ಪತಂಜಲಿ ಫುಡ್ಸ್ ಮಾರುಕಟ್ಟೆ ಮೌಲ್ಯ 200 ದಿನದಲ್ಲಿ 9,000 ಕೋಟಿ ರೂ ಏರಿಕೆ
Patanjali Foods share value: ಕಳೆದ 200 ದಿನಗಳಲ್ಲಿ ಪತಂಜಲಿ ಫುಡ್ಸ್ ಕಂಪನಿಯ ಷೇರುಬೆಲೆ ಸರಿಸುಮಾರು 16% ರಷ್ಟು ಏರಿಕೆ ಕಂಡಿದೆ. ಈ ಅವಧಿಯಲ್ಲಿ ಕಂಪನಿಯ ಮಾರುಕಟ್ಟೆ ಬಂಡವಾಳ ಅಥವಾ ವ್ಯಾಲ್ಯುಯೇಶನ್ ₹9,000 ಕೋಟಿಗಳಷ್ಟು ಹೆಚ್ಚಿದೆ. ಇತ್ತೀಚೆಗೆ, ಕಂಪನಿಯು ತನ್ನ ಹೂಡಿಕೆದಾರರಿಗೆ ಬೋನಸ್ ಷೇರುಗಳನ್ನು ಸಹ ನೀಡಿದೆ. ಪತಂಜಲಿ ಷೇರುಗಳು ಪ್ರಸ್ತುತ ಯಾವ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ ಎನ್ನುವ ವಿವರ ಇಲ್ಲಿದೆ...

ನವದೆಹಲಿ, ಸೆಪ್ಟೆಂಬರ್ 18: ಬಾಬಾ ರಾಮದೇವ್ ಅವರ ಪತಂಜಲಿ ಫುಡ್ಸ್ (Patanjali Foods) ಕಂಪನಿಯ ಮ್ಯಾಜಿಕ್ ಷೇರು ಮಾರುಕಟ್ಟೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಕೇವಲ 200 ದಿನಗಳಲ್ಲಿ ಪತಂಜಲಿ ಫುಡ್ಸ್ ಷೇರು ಮೌಲ್ಯ ಸುಮಾರು 16% ರಷ್ಟು ಏರಿಕೆಯಾಗಿದೆ. ಇದರೊಂದಿಗೆ ಕಂಪನಿಯ ಮೌಲ್ಯ ಅಥವಾ ವ್ಯಾಲ್ಯುಯೇಶನ್ ₹9,000 ಕೋಟಿಗಿಂತಲೂ ಹೆಚ್ಚಿದೆ. ಕಂಪನಿಯ ಆದಾಯ ಹೆಚ್ಚಳವೇ ಷೇರುಬೆಲೆ ಏರಲು ಮತ್ತು ತತ್ಪರಿಣಾಮವಾಗಿ ಮಾರುಕಟ್ಟೆ ಬಂಡವಾಳ ಏರಲು ಕಾರಣವಾಗಿದೆ. ಸದ್ಯ, ಪತಂಜಲಿ ಫುಡ್ಸ್ ಷೇರುಬೆಲೆ 601-602 ರೂ ಶ್ರೇಣಿಯಲ್ಲಿದೆ. ಇತ್ತೀಚೆಗಷ್ಟೇ ಈ ಸಂಸ್ಥೆಯು ತನ್ನ ಷೇರುದಅರರಿಗೆ 2:1 ಪ್ರಮಾಣದಲ್ಲಿ ಬೋನಸ್ ಷೇರುಗಳನ್ನು ವಿತರಿಸಿದೆ. ಇವೆಲ್ಲ ಅಂಶಗಳು ಪತಂಜಲಿ ಫುಡ್ಸ್ನ ಗರಿಮೆಯನ್ನು ಹೆಚ್ಚಿಸಲು ಸಹಕಾರಿಯಾಗಿವೆ.
ಪತಂಜಲಿ ಫುಡ್ಸ್ ಷೇರುಬೆಲೆ ಕನಿಷ್ಠ ಮಟ್ಟದಿಂದ ಏರಿಕೆ ಆಗಿದ್ದು ಎಷ್ಟು?
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಪತಂಜಲಿ ಫುಡ್ಸ್ ಷೇರುಗಳನ್ನು ಗಮನಿಸಿದರೆ, ಇತ್ತೀಚಿನ ತಿಂಗಳುಗಳಿಂದ ಮೌಲ್ಯ ಗಮನಾರ್ಹವಾಗಿ ಹೆಚ್ಚಿರುವುದು ಕಂಡುಬರುತ್ತದೆ. ಕಳೆದ 52 ವಾರಗಳ ಕನಿಷ್ಠ ಮಟ್ಟಕ್ಕಿಂತ ಬಹಳ ಹೆಚ್ಚಳ ಕಂಡಿದೆ. 52 ವಾರಗಳ ಕನಿಷ್ಠ ಬೆಲೆ 522.81 ರೂ ಇತ್ತು. ಅದು ಫೆಬ್ರುವರಿ 28ರಂದು ಇದ್ದ ಬೆಲೆ. ಅದಾದ ಬಳಿಕ ಷೇರುಬೆಲೆ ಬಹುತೇಕ ನಿರಂತರವಾಗಿ ಏರುತ್ತಾ ಬಂದಿದೆ. ಕನಿಷ್ಠ ಮಟ್ಟದಿಂದ ಸುಮಾರು ಶೇ. 16ರಷ್ಟು ಚೇತರಿಸಿಕೊಂಡಿದೆ. 522 ರೂ ಇದ್ದ ಷೇರುಬೆಲೆ ಬುಧವಾರ ಅಂತ್ಯಕ್ಕೆ 602 ರೂಗೆ ಏರಿತ್ತು. ಸುಮಾರು 80 ರೂಗಳಷ್ಟು ಹೆಚ್ಚಳ ಕಂಡಿದೆ. ಇವತ್ತು ಗುರುವಾರ ಒಂದು ರೂನಷ್ಟು ಬೆಲೆ ಕಡಿಮೆ ಆಗಿದ್ದರೂ ಮುಂದಿನ ದಿನಗಳಲ್ಲಿ ಅದರ ಷೇರುಗಳಿಗೆ ಬೇಡಿಕೆ ಮತ್ತಷ್ಟು ಕುದುರುವ ನಿರೀಕ್ಷೆ ಇದೆ.
