ಕಲ್ಲು ಬೆಂಚಿನ ಮೇಲೆ ಮಗಳನ್ನು ಮಲಗಿಸಿ, ನಿದ್ರೆ ಬಂದ ಬಳಿಕ ಸರೋವರಕ್ಕೆ ಎಸೆದು ಕೊಂದ ತಾಯಿ

ಅಮ್ಮ ಜತೆಗಿದ್ದಾಳೆಂದು ನೆಮ್ಮದಿಯಿಂದ ಮಲಗಿದ್ದ ಮಗು, ತನ್ನ ತಾಯಿಯೇ ತನ್ನ ಕೊಲ್ಲಬಹುದು ಎನ್ನುವ ಸಣ್ಣ ಊಹೆಯೂ ಆ ಮಗುವಿಗೆ ಇರದು. ಯಮನ ಕೈಯಿಂದಲೂ ತನ್ನ ಮಗುವನ್ನು ಕಾಪಾಡಿಕೊಳ್ಳುವ ಶಕ್ತಿ ತಾಯಿಗಿರುತ್ತೆ ಅಂತಾರೆ, ಆದರೆ ಆಕೆಯೇ ತನ್ನ ಮಗುವ ಯಮನ ಕೈಗಿಟ್ಟುಬಿಟ್ಟಳೇ. ಮೂರು ವರ್ಷದ ಮಗಳನ್ನು ಕಲ್ಲು ಬೆಂಚಿನ ಮೇಲೆ ಮಲಗಿಸಿ ನಿದ್ರೆ ಬಂದ ಬಳಿಕ ಆಕೆಯನ್ನು ತಾಯಿ ಸರೋವರಕ್ಕೆ ಎಸೆದು ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಅಜ್ಮೀರ್​ನಲ್ಲಿ ನಡೆದಿದೆ. ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಮಂಗಳವಾರ ತಡರಾತ್ರಿ ಮಹಿಳೆ ಅಜ್ಮೀರ್‌ನ ಅನಾ ಸಾಗರ್ ಸರೋವರದ ಬಳಿ ಮಗುವಿನೊಂದಿಗೆ ಹಲವು ಗಂಟೆಗಳ ಕಾಲ ಕಳೆದ ನಂತರ ತಾಯಿ ಈ ಕೃತ್ಯವೆಸಗಿದ್ದಾರೆ. ಆರೋಪಿಯನ್ನು ಅಂಜಲಿ ಅಲಿಯಾಸ್ ಪ್ರಿಯಾ ಸಿಂಗ್ ಎಂದು ಗುರುತಿಸಲಾಗಿದ್ದು, ಆಕೆ ಮೂಲತಃ ಉತ್ತರ ಪ್ರದೇಶದ ಬನಾರಸ್ ಜಿಲ್ಲೆಯ ಸಕುಲ್ಪುರದವಳು.

ಕಲ್ಲು ಬೆಂಚಿನ ಮೇಲೆ ಮಗಳನ್ನು ಮಲಗಿಸಿ, ನಿದ್ರೆ ಬಂದ ಬಳಿಕ ಸರೋವರಕ್ಕೆ ಎಸೆದು ಕೊಂದ ತಾಯಿ
ಆರೋಪಿ ಮಹಿಳೆ

Updated on: Sep 18, 2025 | 2:35 PM

ಅಜ್ಮೀರ್, ಸೆಪ್ಟೆಂಬರ್ 18: ಮೂರು ವರ್ಷದ ಮಗಳನ್ನು ಕಲ್ಲು ಬೆಂಚಿನ ಮೇಲೆ ಮಲಗಿಸಿ ನಿದ್ರೆ ಬಂದ ಬಳಿಕ ಆಕೆಯನ್ನು ತಾಯಿ ಸರೋವರಕ್ಕೆ ಎಸೆದು ಕೊಲೆ(Murder) ಮಾಡಿರುವ ಘಟನೆ ರಾಜಸ್ಥಾನದ ಅಜ್ಮೀರ್​ನಲ್ಲಿ ನಡೆದಿದೆ. ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಮಂಗಳವಾರ ತಡರಾತ್ರಿ ಮಹಿಳೆ ಅಜ್ಮೀರ್‌ನ ಅನಾ ಸಾಗರ್ ಸರೋವರದ ಬಳಿ ಮಗುವಿನೊಂದಿಗೆ ಹಲವು ಗಂಟೆಗಳ ಕಾಲ ಕಳೆದ ನಂತರ ತಾಯಿ ಈ ಕೃತ್ಯವೆಸಗಿದ್ದಾಳೆ.

