ದೆಹಲಿ: ಬಿಜೆಪಿಯಿಂದ (BJP) ಅಮಾನತುಗೊಂಡಿರುವ ಪಕ್ಷದ ವಕ್ತಾರೆ ನೂಪುರ್ ಶರ್ಮಾ (Nupur Sharma) ಅವರು ಪ್ರವಾದಿ ಮೊಹಮ್ಮದ್ (Prophet Muhammad) ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ ರಾಜಸ್ಥಾನದಲ್ಲಿ ಬಿಜೆಪಿ ಪುರಸಭೆ ಸದಸ್ಯರೊಬ್ಬರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ದಕ್ಷಿಣದ ಕೋಟಾ ಮುನ್ಸಿಪಲ್ ಕಾರ್ಪೋರೇಶನ್‌ನ ವಾರ್ಡ್ ಸಂಖ್ಯೆ 14 ರ ಬಿಜೆಪಿಯ ಕೌನ್ಸಿಲರ್ ತಬಸ್ಸುಮ್ ಮಿರ್ಜಾ ಅವರು ಸೋಮವಾರ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಸತೀಶ್ ಪೂನಿಯಾ ಮತ್ತು ಕೋಟಾ ಜಿಲ್ಲಾ ಅಧ್ಯಕ್ಷ ಕ್ರಿಶನ್ ಕುಮಾರ್ ಸೋನಿ ಅವರಿಗೆ ಕಳುಹಿಸಿದ್ದು ತಮ್ಮ ರಾಜೀನಾಮೆ ಹಿಂದಿನ ಕಾರಣವನ್ನು ಉಲ್ಲೇಖಿಸಿದ್ದಾರೆ. ಸುಮಾರು 10 ವರ್ಷಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾದ ಮಿರ್ಜಾ ಅವರು ಸೋನಿ ಅವರಿಗೆ ಬರೆದ ಪತ್ರದಲ್ಲಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ಪಕ್ಷದೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರಾಜಸ್ಥಾನದ ಬಿಜೆಪಿ ಮುಖ್ಯಸ್ಥ ಸತೀಶ್ ಪೂನಿಯಾ ಅವರಿಗೆ ಬರೆದ ಪ್ರತ್ಯೇಕ ಪತ್ರದಲ್ಲಿ ಮಿರ್ಜಾ ಅವರು ಪಕ್ಷದ ಸದಸ್ಯರಾಗಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು ನಬಿಯನ್ನು ಟೀಕಿಸುತ್ತಿರುವ ತನ್ನ ಕಾರ್ಯಕರ್ತರನ್ನು ನಿಯಂತ್ರಿಸಲು ಪಕ್ಷವು ವಿಫಲವಾಗಿದೆ ಎಂದು ಹೇಳಿದ್ದಾರೆ.
ನಾನು ಬಿಜೆಪಿಯ ಸದಸ್ಯೆಯಾಗಿ ಮುಂದುವರಿದರೆ ಮತ್ತು ಪ್ರವಾದಿ ವಿರುದ್ಧ ಹೇಳಿಕೆಯನ್ನು ಬೆಂಬಲಿಸಿದರೆ ನನಗಿಂತ ದೊಡ್ಡ ಅಪರಾಧಿ ಮತ್ತೊಬ್ಬರಿಲ್ಲ. ಈಗ ನನ್ನ ಪ್ರಜ್ಞೆಯು ಜಾಗೃತಗೊಂಡಿದೆ. ನಾನು ಇನ್ನು ಮುಂದೆ ಪಕ್ಷದಲ್ಲಿ ಮುಂದುವರಿಯಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ದಿ ಇಂಡಿಯನ್ ಎಕ್ಸ್ಪ್ರೆಸ್ ಮಿರ್ಜಾ ಅವರನ್ನು ಸಂಪರ್ಕಿಸಿದ್ದು, ತಮ್ಮ ರಾಜೀನಾಮೆ ಪತ್ರವನ್ನು ಇಮೇಲ್ ಮತ್ತು ಪೋಸ್ಟ್ ಮೂಲಕ ಪೂನಿಯಾ ಮತ್ತು ಸೋನಿ ಅವರಿಗೆ ಕಳುಹಿಸಿರುವುದಾಗಿ ಅವರು ಹೇಳಿದ್ದಾರೆ.
ಏತನ್ಮಧ್ಯೆ, ಇಮೇಲ್ ಅಥವಾ ಅಂಚೆ ಮೂಲಕ ಯಾವುದೇ ರಾಜೀನಾಮೆ ಪತ್ರವನ್ನು ಸ್ವೀಕರಿಸಲಿಲ್ಲ ಎಂದು ಸೋನಿ ಪ್ರತಿಕ್ರಿಯಿಸಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 4:20 pm, Tue, 14 June 22