ಭಾರತದ ಮೇಲೆ ಟ್ಯಾರಿಫ್ ಅನ್ನು ಶೇ. 50ರಿಂದ ಶೇ. 10ಕ್ಕೆ ಇಳಿಸಲಿದೆಯಾ ಅಮೆರಿಕ?
V Anantha Nageswaran hope of US removing tariffs on India: ಮುಂದಿನ ಎರಡು ತಿಂಗಳೊಳಗೆ ಅಮೆರಿಕವು ಭಾರತದ ಸರಕುಗಳ ಮೇಲಿನ ಸುಂಕವನ್ನು ಶೇ. 10-15ಕ್ಕೆ ಇಳಿಸಬಹುದು. ಹಾಗೆಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾದ ವಿ. ಅನಂತನಾಗೇಶ್ವರನ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ದಂಡವಾಗಿ ವಿಧಿಸುವ ಶೇ. 25 ಟ್ಯಾರಿಫ್ ರದ್ದಾಗಬಹುದು. ಪ್ರತಿಸುಂಕವು ಶೇ. 25ರಿಂದ ಶೇ. 10-15ಕ್ಕೆ ಇಳಿಯಬಹುದು ಎಂದಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 18: ಭಾರತದ ಮೇಲೆ ದಂಡ ರೂಪವಾಗಿ ಅಮೆರಿಕ ವಿಧಿಸಿರುವ ಶೇ. 25 ಟ್ಯಾರಿಫ್ (Tariffs) ಅನ್ನು ಸದ್ಯದಲ್ಲೇ ಹಿಂಪಡೆದುಕೊಳ್ಳಬಹುದು ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತನಾಗೇಶ್ವರನ್ (V Anantha Nageswaran) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಶೇ. 25ರಷ್ಟಿರುವ ಪ್ರತಿಸುಂಕವನ್ನು ಅಥವಾ ಬೇಸ್ಲೈನ್ ಟ್ಯಾರಿಫ್ ಅನ್ನು ಶೇ. 10 ಅಥವಾ 15ಕ್ಕೆ ಇಳಿಸಬಹುದು ಎಂದೂ ಸಿಇಎ ಅಭಿಪ್ರಾಯಪಟ್ಟಿದ್ದಾರೆ. ಅಂದರೆ, ಭಾರತದ ಸರಕುಗಳ ಮೇಲೆ ಅಮೆರಿಕ ಪ್ರಸಕ್ತ ಹಾಕಿರುವ ಶೇ. 50 ಒಟ್ಟು ಸುಂಕವು ಶೇ 10-15ಕ್ಕೆ ಇಳಿಕೆಯಾಗಬಹುದು.
ಮುಂದಿನ ಎಂಟು ಹತ್ತು ವಾರಗಳಲ್ಲಿ, ಅಂದರೆ 2-3 ತಿಂಗಳಲ್ಲಿ ಸುಂಕ ಬಿಕ್ಕಟ್ಟು ಶಮನಗೊಳ್ಳಬಹುದು ಎಂದು ಅನಂತನಾಗೇಶ್ವರನ್ ನಿರೀಕ್ಷಿಸುತ್ತಿದ್ದಾರೆ. ಕೋಲ್ಕತಾದಲ್ಲಿ ಇಂದು ಗುರುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಮುಖ್ಯ ಆರ್ಥಿಕ ಸಲಹೆಗಾರರು, ಮುಂದಿನ ಎರಡು ಎರಡು ತಿಂಗಳಲ್ಲಿ ಹೆಚ್ಚುವರಿ ದಂಡ ರೂಪದ ಸುಂಕ ರದ್ದಾಗಬಹುದು. ಪ್ರತಿಸುಂಕವು ಶೇ 10ರಿಂದ ಶೇ. 15ರಷ್ಟಕ್ಕೆ ಇಳಿಕೆಯಾಗಬಹುದು ಎಂದು ತಮಗೆ ವೈಯಕ್ತಿಕವಾಗಿ ವಿಶ್ವಾಸ ಇದೆ ಎಂದಿದ್ದಾರೆ.
ಇದನ್ನೂ ಓದಿ: ಟ್ರಂಪ್ ಒತ್ತಡದ ಮಧ್ಯೆ ಶೇ. 0.25 ಬಡ್ಡಿ ಇಳಿಸಿದ ಫೆಡರಲ್ ರಿಸರ್ವ್; ಭಾರತದ ಷೇರುಪೇಟೆಗೆ ಸಿಗುತ್ತಾ ಜಿಗಿತ?
