ನಿವೃತ್ತಿಗೆ ಮೂರೇ ದಿನ ಬಾಕಿ ಇರುವಾಗ ದೆಹಲಿ ಪೊಲೀಸ್ ಆಯುಕ್ತರಾಗಿ ನೇಮಕಗೊಂಡ ರಾಕೇಶ್ ಅಸ್ತಾನಾ !

| Updated By: Lakshmi Hegde

Updated on: Jul 28, 2021 | 5:30 PM

Rakesh Asthana: ಅಸ್ತಾನಾ ತಮ್ಮ ಐಪಿಎಸ್​ ವೃತ್ತಿಯಲ್ಲಿ ಹಲವು ಹೈ ಪ್ರೊಫೈಲ್​ ಪ್ರಕರಣಗಳ ತನಿಖೆ ನಡೆಸಿದ ಅನುಭವ ಹೊಂದಿದ್ದಾರೆ. ನರೇಂದ್ರ ಮೋದಿಯವರು ಗುಜರಾತ್​ ಮುಖ್ಯಮಂತ್ರಿಯಾಗಿದ್ದಾಗ ಅಸ್ತಾನಾ, ವಡೋದರಾದ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದರು.

ನಿವೃತ್ತಿಗೆ ಮೂರೇ ದಿನ ಬಾಕಿ ಇರುವಾಗ ದೆಹಲಿ ಪೊಲೀಸ್ ಆಯುಕ್ತರಾಗಿ ನೇಮಕಗೊಂಡ ರಾಕೇಶ್ ಅಸ್ತಾನಾ !
ರಾಕೇಶ್ ಅಸ್ತಾನಾ
Follow us on

ದೆಹಲಿ: ಗುಜರಾತ್​ನ ಹಿರಿಯ ಐಪಿಎಸ್​ ಅಧಿಕಾರಿ (IPS Officer), ಸಿಬಿಐ ಮಾಜಿ ನಿರ್ದೇಶಕ ರಾಕೇಶ್ ಅಸ್ತಾನಾ ಇಂದು ದೆಹಲಿ ಪೊಲೀಸ್​ ಆಯುಕ್ತ (Delhi Police Commissioner)ರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಜೈಲ್ ಸಿಂಗ್​ ಮಾರ್ಗದಲ್ಲಿರುವ ದೆಹಲಿ ಪೊಲೀಸ್​ ಪ್ರಧಾನಕಚೇರಿಯಲ್ಲಿ ಅವರಿಗೆ ಪೊಲೀಸ್​ ಸಿಬ್ಬಂದಿ ಸಕಲ ಗೌರವ ಸಲ್ಲಿಸಿ, ಸ್ವಾಗತಿಸಿದರು. ಬಳಿಕ ಮಾತನಾಡಿದ ರಾಕೇಶ್ ಅಸ್ತಾನಾ(Rakesh Asthana), ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಬಗ್ಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಈ ಮೂಲಕ ಜನರ ಸುರಕ್ಷತೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇಷ್ಟು ದಿನ ಗಡಿ ಭದ್ರತಾ ಪಡೆ (BSF)ಯ ಮಹಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಕೇಶ್ ಅಸ್ತಾನಾ ಇನ್ನು ಮೂರು ದಿನಗಳಲ್ಲಿ ನಿವೃತ್ತರಾಗಲಿದ್ದರು. ಆದರೆ ಅಚ್ಚರಿ ನಡೆಯೆಂಬಂತೆ ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಅವರ ಅವಧಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಿ, ದೆಹಲಿ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿತ್ತು. ಅದರಂತೆ ಇಂದು ಅಧಿಕಾರ ಸ್ವೀಕರಿಸಿದ್ದಾರೆ.

60 ವರ್ಷದ ರಾಕೇಶ್​ ಆಸ್ತಾನ 1984ನೇ ಬ್ಯಾಚ್​ನ, ಗುಜರಾತ್ ಕೇಡರ್​ನ ಐಪಿಎಸ್​ ಅಧಿಕಾರಿ. ಇಷ್ಟುದಿನ ದೆಹಲಿ ಪೊಲೀಸ್ ಮುಖ್ಯಸ್ಥನಾಗಿದ್ದ ಬಾಲಾಜಿ ಶ್ರೀವಾಸ್ತವ್​ ಅವರ ಸ್ಥಾನಕ್ಕೆ ರಾಕೇಶ್​ ಆಸ್ತಾನ ಬಂದಿದ್ದಾರೆ. ಇದೀಗ ಬಿಎಸ್​ಎಫ್​ ಮಹಾನಿರ್ದೇಶಕನ ಸ್ಥಾನವನ್ನು, ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್​ (ITBP) ಮಹಾ ನಿರ್ದೇಶಕ ಎಸ್​.ಎಸ್​. ದೇಸ್ವಾಲ್​ಗೇ ಹೆಚ್ಚುವರಿಯಾಗಿ ನೀಡಲಾಗಿದೆ.

ಅಸ್ತಾನಾ ತಮ್ಮ ಐಪಿಎಸ್​ ವೃತ್ತಿಯಲ್ಲಿ ಹಲವು ಹೈ ಪ್ರೊಫೈಲ್​ ಪ್ರಕರಣಗಳ ತನಿಖೆ ನಡೆಸಿದ ಅನುಭವ ಹೊಂದಿದ್ದಾರೆ. ನರೇಂದ್ರ ಮೋದಿಯವರು ಗುಜರಾತ್​ ಮುಖ್ಯಮಂತ್ರಿಯಾಗಿದ್ದಾಗ ಅಸ್ತಾನಾ, ವಡೋದರಾದ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದರು. 2002ರಲ್ಲಿ ನಡೆದ ಗೋದ್ರಾ ಸಬರಮತಿ ಎಕ್ಸ್​ಪ್ರೆಸ್ ಬೆಂಕಿ ದುರಂತದ ತನಿಖೆಯನ್ನು ಇವರೇ ನಡೆಸಿದ್ದರು. ಈ ದುರಂತದಲ್ಲಿ 59 ಜನರು ಮೃತಪಟ್ಟಿದ್ದರು. 1997ರಲ್ಲಿ ಸಿಬಿಐ ಪೊಲೀಸ್ ಅಧೀಕ್ಷಕನಾಗಿ ನೇಮಕಗೊಂಡಿದ್ದ ಅವರು, ಮೇವು ಹಗರಣದಲ್ಲಿ ಆರೋಪಿಯಾಗಿದ್ದ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್​ರನ್ನು ಬಂಧಿಸಿದ್ದಾರೆ. ವಿಜಯ್​ ಮಲ್ಯಾ ಕೇಸ್​ನಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. 2018ರಲ್ಲಿ ರಾಕೇಶ್ ಅಸ್ತಾನಾ ಮತ್ತು ಅಲೋಕ್​ ವರ್ಮಾ ನಡುವೆ ನಡೆದ ವಿವಾದದ ನಂತರ ಅವರನ್ನು ಸಿಬಿಐನಿಂದ ತೆಗೆದುಹಾಕಲಾಗಿತ್ತು.

ಇದನ್ನೂ ಓದಿ: Chandrayaan 3: 2022ರ ಆಗಸ್ಟ್​ ವೇಳೆಗೆ ಇಸ್ರೋದಿಂದ ಚಂದ್ರಯಾನ-3 ಉಡಾವಣೆ; ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾಹಿತಿ

Rakesh Asthana Oppointed As Delhi Police Commissioner