ಜೈಪುರ: ರಾಜಸ್ಥಾನದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಸರ್ಕಾರಿ ನೌಕರನೊಬ್ಬ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಹೆಂಡತಿಯನ್ನು ನೋಡಿಕೊಳ್ಳಲೆಂದು ಸ್ವಯಂ ನಿವೃತ್ತಿ ಪಡೆದಿದ್ದರು. ಹೀಗಾಗಿ, ಅವರಿಗೆ ಆಫೀಸ್ನಲ್ಲಿ ಬೀಳ್ಕೊಡುಗೆ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಆ ಪಾರ್ಟಿಗೆ ಅವರು ತಮ್ಮ ಹೆಂಡತಿಯನ್ನೂ ಕರೆದುಕೊಂಡು ಬಂದಿದ್ದರು. ಗಂಡ-ಹೆಂಡತಿ ಇಬ್ಬರಿಗೂ ಹೂವಿನ ಹಾರ ಹಾಕಿ, ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಎಲ್ಲರೂ ಹಾರೈಸುತ್ತಿದ್ದಾಗಲೇ ಆ ವ್ಯಕ್ತಿಯ ಹೆಂಡತಿ ಪ್ರಜ್ಞೆ ತಪ್ಪಿ ಬಿದ್ದು, ಮೃತಪಟ್ಟಿದ್ದಾರೆ. ಹೆಂಡತಿಯನ್ನು ನೋಡಿಕೊಳ್ಳಲೆಂದು ನಿವೃತ್ತಿ ತೆಗೆದುಕೊಂಡಿದ್ದ ವ್ಯಕ್ತಿ ತನ್ನ ಬೀಳ್ಕೊಡುಗೆ ದಿನವೇ ಹೆಂಡತಿಯನ್ನು ಕಳೆದುಕೊಂಡಿದ್ದಾರೆ.
ರಾಜಸ್ಥಾನದ ಕೋಟಾದಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ನೌಕರನ ಬೀಳ್ಕೊಡುಗೆ ಸಮಾರಂಭ ವಿನಾಶಕಾರಿ ತಿರುವು ಪಡೆದುಕೊಂಡಿತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಪತ್ನಿಗೆ ಮನೆಯಲ್ಲಿ ಯಾರೂ ನೋಡಿಕೊಳ್ಳುವವರು ಇರಲಿಲ್ಲ. ಹೀಗಾಗಿ, ಅವರ ಗಂಡನೇ ಸ್ವಯಂ ನಿವೃತ್ತಿ ಪಡೆಯಲು ನಿರ್ಧರಿಸಿದ್ದರು. ಆದರೆ, ಅವರ ಕಣ್ಣೆದುರಲ್ಲೇ ಅವರ ಹೆಂಡತಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: 8 ವರ್ಷದ ಲವ್; ತನಗೆ ಮೋಸ ಮಾಡಿ ಇನ್ನೊಬ್ಬಳ ಜೊತೆ ಮದುವೆಯಾಗಲು ತಯಾರಾದ ಪ್ರೇಮಿಯ ಜನನಾಂಗವನ್ನೇ ಕತ್ತರಿಸಿದ ಯುವತಿ
ಸೆಂಟ್ರಲ್ ವೇರ್‌ಹೌಸಿಂಗ್‌ನಲ್ಲಿ ಮ್ಯಾನೇಜರ್ ಆಗಿದ್ದ ದೇವೇಂದ್ರ ಅವರು ಡಿಸೆಂಬರ್ 24ರಂದು ತಮ್ಮ ಪತ್ನಿಯ ಆರೋಗ್ಯವನ್ನು ನೋಡಿಕೊಳ್ಳಲು ಸ್ವಯಂ ನಿವೃತ್ತಿ (ವಿಆರ್‌ಎಸ್) ತೆಗೆದುಕೊಂಡಿದ್ದರು. ಸೆಂಟ್ರಲ್ ವೇರ್‌ಹೌಸಿಂಗ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ದೇವೇಂದ್ರ ಸ್ಯಾಂಡಲ್ ಅವರು ಹೃದ್ರೋಗಿಯಾಗಿದ್ದ ಪತ್ನಿಯ ಆರೋಗ್ಯ ಹದಗೆಟ್ಟಿದ್ದರಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಮಂಗಳವಾರ ಕಚೇರಿಯಲ್ಲಿ ಅವರ ಕೊನೆಯ ದಿನವಾದ್ದರಿಂದ ಅವರ ಸಹೋದ್ಯೋಗಿಗಳಿಂದ ಬೀಳ್ಕೊಡುಗೆ ಕೂಟವನ್ನು ಆಯೋಜಿಸಲಾಗಿತ್ತು. ದೇವೇಂದ್ರನ ಪತ್ನಿ ದೀಪಿಕಾ ಆ ದಿನ ಬೆಳಿಗ್ಗೆ ದಕಾನಿಯಾದಲ್ಲಿರುವ ಕಚೇರಿಗೆ ಅವರೊಂದಿಗೆ ಬಂದಿದ್ದರು. ಅವರು ನಿವೃತ್ತಿ ಪಡೆಯುತ್ತಿರುವ ತನ್ನ ಪತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಉತ್ಸುಕಳಾಗಿದ್ದರು.
ಇದನ್ನೂ ಓದಿ: ವಾಕಿಂಗ್ ಮಾಡುವಾಗ ವೃದ್ಧೆಯನ್ನು ದರದರನೆ ಎಳೆದುಕೊಂಡು ಹೋಗಿ ಕಚ್ಚಿ ಕೊಂದ 7 ಬೀದಿ ನಾಯಿಗಳು; ವಿಡಿಯೋ ನೋಡಿ
ಆದರೆ, ವಿಧಿಯಾಟವೇ ಬೇರೆ ಇತ್ತು. ಅವರಿಬ್ಬರಿಗೂ ಹೂಮಾಲೆ ಹಾಕಿ ಎಲ್ಲರೂ ಶುಭಾಶಯ ಹೇಳುತ್ತಿರುವಾಗಲೇ ದೀಪಿಕಾ ಸುಸ್ತಾಗಿ ಕುರ್ಚಿಯಲ್ಲಿ ಕುಸಿದು ಕುಳಿತರು. ಆಗ ಆಕೆಯ ಗಂಡ ಅಲ್ಲಿದ್ದವರಿಗೆ ನೀರು ತರಲು ಹೇಳಿದರು. ಆದರೆ, ಅಷ್ಟರಲ್ಲಾಗಲೇ ಆಕೆ ಪ್ರಜ್ಞೆ ತಪ್ಪಿ ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದರು. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತೀವ್ರ ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:01 pm, Wed, 25 December 24