
ನವದೆಹಲಿ, ನವೆಂಬರ್ 15: ದೆಹಲಿಯಲ್ಲಿ ಮೊದಲ ಆತ್ಮಹತ್ಯಾ ಕಾರು ಸ್ಫೋಟ (Delhi Car Blast) ಸಂಭವಿಸಿದೆ. ಸಾಂಪ್ರದಾಯಿಕ ಬೆದರಿಕೆಗಳಿಗಿಂತ ಭಿನ್ನವಾಗಿ ಈ ರೀತಿಯ ವಾಹನಗಳ ಆತ್ಮಹತ್ಯಾ ಬಾಂಬ್ ಸ್ಫೋಟ (SVBIED)ಗಳನ್ನು ಪತ್ತೆಹಚ್ಚುವುದು ಮತ್ತು ತಡೆಯುವುದು ಅತ್ಯಂತ ಕಷ್ಟ. ಅದರ ವಿನಾಶಕಾರಿ ಸಾಮರ್ಥ್ಯ ಕೂಡ ವ್ಯಕ್ತಿಯಿಂದ ಉಂಟಾಗುವ ಸ್ಫೋಟಕಗಳಿಗಿಂತಲೂ ವಿನಾಶವಾಗಿರುತ್ತದೆ. ಕಳೆದ ವಾರ ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟ ಭಾರತದಲ್ಲಿ ಹೊಸ ಬಗೆಯ ಭದ್ರತಾ ಆತಂಕವನ್ನು ಹೆಚ್ಚಿಸಿದೆ.
SVBIEDಗಳು ವ್ಯಕ್ತಿಗಳಿಂದ ಹರಡುವ ಸ್ಫೋಟಕ ದಾಳಿಗಳಿಗಿಂತ ಹೆಚ್ಚು ಮಾರಕವಾಗಿವೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು, VBIED (ವಾಹನಗಳಿಂದ ಹರಡುವ ಸುಧಾರಿತ ಸ್ಫೋಟಕ ಸಾಧನ)ಯ ಅಪಾಯವು ಸ್ಫೋಟವಾಗುವ ವಸ್ತುವಿನಲ್ಲಿ ಮಾತ್ರವಲ್ಲದೆ ವಾಹನದಲ್ಲಿಯೂ ಇರುತ್ತದೆ. ಅದು ಸ್ಫೋಟಿಸಿದಾಗ ಕಾರಿನ ಭಾಗಗಳು, ಬಾಗಿಲುಗಳು, ಚಾಸಿಸ್, ಎಂಜಿನ್ ಬ್ಲಾಕ್‌ಗಳು ಮತ್ತು ಗಾಜುಗಳು ಹೆಚ್ಚಿನ ವೇಗದ ಸ್ಪೋಟಕಗಳಾಗಿ ರೂಪಾಂತರಗೊಳ್ಳುತ್ತವೆ. ಇದು ಈ ಸ್ಫೋಟವನ್ನು ಇನ್ನಷ್ಟು ವಿನಾಶಕಾರಿಯಾಗಿಸುತ್ತದೆ. ಇದರಿಂದಾಗಿಯೇ ಸಾವು-ನೋವು ಹೆಚ್ಚಾಗುತ್ತದೆ. ಕಾರಿನೊಳಗಿಂದ ಸ್ಫೋಟಕ ಸ್ಫೋಟಿಸಿದಾಗ ಕಾರು ಕೂಡ ಒಂದು ಆಯುಧವಾಗಿ, ಅದರ ಭಾಗಗಳು ಸ್ಫೋಟದ ವೇಗ, ಪರಿಣಾಮವನ್ನು ಮೂರು ಪಟ್ಟು ಹೆಚ್ಚಾಗಿಸುತ್ತದೆ.
ಇದನ್ನೂ ಓದಿ: ದೆಹಲಿ ಸ್ಫೋಟದ ಆರೋಪಿಗೂ ಪುಲ್ವಾಮಾ ದಾಳಿಯ ಮಾಸ್ಟರ್ಮೈಂಡ್ ಪತ್ನಿಗೂ ಇತ್ತು ಲಿಂಕ್!
2019ರ ಪುಲ್ವಾಮಾ ದಾಳಿಯಲ್ಲಿ ಈ ತಂತ್ರವನ್ನು ಕಾಣಬಹುದು. ಅಲ್ಲಿ ಜೆಇಎಂ ಆತ್ಮಹತ್ಯಾ ಬಾಂಬರ್ ಸ್ಫೋಟಕಗಳಿಂದ ತುಂಬಿದ ವಾಹನದಿಂದ ಸಿಆರ್‌ಪಿಎಫ್ ಬೆಂಗಾವಲು ಪಡೆಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಭಾರತೀಯ ಸೇನೆಯ 40 ಸಿಬ್ಬಂದಿ ಸಾವನ್ನಪ್ಪಿದ್ದರು. 2022ರಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಇದೇ ರೀತಿಯ ಮತ್ತೊಂದು ಘಟನೆ ಸಂಭವಿಸಿತು. ಸ್ಫೋಟಕಗಳು ಮತ್ತು ಎಲ್‌ಪಿಜಿ ಸಿಲಿಂಡರ್‌ಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಸ್ಫೋಟಗೊಂಡು ಹತ್ತಿರದಲ್ಲಿದ್ದ ಕಾರು ಚಾಲಕ ಸೇರಿದಂತೆ ಅನೇಕರು ಸಾವನ್ನಪ್ಪಿದ್ದರು. ಆದರೂ, ಭಾರತದಲ್ಲಿ ಇಂತಹ ದಾಳಿಗಳು ಅಪರೂಪವೆಂದೇ ಹೇಳಬಹುದು. ಆದರೆ ಈ ರೀತಿಯ ಸ್ಫೋಟ ಸಂಭವಿಸಿದಾಗ, ಅವು ಹೆಚ್ಚು ವಿನಾಶಕಾರಿ ಪರಿಣಾಮಗಳನ್ನು ಬೀರುತ್ತವೆ.
