ಅಸ್ಸಾಂ- ಮಿಜೋರಾಂ ಗಡಿಯಲ್ಲಿ ಕೇಂದ್ರ ಪೊಲೀಸ್ ಪಡೆ ನಿಯೋಜನೆ; ಮಾತುಕತೆ ಮೂಲಕ ಸಂಘರ್ಷಕ್ಕೆ ಅಂತ್ಯ ಹಾಡಲು ಕೇಂದ್ರ ಗೃಹ ಸಚಿವಾಲಯ ಸಲಹೆ

ಅಸ್ಸಾಂ- ಮಿಜೋರಾಂ ಗಡಿಯಲ್ಲಿ ಕೇಂದ್ರ ಪೊಲೀಸ್ ಪಡೆ ನಿಯೋಜನೆ; ಮಾತುಕತೆ ಮೂಲಕ ಸಂಘರ್ಷಕ್ಕೆ ಅಂತ್ಯ ಹಾಡಲು ಕೇಂದ್ರ ಗೃಹ ಸಚಿವಾಲಯ ಸಲಹೆ
ಅಸ್ಸಾಂ- ಮಿಜೋರಾಂ ಗಡಿ ಸಂಘರ್ಷ

Assam- Mizoram Border Dispute: ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳ ಗಡಿಯಲ್ಲಿ ಕೇಂದ್ರ ಪೊಲೀಸ್ ಪಡೆಯನ್ನು ನಿಯೋಜನೆ ಮಾಡಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ಅಸ್ಸಾಂ ಮತ್ತು ಮಿಜೋರಾಂ ಸರ್ಕಾರಗಳು ಕೂಡ ಕೇಂದ್ರ ಪೊಲೀಸ್ ಪಡೆಯ ನಿಯೋಜನೆಗೆ ಒಪ್ಪಿಗೆ ನೀಡಿವೆ.

TV9kannada Web Team

| Edited By: Sushma Chakre

Jul 28, 2021 | 8:03 PM

ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳ ಗಡಿಯಲ್ಲಿ ಹಲವು ದಿನಗಳಿಂದ ಸಂಘರ್ಷಗಳು ನಡೆಯುತ್ತಿವೆ. ಅಸ್ಸಾಂ ತನ್ನ ಜೊತೆ ಗಡಿಯನ್ನು ಹಂಚಿಕೊಂಡಿರುವ ರಾಜ್ಯಗಳಾದ ಮಿಜೋರಾ, ನಾಗಾಲ್ಯಾಂಡ್, ಮೇಘಾಲಯದ ಜೊತೆಗೆ ತಕರಾರನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಅಸ್ಸಾಂ ಮತ್ತು ಮಿಜೋರಾಂ ನಡುವೆ ನಡೆದ ಸಂಘರ್ಷದಲ್ಲಿ ಐವರು ಪೊಲೀಸರು ಸಾವನ್ನಪ್ಪಿದ್ದಾರೆ, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಎರಡೂ ಈಶಾನ್ಯ ರಾಜ್ಯಗಳ ನಡುವಿನ ಪ್ರಕ್ಷುಬ್ಧ ಪರಿಸ್ಥಿತಿಯನ್ನು ನಿಯಂತ್ರಿಸಲು ಸಲುವಾಗಿ ಕೇಂದ್ರ ಸರ್ಕಾರ ಪೊಲೀಸ್ ಪಡೆಯನ್ನು ನಿಯೋಜಿಸಲು ನಿರ್ಧರಿಸಿದೆ.

ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳ ಗಡಿಯಲ್ಲಿ ಕೇಂದ್ರ ಪೊಲೀಸ್ ಪಡೆಯನ್ನು ನಿಯೋಜನೆ ಮಾಡಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ಅಸ್ಸಾಂ ಮತ್ತು ಮಿಜೋರಾಂ ಸರ್ಕಾರಗಳು ಕೂಡ ಕೇಂದ್ರ ಪೊಲೀಸ್ ಪಡೆಯ ನಿಯೋಜನೆಗೆ ಒಪ್ಪಿಗೆ ನೀಡಿವೆ. ಹೀಗಾಗಿ, ಈ ಎರಡು ರಾಜ್ಯಗಳ ಗಡಿಯಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(CAPF) ನಿಯೋಜನೆಯಾಗಲಿದೆ. ರಾಷ್ಟ್ರೀಯ ಹೆದ್ದಾರಿ 306ರ ಸುತ್ತಮುತ್ತ ಕೇಂದ್ರ ಪೊಲೀಸ್ ಪಡೆ ನಿಯೋಜನೆಯಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಸ್ಸಾಂ ಮತ್ತು ಮಿಜೋರಾಂ ಗಡಿಗಳಲ್ಲಿ ತಮ್ಮ ತಮ್ಮ ಪೊಲೀಸ್ ಪಡೆಯನ್ನು ವಾಪಾಸ್ ಪಡೆಯಲು ಆಯಾ ಸರ್ಕಾರಗಳು ಒಪ್ಪಿಗೆ ನೀಡಿವೆ. ಈ ಹಿನ್ನೆಲೆಯಲ್ಲಿ ಆ ಸ್ಥಳದಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಕಾರ್ಯ ನಿರ್ವಹಿಸಲಿದೆ.