9,000 ಕೋಟಿ ರೂಗೂ ಹೆಚ್ಚಾದ ವ್ಯಾಲ್ಯುಯೇಶನ್
ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ನೇತೃತ್ವದ ಪತಂಜಲಿ ಫುಡ್ಸ್ ಸಂಸ್ಥೆಯ ವ್ಯಾಲ್ಯುಯೇಶನ್ ಕಳೆದ 200 ದಿನದಲ್ಲಿ 9,000 ಕೋಟಿ ರೂನಷ್ಟು ಹೆಚ್ಚಾಗಿದೆ. 52 ವಾರಗಳ ಕನಿಷ್ಠ ಬೆಲೆ ಮಟ್ಟ ಕಂಡ ಫೆಬ್ರುವರಿ 28ರಂದು ಸಂಸ್ಥೆಯ ವ್ಯಾಲ್ಯುಯೇಶನ್ 56,872.74 ಕೋಟಿ ರೂ ಇತ್ತು. ಸೆಪ್ಟೆಂಬರ್ 18ರಂದು ಷೇರುಬೆಲೆ 606 ರೂಗಳ ಗರಿಷ್ಠ ಮಟ್ಟಕ್ಕೆ ಹೋದಾಗ ಅದರ ವ್ಯಾಲ್ಯುಯೇಶನ್ 65,884.31 ಕೋಟಿ ರೂ ಮುಟ್ಟಿತ್ತು. ಫೆಬ್ರುವರಿ 28ರಿಂದ ಈಚೆ ಅದರ ಮಾರುಕಟ್ಟೆ ಬಂಡವಾಳವು 9,011 ಕೋಟಿ ರೂನಷ್ಟು ಏರಿಕೆ ಆಗಿದೆ. ಈ ವರದಿ ಬರೆಯುವ ವೇಳೆ ಪತಂಜಲಿ ಫುಡ್ಸ್ನ ಮಾರುಕಟ್ಟೆ ಸಂಪತ್ತು 65,450 ಕೋಟಿ ರೂ ಆಸುಪಾಸಿನಲ್ಲಿತ್ತು.
ಇದನ್ನೂ ಓದಿ: ಸೆ. 11ರಂದು ಪತಂಜಲಿ ಫುಡ್ಸ್ ಷೇರುಬೆಲೆ ಶೇ. 63ರಷ್ಟು ಕುಸಿಯಲು ಏನು ಕಾರಣ? ಬೋನಸ್ ಷೇರು ಪರಿಣಾಮ
ಸ್ಥಿರ ಮಟ್ಟದಲ್ಲಿ ಪತಂಜಲಿ ಷೇರುಗಳು
ಸೆಪ್ಟೆಂಬರ್ 18, ಇಂದು ಗುರುವಾರ ಪತಂಜಲಿ ಷೇರುಗಳು ಸ್ಥಿರವಾಗಿ ವಹಿವಾಟು ನಡೆಸುತ್ತಿದ್ದವು. ಬಿಎಸ್‌ಇ ದತ್ತಾಂಶದ ಪ್ರಕಾರ, ಕಂಪನಿಯ ಷೇರುಗಳು ಬೆಳಿಗ್ಗೆ 11:33 ಕ್ಕೆ 0.10% ಕುಸಿತದೊಂದಿಗೆ ₹601.80 ಕ್ಕೆ ವಹಿವಾಟು ನಡೆಸುತ್ತಿದ್ದವು. ಆ ದಿನ ಬೆಳಿಗ್ಗೆ ಅದು ₹602.95 ಕ್ಕೆ ಪ್ರಾರಂಭವಾಯಿತು. ದಿನದ ಅವಧಿಯಲ್ಲಿ ಗರಿಷ್ಠ ₹605.65 ಕ್ಕೆ ತಲುಪಿತು. ಮಧ್ಯಾಹ್ನ 1 ಗಂಟೆಯಲ್ಲಿ ಇದರ ಬೆಲೆ 601.20 ರೂ ಹೊಂದಿತ್ತು. ಮುಂದಿನ ದಿನಗಳಲ್ಲಿ ಇದರ ಬೆಲೆ ಹೆಚ್ಚಾಗುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




