Ayodhye Ram Mandir | ದೆಹಲಿ: ಅಯೋಧ್ಯೆಯಲ್ಲಿ ಭವ್ಯ, ದಿವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ರಾಮಮಂದಿರ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಟಿವಿ9 ತಂಡ ಭೇಟಿ ನೀಡಿದೆ. ರಾಮಮಂದಿರ ನಿರ್ಮಾಣದ ಬೆಳವಣಿಗೆಯನ್ನು ಟಿವಿ9 ಈ ಎಕ್ಸ್ಕ್ಲೂಸಿವ್ ವರದಿಯಲ್ಲಿ ಈಗ ನಿಮ್ಮ ಮುಂದೆ ಇಡುತ್ತಿದೆ. ಶ್ರೀರಾಮಚಂದ್ರ, ಆದಿ ಪುರುಷ, ಅನಂತಗುಣ, ಮರ್ಯಾದಾ ಪುರುಷೋತ್ತಮ, ಜಾನಕಿವಲ್ಲಭ ಹೀಗೆ ಹತ್ತು ಹಲವು ನಾಮಗಳಿಂದ ಆರಾಧಿಸಲ್ಪಡುವ ರಾಮನ ಜನ್ಮಭೂಮಿ ಅಯೋಧ್ಯೆ. ಈ ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಭವ್ಯ ಮಂದಿರ ನಿರ್ಮಿಸಬೇಕು ಅನ್ನೋದು ದಶಕಗಳ ಕನಸು. ಕೋಟಿ ಕೋಟಿ ಭಕ್ತರ ಆಶಯ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಬೇಕು ಎನ್ನುವುದು ಕೋಟ್ಯಂತರ ಭಾರತೀಯರ ಕನಸು. ರಾಮಭಕ್ತರ ಕನಸು, ಹೋರಾಟದ ಧ್ಯೇಯ ಈಗ ಸಾಕಾರವಾಗುತ್ತಿದೆ. ಅಯೋಧ್ಯೆಯಲ್ಲಿ ಭವ್ಯ, ದಿವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ರಾಮಮಂದಿರ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಟಿವಿ9 ತಂಡ ಭೇಟಿ ನೀಡಿದೆ. ರಾಮಮಂದಿರ ನಿರ್ಮಾಣದ ಕಾರ್ಯ ಈಗ ಯಾವ ಹಂತದಲ್ಲಿದೆ, ಏನೇನು ಕಾರ್ಯಗಳು ಆಗಿವೆ, ಯಾವ ವೇಗದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ, ಯಾವಾಗ ರಾಮಮಂದಿರ ನಿರ್ಮಾಣ ಕಾರ್ಯ ಮುಗಿಯಲಿದೆ ಎನ್ನುವುದನ್ನು ಈಗ ಇಂಚಿಂಚೂ ಪ್ರತ್ಯಕ್ಷ ವರದಿಯನ್ನು ನಿಮ್ಮ ಮುಂದೆ ಇಡುತ್ತಿದೆ. ಇದು ಟಿವಿ9 ಎಕ್ಸ್ ಕ್ಲೂಸಿವ್ ವರದಿ.
ಈ ವರ್ಷದ ಜನವರಿ 14ರ ಮಕರ ಸಂಕಾಂತ್ರಿಯಂದೇ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾರ್ಯದ ಮೊದಲ ಹಂತವಾದ ತಳಪಾಯ ನಿರ್ಮಾಣ ಕಾರ್ಯ ಮುಕ್ತಾಯವಾಗಿದೆ. ಈಗ ತಳಪಾಯದ ಮೇಲೆ ಕಲ್ಲುಗಳನ್ನು ಜೋಡಿಸಿ ಮುಂದಿನ ಹಂತದಲ್ಲಿ ದೇವಾಲಯ ನಿರ್ಮಾಣ ಮಾಡುವ ಕೆಲಸ ನಡೆಯುತ್ತಿದೆ. ರಾಮಮಂದಿರ ನಿರ್ಮಾಣ ಕಾರ್ಯವನ್ನು ಎಲ್ ಅಂಡ್ ಟಿ ಕಂಪನಿ ಮಾಡುತ್ತಿದ್ದು, ಟಾಟಾ ಕಂಪನಿಯು ಟೆಕ್ನಿಕಲ್ ಕನ್ಸಲ್ಟೆನ್ಸಿ ಜವಾಬ್ದಾರಿ ಹೊತ್ತುಕೊಂಡಿದೆ. ಮಂದಿರ ನಿರ್ಮಾಣಕ್ಕಾಗಿ ಎರಡು ಬೃಹತ್ ಕ್ರೇನ್ ಗಳನ್ನು ಬಳಸಲಾಗುತ್ತಿದೆ.