‘ತೆರೆಮರೆಯಲ್ಲಿ ಎರಡೂ ದೇಶಗಳ ಸರ್ಕಾರಗಳ ಮಧ್ಯೆ ಸಾಕಷ್ಟು ಮಾತುಕತೆಗಳು ನಡೆಯುತ್ತಿವೆ’ ಎಂದು ವಿ. ಅನಂತನಾಗೇಶ್ವರನ್ ಅವರು ತಮ್ಮ ವಿಶ್ವಾಸಕ್ಕೆ ಪೂರಕವಾದ ಹಿನ್ನೆಲೆ ಮತ್ತು ವಿದ್ಯಮಾನಗಳನ್ನು ತೆರೆದಿಟ್ಟಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಅಮೆರಿಕದ ವ್ಯಾಪಾರ ಪ್ರತಿನಿಧಿ ಬ್ರೆಂಡಾನ್ ಲಿಂಚ್ ಹಾಗೂ ಭಾರತದ ವ್ಯಾಪಾರ ಸಂಧಾನಕಾರ ರಾಜೇಶ್ ಅಗರ್ವಾಲ್ ಇಬ್ಬರೂ ವ್ಯಕ್ತಿಗತವಾಗಿ ಭೇಟಿಯಾಗಿ ಮಾತನಾಡಿದ್ದರು. ಟ್ಯಾರಿಫ್ ಕ್ರಮ ಬಂದ ಬಳಿಕ ಅವರಿಬ್ಬರು ನೇರವಾಗಿ ಸಂಧಿಸಿದ್ದು ಇದೇ ಮೊದಲು ಎನ್ನಲಾಗಿದೆ. ಈ ಭೇಟಿ ಬಳಿಕ ಟ್ಯಾರಿಫ್ ಕ್ರಮ ನಿಲ್ಲುವ ಕೆಲ ಸೂಚನೆ ಸಿಕ್ಕಿರುವ ಸಾಧ್ಯತೆ ಇದೆ.
ಅಮೆರಿಕದ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳದ ಕಾರಣಕ್ಕೆ ಭಾರತದ ಮೇಲೆ ಮೊದಲಿಗೆ ಅದು ಶೇ 25ರಷ್ಟು ಪ್ರತಿಸುಂಕ ವಿಧಿಸಿತು. ನಂತರ, ರಷ್ಯನ್ ತೈಲ ಖರೀದಿಸಲಾಗುತ್ತಿದೆ ಎನ್ನುವ ಕಾರಣಕ್ಕೆ ದಂಡ ರೂಪದಲ್ಲಿ ಹೆಚ್ಚುವರಿಯಾಗಿ ಶೇ. 25 ಸುಂಕ ಹಾಕಿತು. ಆಗಸ್ಟ್ 27ರಿಂದ ಭಾರತದ ಸರಕುಗಳ ಮೇಲೆ ಅಮೆರಿಕ ಶೇ. 50ರಷ್ಟು ಸುಂಕ ವಸೂಲಿ ಮಾಡುತ್ತಿದೆ.
ಇದನ್ನೂ ಓದಿ: ಇಥನಾಲ್ ತಯಾರಿಕೆಗೆ ನಮ್ಮ ಜೋಳ ಬಳಸಿ: ಭಾರತಕ್ಕೆ ಬೇಡಿಕೆ ಇಟ್ಟ ಅಮೆರಿಕ
ಭಾರತಕ್ಕೆ ಅಮೆರಿಕವೇ ಅತಿದೊಡ್ಡ ರಫ್ತು ಮಾರುಕಟ್ಟೆ ಎನಿಸಿದೆ. ಅಮೆರಿಕಕ್ಕೆ ಭಾರತದಿಂದ ರಫ್ತಾಗುವ ಸರಕುಗಳಲ್ಲಿ ಶೇ. 55ರಷ್ಟವು ಶೇ. 50ರ ಸುಂಕಕ್ಕೆ ಬಲಿಯಾಗುತ್ತಿವೆ. ಜವಳಿ, ರಾಸಾಯನಿಕ, ಒಡವೆ, ಯಂತ್ರೋಪಕರಣ ಇತ್ಯಾದಿ ವಸ್ತುಗಳು ಹಾಗೂ ಉದ್ದಿಮೆಗಳಿಗೆ ಹಿನ್ನಡೆಯಾಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಭಾರತದಿಂದ ಅಮೆರಿಕಕ್ಕೆ ರಫ್ತಾಗಿದ್ದು 6.87 ಬಿಲಿಯನ್ ಡಾಲರ್ ಮೊತ್ತದ ಸರಕುಗಳು ಮಾತ್ರ. ಇದು ಕಳೆದ 10 ತಿಂಗಳಲ್ಲೇ ಆ ದೇಶಕ್ಕೆ ಭಾರತದಿಂದ ಆದ ಅತ್ಯಂತ ಕಡಿಮೆ ರಫ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




