ಸೋನಿಯಾ ಗಾಂಧಿ-ಮಮತಾ ಬ್ಯಾನರ್ಜಿ ಭೇಟಿ, 45 ನಿಮಿಷ ಚರ್ಚೆ; 2024ರ ಹೊತ್ತಿಗೆ ಪ್ರಧಾನಿ ಮೋದಿ V/S ದೇಶ ಎಂದಾಗುತ್ತದೆ ಎಂದ ದೀದಿ
Sonia Gandhi: ಸೋನಿಯಾ ಗಾಂಧಿಯವರೊಂದಿಗೆ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದ ನಂತರ ಮಾತನಾಡಿದ ಮಮತಾ ಬ್ಯಾನರ್ಜಿ, ನಿಜಕ್ಕೂ ಇದೊಂದು ಅತ್ಯುತ್ತಮವಾದ, ಧನಾತ್ಮಕವಾದ ಭೇಟಿ ಎಂದು ಹೇಳಿದ್ದಾರೆ.
ದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi)ಯವರನ್ನು ಭೇಟಿಯಾಗಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಯ ನಂತರ ಇದು ಇವರಿಬ್ಬರ ಮೊದಲ ಭೇಟಿಯಾಗಿದೆ. ಕಳೆದ ಎರಡು ದಿನಗಳಿಂದಲೂ ದೆಹಲಿ ಪ್ರವಾಸದಲ್ಲಿರುವ ಮಮತಾ ಬ್ಯಾನರ್ಜಿ ಪ್ರತಿಪಕ್ಷಗಳ ನಾಯಕರ ಭೇಟಿಯಲ್ಲಿ ತೊಡಗಿದ್ದಾರೆ. ಹಾಗೇ ಪ್ರಧಾನಿ ನರೇಂದ್ರ ಮೋದಿಯವರನ್ನೂ ಭೇಟಿಯಾಗಿದ್ದಾರೆ. ಇಂದು ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 2024ರ ಲೋಕಸಭಾ ಚುನಾವಣೆ(Lok Sabha Election)ಗಾಗಿ ಪ್ರತಿಪಕ್ಷಗಳನ್ನೆಲ್ಲ ಬಿಜೆಪಿ ವಿರುದ್ಧ ಒಗ್ಗೂಡಿಸುತ್ತಿರುವ ಮಮತಾ ಬ್ಯಾನರ್ಜಿ, ಇದೊಂದು ಮಹತ್ವದ ಭೇಟಿ ಎಂದು ಹೇಳಿಕೊಂಡಿದ್ದಾರೆ.
ಸೋನಿಯಾ ಗಾಂಧಿಯವರೊಂದಿಗೆ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದ ನಂತರ ಮಾತನಾಡಿದ ಮಮತಾ ಬ್ಯಾನರ್ಜಿ, ನಿಜಕ್ಕೂ ಇದೊಂದು ಅತ್ಯುತ್ತಮವಾದ, ಧನಾತ್ಮಕವಾದ ಭೇಟಿ ಎಂದು ಹೇಳಿದ್ದಾರೆ. ಹಾಗೇ, ಬಿಜೆಪಿಯನ್ನು ಸೋಲಿಸಲು ಎಲ್ಲ ಪ್ರತಿಪಕ್ಷಗಳೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ. ಮಮತಾ ಬ್ಯಾನರ್ಜಿ ನಿನ್ನೆ ಕಾಂಗ್ರೆಸ್ ನಾಯಕರಾದ ಕಮಲನಾಥ್ ಮತ್ತು ಆನಂದ ಶರ್ಮಾರನ್ನೂ ಭೇಟಿಯಾಗಿದ್ದರು. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಇಡೀ ದೇಶದಲ್ಲಿ ಆಟ ಶುರುವಾಗಿದೆ. 2024ರ ಲೋಕಸಭೆ ಚುನಾವಣೆ ಹೊತ್ತಿಗೆ ಪ್ರಧಾನಿ ಮೋದಿ ವರ್ಸಸ್ ದೇಶ ಎಂಬಂತೆ ಆಗುತ್ತದೆ. ಈ ಮುಂಗಾರು ಅಧಿವೇಶನ ಮುಗಿಯುತ್ತಿದ್ದಂತೆ ನಾವು ಪ್ರತಿಪಕ್ಷದವರೆಲ್ಲ ಮತ್ತೊಮ್ಮೆ ಒಗ್ಗಟ್ಟಾಗಿ ಕುಳಿತು ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Tata Motors: ಟಾಟಾ ಮೋಟಾರ್ಸ್ನಿಂದ ಪ್ರಯಾಣಿಕರ ವಾಹನಗಳ ಬೆಲೆಯಲ್ಲಿ ಏರಿಕೆ ಘೋಷಣೆ