ಹರಿದ್ವಾರ ದ್ವೇಷ ಭಾಷಣ ಅಲ್ಲ, ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಧಾರ್ಮಿಕ ಮುಖಂಡನನ್ನು ಬಂಧಿಸಲಾಗಿದೆ: ಪೊಲೀಸರು

ದ್ವೇಷ ಭಾಷಣ ಪ್ರಕರಣದಲ್ಲಿ ಧಾರ್ಮಿಕ ಮುಖಂಡನಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಆ ಪ್ರಕರಣದಲ್ಲೂ ಆತನನ್ನು ರಿಮಾಂಡ್ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. "ಯತಿ ನರಸಿಂಹಾನಂದ್ ಅವರನ್ನು ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಬಂಧಿಸಲಾಗಿದೆ

ಹರಿದ್ವಾರ ದ್ವೇಷ ಭಾಷಣ ಅಲ್ಲ, ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಧಾರ್ಮಿಕ ಮುಖಂಡನನ್ನು ಬಂಧಿಸಲಾಗಿದೆ: ಪೊಲೀಸರು
ಧಾರ್ಮಿಕ ಮುಖಂಡ ಯತಿ ನರಸಿಂಹಾನಂದ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 16, 2022 | 4:26 PM

ದೆಹಲಿ: ಕಳೆದ ತಿಂಗಳು ಹರಿದ್ವಾರದಲ್ಲಿ(Haridwar) ಮುಸ್ಲಿಮರ ನರಮೇಧಕ್ಕೆ ಕರೆನೀಡುವ ಕಾರ್ಯಕ್ರಮವನ್ನು ಆಯೋಜಿಸಿದ್ದ ಧಾರ್ಮಿಕ ಮುಖಂಡ ಯತಿ ನರಸಿಂಹಾನಂದ್ ಅವರನ್ನು ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಾಗಿ ಬಂಧಿಸಲಾಗಿದೆಯೇ ಹೊರತು ಧರ್ಮ ಸಂಸದ್ ಅಥವಾ ಧಾರ್ಮಿಕ ಸಭೆಯಲ್ಲಿ ದ್ವೇಷ ಭಾಷಣಕ್ಕಾಗಿ(Hate Speech) ಅಲ್ಲ ಎಂದು ಪೊಲೀಸರು ಎನ್‌ಡಿಟಿವಿಗೆ ತಿಳಿಸಿದ್ದಾರೆ. ದ್ವೇಷ ಭಾಷಣ ಪ್ರಕರಣದಲ್ಲಿ ಧಾರ್ಮಿಕ ಮುಖಂಡನಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಆ ಪ್ರಕರಣದಲ್ಲೂ ಆತನನ್ನು ರಿಮಾಂಡ್ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. “ಯತಿ ನರಸಿಂಹಾನಂದ್ ಅವರನ್ನು ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಬಂಧಿಸಲಾಗಿದೆ. ಇದು ಹರಿದ್ವಾರದಲ್ಲಿನ ದ್ವೇಷ ಭಾಷಣ ಪ್ರಕರಣವಲ್ಲ. ಅವರಿಗೆ ಇಲ್ಲಿಯವರೆಗೆ ಆ ಪ್ರಕರಣದಲ್ಲಿ ನೋಟಿಸ್ ನೀಡಲಾಗಿದೆ. ದ್ವೇಷ ಭಾಷಣ ಪ್ರಕರಣಕ್ಕೂ ಅವರನ್ನು ರಿಮಾಂಡ್ ಮಾಡಲಾಗುವುದು, ಪ್ರಕ್ರಿಯೆ ನಡೆಯುತ್ತಿದೆ. ರಿಮಾಂಡ್ ಅರ್ಜಿ ದ್ವೇಷ ಭಾಷಣದ ಪ್ರಕರಣದ ವಿವರಗಳನ್ನು ಸಹ ಒಳಗೊಂಡಿರುತ್ತದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು. ನರಸಿಂಹಾನಂದ್ ವಿರುದ್ಧದ ಪ್ರಸ್ತುತ ಪ್ರಕರಣ ಮಹಿಳಾ ವಿರೋಧಿ ಹೇಳಿಕೆಗೆ ಸಂಬಂಧಿಸಿದೆ. ಇತರ ಧರ್ಮಗಳ ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಹೇಳಿಕೆಗಳಿಗಾಗಿ ಈ ತಿಂಗಳ ಆರಂಭದಲ್ಲಿ ಸಲ್ಲಿಸಲಾದ ದೂರನ್ನು ಆಧರಿಸಿದೆ. ಮಹಿಳೆಯರನ್ನು ಅವಮಾನಿಸುವ ಆರೋಪದ ಜೊತೆಗೆ ದ್ವೇಷ ಭಾಷಣದ ಆರೋಪಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಆದರೆ, ಇದು ಹರಿದ್ವಾರದಲ್ಲಿ ನಡೆದ ಧರಮ್ ಸಂಸದ್‌ನಲ್ಲಿ ನಡೆದ ದ್ವೇಷದ ಭಾಷಣಗಳಿಗೆ ಸಂಬಂಧಿಸಿಲ್ಲ. ಕಳೆದ ತಿಂಗಳು ಹರಿದ್ವಾರ “ಧರ್ಮ ಸಂಸದ್” ಅಥವಾ ಧಾರ್ಮಿಕ ಸಭೆಯಲ್ಲಿ ದ್ವೇಷದ ಭಾಷಣಗಳ ಕುರಿತು ದಾಖಲಿಸಲಾದ ಎಫ್‌ಐಆರ್‌ಗಳಲ್ಲಿ ಹೆಸರಿಸಲಾದ ವ್ಯಕ್ತಿಗಳಲ್ಲಿ ಯತಿ ನರಸಿಂಹಾನಂದ್ ಕೂಡ ಸೇರಿದ್ದಾರೆ. ಮತಾಂತರಗೊಳ್ಳುವ ಮುನ್ನ ವಸೀಂ ರಿಜ್ವಿಯಾಗಿದ್ದ ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ ಈ ಪ್ರಕರಣದಲ್ಲಿ ಇದುವರೆಗೆ ಬಂಧಿಸಲಾದ ಏಕೈಕ ಸಹ ಆರೋಪಿ. ಘಟನೆ ನಡೆದ ಸುಮಾರು ಒಂದು ತಿಂಗಳ ನಂತರ, ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರವೇ ಅವರ ಬಂಧನ ನಡೆದಿದೆ.

