ಟ್ರಂಪ್ ಒತ್ತಡದ ಮಧ್ಯೆ ಶೇ. 0.25 ಬಡ್ಡಿ ಇಳಿಸಿದ ಫೆಡರಲ್ ರಿಸರ್ವ್; ಭಾರತದ ಷೇರುಪೇಟೆಗೆ ಸಿಗುತ್ತಾ ಜಿಗಿತ?
US Fed Rate cut by 25 basis points: ಅಮೆರಿಕದ ಸೆಂಟ್ರಲ್ ಬ್ಯಾಂಕ್ ಎನಿಸಿರುವ ಫೆಡರಲ್ ರಿಸರ್ವ್ ಈ ವರ್ಷ ಮೊದಲ ಬಾರಿಗೆ ಬಡ್ಡಿದರ ಕಡಿತಗೊಳಿಸಿದೆ. ಜಿರೋಮ್ ಪೋವೆಲ್ ಅಧ್ಯಕ್ಷತೆಯಲ್ಲಿ ನಡೆದ ಎಫ್ಒಎಂಸಿ ಸಭೆಯಲ್ಲಿ 25 ಮೂಲಾಂಕಗಳಷ್ಟು ಬಡ್ಡಿ ಇಳಿಸಲು ನಿರ್ಧರಿಸಲಾಗಿದೆ. ಶೇ. 4ರಿಂದ 4.25ರ ಶ್ರೇಣಿಗೆ ಬಡ್ಡಿ ಇಳಿಸಲಾಗಿದೆ. ಭಾರತದ ಷೇರು ಮಾರುಕಟ್ಟೆ ಇವತ್ತು ಹಸಿರು ಬಣ್ಣಕ್ಕೆ ತಿರುಗಿದೆ.

ನವದೆಹಲಿ, ಸೆಪ್ಟೆಂಬರ್ 18: ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರವನ್ನು 25 ಮೂಲಾಂಕಗಳಷ್ಟು ಕಡಿತಗೊಳಿಸಿದೆ. ಕನಿಷ್ಠ 50 ಮೂಲಾಂಕಗಳಷ್ಟಾದರೂ ಬಡ್ಡಿ ಇಳಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಕುತ್ತಿದ್ದ ಒತ್ತಡಕ್ಕೆ ಫೆಡರಲ್ ರಿಸರ್ವ್ (US Fed Reserve) ಮಣಿದಿಲ್ಲ. 25 ಮೂಲಾಂಕಗಳಷ್ಟು ಮಾತ್ರ ಬಡ್ಡಿ ಇಳಿಸಬಹುದು ಎನ್ನುವ ನಿರೀಕ್ಷೆ ಇತ್ತು. ಅದರಂತೆ ನಿರ್ಧಾರ ಪ್ರಕಟವಾಗಿದೆ.ಲ ಇದರೊಂದಿಗೆ ಶೇ. 4.25ರಿಂದ ಶೇ. 4.50ರ ಶ್ರೇಣಿಯಲ್ಲಿದ್ದ ಬಡ್ಡಿದರವು ಶೇ. 4ರಿಂದ ಶೇ. 4.25 ಶ್ರೇಣಿಗೆ ಇಳಿದಿದೆ.
ಜಿರೋಮ್ ಪೋವೆಲ್ ಛೇರ್ಮನ್ ಆಗಿರುವ ಫೆಡರಲ್ ರಿಸರ್ವ್ ಈ ವರ್ಷ ಇನ್ನೂ ಎರಡು ಬಾರಿ ದರ ಕಡಿತಗೊಳಿಸಬಹುದು. ಮುಂದಿನ ವರ್ಷ (2026) ಒಮ್ಮೆ ದರ ಕಡಿತಗೊಳಿಸುವ ಸಾಧ್ಯತೆ ಇದೆ. ಜಿರೋಮ್ ಪೋವೆಲ್ ನಿನ್ನೆಯ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಸ್ವಲ್ಪ ಸುಳಿವು ನೀಡಿದ್ದಾರೆ. ಪ್ರಸಕ್ತ ಮಾಡಿರುವ ಬಡ್ಡಿ ಕಡಿತದ ಪರಿಣಾಮ ಏನು ಎಂಬುದನ್ನು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಬಹುದು.
ಇದನ್ನೂ ಓದಿ: ಎಫ್ ಅಂಡ್ ಒ ಟ್ರೇಡಿಂಗ್ ಎಂದರೇನು? ಅದನ್ನು ಆಡುವುದು ಹೇಗೆ? ಇಲ್ಲಿದೆ ಸರಳ ವಿವರಣೆ
ಬಡ್ಡಿದರ ಕಡಿತದಿಂದ ಭಾರತದ ಮೇಲೆ ಏನು ಪರಿಣಾಮ?
