ಬಿಹಾರದ ಬಕ್ಸಾರ್​​ನಲ್ಲಿ ರೈಲು ಹಳಿ ತಪ್ಪಲು ಇಂಜಿನಿಯರಿಂಗ್ ದೋಷ ಕಾರಣ: ರೈಲ್ವೆ ಅಧಿಕಾರಿಗಳು

|

Updated on: Oct 13, 2023 | 8:55 PM

ಅಪಘಾತದ ತನಿಖೆ ನಡೆಸುತ್ತಿರುವ ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‌ಎಸ್) ಗಾಯಗೊಂಡ ಪ್ರಯಾಣಿಕರು ಮತ್ತು ಸ್ಥಳೀಯರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಅಪಘಾತ ಸ್ಥಳದಲ್ಲಿ ಪೂರ್ವ ಸೆಂಟ್ರಲ್ ರೈಲ್ವೇ (ಇಸಿಆರ್) ಅಧಿಕಾರಿಗಳ ನಡುವೆ ಈ ವಿಷಯವನ್ನು ಚರ್ಚಿಸಲಾಯಿತು ಎಂದು ಅವರು ಹೇಳಿದರು.

ಬಿಹಾರದ ಬಕ್ಸಾರ್​​ನಲ್ಲಿ ರೈಲು ಹಳಿ ತಪ್ಪಲು ಇಂಜಿನಿಯರಿಂಗ್ ದೋಷ ಕಾರಣ: ರೈಲ್ವೆ ಅಧಿಕಾರಿಗಳು
ಬಿಹಾರದಲ್ಲಿ ಹಳಿ ತಪ್ಪಿದ ರೈಲು
Follow us on

ದೆಹಲಿ ಅಕ್ಟೋಬರ್ 13: ಬಿಹಾರದ (Bihar) ಬಕ್ಸಾರ್ (Buxar) ಜಿಲ್ಲೆಯಲ್ಲಿ ಬುಧವಾರ ರಾತ್ರಿ ಈಶಾನ್ಯ ಸೂಪರ್-ಫಾಸ್ಟ್ ರೈಲು (North East super-fast train) ಹಳಿತಪ್ಪಿದ್ದಕ್ಕೆ ಕಾರಣ ವಿವರಿಸಿದ ಕರ್ತವ್ಯದಲ್ಲಿದ್ದ ರೈಲ್ವೆ ಅಧಿಕಾರಿಗಳು, ಎಂಜಿನಿಯರಿಂಗ್ ದೋಷದಿಂದ ಅಪಘಾತ ಸಂಭವಿಸಿರಬಹುದು ಎಂದು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ದೆಹಲಿಯ ಆನಂದ್ ವಿಹಾರ್ ಟರ್ಮಿನಸ್‌ನಿಂದ ಅಸ್ಸಾಂನ ಕಾಮಾಖ್ಯಕ್ಕೆ ಹೊರಟಿದ್ದ ಸೂಪರ್‌ಫಾಸ್ಟ್ ರೈಲಿನ ಎಲ್ಲಾ 23 ಕೋಚ್‌ಗಳು ರಘುನಾಥಪುರ ನಿಲ್ದಾಣದ ಬಳಿ ಹಳಿತಪ್ಪಿತ್ತು. ಈ ಅಪಘಾತದಲ್ಲಿ ನಾಲ್ವರು ಸಾವಿಗೀಡಾಗಿದ್ದು 71 ಮಂದಿ ಗಾಯಗೊಂಡಿದ್ದಾರೆ.

