ದೆಹಲಿಯಲ್ಲಿ ಭರ್ಜರಿ ಮಳೆ; 14 ವರ್ಷದ ನಂತರ ಸುರಿದ ದಾಖಲೆ ಮಳೆಗೆ ತತ್ತರಿಸಿದ ನಗರ
Delhi Rain: ಶುಕ್ರವಾರ ಬೆಳಗ್ಗೆ 8.30ರಿಂದ ಶನಿವಾರ ಮುಂಜಾನೆ 8.30ರವರೆಗೆ (24 ತಾಸುಗಳು) ದೆಹಲಿಯ ಸಫ್ದರ್ಜಂಗ್ನಲ್ಲಿ 138.8 ಮಿಮೀ ಮಳೆಬಿದ್ದಿದೆ. ಈ ಮಳೆಗಾಲದ ಅತ್ಯಂತ ಹೆಚ್ಚಿನ ಪ್ರಮಾಣದ ಮಳೆ ಎಂದು ಹೇಳಲಾಗಿದೆ.

ದೆಹಲಿ: ರಾಷ್ಟ್ರರಾಜಧಾನಿ ದೆಹಲಿ (Delhi Rain) ನಿನ್ನೆ ಭರ್ಜರಿ ಮಳೆಗೆ ತತ್ತರಿಸಿದೆ. ಕಳೆದ 10 ದಿನಗಳಿಂದಲೂ ಬಿಸಿಲು, ಆರ್ದ್ರ ವಾತಾವರಣ ಇದ್ದ ದೆಹಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ನಿನ್ನೆ ಅಬ್ಬರದ ಮಳೆ ಸುರಿದಿದೆ. ಶನಿವಾರ 138.8 ಮಿಮೀ (24ಗಂಟೆಗಳಲ್ಲಿ) ಮಳೆ ದಾಖಲಾಗಿದೆ. ಕಳೆದ 14 ವರ್ಷಗಳಲ್ಲಿ, ಆಗಸ್ಟ್ ತಿಂಗಳಲ್ಲಿ ಒಂದು ದಿನದಲ್ಲಿ ಇಷ್ಟು ಪ್ರಮಾಣದಲ್ಲಿ ಮಳೆ ಬಿದ್ದಿರಲಿಲ್ಲ. ಹಾಗಾಗಿ ಇದು ಆಗಸ್ಟ್ ತಿಂಗಳ ದಾಖಲೆಯ ಮಳೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಇನ್ನೊಂದು ಏನೆಂದರೆ, 1961ರಿಂದ ಇಲ್ಲಿಯವರೆಗಿನ 9ನೇ ಅತಿ ಹೆಚ್ಚು ಪ್ರಮಾಣದ ಮಳೆಯಾಗಿದೆ.
ನಿನ್ನೆ (ಶನಿವಾರ) ಮುಂಜಾನೆಯಿಂದ ದೆಹಲಿಯಲ್ಲಿ ಒಂದೇ ಸಮ ಮಳೆ ಸುರಿದಿದೆ. ಹಲವು ನಗರಗಳ ರಸ್ತೆಗಳು, ಅಂಡರ್ ಪಾಸ್ಗಳೆಲ್ಲ ಜಲಾವೃತಗೊಂಡಿದ್ದವು. ದೆಹಲಿ ಮಧ್ಯ ಭಾಗದಲ್ಲಿರುವ ಮಿಂಟೋ ಸೇತುವೆಯೂ ಕೂಡ ಬಂದ್ ಆಗಿತ್ತು. ಸಿಕ್ಕಾಪಟೆ ಟ್ರಾಫಿಕ್ ಉಂಟಾಗಿತ್ತು. ಮುಂದೆ ಚಲಿಸಲಾಗದೆ ಸಾಲುಗಟ್ಟಿ ನಿಂತ ವಾಹನಗಳ ಫೋಟೋಗಳೂ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ನಗರದಲ್ಲಿ ಮಳೆಯಿಂದ ಕ್ಲೋಸ್ ಆದ ರಸ್ತೆಗಳ ಬಗ್ಗೆ ದೆಹಲಿ ಟ್ರಾಫಿಕ್ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಸುವ ಕೆಲಸ ಮಾಡಿದ್ದಾರೆ.

