Tata Motors: ಟಾಟಾ ಮೋಟಾರ್ಸ್ನಿಂದ ಪ್ರಯಾಣಿಕರ ವಾಹನಗಳ ಬೆಲೆಯಲ್ಲಿ ಏರಿಕೆ ಘೋಷಣೆ
ಕಾರು ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಬೆಲೆಯಲ್ಲಿ ಏರಿಕೆ ಹಿನ್ನೆಲೆಯಲ್ಲಿ ಪ್ರಯಾಣಿಕರ ವಾಹನಗಳ ಬೆಲೆಯಲ್ಲಿ ಹೆಚ್ಚಳ ಮಾಡುವುದಾಗಿ ಟಾಟಾ ಮೋಟಾರ್ಸ್ ಘೋಷಣೆ ಮಾಡಿದೆ.
ಟಾಟಾ ಮೋಟಾರ್ಸ್ನಿಂದ (Tata Motors) ಪ್ರಯಾಣಿಕರ ವಾಹನಗಳ ಬೆಲೆಗಳನ್ನು ಮುಂದಿನ ವಾರದಿಂದಲೇ ಏರಿಕೆ ಮಾಡುವ ಸಾಧ್ಯತೆಗಳಿವೆ. ಉಕ್ಕು ಮತ್ತು ಇತರ ಬೆಲೆಬಾಳುವ ಲೋಹಗಳ ಖರೀದಿ ದರದಲ್ಲಿ ಏರಿಕೆ ಆಗಿರುವುದರಿಂದ ಕಾರುಗಳ ತಯಾರಿಕೆ ವೆಚ್ಚದಲ್ಲಿ ಹೆಚ್ಚಳವಾಗಿದೆ. ಆ ವೆಚ್ಚವನ್ನು ಸರಿತೂಗಿಸುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನಗಳ ಬಿಜಿನೆಸ್ ಘಟಕದ ಅಧ್ಯಕ್ಷ ಶೈಲೇಶ್ ಚಂದ್ರ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಉಕ್ಕು, ಮತ್ತಿತರ ಬೆಲೆ ಬಾಳುವ ಲೋಹಗಳ ದರದಲ್ಲಿ ಭಾರೀ ಏರಿಕೆ ಆಗಿದೆ. ವಸ್ತುಗಳ ಬೆಲೆಯಲ್ಲಿ ಏರಿಕೆ ಆಗಿರುವುದರಿಂದ ನಮ್ಮ ಆದಾಯದ ಮೇಲೆ ಶೇ 8ರಿಂದ 8.5ರಷ್ಟು ಪರಿಣಾಮ ಆಗಿದೆ ಎಂದು ಹೇಳಿದ್ದಾರೆ.
ಈ ವರ್ಷದಲ್ಲೇ ಟಾಟಾ ಕಂಪೆನಿಯು ಮೂರನೇ ಬಾರಿಗೆ ಹೆಚ್ಚಳ ಆಗಲಿದೆ. ಮೊದಲನೇ ಬಾರಿಗೆ ಟಿಯಾಗೋಮ ಟೈಗೋರ್, ನೆಕ್ಸಾನ್, ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ದರದಲ್ಲಿ ಏರಿಕೆ ಆಗಿತ್ತು. ಆ ನಂತರ ಮೇ ತಿಂಗಳಲ್ಲಿ ಅಲ್ಟ್ರೋಜ್ ಹ್ಯಾಚ್ಬ್ಯಾಕ್, ಹೊಸದಾಗಿ ಬಿಡುಗಡೆಯಾದ ಸಫಾರಿ ಎಸ್ಯುವಿ ದರವನ್ನು ಹೆಚ್ಚಳ ಮಾಡಲಾಯಿತು. ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ವೆಚ್ಚಳ ಇಳಿಕೆಯ ಹಲವಾರು ಕ್ರಮಗಳನ್ನು ಟಾಟಾ ಮೋಟಾರ್ಸ್ ಕೈಗೊಂಡಿದೆ. ಈ ತನಕ ಸಣ್ಣ ಪ್ರಮಾಣದ ಪಾಲನ್ನು ಬೆಲೆ ಏರಿಕೆ ಮೂಲಕ ಗ್ರಾಹಕರಿಗೆ ವರ್ಗಾಯಿಸಲಾಗಿದೆ ಎಂದು ತಿಳಿಸಲಾಗಿದೆ.
