ಅಸನಿ ಚಂಡಮಾರುತ ಪ್ರಭಾವ: ಮುಂದುವರಿದ ಮಳೆ, ಮಂಡ್ಯ, ತುಮಕೂರಿನಲ್ಲಿ ಧರೆಗುರುಳಿದ ಮರಗಳು

ಅಸನಿ ಚಂಡಮಾರುತ ಪ್ರಭಾವ: ಮುಂದುವರಿದ ಮಳೆ, ಮಂಡ್ಯ, ತುಮಕೂರಿನಲ್ಲಿ ಧರೆಗುರುಳಿದ ಮರಗಳು
ತುಮಕೂರು ಜಿಲ್ಲೆ ತೋವಿನಕೆರೆಯಲ್ಲಿ ಗಾಳಿ-ಮಳೆಯಿಂದ ಮರಗಳು ಬಿದ್ದಿವೆ

ಮಂಡ್ಯ, ತುಮಕೂರು ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದ್ದು, ಗಾಳಿ ಸಹಿತ ಮಳೆಯಿಂದ ಹಲವೆಡೆ ಮರಗಳು ಧರೆಗೆ ಉರುಳಿವೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

May 11, 2022 | 11:13 AM

ಬೆಂಗಳೂರು: ಅಸನಿ ಚಂಡಮಾರುತದ ಪ್ರಭಾವದಿಂದ ರಾಜ್ಯದ ವಿವಿಧೆಡೆ ಉತ್ತಮ ಮಳೆಯಾಗಿದೆ. ಮಂಡ್ಯ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದ್ದು, ಗಾಳಿ ಸಹಿತ ಮಳೆಯಿಂದ ಹಲವೆಡೆ ಮರಗಳು ಧರೆಗೆ ಉರುಳಿವೆ. ಮಂಡ್ಯ ನಗರ, ಹನಿಯಂಬಾಡಿ, ಬೇಲೂರು, ಇಂಡುವಾಳು ಸುತ್ತಮುತ್ತ ಉತ್ತಮ ಮಳೆಯಾಗಿದೆ. ತುಮಕೂರು ಜಿಲ್ಲೆಯಲ್ಲಿ ಅಕಾಲ ಮಳೆಯಿಂದ ಬೆಳೆ ನಷ್ಟವಾಗಿದೆ. ಬಿರುಗಾಳಿ ಸಹಿತ ಮಳೆಯಿಂದಾಗಿ ಕೊರಟಗೆರೆ ತಾಲ್ಲೂಕು ತೋವಿನಕೆರೆಯಲ್ಲಿ ಅಡಿಕೆ, ತೆಂಗು, ಹಲಸು, ಹುಣಸೆ ಮರಗಳು ಧರೆಗುರುಳಿವೆ. ಹತ್ತಾರು ವರ್ಷಗಳಿಂದ ಬೆಳೆಸಿದ್ದ ನೂರಾರು ಮರಗಳು ಧರೆಗೆ ಉರುಳಿರುವುದರಿಂದ ಕೈಗೆ ಬಂದು ತುತ್ತು ಬಾಯಿ ಬಾರದಂತೆ ಆಗಿದೆ. ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಕೊರಟಗೆರೆ, ತುಮಕೂರು, ಗುಬ್ಬಿ, ಕುಣಿಗಲ್ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.

ಮಳೆಗೆ ಬೆಳೆ ನಾಶ ಕೋಲಾರ: ಕೆಜಿಎಫ್ ತಾಲೂಕಿನ ವೆಂಕಟಾಪುರದಲ್ಲಿ ಬಿರುಗಾಳಿ, ಮಳೆಯಿಂದ ಅಶೋಕ್ ಕೃಷ್ಣಪ್ಪ ಅವರ 130 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಮಾವಿನ ಕಾಯಿಗಳು ಹಾಳಾಗಿವೆ. ದೇವರಹಳ್ಳಿಯ ಲೋಕನಾಥ್ ಎಂಬುವರ ಪಾಲಿಹೌಸ್ ಮತ್ತು ಕ್ಯಾಪ್ಸಿಕಂ ನೆಟ್​ಹೌಸ್ ಬಿರುಗಾಳಿಗೆ ಹಾನಿಯಾಗಿದೆ. ಜಿಲ್ಲೆಯ ಹಲವೆಡೆ ಮಳೆ, ಗಾಳಿಗೆ ಮುರಿದು ಬಿದ್ದಿರುವ ನೂರಾರು ವಿದ್ಯುತ್ ಕಂಬಗಳು ಉರುಳಿಬಿದ್ದಿವೆ.

