ಕಾಕಿನಾಡ: ಅಸನಿ ಚಂಡಮಾರುತ ಆಂಧ್ರ ಪ್ರದೇಶದ ಕಡಲ ತೀರ ಸಮೀಪಿಸುತ್ತಿದ್ದಂತೆಯೇ ಕಾಕಿನಾಡ ಜಿಲ್ಲೆಯಲ್ಲಿ ತೀವ್ರ ಮಳೆ ಆರಂಭವಾಗಿದೆ. ಒಡಿಶಾ ಮತ್ತು ಆಂಧ್ರದ ಗಡಿಯಲ್ಲಿ ಅಸನಿ ಚಂಡಮಾರುತ ಭೂಪ್ರವೇಶ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಬುಧವಾರ ಮುಂಜಾನೆ ಅಸನಿ ಚಂಡಮಾರುತ ಕಾಕಿನಾಡ ಸಮೀಪ ತೀರಕ್ಕೆ ಅಪ್ಪಳಿಸಲಿದ್ದು, ವ್ಯಾಪಕ ಮಳೆಯಾಗಲಿದೆ ಎಂದು ಒಡಿಶಾದ ಬಿಕ್ಕಟ್ಟು ನಿರ್ವಹಣಾ ವಿಭಾಗದ ಅಧಿಕಾರಿ ಪ್ರದೀಪ್ ಕುಮಾರ್ ಜೆನಾ ಹೇಳಿದ್ದರು.
ಪಶ್ಚಿಮ ಬಂಗಾಳದಲ್ಲಿ ರೂಪುಗೊಂಡಿರುವ ಅಸನಿ ಚಂಡಮಾರುತವು ಪಶ್ಚಿಮದತ್ತ ಸಾಗುತ್ತಿದೆ. ಅಂಧ್ರದ ಉತ್ತರ ಕರಾವಳಿಯಲ್ಲಿ ಈ ಚಂಡಮಾರುತದಿಂದ ವ್ಯಾಪಕ ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆಂಧ್ರ ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿಯೂ ಭಾರಿ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆಯ ಮತ್ತೋರ್ವ ಅಧಿಕಾರಿ ಹೇಳಿದ್ದಾರೆ. ತೆಲಂಗಾಣದ ನಲ್ಗೊಂಡ, ಸೂರ್ಯಪೇಟೆ, ಭದ್ರಾದ್ರಿ ಕೊತ್ತಗೂಡಂ, ಖಮ್ಮಂ ಮತ್ತು ಮುಲುಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು.
ಮಾರ್ಗ ಬದಲಾಯಿಸಿರುವ ಅಸನಿ ಚಂಡಮಾರುತವು ಕಾಕಿನಾಡ ಸಮೀಪ ನೆಲಕ್ಕೆ ಅಪ್ಪಳಿಸಬಹುದು. ಕಾಕಿನಾಡ ಸಮೀಪ ನೆಲಕ್ಕೆ ಅಪ್ಪಳಿಸಿದ ನಂತರ ಕಾಕಿನಾಡ-ವಿಶಾಖಪಟ್ಟಣ ನಡುವೆ ಮತ್ತೆ ಸಮುದ್ರಕ್ಕೆ ಪ್ರವೇಶಿಸಬಹುದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಮುಂದಿನ 24ರಿಂದ 48 ಗಂಟೆಗಳ ಅವಧಿಯಲ್ಲಿ ಹೈದರಾಬಾದ್ನಲ್ಲಿ ಮಳೆ ಸುರಿಯಲಿದೆ. ಮೋಡ ಮುಸುಕಿದ ವಾತಾವರಣ ಮುಂದಿನ ಕೆಲ ದಿನಗಳವರೆಗೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುದ್ದಿಯನ್ನು ಇಂಗ್ಲಿಷ್ನಲ್ಲಿ ಓದಿ: Cyclone Asani Live Updates
ಇದನ್ನೂ ಓದಿ: ಅಸನಿ ಚಂಡಮಾರುತ ಪ್ರಭಾವ: ಮುಂದುವರಿದ ಮಳೆ, ಮಂಡ್ಯ, ತುಮಕೂರಿನಲ್ಲಿ ಧರೆಗುರುಳಿದ ಮರಗಳು
Published On - 9:55 am, Wed, 11 May 22