ರಾಮಮಂದಿರ ನಿರ್ಮಾಣ ಮಾಡುತ್ತಿರುವ ಜಾಗದ ಮಣ್ಣು ಸಡಿಲವಾಗಿತ್ತು. ಈ ಕಾರಣದಿಂದ ಹೆಚ್ಚು ಆಳದವರೆಗೆ ಮಣ್ಣು ತೆಗೆದು ಭದ್ರವಾದ ತಳಪಾಯ ನಿರ್ಮಿಸಲಾಗುತ್ತಿದೆ. ತಳಪಾಯವು ಗಟ್ಟಿಮುಟ್ಟಾಗಿರುವಂತೆ ನಿರ್ಮಾಣ ಮಾಡಲಾಗುತ್ತಿದೆ. ಪ್ರಬಲ ಭೂಕಂಪವನ್ನು ತಡೆದುಕೊಳ್ಳುವ ಸಾಮರ್ಥ್ಯ ಇರುವಂತೆ ತಳಪಾಯ ನಿರ್ಮಿಸಿರುವುದು ವಿಶೇಷ. ತಳಪಾಯದಲ್ಲಿ ಮೊದಲು 44 ಪದರಗಳನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು. ಆದರೇ, ಅಂತಿಮವಾಗಿ 48 ಪದರಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ರಾಮಮಂದಿರದ ತಳಪಾಯವು ಸಮುದ್ರ ಮಟ್ಟಕ್ಕಿಂತ 107 ಮೀಟರ್ ಎತ್ತರದಲ್ಲಿದೆ. ಮಂದಿರ ತಳಪಾಯ ನಿರ್ಮಾಣದಲ್ಲಿ ಸಿಮೆಂಟ್ ಅನ್ನು ಹೆಚ್ಚಾಗಿ ಬಳಸುತ್ತಿಲ್ಲ. ಸಿಮೆಂಟ್ ಬಳಸಿದರೇ, ಆ ಜಾಗದಲ್ಲಿ ಹೀಟ್ ಜಾಸ್ತಿಯಾಗುತ್ತೆ. ಹೀಗಾಗಿ ಸಿಮೆಂಟ್ ಅನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಗಿದೆ.
ಸ್ಟೋನ್ ಡಸ್ಟ್ ಹಾಗೂ ಹಾರುವ ಬೂದಿಯನ್ನು ಹೆಚ್ಚಾಗಿ ಬಳಸಲಾಗಿದೆ. ಒಂದು ಅಡಿ ಕಾಂಕ್ರೀಟ್ ಹಾಕಿ ಅದರ ಮೇಲೆ ರೋಲರ್ ಹಾಕಿ, ಒಂದರ ಮೇಲೊಂದು ಪದರಗಳನ್ನು ನಿರ್ಮಿಸಲಾಗಿದೆ. ಹೀಗೆ 48 ಪದರಗಳನ್ನು ನಿರ್ಮಿಸಲಾಗಿದೆ. ಆರ್ಟಿಫಿಷಿಯಲ್ ಕಲ್ಲುಗಳನ್ನ ತಳಪಾಯ ನಿರ್ಮಾಣದಲ್ಲಿ ಬಳಸಲಾಗಿದೆ.
