ಜೈಪುರ: ರಾಜಸ್ಥಾನದ ಕಾಂಗ್ರೆಸ್ ಸರ್ಕಾರ (Rajasthan Government) ರಾಜ್ಯದ ಎಲ್ಲ 200 ಶಾಸಕರಿಗೆ ಐಫೋನ್ 13 ಗಳನ್ನು ಉಡುಗೋರೆಯನ್ನಾಗಿ ನೀಡಿತ್ತು. ನಿನ್ನೆ (ಫೆ.23) ರಾಜ್ಯ ಬಜೆಟ್ ಮಂಡನೆ ಮಾಡಿದ ಬಳಿಕ ಶಾಸಕರಿಗೆ ಐಫೋನ್ (iPhone) ಉಡುಗೊರೆ ನೀಡಲಾಗಿತ್ತು. ಆದರೆ ಬಿಜೆಪಿ ಶಾಸಕರು ತಮಗೆ ನೀಡಲಾದ ಐಫೋನ್ನ್ನು ವಾಪಸ್ ನೀಡಲು ನಿರ್ಧರಿಸಿದ್ದಾರೆ. ಒಂದು ಐಫೋನ್ಗೇ 70 ಸಾವಿರ ರೂಪಾಯಿ ಬೆಲೆ ಇರುತ್ತದೆ. ಅಂಥದ್ದರಲ್ಲಿ ಇಷ್ಟೊಂದು ಪ್ರಮಾಣದ ಐಫೋನ್ ಹಂಚಲಾಗಿದ್ದು, ಇದು ರಾಜ್ಯಕ್ಕೆ ಆರ್ಥಿಕ ಹೊರೆ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಸತೀಶ್ ಪೂಂಜಾ, ರಾಜಸ್ಥಾನ ವಿಧಾನಸಭೆ ಪ್ರತಿಪಕ್ಷ ಉಪನಾಯಕ (ಬಿಜೆಪಿ ನಾಯಕ) ರಾಜೇಂದ್ರ ಜೀ ಮತ್ತು ರಾಜಸ್ಥಾನ ಮಾಜಿ ಗೃಹಸಚಿವ, ಬಿಜೆಪಿ ಹಿರಿಯ ಮುಖಂಡ ಗುಲಾಬ್ ಚಾಂದ್ ಕಟಾರಿಯಾ ಅವರೊಂದಿಗೆ ಚರ್ಚೆ ನಡೆಸಿ, ಐಫೋನ್ಗಳನ್ನು ಹಿಂದಿರುಗಿಸುವ ನಿರ್ಧಾರಕ್ಕೆ ಬಂದಿದ್ದೇವೆ. ರಾಜ್ಯಕ್ಕೆ ಉಂಟಾಗಬಹುದಾದ ಆರ್ಥಿಕ ಹೊರೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಹೀಗೆ ಶಾಸಕರಿಗೆ ದುಬಾರಿ ಉಡುಗೊರೆ ಕೊಡುತ್ತಿರುವುದು ಇದೇ ಮೊದಲೇನೂ ಅಲ್ಲ. 2021ರ ಬಜೆಟ್ ಮಂಡನೆಯ ಬಳಿಕ 200 ಶಾಸಕರಿಗೆ ಐ ಪ್ಯಾಡ್ಗಳನ್ನು ನೀಡಿತ್ತು. ಈ ಬಾರಿ ಫೆ.23 (ನಿನ್ನೆ)ರಂದು ಬಜೆಟ್ ಮಂಡನೆ ಮಾಡಲಾಗಿದೆ. ಅಧಿವೇಶನ ಮುಗಿದು, ಹೊರಡುವ ಹೊತ್ತಿಗೆ ಶಾಸಕರಿಗೆ ಒಂದು ಬ್ರೀಫ್ಕೇಸ್ ಕೊಡಲಾಗಿದ್ದು, ಅದರಲ್ಲಿ ಐಫೋನ್ 13 ಇದೆ. ಕಾಂಗ್ರೆಸ್ ಪಕ್ಷದ ಶಾಸಕರು ಇದಕ್ಕೆ ಪ್ರತಿಕ್ರಿಯೆ ನೀಡಿ, ವಿಧಾನಸಭೆಯನ್ನು ಕಾಗದ ರಹಿತಗೊಳಿಸುವ ಪ್ರಯತ್ನ ನಡೆಯುತ್ತಿದ್ದು, ಸದನವನ್ನು ಹೈಟೆಕ್ ಮಾಡುವ ಉದ್ದೇಶ ಹೊಂದಲಾಗಿದೆ. ಈ ಕಾರಣಕ್ಕೆ ಶಾಸಕರಿಗೆ ಐಫೋನ್ಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಆದರೆ ಬಿಜೆಪಿಗರು ಇದನ್ನು ಸುತಾರಾಂ ಒಪ್ಪಿಕೊಳ್ಳುತ್ತಿಲ್ಲ. ವಿಧಾನಸಭೆಯಲ್ಲಿ ಕಾಗದ ರಹಿತ ವ್ಯವಹಾರ ನಡೆಸುವುದು, ಹೈಟೆಕ್ಗೊಳಿಸುವುದು ತಪ್ಪಲ್ಲ. ನಿಜಕ್ಕೂ ಒಳ್ಳೆಯ ನಿರ್ಧಾರ . ಆದರೆ ಅದಕ್ಕಾಗಿ ಇಷ್ಟು ಬೃಹತ್ ಮೊತ್ತದ ಹಣ ವ್ಯಯ ಮಾಡುವುದು ಕೂಡ ಸರಿಯಲ್ಲ. ಅದರಲ್ಲೂ ರಾಜ್ಯದ ಆರ್ಥಿಕತೆ ಈಗಾಗಲೇ ದುರ್ಬಲಗೊಂಡಿರುವ ಹೊತ್ತಲ್ಲಿ, ಫೋನ್ಗಾಗಿ ಕೋಟ್ಯಂತರ ರೂಪಾಯಿ ಅಗತ್ಯವಿದೆಯಾ ಎಂದು ಬಿಜೆಪಿ ಶಾಸಕ ವಾಸುದೇವ್ ದೇವ್ನಾನಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಈ ಬಾರಿ ಮಂಡನೆಯಾದ ಬಜೆಟ್ನಿಂದ ಮತ್ತೆ 5 ಲಕ್ಷ ಕೋಟಿಗಳಷ್ಟು ಸಾಲ ಸೃಷ್ಟಿಯಾಗಿದೆ. ಕಂದಾಯ ಸಂಗ್ರಹವೂ ಕುಸಿದಿದೆ. ಅಂಥದ್ದರಲ್ಲಿ ಐಫೋನ್ಗಳು ಯಾಕೆ ಎಂದೂ ಕೇಳಿದ್ದಾರೆ. ಬಿಜೆಪಿಯ ಒಟ್ಟು 71 ಶಾಸಕರಿದ್ದು, ಅವರೆಲ್ಲರೂ ಐಫೋನ್ ಹಿಂದಿರುಗಿಸುವ ತೀರ್ಮಾನಕ್ಕೆ ಬಂದಿದ್ದಾರೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಸಂಘರ್ಷ: ತಕ್ಷಣವೇ ಉದ್ವಿಗ್ನ ಪರಿಸ್ಥಿತಿ ತಣ್ಣಗಾಗಿಸಲು ಭಾರತ ಕರೆ