ದೆಹಲಿ: ಜುಬಿಲಿಯಿಂಟ್ ಫಾರ್ಮೊವಾ ಲಿಮಿಟೆಡ್ನ ಅಂಗಸಂಸ್ಥೆಯಾದ ಜುಬಿಲಿಯಂಟ್ ಫಾರ್ಮಾ ಲಿಮಿಟೆಡ್ ಕಂಪನಿಯು ನುಂಗುವ ರೂಪದ (ಓರಲ್) ರೆಮ್ಡೆಸಿವಿರ್ ಔಷಧವನ್ನು ಅಭಿವೃದ್ಧಿಪಡಿಸಿದೆ. ಈಗಾಗಲೇ ಪ್ರಾಥಮಿಕ ಹಂತದ ಸುರಕ್ಷಾ ಪ್ರಯೋಗಗಳು ಸಂಪೂರ್ಣಗೊಂಡಿದ್ದು, ಭಾರತ ಔಷಧ ಮಹಾ ನಿಯಂತ್ರಕರ ಬಳಿ (Drug Controller General of India – DCGI) ಉನ್ನತ ಹಂತದ ಪ್ರಯೋಗಗಳಿಗೆ ಅನುಮತಿ ಕೋರಿ ಸಂಸ್ಥೆಯು ಅರ್ಜಿ ಸಲ್ಲಿಸಿದೆ.
ಇಂಜೆಕ್ಷನ್ಗೆ ಹೋಲಿಸಿದರೆ ಬಾಯಿಯ ಮೂಲಕ ತೆಗೆದುಕೊಳ್ಳುವ ಔಷಧದ ದರವೂ ಕಡಿಮೆ, ರೋಗಿಗಳಿಗೆ ನೀಡಲೂ ಸುಲಭ. ಕೋವಿಡ್-19 ರೋಗಿಗಳನ್ನು ಉಪಚರಿಸಲು ಇದು ಉತ್ತಮ ಆಯ್ಕೆ ಆಗಬಹುದು. ನುಂಗುವ ರೂಪದ ಈ ಔಷಧವನ್ನು ಐದು ದಿನ ಕೊಡಬೇಕಾಗಬಹುದು. ಅಮೆರಿಕದ ಎಫ್ಡಿಎ (Food and Drug Administration – FDA) ಸಂಪೂರ್ಣ ಅನುಮೋದನೆ ನೀಡಿರುವ ಮೊದಲ ಮತ್ತು ಏಕೈಕ ಔಷಧ ರೆಮ್ಡೆಸಿವಿರ್.
ರೆಮ್ಡಿಸಿವಿರ್ನ ಈ ಹೊಸ ರೂಪಕ್ಕೆ ಅನುಮೋದನೆ ದೊರೆತರೆ ಇಂಜೆಕ್ಷನ್ ಪೂರೈಕೆಗಾಗಿ ಫಾರ್ಮಾ ಕಂಪನಿಗಳ ಮೇಲಿರುವ ಒತ್ತಡವೂ ತುಸು ಕಡಿಮೆಯಾಗುತ್ತದೆ. ಕೋವಿಡ್-19 ರೋಗಿಗಳಿಗೆ ಔಷಧ ಸಿಗುವುದರಲ್ಲಿ ಇರುವ ತೊಂದರೆಯೂ ತಪ್ಪುತ್ತದೆ. ಈ ಔಷಧಕ್ಕೆ ಸಂಬಂಧಿಸಿದಂತೆ ಪ್ರಿಕ್ಲಿನಿಕಲ್ ಮತ್ತು ಸ್ವಯಂಸೇವಕರ ಮೇಲೆ ನಡೆಸಿದ ಅಧ್ಯಯನಗಳು ಪರಿಣಾಮಕಾರಿಯಾಗಿವೆ. ಇಂಜೆಕ್ಷನ್ ರೂಪಕ್ಕೆ ಹೋಲಿಸಿದರೆ ನುಂಗುವ ರೂಪದ ರೆಮ್ಡೆಸಿವಿರ್ನ ಅಡ್ಡಪರಿಣಾಮಗಳು ಕಡಿಮೆ ಎಂದು ಕಂಪನಿ ಹೇಳಿಕೊಂಡಿದೆ.