ಅಯೋಧ್ಯೆಯ ರಾಮಮಂದಿರ ಶತಮಾನಗಳ ಕನಸು
ತಳಪಾಯದ ಬಳಿಕ ಬೇಸ್ ಪಿಲ್ಲತ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದಕ್ಕೆ 3 ಲಕ್ಷ ಕ್ಯೂಬಿಕ್ ಅಡಿ ಕಲ್ಲು ಬೇಕು. 20 ಅಡಿ ಎತ್ತರದ ಬೇಸ್ ಪಿಲ್ಲತ್ ನಿರ್ಮಾಣ ಮಾಡಲಾಗುತ್ತೆ. 300 ಅಡಿ ಉದ್ದ ಹಾಗೂ 400 ಅಡಿ ಅಗಲದ ವಿಶಾಲ ಸ್ಥಳದಲ್ಲಿ ಬೇಸ್ ಪಿಲ್ಲತ್ ನಿರ್ಮಾಣ ಮಾಡಲಾಗುತ್ತೆ. ಇದಕ್ಕೆ ಬೇಕಾದ ಕಲ್ಲುಗಳನ್ನು ನಮ್ಮ ಕರ್ನಾಟಕದ ಬೆಂಗಳೂರು ಬಳಿಯ ಸಾದಹಳ್ಳಿ ಗೇಟ್ ಹಾಗೂ ಉತ್ತರ ಪ್ರದೇಶದ ಮಿರ್ಜಾಪುರದಿಂದ ತರಿಸಲಾಗಿದೆ. ಮಂದಿರ ನಿರ್ಮಾಣಕ್ಕೆ 17 ಸಾವಿರ ಕಲ್ಲುಗಳು ಬೇಕು. ಈಗಾಗಲೇ ಒಂದು ಸಾವಿರ ಕಲ್ಲುಗಳು ಅಯೋಧ್ಯೆಗೆ ಬಂದಿವೆ. ಪಿಲ್ಲತ್ 21 ಅಡಿ ಎತ್ತರ ಇರಲಿದೆ. 21 ಅಡಿ ಎತ್ತರದ ಪಿಲ್ಲತ್ ಮೇಲೆ ಕಲ್ಲಿನ ಪಿಲ್ಲರ್ ಗಳನ್ನು ಬಳಸಿ ಮಂದಿರ ನಿರ್ಮಿಸಲಾಗುತ್ತೆ. ಮಂದಿರದ ಪ್ರತಿಯೊಂದು ಮಹಡಿಯೂ 20 ಅಡಿ ಎತ್ತರ ಇರಲಿದೆ.
ಅಯೋಧ್ಯೆಯ ರಾಮಮಂದಿರ ಶತಮಾನಗಳ ಕನಸು. ಕಾನೂನು ಹೋರಾಟಕ್ಕೆ 134 ವರ್ಷಗಳ ಇತಿಹಾಸ ಇದೆ. ಅಯೋಧ್ಯೆಯ ರಾಮಮಂದಿರದ ಜೊತೆಗೆ ದೇಶದ ಜನರ ಶ್ರದ್ದೆ, ಭಕ್ತಿ, ಭಾವನೆಗಳು ಮಿಳಿತವಾಗಿವೆ. ಹೀಗಾಗಿ ರಾಮಮಂದಿರವನ್ನು ಬರೀ ನೂರು ವರ್ಷವಲ್ಲ, ಒಂದು ಸಾವಿರ ವರ್ಷದವರೆಗೂ ಭದ್ರವಾಗಿ ನೆಲೆಯೂರುವಂತೆ ನಿರ್ಮಾಣ ಮಾಡಲಾಗುತ್ತಿರುವುದು ವಿಶೇಷ. ಕಲ್ಲುಗಳ ಆಯುಷ್ಯ ಒಂದು ಸಾವಿರ ವರ್ಷ. ಮಂದಿರ ನಿರ್ಮಾಣದಲ್ಲಿ ಬರೀ ಕಲ್ಲುಗಳನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ರಾಮಮಂದಿರವು ಒಂದು ಸಾವಿರ ವರ್ಷ ಭದ್ರವಾಗಿ ನೆಲೆಯೂರಲಿದೆ ಎಂಬ ವಿಶ್ವಾಸವನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ವ್ಯಕ್ತಪಡಿಸಿದ್ದಾರೆ.
2023ರ ಡಿಸೆಂಬರ್ ಒಳಗೆ ಗರ್ಭಗುಡಿ ನಿರ್ಮಾಣ
ರಾಮಮಂದಿರ ನಿರ್ಮಾಣ ಕಾರ್ಯವನ್ನು ಈಗ ವೇಗವಾಗಿ ಮಾಡಲಾಗುತ್ತಿದೆ. 2023ರ ಡಿಸೆಂಬರ್ ತಿಂಗಳೊಳಗಾಗಿ ರಾಮಮಂದಿರದ ಗರ್ಭಗುಡಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವ ಗುರಿಯನ್ನು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಾಕಿಕೊಂಡಿದೆ. ಗರ್ಭಗುಡಿಯಲ್ಲಿ ರಾಮಲಲ್ಲಾನನ್ನು ಪ್ರತಿಷ್ಠಾಪನೆ ಮಾಡಲಾಗುತ್ತೆ. ಬಳಿಕ ಗರ್ಭಗುಡಿಯ ದರ್ಶನ ಮಾಡಲು ಭಕ್ತರಿಗೆ ಅವಕಾಶ ನೀಡಲಾಗುತ್ತೆ. ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅನ್ನು ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ರಚಿಸಿದ್ದು, ಈ ಟ್ರಸ್ಟ್ ಈಗ ಮಂದಿರ ನಿರ್ಮಾಣದ ಹೊಣೆಯನ್ನು ಹೊತ್ತುಕೊಂಡಿದೆ. ಚಂಪತ್ ರಾಯ್ ಅವರು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿಯಾಗಿದ್ದು, ನಿತ್ಯ ಮಂದಿರ ನಿರ್ಮಾಣ ಕಾರ್ಯದ ಉಸ್ತುವಾರಿ ಹಾಗೂ ಮೇಲ್ವಿಚಾರಣೆ ಮಾಡುತ್ತಿದ್ದಾರೆ. 2023ರ ಡಿಸೆಂಬರ್ ನೊಳಗಾಗಿ ಗರ್ಭಗುಡಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುತ್ತೆ ಎನ್ನುವುದನ್ನು ಚಂಪತ್ ರಾಯ್ ಅವರೇ ಟಿವಿ9ಗೆ ತಿಳಿಸಿದ್ದಾರೆ.
