ದೆಹಲಿ: ದೇಶದ ವಿವಿಧ ಸ್ಥಳಗಳಲ್ಲಿ ಕಿಸಾನ್ ಮಹಾಪಂಚಾಯತ್ ಆಯೋಜಿಸುತ್ತಿರುವ ರೈತ ನಾಯಕ ರಾಕೇಶ್ ಟಿಕಾಯತ್ ಅವರ ಸಂದೇಶ/ಕರೆಗಳನ್ನು ರೈತರು ಚಾಚೂತಪ್ಪದೇ ಪಾಲಿಸುತ್ತಾರೆ ಎಂಬುದಕ್ಕೆ ನಿದರ್ಶನವೊಂದು ಸಿಕ್ಕಿದೆ. ಹರ್ಯಾಣದ ಹಿಸಾರ್ನಲ್ಲಿ ನಡೆದ ಕಿಸಾನ್ ಮಹಾಪಂಚಾಯತ್ನಲ್ಲಿ ಮಾಡಿದ ಭಾಷಣದಲ್ಲಿ ರೈತರು ಪ್ರತಿಭಟನಾರ್ಥವಾಗಿ ತಾವೇ ಬೆಳೆದ ಬೆಳೆಗಳನ್ನು ನಾಶಪಡಿಸಬೇಕಾಗಬಹುದು ಎಂದು ಹೇಳಿದ್ದರು. ಅದೇ ಕರೆಯನ್ನು ಅಕ್ಷರಶಃ ಪಾಲಿಸಿದ ಹರ್ಯಾಣದ ಗುಲ್ಕಾನಿ ಎಂಬ ಗ್ರಾಮದ ಕುಟುಂಬವೊಂದು ತಾವೇ ಬೆಳೆದ ಬೆಳೆಯನ್ನು ಟ್ರ್ಯಾಕ್ಟರ್ನಿಂದ ನಾಶಪಡಿಸಿದೆ!
ಅಪಾರ್ಥ ಪರಿಣಾಮವಿದು!
ತಮ್ಮ ಹೇಳಿಕೆಯನ್ನು ಅಕ್ಷರಶಃ ಪಾಲಿಸಿದ ಕುಟುಂಬಕ್ಕೆ ಸ್ವತಃ ರಾಕೇಶ್ ಟಿಕಾಯತ್ ಅವರೇ ಬೆಳೆ ನಾಶಪಡಿಸದಂತೆ ವಿನಂತಿಸಬೇಕಾದ ಸಂದರ್ಭ ಬಂದಿದೆ. ಈ ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ರಾಕೇಶ್ ಟಿಕಾಯತ್, ನಾನು ಕೊಟ್ಟ ಕರೆಯ ಅರ್ಥ ಇದಾಗಿರಲಿಲ್ಲ, ದಯವಿಟ್ಟು ಯಾವುದೇ ರೈತ ಕುಟುಂಬ ತಮ್ಮ ಬೆಳೆಗಳನ್ನು ನಾಶಪಡಿಸಬಾರದು ಎಂದು ಟ್ವೀಟ್ ಮೂಲಕ ಮನವಿ ಮಾಡಿದಾರೆ.
ರೈತರನ್ನು ಒಗ್ಗೂಡಿಸಲು ದೇಶದ ವಿವಿದೆಡೆ ಕಿಸಾನ್ ಮಹಾಪಂಚಾಯತ್ ಆಯೋಜಿಸಲು ಯೋಜನೆ ರೂಪಿಸಿರುವ ಭಾರತೀಯ ಕಿಸಾನ್ ಯೂನಿಯನ್ನ ಮುಖ್ಯಸ್ಥ ರಾಕೇಶ್ ಟಿಕಾಯತ್ರನ್ನು ಅಪಾರ ಸಂಖ್ಯೆಯ ರೈತ ಸಮುದಾಯ ಬೆಂಬಲಿಸುತ್ತಾರೆ ಎಂಬುದು ಈಗಾಗಲೇ ಸಾಬೀತಾಗಿತ್ತು. ಹಿಸಾರ್ನಲ್ಲಿ ನಡೆದ ಕಿಸಾನ್ ಮಹಾಪಂಚಾಯತ್ನ ಭಾಷಣದ ನಂತರ ನಡೆದ ಈ ಘಟನೆ ಅವರ ಮಾತಿನ ಮೇಲೆ ರೈತರ ನಂಬಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
किसान से अपील है कि ऐसा मत करे। यह करने ले लिए नही कहा गया था। https://t.co/73X5XopEXL
— Rakesh Tikait (@RakeshTikaitBKU) February 21, 2021
ರೈತ ಹೋರಾಟದಲ್ಲಿ ಮೃತಪಟ್ಟವರೆಷ್ಟು?