ಕಳೆದ ಮೇ 2020ರಲ್ಲಿ ಜ್ಯುಬಿಲಿಯಂಟ್ ಕಂಪನಿಯು ರೆಮ್ಡೆಸಿವಿರ್ ಅಭಿವೃದ್ಧಿಪಡಿಸಿದ ಮಾತೃಸಂಸ್ಥೆ ಗಿಲಿಯಾಡ್ ಸೈನ್ಸಸ್ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. 127 ದೇಶಗಳಲ್ಲಿ ರೆಮ್ಡೆಸಿವಿರ್ ಔಷಧವನ್ನು ಉತ್ಪಾದಿಸುವ, ಮಾರುವ ಮತ್ತು ನೋಂದಣಿ ಮಾಡುವ ಹಕ್ಕನ್ನೂ ಪಡೆದುಕೊಂಡಿತ್ತು. ಜುಲೈ 20, 2020ರಲ್ಲಿ ಜುಬಿಲಿಯಂಟ್ ಕಂಪನಿಗೆ ರೆಮ್ಡೆಸಿವಿರ್ 100 ಎಂಜಿ ಮಾತ್ರೆ / ಇಂಜೆಕ್ಷನ್ ಬಾಟಲಿ ಮಾರಾಟಕ್ಕೆ ತುರ್ತು ಅನುಮತಿ ಸಿಕ್ಕಿತ್ತು.
‘ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಒಂದು ಹೊಸ ಸುದ್ದಿ ಹಂಚಿಕೊಳ್ಳುತ್ತಿದ್ದೇವೆ. ನಮ್ಮ ಪ್ರಸ್ತಾವಕ್ಕೆ ಅನುಮತಿ ಸಿಕ್ಕರೆ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವ ಸುಲಭ ಮತ್ತು ಪರಿಣಾಮಕಾರಿ ಮಾರ್ಗವನ್ನು ಪರಿಚಯಿಸುವುದಷ್ಟೇ ಅಲ್ಲ, ಕೋವಿಡ್-19 ಚಿಕಿತ್ಸೆಗೆ ನಮ್ಮಿಂದಾದ ರೀತಿಯಲ್ಲಿ ಸಹಕರಿಸುತ್ತೇವೆ,’ ಎಂದು ಜುಬಿಲಿಯಂಟ್ ಫಾರ್ಮೊವಾ ಕಂಪನಿಯ ಅಧ್ಯಕ್ಷ ಶ್ಯಾಮ್ ಎಸ್.ಭಾರತೀಯ ತಿಳಿಸಿದ್ದಾರೆ.
ದೇಶದಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೆಮ್ಡೆಸಿವಿರ್ ಕೊರತೆ ಎಲ್ಲೆಲ್ಲೂ ಕಾಣಿಸುತ್ತಿದೆ. ಆ್ಯಂಟಿ ವೈರಲ್ ಔಷಧದ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಔಷಧದ ಕೊರತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಜುಬಿಲಿಯಂಟ್ ಕಂಪನಿಗೆ ಹೊರ ರೂಪದ ರೆಮ್ಡೆಸಿವಿರ್ ಉತ್ಪಾದನೆಗೆ ತುರ್ತು ಅನುಮತಿ ನೀಡುವ ಸಾಧ್ಯತೆಗಳು ನಿಚ್ಚಳವಾಗಿವೆ.
(Remdesivir to come in oral formulation drug regulators nod awaited says Jubilant Pharma)
ಇದನ್ನೂ ಓದಿ: ರೆಮ್ಡೆಸಿವಿರ್ ಚುಚ್ಚುಮದ್ದಿನ ಉತ್ಪಾದನೆ ಹೆಚ್ಚಳ; ಬೆಲೆ ಇಳಿಕೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ
ಇದನ್ನೂ ಓದಿ: ರೆಮ್ಡೆಸಿವರ್ಗೆ ಪರ್ಯಾಯ ದೇಸಿ ಆಯುಧ್ ಅಡ್ವಾನ್ಸ್! ಔಷಧಿ ಪಡೆದ ವಾರದೊಳಗೆ ಸೋಂಕಿತರು ಗುಣಮುಖ ಎಂದ ಅಧ್ಯಯನ
Published On - 4:56 pm, Mon, 19 April 21