2024ರ ಲೋಕಸಭಾ ಚುನಾವಣೆಗೂ ಮುನ್ನ ಮಂದಿರದ ಗರ್ಭಗುಡಿ ರೆಡಿ
2024 ರ ಏಪ್ರಿಲ್- ಮೇ ತಿಂಗಳಲ್ಲಿ ದೇಶಾದ್ಯಂತ ಲೋಕಸಭಾ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಶತಮಾನದ ಕನಸಾದ ಅಯೋಧ್ಯೆಯ ರಾಮಮಂದಿರದ ಗರ್ಭಗುಡಿ ನಿರ್ಮಿಸಿ ರಾಮಲಲ್ಲಾನನ್ನು ಪ್ರತಿಷ್ಠಾಪನೆ ಮಾಡಬೇಕು ಎನ್ನುವ ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ಹೀಗೆ 2024ರ ಏಪ್ರಿಲ್ ತಿಂಗಳಿಗೂ ಮುನ್ನ ರಾಮಮಂದಿರದ ಗರ್ಭಗುಡಿ ನಿರ್ಮಾಣವಾದರೇ, ಇದನ್ನು ಇಡೀ ದೇಶದ ಜನರಿಗೆ ತೋರಿಸಲಾಗುತ್ತೆ. ಕೇಂದ್ರದ ಮೋದಿ ಸರ್ಕಾರ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಮಾಡಿತು ಎಂದು ದೇಶದ ಜನರಿಗೆ ಹೇಳಲಾಗುತ್ತೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೇ, ಅದರ ಕ್ರೆಡಿಟ್ ಕೇಂದ್ರ ಸರ್ಕಾರ ಹಾಗೂ ಅಯೋಧ್ಯೆಯಲ್ಲಿ ಭವ್ಯ, ದಿವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ರಾಮಮಂದಿರ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಟಿವಿ9 ತಂಡ ಭೇಟಿ ನೀಡಿದೆ. ರಾಮಮಂದಿರ ನಿರ್ಮಾಣದ ಬೆಳವಣಿಗೆಯನ್ನು ಟಿವಿ9 ಈ ಎಕ್ಸ್ ಕ್ಲೂಸಿವ್ ವರದಿಯಲ್ಲಿ ಈಗ ನಿಮ್ಮ ಮುಂದೆ ಇಡುತ್ತಿದೆ.
ಪ್ರಧಾನಿ ಮೋದಿ ಅವರಿಗೂ ಸಹಜವಾಗಿಯೇ ಹೋಗುತ್ತೆ. ಹೀಗಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿದ್ದರ ಕ್ರೆಡಿಟ್ ಪಡೆದು ಮೋದಿ ಚುನಾವಣಾ ಪ್ರಚಾರ ಭಾಷಣ ನಡೆಸುವುದು ಸಹಜ. ಪ್ರಧಾನಿ ಮೋದಿ ಅವರಿಗೂ ಸಹಜವಾಗಿಯೇ ಹೋಗುತ್ತೆ. ಹೀಗಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿದ್ದರ ಕ್ರೆಡಿಟ್ ಪಡೆದು ಮೋದಿ ಚುನಾವಣಾ ಪ್ರಚಾರ ಭಾಷಣ ನಡೆಸುವುದು ಸಹಜ.