ಕರ್ತವ್ಯ ನಿರತ ಸ್ಟೇಷನ್ ಮಾಸ್ಟರ್, ಪಾಯಿಂಟ್ ಮ್ಯಾನ್, ಗೇಟ್‌ಮ್ಯಾನ್, ಲೋಕೋ ಪೈಲಟ್, ಸಹಾಯಕ ಲೋಕೋ ಪೈಲಟ್ ಮತ್ತು ಟ್ರ್ಯಾಕ್ ಮ್ಯಾನ್ ಸಹಿ ಮಾಡಿದ 15 ಪುಟಗಳ ಜಂಟಿ ಟಿಪ್ಪಣಿಯಲ್ಲಿ ಎಂಜಿನಿಯರಿಂಗ್ ವಿಭಾಗದ ತಪ್ಪಿನಿಂದ ಅಪಘಾತ ಸಂಭವಿಸಿರಬಹುದು ಎಂದು ಅವರು ಹೇಳಿದ್ದಾರೆ.

ಅಪಘಾತದ ತನಿಖೆ ನಡೆಸುತ್ತಿರುವ ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‌ಎಸ್) ಗಾಯಗೊಂಡ ಪ್ರಯಾಣಿಕರು ಮತ್ತು ಸ್ಥಳೀಯರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಅಪಘಾತ ಸ್ಥಳದಲ್ಲಿ ಪೂರ್ವ ಸೆಂಟ್ರಲ್  ರೈಲ್ವೇ (ಇಸಿಆರ್) ಅಧಿಕಾರಿಗಳ ನಡುವೆ ಈ ವಿಷಯವನ್ನು ಚರ್ಚಿಸಲಾಯಿತು ಎಂದು ಅವರು ಹೇಳಿದರು.

ತಮ್ಮ ಹೇಳಿಕೆಯಲ್ಲಿ ಗೇಟ್‌ಮ್ಯಾನ್ ನಂದ್ ಕಿಶೋರ್ ಸಿಂಗ್ ಅವರು ರೈಲು ಹಾದುಹೋಗುವಾಗ ಕಿಡಿಯನ್ನು ನೋಡಿದೆ. ಭಾರೀ ಶಬ್ದ ಕೂಡಾ ಕೇಳಿಸಿತ್ತು ಎಂದು ಹೇಳಿದ್ದಾರೆ. ಲೊಕೊ ಪೈಲಟ್ ಬಿಪಿನ್ ಕುಮಾರ್ ಸಿನ್ಹಾ ಮಾತನಾಡಿ, ರೈಲು ರಘುನಾಥಪುರ ಹೋಮ್ ಸಿಗ್ನಲ್ ಮತ್ತು ರೈಲ್ವೇ ಕ್ರಾಸಿಂಗ್ ಅನ್ನು ದಾಟುವಾಗ ತನಗೆ ಭಾರೀ ಕಂಪನ, ಇಂಜಿನ್ ಹಿಂಭಾಗದಲ್ಲಿ ಜರ್ಕ್ ಮತ್ತು ಬ್ರೇಕ್ ಪೈಪ್‌ನಲ್ಲಿ ಒತ್ತಡ ಕುಸಿತ ಕಂಡುಬಂದಿದೆ ಎಂದು ಹೇಳಿದರು.