ಈ ರೀತಿಯ ಸ್ಫೋಟಕ ಇರುವ ವಾಹನವನ್ನು ಪತ್ತೆಹಚ್ಚುವುದು ಕೂಡ ಸುಲಭವಲ್ಲ. ಇದು ನಮ್ಮ ದೇಶದ ಭದ್ರತಾ ವ್ಯವಸ್ಥೆಗೆ ಇರುವ ದೊಡ್ಡ ಸವಾಲು. ಈ ರೀತಿಯ SVBIEDಗಳನ್ನು ತಡೆಯುವುದು ಕಷ್ಟ. ಈ SVBIED ಅನ್ನು ಸಾಮಾನ್ಯವಾಗಿ ಜನರು ದಿನನಿತ್ಯ ಉಪಯೋಗಿಸುವ ವಾಹನದೊಳಗೆ ಮರೆಮಾಡಲಾಗುತ್ತದೆ. ಇದು ಸ್ಫೋಟಗೊಳ್ಳುವವರೆಗೆ ಇದು ಯಾವ ವಾಹನದಲ್ಲಿದೆ ಎಂದು ಪತ್ತೆಹಚ್ಚುವುದು ಸಾಧ್ಯವಾಗದು. ಆತ್ಮಹತ್ಯಾ ಬಾಂಬ್ ದಾಳಿ ನಡೆಸುವ ವ್ಯಕ್ತಿಯನ್ನಾದರೆ ತಪಾಸಣೆ ಮಾಡುವಾಗ ಬಾಂಬ್ ಇರುವುದು ಪತ್ತೆಯಾಗುತ್ತದೆ. ಆದರೆ, ವಾಹನವನ್ನು ಆ ರೀತಿ ತಪಾಸಣೆಗೆ ಒಳಪಡಿಸುವುದು ಕಷ್ಟಸಾಧ್ಯ.
ಇದನ್ನೂ ಓದಿ: ಶ್ರೀನಗರ ನೌಗಾಮ್ ಪೊಲೀಸ್ ಠಾಣೆಯಲ್ಲಿ ಭಾರೀ ಸ್ಫೋಟ: ಪೊಲೀಸರು ಸೇರಿ 9 ಮಂದಿ ಸಾವು, ದೆಹಲಿ ಸ್ಫೋಟ ಬೆನ್ನಲ್ಲೇ ಮತ್ತೊಂದು ಕೃತ್ಯ
ಈ ರೀತಿಯ ವಾಹನದೊಳಗಿನ ಆತ್ಮಹತ್ಯಾ ಬಾಂಬ್ ದಾಳಿಯಿಂದ ಮೊದಲು ಶ್ವಾಸಕೋಶಗಳು, ಕಿವಿಗಳು, ಕರುಳುಗಳು ಮತ್ತು ಇತರ ಗಾಳಿ ತುಂಬಿದ ಅಂಗಗಳಿಗೆ ಹಾನಿ ಮಾಡುತ್ತದೆ. ಹೆಚ್ಚಿನ ವೇಗದ ಕಾರು ಸ್ಫೋಟಗೊಂಡಾಗ ಅದರ ತುಣುಕುಗಳು ಪಕ್ಕದಲ್ಲಿರುವವರನ್ನು ಗಾಯಗೊಳಿಸುತ್ತವೆ. ಅವು ದೇಹ ಮತ್ತು ಸುತ್ತಮುತ್ತಲಿನ ವಾಹನಗಳನ್ನು, ಕಟ್ಟಡಗಳನ್ನು ಒಂದೇ ರೀತಿ ಭೇದಿಸುತ್ತವೆ. ಇದರಿಂದ ಸುತ್ತಲಿನ ಜನರು ಮತ್ತು ವಾಹನಗಳು ದೂರಕ್ಕೆ ಎಸೆಯಲ್ಪಡುತ್ತಾರೆ. ಇದಾದ ನಂತರ ಕಾರಿನ ಇಂಧನವು ಹೊತ್ತಿಕೊಳ್ಳುತ್ತದೆ. ಸುಟ್ಟಗಾಯಗಳಿಂದಲೂ ಅನೇಕ ಜನರು ಸಾಯುತ್ತಾರೆ, ಸುತ್ತಮುತ್ತಲಿನ ಪರಸರಕ್ಕೆ ಇನ್ನಷ್ಟು ಹಾನಿಯಾಗುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