ಮಂದಿರ ನಿರ್ಮಾಣ ಕಾರ್ಯದಲ್ಲಿ ಕನ್ನಡಿಗರ ಉಸ್ತುವಾರಿ
ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಕನ್ನಡಿಗರು ನೇತೃತ್ವ ವಹಿಸಿದ್ದಾರೆ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಗೋಪಾಲ್ ಅವರು ಕೂಡ ಮಂದಿರ ನಿರ್ಮಾಣದ ಮೇಲುಸ್ತುವಾರಿ ಮಾಡುತ್ತಿದ್ದಾರೆ. ಶಿರಸಿಯ ಗೋಪಾಲ್ ಅವರು ವಿಶ್ವ ಹಿಂದೂ ಪರಿಷತ್ ನಾಯಕರು. ವಿಶ್ವ ಹಿಂದೂ ಪರಿಷತ್ ನ ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ವಿಶ್ವ ಹಿಂದೂ ಪರಿಷತ್ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಾಮಮಂದಿರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹಿಂದೂ ಸಂಘಟನೆ. ಹೀಗಾಗಿ ಈಗಲೂ ವಿಶ್ವ ಹಿಂದೂ ಪರಿಷತ್ ನಾಯಕರಿಗೆ ಮಂದಿರ ನಿರ್ಮಾಣದ ಮಹತ್ವದ ಹೊಣೆಗಾರಿಕೆಯನ್ನು ನೀಡಲಾಗಿದೆ. ಕನ್ನಡಿಗ ಗೋಪಾಲ್ ಅವರು ಈಗ ಮಂದಿರ ನಿರ್ಮಾಣ ಉಸ್ತುವಾರಿ ವಹಿಸಿದ್ದಾರೆ.
ಮಂದಿರ ನಿರ್ಮಾಣದಲ್ಲಿ ದೇಶದ ಬೆಸ್ಟ್ ಇಂಜಿನಿಯರಿಂಗ್ ಬ್ರೇನ್ ಬಳಕೆ
ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ದೇಶದ ಬೆಸ್ಟ್ ಇಂಜಿನಿಯರಿಂಗ್ ಬ್ರೇನ್ ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ತಜ್ಞ ಇಂಜಿನಿಯರ್ ಗಳ ಸಮಿತಿಯನ್ನು ರಚಿಸಲಾಗಿದ್ದು, ಇದರಲ್ಲಿ ಐಐಟಿ ದೆಹಲಿ, ಐಐಟಿ ಗೌಹಾಟಿ, ಎನ್ಐಟಿ ಸೂರತ್, ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ಇನ್ಸ್ ಟಿಟ್ಯೂಟ್ ತಜ್ಞರು, ಐಐಟಿ ಚೆನ್ನೈ, ಐಐಟಿ ಕಾನ್ಪುರದ ತಜ್ಞರು ಇದ್ದಾರೆ. ಈ ತಜ್ಞರ ಸಮಿತಿಯೇ ಹೇಗೆ ಭದ್ರವಾದ, ಉತ್ತಮ ಗುಣಮಟ್ಟದ ಮಂದಿರವನ್ನು ನಿರ್ಮಾಣ ಮಾಡಬೇಕೆಂದು ಪ್ರತಿಯೊಂದು ಹಂತದಲ್ಲೂ ಸಲಹೆ, ಮಾರ್ಗದರ್ಶನ ನೀಡುತ್ತಿದೆ. 60 ಇಂಜಿನಿಯರ್ ಗಳ ಮಾರ್ಗದರ್ಶನದಲ್ಲಿ 150 ಕಾರ್ಮಿಕರು ನಿತ್ಯ ರಾಮಮಂದಿರ ನಿರ್ಮಾಣಕ್ಕಾಗಿ ದುಡಿಯುತ್ತಿದ್ದಾರೆ.