ರೈಲು ಓಡುತ್ತಿರುವಾಗ ಲೊಕೊ ಪೈಲಟ್‌ಗೆ ಒತ್ತಡ ಕಡಿಮೆಯಾದರೆ, ಒಂದು ಚಕ್ರವು ಟ್ರ್ಯಾಕ್‌ನಿಂದ ಕೆಳಗಿಳಿಯುವ ಸಾಧ್ಯತೆಯಿದೆ. ಇದು ಸ್ವಯಂಚಾಲಿತ ಬ್ರೇಕ್ ಅಥವಾ ಬ್ರೇಕ್ ಪೈಪ್‌ನಲ್ಲಿ ಸೋರಿಕೆಯಾಗುವ ಸಾಧ್ಯತೆಯಿದೆ ಎಂದು ತನಿಖಾ ತಂಡದ ಭಾಗವಾಗಿರುವ ಭಾರತೀಯ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಗೆ 30 ನಿಮಿಷಗಳ ಮೊದಲು, ಬದಲಾದ ಮಾರ್ಗದಲ್ಲಿ ಚಲಿಸುತ್ತಿದ್ದ 15232 ಡೌನ್ ದುರ್ಗ್-ಬರೌನಿ ರೈಲು ಅದೇ ಹಳಿಯಲ್ಲಿ ಹಾದುಹೋಯಿತು. ಅದರ ಲೊಕೊ ಪೈಲಟ್ ಕೂಡ ಕಂಪನವನ್ನು ಅನುಭವಿಸಿದರು ಎಂದು ಅವರು ಹೇಳಿದರು. ಅಂತಹ ಸಂದರ್ಭದಲ್ಲಿ, ಅಂತಹ ಕಂಪನಗಳ ಬಗ್ಗೆ ಅವರು ಸ್ಟೇಷನ್ ಮ್ಯಾನೇಜರ್‌ಗೆ ತಿಳಿಸಬೇಕಿತ್ತು, ಅಂತಹ ಮಾಹಿತಿಯನ್ನು ಸ್ಟೇಷನ್ ಮ್ಯಾನೇಜರ್‌ನೊಂದಿಗೆ ಹಂಚಿಕೊಳ್ಳಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ವಿಚಾರಣೆಯಿಂದ ಮಾತ್ರ ಬಹಿರಂಗಪಡಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದರು.

ಪ್ರಾಥಮಿಕ ತನಿಖೆಯ ಪ್ರಕಾರ, ಹಳಿಗಳ ದೋಷ ಅಥವಾ ಹಳಿಗಳಲ್ಲಿನ ಅಂತರವು ಹಳಿ ತಪ್ಪಲು ಕಾರಣವೆಂದು ತೋರುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಇಬ್ಬರು ಹಿರಿಯ ರೈಲ್ವೇ ಅಧಿಕಾರಿಗಳು ಗುರುವಾರ ಹೇಳಿದ್ದರು.

ಇದನ್ನೂ ಓದಿ: ಸ್ವಯಂಸೇವಕರು, ಆಶಾ ಕಾರ್ಯಕರ್ತರು, ಪೊಲೀಸರಿಗೆ ದುರ್ಗಾ ಪೂಜೆ ಬೋನಸ್ ಘೋಷಿಸಿದ ಮಮತಾ ಬ್ಯಾನರ್ಜಿ  

ಏತನ್ಮಧ್ಯೆ, ದುರಂತ ರೈಲ್ವೆ ಅಪಘಾತದ ನಂತರ 45 ಗಂಟೆಗಳ ನಂತರ ಅದೇ ರೈಲ್ವೆ ಹಳಿಗಳ ಮೇಲೆ ಪ್ರಾಯೋಗಿಕ ಸಂಚಾರ ನಡೆಸಲಾಯಿತು. ಹಲವಾರು ರೈಲುಗಳು ಬೆಳಿಗ್ಗೆ ಅಪ್‌ಲೈನ್‌ನಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸಿದರೆ, ಸಂಜೆ ಕಾರ್ಯಾಚರಣೆಗಾಗಿ ಡೌನ್‌ಲೈನ್ ಅನ್ನು ಪುನಃಸ್ಥಾಪಿಸಲಾಯಿತು.

ದುರಂತ ಸಂಭವಿಸಿದ 48 ಗಂಟೆಗಳಲ್ಲಿ ರೈಲು ಹಳಿ ಮತ್ತು ಡೌನ್ ಲೈನ್ ಸರಿಮಾಡಲಾಗಿದೆ. ಈಗಿನಿಂದಲೇ ರೈಲು ಸಂಚಾರ ಆರಂಭವಾಗಲಿದೆ ಎಂದು ಪೂರ್ವ ಸೆಂಟ್ರಲ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್‌ಒ) ಬೀರೇಂದ್ರ ಕುಮಾರ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:54 pm, Fri, 13 October 23