ರಾಮಮಂದಿರ ವ್ಯವಹಾರ ಮೇಲ್ವಿಚಾರಣೆ ನಡೆಸಲು ಆರ್ಥಿಕ-ಕಾನೂನು ಸಲಹಾ ಸಮಿತಿಗಳ ರಚನೆ; ಭೂ ಖರೀದಿ ಅಕ್ರಮ ಆರೋಪದ ಬೆನ್ನಲ್ಲೇ ನಿರ್ಧಾರ

| Updated By: Lakshmi Hegde

Updated on: Jul 11, 2021 | 12:18 PM

Ram Temple: ಶ್ರೀರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಖರೀದಿ ಮಾಡುವಾಗ ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡುತ್ತಿವೆ. ಅಷ್ಟೇ ಅಲ್ಲ, ಇದರಲ್ಲಿ ಚಂಪತ್​ ರಾಯ್​​ರನ್ನೇ ನೇರವಾಗಿ ಹೊಣೆ ಮಾಡಲಾಗುತ್ತಿದೆ.

ರಾಮಮಂದಿರ ವ್ಯವಹಾರ ಮೇಲ್ವಿಚಾರಣೆ ನಡೆಸಲು ಆರ್ಥಿಕ-ಕಾನೂನು ಸಲಹಾ ಸಮಿತಿಗಳ ರಚನೆ; ಭೂ ಖರೀದಿ ಅಕ್ರಮ ಆರೋಪದ ಬೆನ್ನಲ್ಲೇ ನಿರ್ಧಾರ
ಶ್ರೀರಾಮ ಮಂದಿರ
Follow us on

ದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ (Ram Temple) ನಿರ್ಮಾಣ ಕಾರ್ಯ ಒಂದು ಕಡೆ ಭರದಿಂದ ನಡೆಯುತ್ತಿದೆ. ಈ ಮಧ್ಯೆ ಇಲ್ಲಿ ಭೂಮಿ ಖರೀದಿ ಬಗ್ಗೆ ವಿವಾದವೊಂದು ಎದ್ದಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾರ್ಚ್​ನಲ್ಲಿ ಇಲ್ಲಿ ಸ್ವಲ್ಪ ಹೆಚ್ಚುವರಿ ಭೂಮಿಯನ್ನು ಖರೀದಿಸಿದ್ದರ ಬಗ್ಗೆ ಆಪ್, ಸಮಾಜವಾದಿ ಪಕ್ಷ, ಕಾಂಗ್ರೆಸ್​​ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಇಲ್ಲಿ ಅಕ್ರಮ ನಡೆದಿದೆ ಎಂದು ಸಿಬಿಐ ತನಿಖೆಗೂ ಒತ್ತಾಯಿಸಿವೆ. ಈ ಬೆನ್ನಲ್ಲೇ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (Shree Ram Janmbhoomi Teerth Kshetra Trust)​ ಒಂದು ಮಹತ್ವದ ನಿರ್ಧಾರ ಪ್ರಕಟಿಸಿದೆ. ರಾಮಮಂದಿರಕ್ಕೆ ಸಂಬಂಧಪಟ್ಟ ವ್ಯವಹಾರಗಳನ್ನು ನೋಡಿಕೊಳ್ಳಲು ಆರ್ಥಿಕ ಮತ್ತು ಕಾನೂನು ಸಲಹಾ ಸಮಿತಿಗಳನ್ನು ರಚಿಸುವುದಾಗಿ ಹೇಳಿಕೊಂಡಿದೆ.

ಚಿತ್ರಕೂಟದಲ್ಲಿ ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರಚಾರಕ್​ ಬೈಠೆಕ್​ ಆಯೋಜಿಸಲಾಗಿದ್ದು, ಅದಕ್ಕೂ ಮೊದಲೇ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್​ ರಾಯ್​ ಅವರು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ರನ್ನು ಭೇಟಿಯಾಗಿದ್ದಾರೆ. ಈ ವೇಳೆ ಅಯೋಧ್ಯೆಯಲ್ಲಿ ಸದ್ಯ ಎದ್ದಿರುವ ಭೂಮಿ ವಿವಾದದ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.
ದೇವಾಲಯದ ಆವರಣಕ್ಕಾಗಿ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇನ್ನಷ್ಟು ಭೂಮಿ ಖರೀದಿ ಮಾಡಿದೆ. ಆದರೆ ಇದರಲ್ಲಿ ಅವ್ಯವಹಾರ ನಡೆದಿದ್ದು, ಅಕ್ರಮದಲ್ಲಿ ಚಂಪತ್​ ರಾಯ್​ ಮತ್ತು ಟ್ರಸ್ಟ್​ನ ಇನ್ನೊಬ್ಬ ಸದಸ್ಯ ಅನಿಲ್​ ಮಿಶ್ರಾ ಪಾಲಿದೆ ಎಂದು ಆಮ್​ ಆದ್ಮಿ ಪಕ್ಷದ ಸಂಸದ ಸಂಜಯ್​ ಸಿಂಗ್​ ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿದ್ದ ಆರ್​ಎಸ್​ಎಸ್​, ರಾಮಮಂದಿರ ನಿರ್ಮಾಣಕ್ಕೆ ಅಡ್ಡಿ ಪಡಿಸಲು ವಿರೋಧ ಪಕ್ಷಗಳು ರಾಜಕೀಯ ಹುನ್ನಾರ ನಡೆಸುತ್ತಿವೆ ಎಂದು ಹೇಳಿತ್ತು.

ಶ್ರೀರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಖರೀದಿ ಮಾಡುವಾಗ ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡುತ್ತಿವೆ. ಅಷ್ಟೇ ಅಲ್ಲ, ಇದರಲ್ಲಿ ಚಂಪತ್​ ರಾಯ್​​ರನ್ನೇ ನೇರವಾಗಿ ಹೊಣೆ ಮಾಡಲಾಗುತ್ತಿದೆ. ಈ ಮಧ್ಯೆ ಚಂಪತ್​ ರಾಯ್​ರನ್ನು ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆಗೆಯಲಾಗುತ್ತದೆ ಎಂಬುದೊಂದು ಮಾತೂ ಕೇಳಿಬರುತ್ತಿದೆ. ಆದರೆ ಇದನ್ನು ವಿಶ್ವ ಹಿಂದು ಪರಿಷತ್​ನ ಜಂಟಿ ಕಾರ್ಯದರ್ಶಿ ಸುರೇಂದರ್​ ಜೈನ್​ ತಳ್ಳಿ ಹಾಕಿದ್ದಾರೆ. ಶ್ರೀರಾಮಂದಿರ ನಿರ್ಮಾಣ ಕಾರ್ಯದಲ್ಲಿ ಚಂಪತ್ ರಾಯ್​ ಸಕ್ರಿಯರಾಗಿದ್ದಾರೆ. ಅವರನ್ನು ನೇಮಕ ಮಾಡಿದ್ದು ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್. ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ತಡೆಯುವುದು ಕಷ್ಟ, ಆದರೆ ನಮ್ಮ ಹೋರಾಟ ಮುಂದುವರಿಸುತ್ತೇವೆ; ಸಂಸದೆ ಸುಮಲತಾ

Ram Temple trust to set up economic legal advisory committees To oversee the transaction