ಕರಶಾಲೆಯಲ್ಲಿ ಈಗಲೂ ಕಲ್ಲುಕೆತ್ತನೆ ಕೆಲಸ
ವಾಯ್ಸ್ ಓವರ್–90 ರ ದಶಕದಲ್ಲಿ ಅಯೋಧ್ಯೆಯ ಕರಶಾಲೆಯಲ್ಲಿ ರಾಜಸ್ಥಾನದ ಕಲ್ಲುಗಳನ್ನು ಸಂಗ್ರಹಿಸಿ ಮಂದಿರ ನಿರ್ಮಾಣಕ್ಕಾಗಿ ಆರಂಭವಾದ ಕಲ್ಲುಕೆತ್ತನೆ ಕೆಲಸ ಈಗಲೂ ಮುಂದುವರಿದಿದೆ. ಕಳೆದ 30 ವರ್ಷದಿಂದ ಕರಶಾಲೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಕಲ್ಲುಗಳ ಕೆತ್ತನೆ ಕೆಲಸ ನಿರಂತರವಾಗಿ ನಡೆಯುತ್ತಿರುವುದು ವಿಶೇಷ. ಕರಶಾಲೆಯಲ್ಲಿ ಈಗಾಗಲೇ ಸಾಕಷ್ಟು ದೊಡ್ಡ ದೊಡ್ಡ ಕೆಂಪು ಕಲ್ಲುಗಳನ್ನು ಕೆತ್ತಲಾಗಿದೆ. ಈ ಕಲ್ಲುಗಳನ್ನು ಈಗ ಮಂದಿರ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತೆ. ಕರಶಾಲೆಯಲ್ಲಿ ದೇಶಾದ್ಯಂತ ಮೂರೂವರೆ ಲಕ್ಷ ಹಳ್ಳಿಗಳ ಜನರು ಮಂದಿರ ನಿರ್ಮಾಣಕ್ಕಾಗಿ ನೀಡಿದ ಇಟ್ಟಿಗೆಗಳನ್ನು ಸಂಗ್ರಹಿಸಿ ಇಡಲಾಗಿದೆ. ಈ ಇಟ್ಟಿಗೆ, ಕಲ್ಲುಗನ್ನು ಮಂದಿರ ಹಾಗೂ ಅದರ ಸುತ್ತಲಿನ ಇತರೆ ಮಂದಿರಗಳ ನಿರ್ಮಾಣ ಕಾರ್ಯದಲ್ಲಿ ಬಳಸಿಕೊಳ್ಳಲಾಗುತ್ತೆ ಎಂದು ಮಂದಿರ ನಿರ್ಮಾಣದ ಮೇಲುಸ್ತುವಾರಿ ವಹಿಸಿರುವ ಕನ್ನಡಿಗ ಗೋಪಾಲ್ ಅವರು ಟಿವಿ9ಗೆ ತಿಳಿಸಿದ್ದಾರೆ.
ಮಂದಿರದ ಸಂಪೂರ್ಣ ಕಾಮಗಾರಿ ಮುಗಿಯಲು ಐದಾರು ವರ್ಷ ಬೇಕು
ಅಯೋಧ್ಯೆಯಲ್ಲಿ ಮೂರು ಮಹಡಿಯ ರಾಮಮಂದಿರ ನಿರ್ಮಾಣದ ಕಾರ್ಯಕ್ಕೆ 2020ರ ಆಗಸ್ಟ್ 5 ರಂದು ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಆದಾದ ಬಳಿಕ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಮೊದಲಿಗೆ ಮಂದಿರವನ್ನು 161 ಅಡಿ ಎತ್ತರ ಹಾಗೂ 140 ಅಗಲದ ವಿಸ್ತೀರ್ಣದಲ್ಲಿ ನಿರ್ಮಿಸಲು ನಿರ್ಧರಿಸಲಾಗಿತ್ತು. ಆದರೇ, ಈಗ ರಾಮಮಂದಿರ ನಿರ್ಮಾಣದ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ. ಈಗ ರಾಮಮಂದಿರವನ್ನು ಹೆಚ್ಚು ವಿಶಾಲವಾಗಿ ನಿರ್ಮಿಸಲು ನಿರ್ಧರಿಸಲಾಗಿದೆ. ಈಗ ರಾಮಮಂದಿರವನ್ನು ಪೂರ್ವ-ಪಶ್ಚಿಮ ದಿಕ್ಕಿನಲ್ಲಿ 361 ಅಡಿ ಉದ್ದ, ಉತ್ತರ-ದಕ್ಷಿಣ ದಿಕ್ಕಿನಲ್ಲಿ 235 ಅಡಿ ಅಗಲ ಹಾಗೂ 161 ಅಡಿ ಎತ್ತರದವರೆಗೂ ನಿರ್ಮಿಸಲು ನಿರ್ಧರಿಸಲಾಗಿದೆ.