ಆರೋಪಿಯನ್ನು ಅಂಜಲಿ ಅಲಿಯಾಸ್ ಪ್ರಿಯಾ ಸಿಂಗ್ ಎಂದು ಗುರುತಿಸಲಾಗಿದ್ದು, ಆಕೆ ಮೂಲತಃ ಉತ್ತರ ಪ್ರದೇಶದ ಬನಾರಸ್ ಜಿಲ್ಲೆಯ ಸಕುಲ್ಪುರದವಳು. ಆಕೆ ಅಜ್ಮೀರ್‌ನ ದತನಗರ ಪ್ರದೇಶದಲ್ಲಿ ಆಕ್ಲೇಶ್ ಗುಪ್ತಾ ಎಂಬ ವ್ಯಕ್ತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದಳು. ಅಂಜಲಿ ತನ್ನ ಪತಿಯಿಂದ ಬೇರ್ಪಟ್ಟಿದ್ದಳು, ಅವರಿಗೆ ಒಬ್ಬಳು ಮಗಳಿದ್ದಳು.

ಪೊಲೀಸರ ಮಾಹಿತಿ ಪ್ರಕಾರ, ಕ್ರಿಶ್ಚಿಯನ್ ಗಂಜ್ ಠಾಣೆಯ ಪೊಲೀಸರು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬಜರಂಗ್ ಘರ್ ಛೇದಕ ಬಳಿ ಅಂಜಲಿ ಮತ್ತು ಅಕ್ಲೇಶ್ ಅವರನ್ನು ನೋಡಿದಾಗ ಅವರಿಗೆ ಅನುಮಾನ ಬಂದಿತ್ತು. ಅವರನ್ನು ಪ್ರಶ್ನಿಸಿದಾಗ, ಮಹಿಳೆ ತನ್ನ ಮಗಳು ಕಾಣೆಯಾಗಿದ್ದಾಳೆ ಮತ್ತು ಅವಳನ್ನು ಹುಡುಕುತ್ತಿದ್ದೇವೆ ಎಂದು ಸುಳ್ಳು ಹೇಳಿದ್ದಳು.

ಮತ್ತಷ್ಟು ಓದಿ: ಇಳಿ ವಯಸ್ಸಿನಲ್ಲಿ ಮದುವೆ ಕನಸು ಹೊತ್ತು ಅಮೆರಿಕದಿಂದ ಭಾರತಕ್ಕೆ ಬಂದ ಮಹಿಳೆಯ ಬರ್ಬರ ಹತ್ಯೆ

ಆದರೆ, ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ರಾತ್ರಿ 10 ರಿಂದ ಬೆಳಗಿನ ಜಾವ 1.30 ರ ನಡುವೆ ಮಗು ಅಂಜಲಿ ಜೊತೆಗಿರುವುದು ಕಂಡುಬಂದಿದೆ. ಹೆಚ್ಚಿನ ದೃಶ್ಯಗಳಲ್ಲಿ ಅಂಜಲಿ ಹಳೆಯ ಅನಾ ಸಾಗರ್ ಸರೋವರ ಪ್ರದೇಶಕ್ಕೆ ಹೋಗಿ, ಅಲ್ಲಿ ತನ್ನ ಮಗಳನ್ನು ಬೆಂಚ್ ಮೇಲೆ ಮಲಗಿಸಿದ್ದಾಳೆ ಎಂದು ತಿಳಿದುಬಂದಿದೆ.

ನಿರಂತರ ವಿಚಾರಣೆಯ ನಂತರ, ಅಂಜಲಿ ತನ್ನ ಮಗಳನ್ನು ರೇಲಿಂಗ್ ಕಾಣದ ಭಾಗದ ಮೂಲಕ ಸರೋವರಕ್ಕೆ ತಳ್ಳಿದ್ದಾಗಿ ಒಪ್ಪಿಕೊಂಡಿದ್ದಾಳೆ. ನಂತರ ಪೊಲೀಸರು ಅನಾ ಸಾಗರ್ ಸರೋವರದಿಂದ ಮಗುವಿನ ಶವವನ್ನು ವಶಪಡಿಸಿಕೊಂಡರು. ಅಂಜಲಿ ನಾಪತ್ತೆಯಾಗಿರುವ ಬಗ್ಗೆ ಆಕೆಯ ಪತಿ ಬನಾರಸ್‌ನಲ್ಲಿ ಈಗಾಗಲೇ ನಾಪತ್ತೆ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