ಕಂಪೆನಿಯ ಖರ್ಚಿನ ವಿಚಾರಕ್ಕೆ ಬಂದರೆ ಶೇ 2.5ರಷ್ಟು ಮಾತ್ರ ಗ್ರಾಹಕರಿಗೆ ವರ್ಗಾಯಿಸಿದ್ದೇವೆ. ಅದನ್ನೇ ಎಕ್ಸ್ ಶೋ ರೂಮ್ ದರಕ್ಕೆ ಹೋಲಿಸಿದಲ್ಲಿ ಅದು ಶೇ 3ರಷ್ಟಾಗುತ್ತದೆ. ಏರಿಕೆ ಆಗಿರುವ ಮೊತ್ತಕ್ಕೂ ಹಾಗೂ ಇನ್ಪುಟ್ ವೆಚ್ಚಕ್ಕೂ ಹೋಲಿಸಿದರೆ ಗ್ರಾಹಕರಿಗೆ ವರ್ಗಾವಣೆ ಮಾಡಿರುವ ಪ್ರಮಾಣವು ಕಡಿಮೆ ಆಗುತ್ತದೆ ಎಂದು ಚಂದ್ರ ಅವರ ಹೇಳಿಕೆಯನ್ನು ಉದಾಹರಿಸಿ ಪಿಟಿಐ ವರದಿ ಮಾಡಿದೆ. ಆದರೆ ಈಗಲೂ ವ್ಯತ್ಯಾಸ ಇದ್ದೇ ಇದೆ. ಅಗತ್ಯ ವಸ್ತುಗಳ ಬೆಲೆ ಬಹಳ ಹೆಚ್ಚಾಗಿಯೇ ಇದೆ. ಅಂತಿಮವಾಗಿ ಮುಂದಿನ ವಾರದಿಂದ ದರ ಹೆಚ್ಚಳ ಮಾಡಲೇ ಬೇಕಾಗಿದೆ ಎಂದಿದ್ದಾರೆ.
ಈ ವರ್ಷ ಪ್ರಯಾಣಿಕರ ವಾಹನಗಳ ಬೆಲೆ ಏರಿಕೆ ಮಾಡುತ್ತಿರುವ ಕಾರು ತಯಾರಿಕೆ ಕಂಪೆನಿಯಲ್ಲಿ ಟಾಟಾ ಮೋಟಾರ್ಸ್ ಮಾತ್ರ ಇಲ್ಲ. ಈ ತಿಂಗಳ ಆರಂಭದಲ್ಲಿ ಮಾರುತಿ ಸುಜುಕಿ ಇಂಡಿಯಾ ಕೂಡ ಸ್ವಿಫ್ಟ್ ಹ್ಯಾಚ್ಬ್ಯಾಕ್, ಸಿಎನ್ಜಿ ಮಾದರಿಗಳ ದರದಲ್ಲಿ 15,000 ರೂಪಾಯಿ ತನಕ ಏರಿಕೆ ಮಾಡಿತ್ತು. ಆಗಸ್ಟ್ನಿಂದ ಹೋಂಡಾ ಕಾರುಗಳ ಎಲ್ಲ ಮಾಡೆಲ್ಗಳ ಬೆಲೆಯಲ್ಲೂ ಏರಿಕೆ ಮಾಡಲಾಗುವುದು ಎಂದು ಈಗಾಗಲೇ ತಿಳಿಸಲಾಗಿದೆ.
ಇದನ್ನೂ ಓದಿ: Tata passenger vehicles: ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನಗಳ ಬೆಲೆ ಮೇ 8ರಿಂದ ಏರಿಕೆ
(Tata Motors Announced Passenger Vehicles Price Hike From Next Week)
Published On - 5:20 pm, Wed, 28 July 21