ಗುಜರಾತ್ ಆರ್ಕಿಟೆಕ್ಟ್ ಚಂದ್ರಕಾಂತ್ ಸೋಮಾಪುರ ಅವರು ದೇವಾಲಯವನ್ನು ಈ ಹಿಂದೆ 1985 ಹಾಗೂ 1986 ರಲ್ಲಿ ವಿನ್ಯಾಸ ಮಾಡಿದ್ದರು. ಈಗ ಅವರ ಪುತ್ರ ನಿಖಿಲ್ ಸೋಮಾಪುರ ದೇವಾಲಯದ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ದಾರೆ. ಮೂಲ ವಿನ್ಯಾಸದಲ್ಲಿ 2 ಮಹಡಿಯ ರಾಮಮಂದಿರ ನಿರ್ಮಾಣ ಮಾತ್ರ ಇತ್ತು. ಆದರೇ, ಈಗ 3 ಮಹಡಿಯ ದೇವಾಲಯ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಈ ಮೂಲಕ ದೇವಾಲಯಕ್ಕೊಂದು ಗ್ರಾಂಡ್ ಲುಕ್ ಸಿಗುವಂತೆ ಮಾಡಬೇಕು, ಜೊತೆಗೆ ಹೆಚ್ಚಿನ ಭಕ್ತರಿಗೆ ದೇವಾಲಯಕ್ಕೆ ಏಕಕಾಲಕ್ಕೆ ಪ್ರವೇಶ ಸಿಗುವಂತೆ ಮಾಡಬೇಕು ಎಂಬ ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ತಳಮಹಡಿಯಲ್ಲಿ ಗರ್ಭಗೃಹವನ್ನು ನಿರ್ಮಿಸಿ, ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತೆ. ಮೊದಲ ಮಹಡಿಯಲ್ಲಿ ರಾಮ ದರ್ಬಾರ್ ನಿರ್ಮಾಣ ಮಾಡಲಾಗುತ್ತೆ. 2ನೇ ಮಹಡಿಗೆ ಯಾರಿಗೂ ಪ್ರವೇಶಕ್ಕೆ ಅವಕಾಶ ಇರಲ್ಲ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಟಿವಿ9ಗೆ ತಿಳಿಸಿದ್ದಾರೆ.
ರಾಮಮಂದಿರದಲ್ಲಿ ಏನೇನು ಇರಲಿದೆ?
ರಾಮಮಂದಿರದಲ್ಲಿ ಬೇರೆ ಬೇರೆ ಏರಿಯಾಗಳಿರುತ್ತಾವೆ, ಭಕ್ತರು ಕುಳಿತು ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುತ್ತೆ. ಹೊಸ ವಿನ್ಯಾಸದಲ್ಲಿ ಭಕ್ತರು ದೇವಾಲಯದ ಪರಿಕ್ರಮ( ಸುತ್ತು ಹಾಕೋದು) ಮಾಡಲು ಅವಕಾಶ ನೀಡಲಾಗಿದೆ. ದೇವಾಲಯದಲ್ಲಿ 5 ಶಿಖರ ಅಥವಾ ಗೋಪುರಗಳಿರುತ್ತಾವೆ. ವಿಶ್ವದಲ್ಲಿ ಈ ರಾಮಮಂದಿರ ಮಾತ್ರ 5 ಗೋಪುರಗಳನ್ನು ಹೊಂದಿರಲಿದೆ. ಈಗಾಗಲೇ ದೇವಾಲಯ ನಿರ್ಮಾಣಕ್ಕೆ ಬೇಕಾದ ಶೇ.40 ರಷ್ಟು ಕಲ್ಲುಗಳು ರೆಡಿಯಾಗಿವೆ ಎಂದು ನಿಖಿಲ್ ಸೋಮಾಪುರ ಹೇಳಿದ್ದಾರೆ.
ದೇವಾಲಯದ ಮೂರು ಮಹಡಿಯಲ್ಲಿ ಒಟ್ಟಾರೆ 318 ಪಿಲ್ಲರ್ ಗಳಿರುತ್ತಾವೆ. ಪ್ರತಿ ಪ್ಲೋರ್ ನಲ್ಲೂ 108 ಪಿಲ್ಲರ್ ಗಳಿರುತ್ತಾವೆ. ಹಿಂದೂ ಪುರಾಣ, ಸಂಪ್ರದಾಯಗಳ ಪ್ರಕಾರವೇ ಪಿಲ್ಲರ್ ಗಳನ್ನು ನಿರ್ಮಾಣ ಮಾಡಲಾಗಿದೆ. ರಾಮಮಂದಿರದಲ್ಲಿ ರಾಮನ ಭಂಟ ಹನುಮಾನ್ ಹಾಗೂ ರಾಮನ ಮತ್ತೊಂದು ಅವತಾರವೇ ಆದ ಶ್ರೀಕೃಷ್ಣನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತೆ.
ರಾಮಮಂದಿರದ ಹೊರ ಆವರಣದಲ್ಲಿ ಆರು ಬೇರೆ ಬೇರೆ ದೇವರುಗಳ ದೇವಾಲಯವನ್ನು ಸಹ ನಿರ್ಮಾಣ ಮಾಡಲಾಗುತ್ತೆ. ಸೂರ್ಯ ದೇವ, ಗಣೇಶ, ಶಿವ, ದುರ್ಗಾ, ವಿಷ್ಣು ಮತ್ತು ಬ್ರಹ್ಮ ದೇವರ ದೇವಾಲಯಗಳನ್ನು ಕೂಡ ರಾಮಮಂದಿರ ಹೊರ ಆವರಣದಲ್ಲಿ ನಿರ್ಮಾಣ ಮಾಡಲು ಪ್ಲ್ಯಾನ್ ಮಾಡಲಾಗಿದೆ.
