ಕೃಷಿ ತಿದ್ದುಪಡಿ ಕಾಯ್ದೆ: ರೈತರು ಈ ಪರಿ ರೊಚ್ಚಿಗೇಳಲು ಕಾರಣವೇನು? ನೀವು ತಿಳಿದುಕೊಳ್ಳಬೇಕಿರುವ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ

ಅಷ್ಟಕ್ಕೂ ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಯಿಂದಾಗಿ ರೈತರಿಗೆ ಆಗಿರೋ ಸಮಸ್ಯೆಯಾದ್ರೂ ಏನು? ಕಾಯ್ದೆಯನ್ನೇ ರದ್ದು ಮಾಡೋಕೆ ಈ ಪರಿ ರೈತರು ಆಗ್ರಹಿಸ್ತಿರೋದು ಯಾಕೆ ಅನ್ನೋ ವಿಚಾರ ಸದ್ಯ ದೇಶಾದ್ಯಂತ ತೀವ್ರ ಚರ್ಚೆಯಾಗ್ತಿದೆ.

ಕೃಷಿ ತಿದ್ದುಪಡಿ ಕಾಯ್ದೆ: ರೈತರು ಈ ಪರಿ ರೊಚ್ಚಿಗೇಳಲು ಕಾರಣವೇನು? ನೀವು ತಿಳಿದುಕೊಳ್ಳಬೇಕಿರುವ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ
ರೈತ ಪ್ರತಿಭಟನೆ
Ayesha Banu

|

Dec 08, 2020 | 8:54 AM

ದೆಹಲಿ: ಅಷ್ಟಕ್ಕೂ ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಯಿಂದಾಗಿ ರೈತರಿಗೆ ಆಗಿರೋ ಸಮಸ್ಯೆಯಾದ್ರೂ ಏನು? ಕಾಯ್ದೆಯನ್ನೇ ರದ್ದು ಮಾಡೋಕೆ ಈ ಪರಿ ರೈತರು ಆಗ್ರಹಿಸ್ತಿರೋದು ಯಾಕೆ ಅನ್ನೋ ವಿಚಾರ ಸದ್ಯ ದೇಶಾದ್ಯಂತ ತೀವ್ರ ಚರ್ಚೆಯಾಗ್ತಿದೆ.

ಅತ್ತ ಮೋದಿ ಸರ್ಕಾರ ತನ್ನ ಕಾಯ್ದೆಯನ್ನ ಸಮರ್ಥಿಸಿಕೊಳ್ತಿದ್ದು, ರೈತ ಸಂಘಟನೆಗಳ ಜೊತೆ ಮ್ಯಾರಥಾನ್ ಮೀಟಿಂಗ್ ನಡೆಸಿ ಮನವೊಲಿಸೋ ಯತ್ನ ಮಾಡ್ತಿದೆ. ಹಾಗಿದ್ರೆ ರೈತರ ಆಗ್ರಹಗಳೇನೇನು? ಸರ್ಕಾರ ಹೇಳ್ತಿರೋದೇನು? ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ರಾಷ್ಟ್ರ ರಾಜಧಾನಿಯಲ್ಲಿ ಕಳೆದ 12 ದಿನಗಳಿಂದ ಸಾವಿರಾರು ಮಂದಿ ರೈತರು ಉಗ್ರ ಹೋರಾಟ ನಡೆಸ್ತಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದ ರೈತ ಸಂಘಟನೆಗಳು ಸಿಡಿದೆದ್ದು ಮಹಾ ಹೋರಾಟ ನಡೆಸ್ತಿವೆ. ಹೊಲದಲ್ಲಿ ಬೆವರು ಹರಿಸಿ ಬೆಳೆ ಬೆಳೆಯುತ್ತಿದ್ದ ಅನ್ನದಾತ, ದೆಹಲಿಯ ಕೊರೆಯುವ ಚಳಿಯಲ್ಲಿ, ರಸ್ತೆಯಲ್ಲೇ ಕುಳಿತು, ಮಲಗಿ, ಅಲ್ಲೇ ಊಟ, ತಿಂಡಿ ತಿಂದು ಮೋದಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾನೆ.