ಸೋಮವಾರ ಅಸ್ಸಾಂ- ಮಿಜೋರಾಂ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಐವರು ಪೊಲೀಸರು ಮೃತಪಟ್ಟಿದ್ದರು. ಕಚಾರ್​ನಲ್ಲಿ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದರು. ಇದರಿಂದ ಮಿಜೋರಾಂ ಸರ್ಕಾರ ತನ್ನ ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಿತ್ತು. ಹಾಗೇ, ಅಸ್ಸಾಂ ರಾಜ್ಯವೂ ಗಡಿಯಲ್ಲಿ 4 ಸಾವಿರ ಕಮಾಂಡೋಗಳನ್ನು ನಿಯೋಜನೆ ಮಾಡಿತ್ತು. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರದ ಎರಡೂ ರಾಜ್ಯಗಳ ಗಡಿಯಲ್ಲಿ ಸಿಆರ್​ಪಿಎಫ್ ಸಿಬ್ಬಂದಿಯನ್ನು ನಿಯೋಜನೆ ಮಾಡಿತ್ತು.

ಇದಾದ ಬಳಿಕ, ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜೊತೆ ಇಂದು 2 ಗಂಟೆಗಳಿಗೂ ಹೆಚ್ಚು ಕಾಲ ಸಭೆ ನಡೆಸಿರುವ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಬಲ್ಲಾ, ಉಭಯ ರಾಜ್ಯಗಳ ಗಡಿಯಲ್ಲಿ ಆಯಾ ರಾಜ್ಯಗಳ ಪೊಲೀಸ್ ಪಡೆಯ ಬದಲಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯನ್ನು ನಿಯೋಜನೆ ಮಾಡುವ ಬಗ್ಗೆ ಚರ್ಚೆ ನಡೆಸಿದರು. ಇದಕ್ಕೆ ಎರಡೂ ರಾಜ್ಯಗಳು ಒಪ್ಪಿಗೆ ಸೂಚಿಸಿವೆ. ಈ ಪಡೆಯ ನೇತೃತ್ವವನ್ನು ಹಿರಿಯ ಅಧಿಕಾರಿ ವಹಿಸಿಕೊಳ್ಳಲಿದ್ದಾರೆ.

ಅಸ್ಸಾಂನ ಕಚಾರ್‌, ಹೈಲಾಕಂಡಿ ಹಾಗೂ ಕರೀಮ್‌ ಗಂಜ್‌ ಜಿಲ್ಲೆಗಳು ಮತ್ತು ಮಿಜೋರಾಂನ ಕೊಲಾಸಿಬ್‌, ಮಮಿತ್‌ ಹಾಗೂ ಐಜ್ವಾಲ್‌ ಜಿಲ್ಲೆಗಳಲ್ಲಿ ಎರಡೂ ರಾಜ್ಯಗಳು 164.6 ಕಿ.ಮೀ. ಗಡಿ ಹಂಚಿಕೊಂಡಿವೆ. ಎರಡೂ ರಾಜ್ಯಗಳು ದಶಕಗಳಿಂದಲೂ ಪರಸ್ಪರರ ವಿರುದ್ಧ ಅತಿಕ್ರಮಣದ ಆರೋಪ ಮಾಡುತ್ತಿವೆ. ಇದು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಜುಲೈ 10ರಂದು ಅಸ್ಸಾಂ ತಂಡವೊಂದು ಗಡಿ ಪ್ರದೇಶಕ್ಕೆ ಭೇಟಿ ನೀಡಿದಾಗ ಮಿಜೋರಾಂ ದುಷ್ಕರ್ಮಿಗಳು ಗ್ರೆನೇಡ್‌ ಎಸೆದ ಬಳಿಕ ಗಡಿ ವಿವಾದ ತೀವ್ರಗೊಂಡಿದೆ.

ಇದನ್ನೂ ಓದಿ: ‘ಮಿಜೋರಾಂ ಪೊಲೀಸರು ಸಮಸ್ಯೆ ಉಲ್ಬಣವಾಗುವಂತೆ ಮಾಡಿದ್ದಾರೆ’: ಗಡಿ ಸಂಘರ್ಷದ ನಡುವೆಯೇ  ವಿಡಿಯೊ ಟ್ವೀಟ್ ಮಾಡಿದ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ

Follow us on

Related Stories

Most Read Stories

Click on your DTH Provider to Add TV9 Kannada