ಅಮೆರಿಕದ ಬಡ್ಡಿದರ ಕಡಿತದಿಂದ ಅಲ್ಲಿಯ ಡಾಲರ್ ಕರೆನ್ಸಿ ತುಸು ದುರ್ಬಲಗೊಳ್ಳಬಹುದು. ಪರಿಣಾಮವಾಗಿ ರುಪಾಯಿಯ ಬಲ ಹೆಚ್ಚಬಹುದು. ಡಾಲರ್ ದುರ್ಬಲಗೊಂಡರೆ ಅಮೆರಿಕ ಸರ್ಕಾರದ ಬಾಂಡ್ಗಳ ಮೌಲ್ಯ ಕಡಿಮೆ ಆಗಬಹುದು. ಆಗ ಬಾಂಡ್ಗಳಲ್ಲಿದ್ದ ಕೆಲ ಹೂಡಿಕೆಗಳು ಹೊರಬಂದು ಷೇರುಮಾರುಕಟ್ಟೆ ಇತ್ಯಾದಿಗೆ ಸಂದಾಯವಾಗಬಹುದು. ಅಂಥ ಹೂಡಿಕೆಗಳು ಅಮೆರಿಕದ ಷೇರು ಮಾರುಕಟ್ಟೆಯೋ, ಚಿನ್ನವೋ ಅಥವಾ ಭಾರತದಂತಹ ಉದಯೋನ್ಮುಖ ಮಾರುಕಟ್ಟೆಗಳ ಕಡೆಗೋ ಹರಿದುಬರಬಹುದು.
ತಜ್ಞರ ಪ್ರಕಾರ, ಫೆಡರಲ್ ರಿಸರ್ವ್ ಸತತವಾಗಿ ಬಡ್ಡಿದರ ಇಳಿಕೆಯಾದರೆ ಭಾರತದ ಮಾರುಕಟ್ಟೆಗಳ ಕಡೆ ವಿದೇಶೀ ಹೂಡಿಕೆಗಳು ಬರುವ ಸಾಧ್ಯತೆ ದಟ್ಟವಾಗುತ್ತದೆ.
ಆದರೆ, ಅಮೆರಿಕದ ಬಡ್ಡಿದರದಲ್ಲಿ ಆಗುವ ಬದಲಾವಣೆಯು ಭಾರತೀಯ ಮಾರುಕಟ್ಟೆ ಮೇಲೆ ಆಗುವ ಪರಿಣಾಮ ತಾತ್ಕಾಲಿಕ ಮಾತ್ರ. ಒಟ್ಟಾರೆಯಾಗಿ ಹೆಚ್ಚಿನ ವ್ಯತ್ಯಯ ಆಗದು ಎಂಬುದು ಐತಿಹಾಸಿಕವಾಗಿ ಕಂಡು ಬಂದಿರುವ ಸಂಗತಿ.
ಇದನ್ನೂ ಓದಿ: ಮ್ಯುಚುವಲ್ ಫಂಡ್ ಉದ್ಯಮದಲ್ಲಿ 74 ಲಕ್ಷ ಕೋಟಿ ರೂ; 8 ಕೋಟಿ ಎಸ್ಐಪಿ ಅಕೌಂಟ್; ಗೋಲ್ಡ್ ಇಟಿಎಫ್ಗಳಿಗೆ ಬೇಡಿಕೆ
ಇವತ್ತು ಭಾರತದ ಷೇರು ಮಾರುಕಟ್ಟೆ ಗರಿಗೆದರಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿಯ ವಿವಿಧ ಸೂಚ್ಯಂಕಗಳು ಪಾಸಿಟಿವ್ ಆಗಿವೆ. ಆದರೆ, ಈ ಓಟ ಹೆಚ್ಚು ದಿನ ಇರುವುದಿಲ್ಲ. ಕಳೆದ ಒಂದು ವರ್ಷದಿಂದಲೂ ಭಾರತದ ಷೇರು ಮಾರುಕಟ್ಟೆ ತನ್ನದೇ ಭಾರಕ್ಕೆ ಸಿಲುಕಿ ಒದ್ದಾಡುತ್ತಿದೆ. ಆದರೆ, ಒಟ್ಟಾರೆ ಅದರ ಆರ್ಥಿಕ ಮತ್ತು ಹಣಕಾಸು ಸ್ವರೂಪ ಆಶಾದಾಯಕವಾಗಿರುವುದರಿಂದ ಮಾರುಕಟ್ಟೆ ಯಾವಾಗ ಬೇಕಾದರೂ ಮೇಲ್ಮುಖವಾಗಿ ಜಿಗಿಯಬಹುದು. ಅಮೆರಿಕದ ಫೆಡರಲ್ ರಿಸರ್ವ್ನ ದರಕಡಿತದ ಪರಿಣಾಮ ಬಹಳ ಸೀಮಿತವಾಗಿ ಮಾತ್ರ ಆಗುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