ಯೆಸ್.. ದೆಹಲಿಯಲ್ಲಿ ನಡೀತಿರೋದು. ಪಂಜಾಬ್, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರೈತರು ರೊಚ್ಚಿಗೆದ್ದಿರೋದು. ಇಂದಿನ ಭಾರತ್ ಬಂದ್​ಗೆ, ಉಗ್ರ ಹೋರಾಟಕ್ಕೆ ಕರೆ ಕೊಟ್ಟಿರೋದು ಸುಮ್ಮನೆ ಅಲ್ಲ. ಇಲ್ಲೊಂದು ಪ್ರಬಲ ಕಾರಣವಿದೆ. ಪ್ರತಿಭಟನೆ ಹಿಂದೆ ರೈತರ ಮಹತ್ವಾಕಾಂಕ್ಷೆ ಇದೆ. ಕೆಲ ಮಹತ್ವದ ಬೇಡಿಕೆಗಳಿವೆ. ತಾವಂದುಕೊಂಡಿದ್ದು ಈಡೇರೋವರೆಗೂ ಪ್ರತಿಭಟನಾ ಸ್ಥಳದಿಂದ ಕದಲದಿರಲು, ಹೋರಾಟದಿಂದ ಹಿಂದೆ ಸರಿಯದಿರಲು ರೈತರು ಅಚಲವಾಗಿಯೇ ನಿರ್ಧರಿಸಿದ್ದಾರೆ.

ಅಷ್ಟಕ್ಕೂ ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧ ರೈತರು ಈ ಪರಿ ಹೋರಾಟಕ್ಕಿಳಿದಿರೋದ್ಯಾಕೆ? ಕಾಯ್ದೆಯಲ್ಲಿ ಅನ್ನದಾತನಿಗೆ ತೊಂದರೆಯುಂಟಾಗುವಂತಾ ಅಂಶಗಳೇನಿದೆ. ರೈತರು ಯಾವುದನ್ನ ವಿರೋಧಿಸ್ತಿದ್ದಾರೆ. ಸರ್ಕಾರ ನೀಡ್ತಿರೋ ಸ್ಪಷ್ಟನೆಯಾದ್ರೂ ಏನು ಅನ್ನೋದನ್ನ ಇಲ್ಲಿ ಓದಿ ತಿಳಿಯಿರಿ.

‘ಕೃಷಿ ತಿದ್ದುಪಡಿ ಕಾಯ್ದೆ ರೈತ ವಿರೋಧಿ’ ಯೆಸ್.. ಇದೇ ಕಾರಣವನ್ನಿಟ್ಟುಕೊಂಡೇ ರೈತರು ಇಂಥದ್ದೊಂದು ಉಗ್ರ ಹೋರಾಟಕ್ಕಿಳಿದಿದ್ದಾರೆ. ಪ್ರತಿಭಟನೆ ನಡೆಸ್ತಿರೋ ರೈತರು, ರೈತ ಸಂಘಟನೆಗಳು ಹೇಳೋ ಪ್ರಕಾರ ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ರೈತ ವಿರೋಧಿಯಾಗಿದೆ. ಹೀಗಾಗಿ ತಿದ್ದುಪಡಿ ತರಲಾಗಿರೋ ಮೂರು ಕಾಯ್ದೆಗಳನ್ನೇ ರದ್ದುಮಾಡುವಂತೆ ರೈತರು ಬಿಗಿ ಪಟ್ಟು ಹಿಡಿದಿದ್ದಾರೆ.

ಕೇಂದ್ರಕ್ಕೆ ರೈತರ ಆಗ್ರಹ: ಕೃಷಿಗೆ ಸಂಬಂಧಿಸಿ ಸರ್ಕಾರ ಜಾರಿಗೊಳಿಸಿರೋ ಕೃಷಿ ತಿದ್ದುಪಡಿ, ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ ಸೇರಿದಂತೆ ಮೂರೂ ಕಾಯ್ದೆಗಳನ್ನ ರದ್ದುಗೊಳಿಸಬೇಕು ಅನ್ನೋದು ರೈತರ ಆಗ್ರಹ. ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಎಪಿಎಂಸಿಯನ್ನ ಯಾವುದೇ ಕಾರಣಕ್ಕೂ ಬಂದ್ ಮಾಡಬಾರದು. ಖಾಸಗಿಯವರಿಗೆ ಆಹಾರ ಧಾನ್ಯಗಳ ಸಂಗ್ರಹಣೆಗೆ ಅವಕಾಶ ನೀಡಿರೋದು ಸರಿಯಲ್ಲ.