ರಾಮಮಂದಿರ ನಿರ್ಮಾಣ ಮುಗಿಯಲು ಎಷ್ಟು ವರ್ಷ ಬೇಕಾಗಬಹುದು?
ಹಾಗಾದರೇ, ಮೂರು ಮಹಡಿಯ ರಾಮಮಂದಿರ ನಿರ್ಮಾಣ ಮುಗಿಯಲು ಎಷ್ಟು ವರ್ಷ ಬೇಕಾಗಬಹುದು ಎಂಬ ಪ್ರಶ್ನೆ ನಿಮ್ಮ ಮನಸ್ಸಲ್ಲಿ ಮೂಡಬಹುದು. ಇದಕ್ಕೆ ಉತ್ತರವನ್ನು ವಿಶ್ವ ಹಿಂದೂ ಪರಿಷತ್ ನ ಗೋಪಾಲ್ ಅವರು ನೀಡಿದ್ದಾರೆ. ರಾಮಮಂದಿರದ ಸಂಪೂರ್ಣ ಕಾಮಗಾರಿ ಮುಗಿಯಲು ಐದಾರು ವರ್ಷಗಳು ಬೇಕಾಗುತ್ತಾವೆ. ಮಂದಿರವನ್ನು ನಾಗರ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. 800 ಮೀಟರ್ ಪ್ರಾಕಾರವನ್ನು ನಿರ್ಮಿಸಿ ಭಕ್ತರಿಗೆ ಪ್ರದಕ್ಷಿಣೆ ಹಾಕಲು ಅವಕಾಶ ಮಾಡಿಕೊಡಲಾಗುತ್ತೆ. ಅಯೋಧ್ಯೆಯ ರಾಮಜನ್ಮಭೂಮಿಯ 70 ಎಕರೆ ಜಾಗದಲ್ಲಿ ರಾಮಮಂದಿರದ ಜೊತೆಗೆ ಇನ್ನೂ ಅನೇಕ ನಿರ್ಮಾಣ ಚಟುವಟಿಕೆಗಳು ನಡೆಯಲಿವೆ. ಮ್ಯೂಸಿಯಂ, ಯಾತ್ರಿಕರ ಸೌಲಭ್ಯ ಕೇಂದ್ರ ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳು ನಡೆಯಲಿವೆ. 70 ಎಕರೆ ಜಾಗವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಲಾಗುತ್ತೆ. ರಾಮಮಂದಿರಕ್ಕೆ ಹೋಗಲು ವಿಶಾಲ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಶದ 11 ಕೋಟಿ ಜನರು ಹಣದ ಕೊಡುಗೆಯನ್ನು ಸ್ವಯಂಪ್ರೇರಿತವಾಗಿ ನೀಡಿದ್ದಾರೆ. ಜನರು ನೀಡಿದ ಕೊಡುಗೆಯ ಹಣವನ್ನು ಲೆಕ್ಕ ಹಾಕುವ ಕೆಲಸ ನಡೆಯುತ್ತಿದೆ ಎಂದು ಚಂಪತ್ ರಾಯ್ ಹೇಳಿದ್ದಾರೆ.
ವಿಶೇಷ ವರದಿ: ಎಸ್. ಚಂದ್ರಮೋಹನ್, ನ್ಯಾಷನಲ್ ಬ್ಯುರೋ ಮುಖ್ಯಸ್ಥರು, ಟಿವಿ9 ಕನ್ನಡ
ಇದನ್ನೂ ಓದಿ: Rama Navami 2022: ಪರಸ್ಪರ ರಾಮ ನವಮಿ, ರಂಜಾನ್ ಹಬ್ಬದ ಶುಭಕೋರಿ ಭಾವೈಕ್ಯತೆ ಸಾರಿದ ಯುವಕರು
ಇದನ್ನೂ ಓದಿ: Ram Navami 2022 Quiz: ಶ್ರೀ ರಾಮನವಮಿ ಪ್ರಯುಕ್ತ ಒಂದು ಚಿಕ್ಕ- ಚೊಕ್ಕ ಕ್ವಿಜ್ ಇಲ್ಲಿದೆ
Published On - 9:46 pm, Sun, 10 April 22