ಆಜಾದ್ಪುರದಲ್ಲಿ ಟ್ರಾಫಿಕ್
ಸಫ್ದರ್ಜಂಗ್ನಲ್ಲಿ ದಾಖಲೆಯ ಮಳೆ ಶುಕ್ರವಾರ ಬೆಳಗ್ಗೆ 8.30ರಿಂದ ಶನಿವಾರ ಮುಂಜಾನೆ 8.30ರವರೆಗೆ (24 ತಾಸುಗಳು) ದೆಹಲಿಯ ಸಫ್ದರ್ಜಂಗ್ನಲ್ಲಿ 138.8 ಮಿಮೀ ಮಳೆಬಿದ್ದಿದೆ. ಈ ಮಳೆಗಾಲದ ಅತ್ಯಂತ ಹೆಚ್ಚಿನ ಪ್ರಮಾಣದ ಮಳೆ ಎಂದು ಹೇಳಲಾಗಿದೆ. ಅದರಲ್ಲೂ ಶುಕ್ರವಾರ ಮಧ್ಯರಾತ್ರಿ 2.30 ರಿಂದ ಶನಿವಾರ 8.30ರವರೆಗೆ ಅಂದರೆ ಆರು ತಾಸುಗಳ ಕಾಲ ಒಂದೇ ಸಮನೆ, ಕ್ಷಣವೂ ನಿಲ್ಲದಂತೆ ಮಳೆ ಬಿದ್ದಿದೆ. ದೆಹಲಿಯಲ್ಲಿ 24ಗಂಟೆಯಲ್ಲಿ ಇಷ್ಟು ಪ್ರಮಾಣದ ಮಳೆಯಾಗಿದ್ದು, 2007ರ ಆಗಸ್ಟ್ 2ರಂದು. ಅಂದು ಇದಕ್ಕಿಂತಲೂ ಹೆಚ್ಚು ಮಳೆಬಿದ್ದಿತ್ತು. ಆಗಸ್ಟ್ 2ರಂದು 166.6 ಮಿಮೀ ದಾಖಲಾಗಿತ್ತು. ಅದಕ್ಕೂ ಮಿಗಿಲಾಗಿ 1961ರ ಆಗಸ್ಟ್ 2ರಂದು ಒಂದೇ ದಿನ 184 ಮಿಮೀ ಮಳೆಯಾಗಿದ್ದು, ಇಲ್ಲಿಯವರೆಗಿನ ದಾಖಲೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
1961ರ ನಂತರ 9ನೇ ಅತಿಹೆಚ್ಚು ಪ್ರಮಾಣದ ಮಳೆ ಶನಿವಾರ ಸುರಿದಿದೆ. ಮೋಡಗಳ ಗುಚ್ಛ ದೆಹಲಿಯ ಉತ್ತರ ಮತ್ತು ಮಧ್ಯ ಭಾಗಗಳ ಗುಂಟ ಸಾಗಿದ್ದೇ ಇದಕ್ಕೆ ಕಾರಣ. ಗುಡುಗು-ಮಿಂಚುಗಳೂ ಇದೇ ಕಾರಣಕ್ಕೆ ಹೆಚ್ಚಾಗಿತ್ತು. ಆಗಸ್ಟ್ 23ರವರೆಗೂ ಸಣ್ಣ ಪ್ರಮಾಣದ ಮಳೆ ಬೀಳುತ್ತಲೇ ಇರುತ್ತದೆ ಎಂದು ಹವಾಮಾನ ತಜ್ಞ ಆರ್.ಕೆ ಜೆನಮಣಿ ತಿಳಿಸಿದ್ದಾರೆ.

ಜಹಂಗೀರ್ ಪುರಿಯಲ್ಲಿ ಮಹಿಳೆಯೊಬ್ಬರು ಮನೆಗೆ ನುಗ್ಗಿದ್ದ ನೀರನ್ನು ಹೊರಚೆಲ್ಲುತ್ತಿರುವುದು