ದೆಹಲಿ ಚಲೋ ಎಂಬ ಚಳುವಳಿ ಪ್ರಾರಂಭವಾಗಿ ನೂರು ದಿನಗಳು ಸಮೀಪಿಸುತ್ತಿವೆ. ಪ್ರತಿಭಟನೆಯ ಮೊದಲ ದಿನಗಳಲ್ಲಿ ರೈತ ಹೋರಾಟಕ್ಕೆಂದು ಊರು ಕೇರಿ ತೊರೆದು ಸಾವಿರಾರು ಸಂಖ್ಯೆಯಲ್ಲಿ ರೈತರು ಆಗಮಿಸಿದ್ದರು. ತಮ್ಮ ಪ್ರಯಾಣದ ಅವಧಿಯಲ್ಲಿ, ದೆಹಲಿಯ ಚಳಿಗೆ ಮತ್ತು ಅನಾರೋಗ್ಯದಿದ ಹಲವು ರೈತರು ಮೃತಪಟ್ಟಿದ್ದರು. ಇದೀಗ ನೂರನೇ ದಿನದತ್ತ ದಾಪುಗಾಲಿಡುತ್ತಿರುವ ದೆಹಲಿ ಚಲೋದಲ್ಲಿ ಈವರೆಗೆ ಮೃತಪಟ್ಟ ರೈತರ ಸಂಖ್ಯೆ 248 ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ರೈತ ಹೋರಾಟದಲ್ಲಿ ಮೃತಪಟ್ಟ ರೈತರಲ್ಲಿ ಅತಿ ಹೆಚ್ಚು ಸಂಖ್ಯೆಯ ರೈತರು ಪಂಜಾಬ್ಗೆ ಸೇರಿದವರು. ಮೃತಪಟ್ಟ ಸುಮಾರು 202 ರೈತರು ಪಂಜಾಬ್ಗೆ ಸೇರಿದ್ದು, ಹರ್ಯಾಣದ 36 ರೈತರು, ಉತ್ತರ ಪ್ರದೇಶದ 6 ರೈತರು, ಮಧ್ಯಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ, ತಮಿಳುನಾಡುಗಳ ತಲಾ ಓರ್ವ ರೈತ ಮೃತಪಟ್ಟಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ. ಹೃದಯಾಘಾತದಿಂದಲೇ ಹೆಚ್ಚು ರೈತರು ಮೃತಪಟ್ಟಿದ್ದಾರೆ. 2020ರಲ್ಲಿ ಪಂಜಾಬ್ನಲ್ಲಿ 261 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂಖ್ಯೆಗೆ ದೆಹಲಿ ಚಲೋ ಹೋರಾಟದಲ್ಲಿ ಮೃತಪಟ್ಟ ರೈತರ ಸಂಖ್ಯೆಗೆ ಸಮೀಪಿಸುತ್ತಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ರೈತ ಹೋರಾಟಕ್ಕಾಗಿ ಒಂದು ಬೆಳೆ ತ್ಯಾಗ ಮಾಡಲು ಸಿದ್ಧರಾಗಿ; ರೈತ ನಾಯಕ ರಾಕೇಶ್ ಟಿಕಾಯತ್ ಕರೆ
Published On - 11:45 am, Mon, 22 February 21