ನವದೆಹಲಿ: ರಾಜ್ಯಸಭಾ ಸದಸ್ಯರಾಗಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು(Veerendra Heggade) ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿ ಗೋಷ್ಠಿ ನಡೆಸಿದ್ದಾರೆ. ಸಂಸತ್ ದೇಶದ ಆಗುಹೋಗುಗಳನ್ನು ಚರ್ಚಿಸುವ ರಾಜ್ಯಸಭೆಯ ಗೌರವ ಸದಸ್ಯನಾಗಿ ಹೋಗುವ ಅವಕಾಶ ಸಿಕ್ಕಿದೆ. ಸಂಸತ್ ಭವನವನ್ನು ನೋಡಿ ತುಂಬಾ ಗೌರವ ಬಂದಿದೆ. ಭಕ್ತರು, ಅಭಿಮಾನಿಗಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ, ಸಂತೋಷಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ನಾವು ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಗ್ರಾಮೀಣಾಭಿವೃದ್ಧಿ, ರೂಟ್ ಸೆಟ್ ಸಂಸ್ಥೆ ಸ್ಥಾಪನೆ ಮಾಡಿದ್ದೇವೆ. ಗೌರವ ಪ್ರಶಸ್ತಿಗಳಿಗೆ ಮೊದಲು ಅರ್ಜಿ ಹಾಕಬೇಕಿತ್ತು, ದುಂಬಾಲು ಬೀಳಬೇಕಿತ್ತು. ಈಗ ಅಂತಸ್ತು, ಜಾತಿ ಇಲ್ಲದೆ ಆಯ್ಕೆ ಮಾಡಲಾಗುತ್ತಿದೆ. ನಮಗೆ ಸಂತೋಷವಾಗುತ್ತಿದೆ. ಯಾವ ಮುನ್ಸೂಚನೆ ಇಲ್ಲದೆ ನಾಮನಿರ್ದೇಶನ ಮಾಡಿದ್ದಾರೆ. ನಾನು ಯಾವುದೇ ಪಕ್ಷಕ್ಕೂ ಹೊಂದಿಕೊಳ್ಳುವುದಿಲ್ಲ. ನಾನು ಪ್ರತ್ಯೇಕವಾಗಿಯೇ ಗುರುತಿಸಿಕೊಳ್ಳುತ್ತೇನೆ. ಯಾವುದೇ ಫಲಾಪೇಕ್ಷೆ ನಮಗೆ ಇಲ್ಲ. ಮೊದಲನೆದಾಗಿ ಇಂದು ರಾಜ್ಯಸಭೆಯ ಗಾಳಿ ಹೊಂದಿಕೊಂಡು ಬಂದಿದ್ದೇನೆ. ಮೋದಿಯವ್ರನ್ನು ಭೇಟಿಯಾಗಿ ಪ್ರಸಾದ ಕೊಟ್ಟು ಬಂದಿದ್ದೇನೆ ಎಂದು ಪ್ರಮಾಣವಚನ ಸ್ವೀಕರಿಸಿದ ಬಳಿಕ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಸುದ್ದಿಗೋಷ್ಠಿ ನಡೆಸಿ ತಮ್ಮ ಸಂತಸವನ್ನು ಹೊರ ಹಾಕಿದ್ದಾರೆ.
ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪ್ರಧಾನಿ ಮೋದಿ ಭೇಟಿ ಮಾಡಿದ ಪದ್ಮ ವಿಭೂಷಣ ವೀರೇಂದ್ರ ಹೆಗ್ಗಡೆ
ದೆಹಲಿ: ರಾಜ್ಯಸಭೆ ಸದಸ್ಯರಾಗಿ(Rajya Sabha Member) ನಾಮನಿರ್ದೇಶನಗೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು (Padma Vibhushan Veerendra Heggade) ರಾಜ್ಯಸಭೆಯಲ್ಲಿಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರ ನಂತರ ನವದೆಹಲಿಯ ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ಯವರನ್ನು ಭೇಟಿ ಮಾಡಿದ್ದಾರೆ. ಪ್ರಧಾನಿ ಮೋದಿಯವರನ್ನು ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ ಭೇಟಿ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಉಪಸ್ಥಿತರಿದ್ದರು.