ಯಾವುದೇ ನಿಯಂತ್ರಣ ಇಲ್ಲದೆ ಧಾನ್ಯ ಸಂಗ್ರಹಕ್ಕೆ ಅವಕಾಶ ನೀಡಲೇಬಾರದು. ನಿಯಂತ್ರಣವಿಲ್ಲದೆ ಖಾಸಗೀಕರಣ ಮಾಡೋದ್ರಿಂದ ಎಪಿಎಂಸಿ ಮುಚ್ಚಿ ಹೋಗಬಹುದು. ಖಾಸಗಿ ಮಾರುಕಟ್ಟೆಗಳು ಎಪಿಎಂಸಿ ವ್ಯವಸ್ಥೆಯನ್ನು ಮುಚ್ಚಿಹಾಕಬಹುದು. ಅಥವಾ ಎಂಪಿಎಂಸಿಗಳು ವ್ಯಾಪಾರವಿಲ್ಲದೆ ತಾವಾಗಿಯೇ ಬಾಗಿಲು ಹಾಕಿಕೊಳ್ಳಬಹುದು ಅನ್ನೋ ಭೀತಿ ರೈತರದ್ದು. ಇದಿಷ್ಟೇ ಅಲ್ಲ, ಭೂಸುಧಾರಣಾ ಕಾಯ್ದೆ ಬಗ್ಗೆಯೂ ರೈತರು ಆತಂಕಗೊಂಡಿದ್ದಾರೆ.

ಭೂಮಿ ಕಳೆದುಕೊಳ್ಳೋ ಭೀತಿ: ಕಾರ್ಪೊರೇಟ್‌ ಕಂಪನಿಗಳು ಬೇನಾಮಿ ಹೆಸರಲ್ಲಿ ರೈತರ ಜತೆ ಒಪ್ಪಂದ ಮಾಡಿಕೊಳ್ಳೋ ಸಾಧ್ಯತೆ ಇದೆ. ರೈತರ ಕೃಷಿ ಭೂಮಿಯನ್ನ ಕಾರ್ಪೊರೇಟ್ ಕಂಪನಿಗಳು ಗುತ್ತಿಗೆ ಪಡೆಯಬಹುದು. ಅದೇ ಭೂಮಿಯನ್ನು ಆಧಾರವಾಗಿಟ್ಟು ಸಾಲ ಪಡೆಯಲು ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಗುತ್ತಿಗೆ ಪಡೆದ ಭೂಮಿಯಲ್ಲಿ ಒಂದು ವೇಳೆ ನಷ್ಟ ಸಂಭವಿಸಿದ್ರೆ, ಗುತ್ತಿಗೆ ಪಡೆದ ಕಂಪನಿ ಭೂಮಿಯನ್ನ ಬಿಟ್ಟು ಹೋದ್ರೆ ರೈತನ ಪಾಡೇನು ಅನ್ನೋದು ಇಲ್ಲಿರೋರ ಪ್ರಶ್ನೆ. ಅಷ್ಟೇ ಅಲ್ಲ, ಕಂಪನಿಯು ಬ್ಯಾಂಕಿನಲ್ಲಿ ಪಡೆದಿದ್ದ ಸಾಲವನ್ನು ತೀರಿಸುವವರ ಯಾರು ಅನ್ನೋದು ಅನ್ನದಾತನ ಪ್ರಶ್ನೆ.

ಇಷ್ಟೆಲ್ಲಾ ಪ್ರಶ್ನೆಗಳನ್ನ ಇಟ್ಟುಕೊಂಡು, ಕಾಯ್ದೆ ವಿರೋಧಿಸಿ ರೈತರು ಕಳೆದ ಹಲವು ದಿನಗಳಿಂದ ಪಟ್ಟು ಸಡಿಲಿಸದೆ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಹೀಗಾಗಿ ಮೋದಿ ಸರ್ಕಾರ ಕೂಡ ರೈತ ಸಂಘಟನೆಗಳ ಜೊತೆಗೆ ಸರಣಿ ಸಭೆ ನಡೆಸ್ತಿದೆ. ಈ ವೇಳೆ ಕಾಯ್ದೆಯಿಂದ ರೈತರಿಗೆ ಆಗೋ ಪ್ರಯೋಜನದ ಜೊತೆಗೆ ಒಂದಷ್ಟು ಭರವಸೆಗಳನ್ನೂ ಕೇಂದ್ರ ಸರ್ಕಾರ ನೀಡಿದೆ.

