳಿಂದ ಪ್ರಭಾವಿತಳಾಗಿದ್ದೇನೆ
ರಾಹುಲ್ ಗಾಂಧಿಯನ್ನು ಉಯಿಲು ಬರೆದುದಕ್ಕೆ ಕಾರಣಗಳನ್ನು ಹೇಳುತ್ತಾ, ಮುಂಜಿಯಾಲ್ ಅವರು ರಾಹುಲ್ ಅವರ ನಿಲುವು ಮತ್ತು ತತ್ವಗಳಿಂದ ಹೆಚ್ಚು ಪ್ರಭಾವಿತರಾಗಿದ್ದಾರೆ ಎಂದು ಉಯಿಲಿನಲ್ಲಿ ಉಲ್ಲೇಖಿಸಿದ್ದಾರೆ. “ರಾಹುಲ್ ಹಣವನ್ನು ಬಡವರು ಮತ್ತು ಅಸಹಾಯಕ ಜನರ ಕಲ್ಯಾಣಕ್ಕಾಗಿ ಬಳಸುತ್ತಾರೆ. ಆದರೆ ರಾಹುಲ್ ತನ್ನ ಇಚ್ಛೆಯನ್ನ ಅನುಸರಿಸದಿದ್ದರೂ ನನಗೆ ಅಭ್ಯಂತರವಿಲ್ಲ. ರಾಹುಲ್ ಗಾಂಧಿಯವರ “ಪ್ರಾಮಾಣಿಕತೆ ಮತ್ತು ಸತ್ಯ”, ಅವರ “ಪ್ರಾಮಾಣಿಕ ರಾಜಕೀಯ” ಮತ್ತು ಅವರ ಕುಟುಂಬವು ರಾಷ್ಟ್ರಕ್ಕೆ “ಯಾವಾಗಲೂ ಏನನ್ನಾದರೂ ನೀಡಿದ್ದರಿಂದ” ಅವರ ಪರವಾಗಿ ತನ್ನ ಉಯಿಲು ಮಾಡಿದೆ ಎಂದು ಹೇಳಿದರು.
ಗಾಂಧಿಯವರು ತಮ್ಮನ್ನು ಭೇಟಿಯಾಗುತ್ತಾರೆ ಅಥವಾ ಅವರ ಉಡುಗೊರೆಯನ್ನು ಒಪ್ಪಿಕೊಳ್ಳುತ್ತಾರೆ ಎಂದು ತಾನು ನಿರೀಕ್ಷಿಸುವುದಿಲ್ಲ ಎಂದು ಅವರು ಹೇಳಿದರೂ “ರಾಹುಲ್ ಗಾಂಧಿ ನನಗಾಗಿ ಸಮಯವನ್ನು ಏಕೆ ಮೀಸಲಿಡಬೇಕು ? ಅದೃಷ್ಟವಶಾತ್ ಅವರು ಇಲ್ಲಿಗೆ ಬಂದರೆ, ಅದು ದೇವರು ನನ್ನ ಬಳಿಗೆ ಬಂದಂತೆ ಆಗುತ್ತದೆ. ನನ್ನ ಉಯಿಲಿಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ ಅವರು. ಕಳೆದ ತಿಂಗಳು ತನ್ನ ಉಯಿಲನ್ನು ನೋಂದಾಯಿಸಿದ ಮುಂಜಿಯಾಲ್ ಗಾಂಧಿಗೆ ರವಾನಿಸಲು ಕಾಗದವನ್ನು ಹಸ್ತಾಂತರಿಸಿದಾಗಿನಿಂದ ಗಾಂಧಿಯವರಿಂದಾಗಲೀ ಅಥವಾ ಸ್ಥಳೀಯ ಕಾಂಗ್ರೆಸ್ ನಾಯಕ ಪ್ರೀತಮ್ ಸಿಂಗ್ ಅವರಿಂದಾಗಲೀ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.
ಏತನ್ಮಧ್ಯೆ, ದಿ ಪ್ರಿಂಟ್ ಬುಧವಾರ, ಶಾಸಕ ಮತ್ತು ಮಾಜಿ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ಪ್ರೀತಮ್ ಸಿಂಗ್ ಜತೆ ಮಾತನಾಡಿದೆ. ಮುಂಜಿಯಾಲ್ ಅವರ ಉಯಿಲನ್ನು ಈಗಾಗಲೇ ಅವರ 10 ಜನಪಥ್ ನಿವಾಸದಲ್ಲಿ ಗಾಂಧಿಗೆ ರವಾನಿಸಿದ್ದೇನೆ. ಆದರೆ ಅದರ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ಪಡೆದಿಲ್ಲ ಎಂದು ಅವರು ಹೇಳಿದ್ದಾರೆ. “ರಾಹುಲ್ ಗಾಂಧಿ ಅವರು ಪ್ರಸ್ತುತ ಸಾಂಸ್ಥಿಕ ಚಟುವಟಿಕೆಗಳಲ್ಲಿ ಹೆಚ್ಚು ನಿರತರಾಗಿದ್ದಾರೆ, ಆದರೆ ಅವರು ಸಮಯ ಸಿಕ್ಕ ತಕ್ಷಣ ಪ್ರತಿಕ್ರಿಯಿಸುತ್ತಾರೆ ಮತ್ತು ನಾವು ಮುಂಜಿಯಾಲ್ ಅವರಿಗೆ ತಿಳಿಸುತ್ತೇವೆ” ಎಂದು ಸಿಂಗ್ ಹೇಳಿದರು.
ಇದನ್ನೂ ಓದಿ: ‘ದೇಶಕ್ಕೆ ಅವರ ಅಗತ್ಯವಿದೆ’: ತನ್ನೆಲ್ಲ ಆಸ್ತಿಯನ್ನು ರಾಹುಲ್ ಗಾಂಧಿ ಹೆಸರಿಗೆ ಬರೆದುಕೊಟ್ಟ 78ರ ಹರೆಯದ ಮಹಿಳೆ
Published On - 10:17 pm, Mon, 18 April 22