ಆಂಧ್ರದಲ್ಲಿ ಪರೀಕ್ಷೆ ಮುಂದೂಡಿಕೆ ಅಸಾನಿ ಚಂಡಮಾರುತ ಅಪ್ಪಳಿಸುವ ಸಾಧ್ಯೆಯಿರುವ ಹಿನ್ನೆಲೆಯಲ್ಲಿ ಇಂದು (ಮೇ11) ನಡೆಯಬೇಕಿದ್ದ ಇಂಟರ್​ಮಿಡಿಯೇಟ್ (ಪಿಯುಸಿ) ಪರೀಕ್ಷೆಯನ್ನು ಆಂಧ್ರ ಪ್ರದೇಶ ಸರ್ಕಾರವು ಮೇ 25ಕ್ಕೆ ಮುಂದೂಡಲಾಗಿದೆ. ನಾಳೆಯ ಪರೀಕ್ಷೆಗಳು ಈ ಹಿಂದೆ ಘೋಷಿಸಿದ್ದಂತೆ ನಡೆಯಲಿದೆ.

ಇನ್ನೂ ಎರಡು ದಿನ ಮಳೆ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಕೆಲವೆಡೆ ಮತ್ತು ಮಲೆನಾಡು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಕೊಡಗು, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮೇ 12ರವರೆಗೆ ಮಳೆಯಾಗುವ ನಿರೀಕ್ಷೆಯಿದೆ.

ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಮತ್ತು ಉತ್ತರ ಒಳನಾಡಿನಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಲ್ಲಿ‌ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇನ್ನೂ 2 ದಿನ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಇಂದು ಗುಡುಗು ಸಹಿತ ಮಳೆಯಾಗಲಿದೆ. ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ. ಕರಾವಳಿಯಲ್ಲಿ ಇಂದಿನಿಂದ 2 ದಿನ ಮಳೆಯಾಗುವ ನಿರೀಕ್ಷೆಯಿದೆ ಎಂದು ಟಿವಿ9ಗೆ ಹವಾಮಾನ ತಜ್ಞ ಪ್ರಸಾದ್‌ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ನಾನಾ ಭಾಗಗಳಲ್ಲಿ ಈಗಾಗಲೇ ಮಳೆ ಅಬ್ಬರ ಶುರುವಾಗಿದ್ದು, ಇಂದು ಕೂಡ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಈ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ‌ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಮಳೆ ಸಾಧ್ಯತೆ ಇದೆ. ದಕ್ಷಿಣ ಒಳನಾಡು, ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆಗಳಿದ್ದು, ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ ಎಂದು ನೈಸರ್ಗಿಕ ವಿಕೋಪ‌ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಾದ್ಯಂತ ಅಲ್ಲಲ್ಲಿ ಮಿಂಚಿನೊಂದಿಗೆ ಗುಡುಗು ಸಂಭವಿಸುವ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಿದ್ದು, ಸುಮಾರು 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 15 ರಿಂದ 65 ಮಿ.ಮೀ ಮಳೆಯ ಬಗ್ಗೆ ಮುನ್ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Cyclone Asani: ಅಸನಿ ಚಂಡಮಾರುತದ ಪ್ರಭಾವ; ಅಂಡಮಾನ್​-ನಿಕೋಬಾರ್​​ನಲ್ಲಿ ಭರ್ಜರಿ ಗಾಳಿ-ಮಳೆ, ಜನರ ಸ್ಥಳಾಂತರ

ಇದನ್ನೂ ಓದಿ: Cyclone Asani: ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಅಪ್ಪಳಿಸಲಿದೆ ಅಸನಿ ಚಂಡಮಾರುತ; ಸಮುದ್ರ ತೀರದಲ್ಲಿ ಹೈ ಅಲರ್ಟ್​

Follow us on

Related Stories

Most Read Stories

Click on your DTH Provider to Add TV9 Kannada