ಕೇಂದ್ರ ಸರ್ಕಾರ ಹೇಳೋದೇನು? ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಖಾಸಗಿ ಮಾರುಕಟ್ಟೆಗಳು ಬೈಪಾಸ್ ಮಾರ್ಗವಿದ್ದಂತೆ. ಇದರಿಂದ ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆಗೆ ಯಾವುದೇ ಕುತ್ತಾಗುವುದಿಲ್ಲ. ರೈತರ ಉತ್ಪನ್ನಗಳಿಗೆ ಪರ್ಯಾಯ ಮಾರುಕಟ್ಟೆ ವ್ಯವಸ್ಥೆ ತೆರೆದುಕೊಳ್ಳಲಿದೆ. ಕೂಯ್ಲಿನ ಕಾಲದಲ್ಲಿ ರೈತರಿಂದ ಕ್ಷಿಪ್ರವಾಗಿ ಆಹಾರ ಧಾನ್ಯ ಸಂಗ್ರಹಿಸಬಹುದು. ಇದರಿಂದ ನೇರವಾಗಿ ರೈತರಿಗೇ ಶೀಘ್ರವಾಗಿ ಹಣ ದೊರೆಯುತ್ತದೆ ಅನ್ನೋದು ಸರ್ಕಾರದ ವಾದ.

ಅಷ್ಟೇ ಅಲ್ಲ, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಈಗಿನಂತೆ ಮುಂದುವರಿಕೆ, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತಾ ಕೇಂದ್ರ ಸರ್ಕಾರ ತಿಳಿಸಿದೆ. ಎಪಿಎಂಸಿ ಮತ್ತಷ್ಟು ಬಲಗೊಳಿಸಲು, ಅದರ ಬಳಕೆ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ನೂತನ ಕಾಯ್ದೆಯಡಿ ರಚನೆಯಾಗುವ ಖಾಸಗಿ ಮಂಡಳಿಗೆ ಸಮಾನ ತೆರಿಗೆ ವಿಧಿಸಲಾಗುತ್ತೆ. ಎಪಿಎಂಸಿಯಿಂದ ಹೊರಗಿನ ವ್ಯಾಪಾರಿಗಳ ನೋಂದಣಿಗೆ ಕಾಯ್ದೆಯಡಿ ಅವಕಾಶ ನೀಡಲಾಗುತ್ತೆ. ಕಾಯ್ದೆಯಲ್ಲಿ ಕೆಲ ಬದಲಾವಣೆಗಳನ್ನ ತರಲು ಸಿದ್ಧ ಅಂತಾ ಕೇಂದ್ರ ಸರ್ಕಾರ ತಿಳಿಸಿದೆ.

ಮೋದಿ ಸರ್ಕಾರವೇನು ರೈತರಿಗೆ ಏನೂ ಸಮಸ್ಯೆ ಆಗಲ್ಲ. ಒಂದಷ್ಟು ಬದಲಾವಣೆ ಮಾಡೋಕೆ ಸಿದ್ಧ ಅಂತಿದೆ. ಆದ್ರೆ, ಹೋರಾಟಕ್ಕಿಳಿದಿರೋ ರೈತರು ಮಾತ್ರ, ಬದಲಾವಣೆ ಬೇಕಾಗಿಲ್ಲ. ಇಡೀ ಕಾಯ್ದೆಯನ್ನೇ ರದ್ದುಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಕಾಯ್ದೆ ವಿರೋಧಿ ಸಮರ ಯಾವ ಹಂತ ತಲುಪುತ್ತೋ ಗೊತ್ತಿಲ್ಲ.

ಭಾರತ್ ಬಂದ್​ಗೆ ಹರಿದುಬರುತ್ತಿದೆ ಬೆಂಬಲ: ನಾಳೆ ಕಾಣಸಿಗುತ್ತದೆ ರಾಜ್ಯ ರೈತರ, ಕಾರ್ಮಿಕರ ಬಲಾಬಲ

Follow us on

Related Stories

Most Read Stories

Click on your DTH Provider to Add TV9 Kannada