ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಉದಯಪುರ ಸಿಟಿ-ಜೈಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಕಲ್ಲುಗಳು ತಾಗಿದ ಕಾರಣ ರೈಲಿನ ಕಿಟಕಿ ಗಾಜುಗಳು ಒಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಪ್ರಯಾಣಿಕರು ಅಥವಾ ರೈಲು ಸಿಬ್ಬಂದಿ ಗಾಯಗೊಂಡಿಲ್ಲ ಎಂದು ಅವರು ಹೇಳಿದರು. ರಾಯಲ ನಿಲ್ದಾಣದ ಮೂಲಕ ರೈಲು ಹಾದು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬರು ರೈಲು ಮೇಲೆ ಕಲ್ಲು ಎಸೆದಿದ್ದು, ಕೊನೆಯ (ಸಿ7) ಕೋಚ್‌ನ ಕಿಟಕಿಗೆ ಹಾನಿಯಾಗಿದೆ ಎಂದು ಚಿತ್ತೋರಗಢ ಜಿಆರ್‌ಪಿ ನಿಲ್ದಾಣದ ಛೋಟುಲಾಲ್ ತಿಳಿಸಿದ್ದಾರೆ.
ರಾಯಲ ಠಾಣಾಧಿಕಾರಿಗಳ ವರದಿ ಆಧರಿಸಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಮತ್ತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಕಣ್ಣೂರಿನಲ್ಲಿ ವಂದೇ ಭಾರತ್ ರೈಲಿನ ಮೇಲೆ ಕಲ್ಲು ಎಸೆಯಲಾಗಿತ್ತು, ತಿರುವನಂತಪುರಕ್ಕೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ತಲಶ್ಶೇರಿ ಮತ್ತು ಮಾಹೆ ನಡುವೆ ಕಲ್ಲು ತೂರಾಟ ನಡೆದಿದ್ದು, ಸಿ8 ಕೋಚ್‌ನ ಕಿಟಕಿ ಗಾಜುಗಳು ಜಖಂಗೊಂಡಿತ್ತು.
ಅದೃಷ್ಟವಶಾತ್, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಬುಧವಾರ ಕೇರಳದಲ್ಲಿ ದಾಳಿ ನಡೆದಿದ್ದು ಇದು ಎರಡನೇ ಬಾರಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದ ನಾಲ್ಕನೇ ಪ್ರಕರಣ ಎನ್ನಲಾಗಿದೆ.
ಮತ್ತಷ್ಟು ಓದಿ: ಕಣ್ಣೂರಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ; ಕೇರಳದ ಹಲವೆಡೆ ಸತತ ನಾಲ್ಕನೇ ದಿನವೂ ರೈಲುಗಳ ಮೇಲೆ ಕಲ್ಲೆಸೆತ
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಸಿ8 ಕೋಚ್‌ನ ಗಾಜಿನ ಕಿಟಕಿಗೆ ಹಾನಿಯಾಗಿದೆ. ಎಸಿ ಕೋಚ್‌ನಲ್ಲಿದ್ದ ಎರಡೂ ಗಾಜಿನ ಪದರಗಳತ್ತ ಕಲ್ಲು ತೂರಿಬಂದಿತ್ತು ಎನ್ನಲಾಗಿದೆ. ಆದರೆ, ತಲಶ್ಶೇರಿ ನಿಲ್ದಾಣ ದಾಟಿದ ಕೂಡಲೇ ಮಧ್ಯಾಹ್ನ 3.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಆರ್‌ಪಿಎಫ್ ಅಧಿಕಾರಿಗಳು ತಾತ್ಕಾಲಿಕ ದುರಸ್ತಿ ಮಾಡಿದ ನಂತರ ರೈಲು ಸಂಚಾರ ಮುಂದುವರೆದಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