ಕಳೆದ ಎರಡು ವಾರಗಳಲ್ಲಿ, ಕೇಸರಿ ವಸ್ತ್ರಧಾರಿ ನರಸಿಂಹಾನಂದ್ ಅವರು ಪೋಲೀಸ್ ಅಧಿಕಾರಿಯೊಬ್ಬರಲ್ಲಿ ಗಲಾಟೆ ಮಾಡುತ್ತಾ “ನೀವೆಲ್ಲರೂ ಸಾಯುತ್ತೀರಿ” ಎಂದು ಹೇಳಿದ್ದರು.  ಡಿಸೆಂಬರ್ 17 ರಿಂದ 20 ರವರೆಗೆ ನಡೆದ ಹರಿದ್ವಾರದ ಕಾರ್ಯಕ್ರಮದ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಯಿತು ಮತ್ತು ಮಾಜಿ ಮಿಲಿಟರಿ ಮುಖ್ಯಸ್ಥರು, ನಿವೃತ್ತ ನ್ಯಾಯಾಧೀಶರು, ಕಾರ್ಯಕರ್ತರು ಮತ್ತು ಅಂತರರಾಷ್ಟ್ರೀಯ ಟೆನಿಸ್ ದಂತಕಥೆ ಮಾರ್ಟಿನಾ ನವ್ರಾಟಿಲೋವಾ ಅವರಿಂದಲೂ ತೀವ್ರ ಟೀಕೆಗೆ ಗುರಿಯಾಯಿತು.

ಕಾರ್ಯಕ್ರಮವನ್ನು ಆಯೋಜಿಸಿದವರು ಮತ್ತು ದ್ವೇಷದ ಭಾಷಣಗಳನ್ನು ನೀಡಿದವರು ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. “ನಾನು ಹೇಳಿದ್ದಕ್ಕೆ ನನಗೆ ನಾಚಿಕೆಯಾಗುವುದಿಲ್ಲ, ನಾನು ಪೊಲೀಸರಿಗೆ ಹೆದರುವುದಿಲ್ಲ, ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ” ಎಂದು ಪ್ರಬೋಧಾನಂದ ಗಿರಿ ಡಿಸೆಂಬರ್ 23 ರಂದು ಎನ್​​ಡಿಟಿವಿಗೆ ಹೇಳಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಧಾಮಿ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ಆಗಾಗ್ಗೆ ಫೋಟೋದಲ್ಲಿ ಕಾಣಿಸಿಕೊಂಡಿದ್ದರು ಈ ಪ್ರಬೋಧಾನಂದ ಗಿರಿ.

ಇದನ್ನೂ ಓದಿ:  ಹರಿದ್ವಾರ ಧಾರ್ಮಿಕ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಆರೋಪ; ಮಧ್ಯ ಪ್ರವೇಶಿಸುವಂತೆ ಸಿಜೆಐ ರಮಣಗೆ ಪತ್ರ ಬರೆದ 76 ವಕೀಲರು