ಕಣ್ಣೂರಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ; ಕೇರಳದ ಹಲವೆಡೆ ಸತತ ನಾಲ್ಕನೇ ದಿನವೂ ರೈಲುಗಳ ಮೇಲೆ ಕಲ್ಲೆಸೆತ
Stone Pelting on Vande Bharat Express; ಕಣ್ಣೂರು-ಯಶವಂತಪುರ ಎಕ್ಸ್‌ಪ್ರೆಸ್ (16528) ಮೇಲೆ ಕಲ್ಲು ತೂರಾಟ ನಡೆದ ಬಗ್ಗೆ ಮಂಗಳವಾರ ವರದಿಯಾಗಿತ್ತು. ಪ್ರಯಾಣಿಕರ ದೂರಿನ ಪ್ರಕಾರ, ಕೋಝಿಕ್ಕೋಡ್ ಮತ್ತು ಕಲ್ಲೈ ನಿಲ್ದಾಣಗಳ ನಡುವೆ ಘಟನೆ ಸಂಭವಿಸಿತ್ತು. ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲೆಸೆಯಲಾಗಿದ್ದು, ಸತತ ನಾಲ್ಕನೇ ದಿನ ರೈಲುಗಳ ಮೇಲೆ ಕಲ್ಲು ತೂರಾಟ ನಡೆದಿದೆ.
ಕಣ್ಣೂರು, ಆಗಸ್ಟ್ 16: ಕೇರಳದ ಕಣ್ಣೂರು (Kannur) ಜಿಲ್ಲೆಯಲ್ಲಿ ಬುಧವಾರ ತಿರುವನಂತಪುರಂಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ (Stone Pelting) ನಡೆಸಿದ್ದಾರೆ ಎಂದು ವರದಿಯಾಗಿದೆ. ತಿರುವನಂತಪುರಕ್ಕೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ತಲಶ್ಶೇರಿ ಮತ್ತು ಮಾಹೆ ನಡುವೆ ಕಲ್ಲು ತೂರಾಟ ನಡೆದಿದ್ದು, ಸಿ8 ಕೋಚ್‌ನ ಕಿಟಕಿ ಗಾಜುಗಳು ಜಖಂಗೊಂಡಿವೆ. ಅದೃಷ್ಟವಶಾತ್, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಬುಧವಾರ ಕೇರಳದಲ್ಲಿ ದಾಳಿ ನಡೆದಿದ್ದು ಇದು ಎರಡನೇ ಬಾರಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದ ನಾಲ್ಕನೇ ಪ್ರಕರಣ ಎನ್ನಲಾಗಿದೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಸಿ8 ಕೋಚ್‌ನ ಗಾಜಿನ ಕಿಟಕಿಗೆ ಹಾನಿಯಾಗಿದೆ. ಎಸಿ ಕೋಚ್‌ನಲ್ಲಿದ್ದ ಎರಡೂ ಗಾಜಿನ ಪದರಗಳತ್ತ ಕಲ್ಲು ತೂರಿಬಂದಿತ್ತು ಎನ್ನಲಾಗಿದೆ. ಆದರೆ, ತಲಶ್ಶೇರಿ ನಿಲ್ದಾಣ ದಾಟಿದ ಕೂಡಲೇ ಮಧ್ಯಾಹ್ನ 3.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಆರ್‌ಪಿಎಫ್ ಅಧಿಕಾರಿಗಳು ತಾತ್ಕಾಲಿಕ ದುರಸ್ತಿ ಮಾಡಿದ ನಂತರ ರೈಲು ಸಂಚಾರ ಮುಂದುವರಿಸಿದೆ.
ಕಣ್ಣೂರು-ಯಶವಂತಪುರ ಎಕ್ಸ್‌ಪ್ರೆಸ್ ಮೇಲೂ ಕಲ್ಲೆಸೆತ
ಕಣ್ಣೂರು-ಯಶವಂತಪುರ ಎಕ್ಸ್‌ಪ್ರೆಸ್ (16528) ಮೇಲೆ ಕಲ್ಲು ತೂರಾಟ ನಡೆದ ಬಗ್ಗೆ ಮಂಗಳವಾರ ವರದಿಯಾಗಿತ್ತು. ಪ್ರಯಾಣಿಕರ ದೂರಿನ ಪ್ರಕಾರ, ಕೋಝಿಕ್ಕೋಡ್ ಮತ್ತು ಕಲ್ಲೈ ನಿಲ್ದಾಣಗಳ ನಡುವೆ ಘಟನೆ ಸಂಭವಿಸಿತ್ತು.
ಸೋಮವಾರ, ದುರಂತೋ ಎಕ್ಸ್‌ಪ್ರೆಸ್‌ನ (12284) ಎಂಜಿನ್ಗೆ ಕಣ್ಣಾಪುರಂ ಮತ್ತು ಪಾಪ್ಪಿನಶ್ಶೇರಿ ನಡುವೆ ಕಲ್ಲು ತೂರಾಟ ನಡೆಸಲಾಗಿತ್ತು.
ಮಂಗಳೂರು-ಚೆನ್ನೈ ಸೂಪರ್ ಫಾಸ್ಟ್ (12686) ರೈಲಿನ ಮೇಲೆ ಭಾನುವಾರ ರಾತ್ರಿ 7 ಗಂಟೆಯ ನಂತರ ಕಲ್ಲು ತೂರಾಟ ನಡೆದಿತ್ತು. ಕೆಲವೇ ನಿಮಿಷಗಳ ನಂತರ ಸಂಚರಿಸಿದ ನೇತ್ರಾವತಿ ಎಕ್ಸ್‌ಪ್ರೆಸ್‌ನ (16346) ಎಸಿ ಕೋಚ್‌ಗಳು ಕಣ್ಣೂರು ಮತ್ತು ವಳಾಪಟ್ಟಣಂನಲ್ಲಿ ನಡೆದ ಕಲ್ಲು ತೂರಾಟದಲ್ಲಿ ಹಾನಿಗೀಡಾಗಿದ್ದವು. ಏತನ್ಮಧ್ಯೆ, ಕಾಞಂಗಾಡ್ ಮತ್ತು ನೀಲೇಶ್ವರಂ ನಡುವಿನ ಓಖಾ ಎಕ್ಸ್‌ಪ್ರೆಸ್‌ನ (16337) ಜನರಲ್ ಕೋಚ್ ಮೇಲೂ ಕಲ್ಲು ತೂರಾಟನ ನಡೆದಿತ್ತು.
ಇದನ್ನೂ ಓದಿ: Vande Bharat Express: ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ರಾಮನಗರ ಬಳಿ ಕಲ್ಲೆಸೆತ, ಗಾಜು ಪುಡಿ
ಸ್ಥಳೀಯ ಪೊಲೀಸರ ನೆರವಿನಿಂದ ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದ ರಾಮನಗರ ಮತ್ತು ದಾವಣಗೆರೆಯಲ್ಲಿ ಕೂಡ ಇತ್ತೀಚೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ ನಡೆಸಲಾಗಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:58 pm, Wed, 16 August 23