ರೆಮ್​ಡೆಸಿವರ್​​ಗೆ ಪರ್ಯಾಯ ದೇಸಿ ಆಯುಧ್​ ಅಡ್ವಾನ್ಸ್​! ಔಷಧಿ ಪಡೆದ ವಾರದೊಳಗೆ ಸೋಂಕಿತರು ಗುಣಮುಖ ಎಂದ ಅಧ್ಯಯನ

ರೆಮ್​ಡೆಸಿವರ್​​ಗೆ ಪರ್ಯಾಯ ದೇಸಿ ಆಯುಧ್​ ಅಡ್ವಾನ್ಸ್​! ಔಷಧಿ ಪಡೆದ ವಾರದೊಳಗೆ ಸೋಂಕಿತರು ಗುಣಮುಖ ಎಂದ ಅಧ್ಯಯನ
ಆಯುಧ್​ ಅಡ್ವಾನ್ಸ್​​

ಪ್ರಾಯೋಗಿಕ ಹಂತದಲ್ಲಿ 15 ಎಂಎಲ್​ ಆಯುಧ್ ಅಡ್ವಾನ್ಸ್ ಔಷಧಿಯನ್ನು ಕೊರೊನಾ ಸೋಂಕಿತರಿಗೆ ದಿನಕ್ಕೆ ನಾಲ್ಕು ಬಾರಿ ನೀಡಿದಾಗ ಅವರು ಕೇವಲ ನಾಲ್ಕು ದಿನಗಳಲ್ಲಿ ಗುಣಮುಖರಾಗುವ ಹಂತ ತಲುಪಿದ್ದಾರೆ.

Skanda

| Edited By: Lakshmi Hegde

Apr 19, 2021 | 8:43 AM


ಅಹಮದಾಬಾದ್: ಭಾರತದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಅತಿ ವೇಗವಾಗಿ ವ್ಯಾಪಿಸುತ್ತಿದ್ದು ಸೋಂಕಿತರ ಸಂಖ್ಯೆ ದಿನೇದಿನೇ ಉಲ್ಬಣಿಸುತ್ತಲೇ ಇದೆ. ಕಳೆದ ಬಾರಿಗಿಂತಲೂ ತುಸು ಹೆಚ್ಚೇ ಗಂಭೀರ ಸ್ವರೂಪ ತಾಳಿರುವ ಕೊವಿಡ್-19 ಪ್ರಾಣ ಭಯ ಸೃಷ್ಟಿಸುತ್ತಿದೆ. ಅಲ್ಲದೇ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ, ಆಮ್ಲಜನಕದ ಕೊರತೆ, ರೆಮ್​ಡೆಸಿವಿರ್ ಚುಚ್ಚುಮದ್ದುಗಳ ಕೊರತೆಯೂ ಬಾಧಿಸುತ್ತಿದ್ದು, ಕೊರೊನಾ ಲಸಿಕೆಯನ್ನೂ ಹೊರ ದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ದುಃಸ್ಥಿತಿ ಎದುರಾಗಿದೆ. ಇಂತಹ ಸಂಕಷ್ಟಕರ ಪರಿಸ್ಥಿತಿಯಲ್ಲಿ ಅಹಮಾದ್​ಬಾದ್​ನಲ್ಲಿ ಕೊವಿಡ್​ ರೋಗಿಗಳನ್ನು ಗುಣಪಡಿಸಬಲ್ಲ ಔಷಧಿಯೊಂದನ್ನು ತಯಾರಿಸಲಾಗಿದ್ದು. ‘ಆಯುಧ್ ಅಡ್ವಾನ್ಸ್’ ಎಂಬ ಈ ಔಷಧಿ ಹೊಸ ಆಶಾವಾದವನ್ನು ಮೂಡಿಸಿದೆ.

ಕೆಲ ನಿರ್ದಿಷ್ಟ ಗಿಡಮೂಲಿಕೆಗಳನ್ನು ಬಳಸಿ ತಯಾರಿಸಲಾದ ದ್ರವ ಸ್ವರೂಪದ ಆಯುಧ್ ಅಡ್ವಾನ್ಸ್ ಔಷಧಿ ಈಗಾಗಲೇ ಎರಡು ವೈದ್ಯಕೀಯ ಪ್ರಯೋಗಗಳಲ್ಲಿ ಯಶಸ್ವಿ ಫಲಿತಾಂಶವನ್ನು ನೀಡಿದೆ. ಅಹಮದಾಬಾದ್​ನ ಎರಡು ಪ್ರತ್ಯೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಸಲಾದ ವೈದ್ಯಕೀಯ ಪರೀಕ್ಷೆಯಲ್ಲಿ ಸದರಿ ಔಷಧಿಯನ್ನು ನೀಡಲಾದ ರೋಗಿಗಳ ದೇಹದಲ್ಲಿ ಕೇವಲ ನಾಲ್ಕು ದಿನಗಳ ಅವಧಿಯಲ್ಲಿ ವೈರಾಣು ಪ್ರಮಾಣ ಗಣನೀಯವಾಗಿ ಇಳಿಕೆಯಾಗಿರುವುದು ಕಂಡುಬಂದಿದೆ. ಅಲ್ಲದೇ ಈ ಪ್ರಾಯೋಗಿಕ ಪರೀಕ್ಷೆ ವೇಳೆ ಔಷಧಿಯಿಂದ ಯಾವುದೇ ಅಡ್ಡಪರಿಣಾಮ ಸಂಭವಿಸಿಲ್ಲ ಎಂಬ ಅಂಶವೂ ಗಮನಾರ್ಹವಾಗಿದೆ. ಆಯುಧ್ ಅಡ್ವಾನ್ಸ್ ಔಷಧಿ ಬಳಸಿ ಚಿಕಿತ್ಸೆ ನೀಡಲಾದ ರೋಗಿಗಳು ಕೊವಿಡ್ ಮುಕ್ತ ಆಗಿರುವುದಲ್ಲದೇ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದರ ಜತೆಗೆ ದೇಹದ ಉಷ್ಣಾಂಶ, ಉಸಿರಾಟದ ತೊಂದರೆ, ಕಫ ಇತ್ಯಾದಿ ಸಮಸ್ಯೆಗಳೂ ನಿಯಂತ್ರಣಕ್ಕೆ ಬಂದಿವೆ ಎನ್ನಲಾಗಿದೆ.

ವಿಜ್ಞಾನ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶ್ವದ ಪ್ರಮುಖ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾದ ಎಲ್ಸವೀರ್ ಪ್ರಕಟಿಸಿರುವ ಕಂಟೆಂಪರರಿ ಕ್ಲಿನಿಕಲ್ ಟ್ರಯಲ್ಸ್ ಕಮ್ಯುನಿಕೇಶನ್ ಎಂಬ ಪತ್ರಿಕೆಯಲ್ಲಿ ಸ್ವಲ್ಪ ಮಟ್ಟದ ಕೊರೊನಾ ಸೋಂಕಿನ ಲಕ್ಷಣ ಹೊಂದಿದವರಿಗೆ ಆಯುಧ್ ಅಡ್ವಾನ್ಸ್ ಔಷಧಿಯನ್ನು ಹೆಚ್ಚುವರಿ ಚಿಕಿತ್ಸೆಯಂತೆ ನೀಡುವುದು ಉತ್ತಮ ಹಾಗೂ ಪರಿಣಾಮಕಾರಿ ಎಂಬ ಅಭಿಪ್ರಾಯವನ್ನು ಮಂಡಿಸಲಾಗಿದೆ. ಅಲ್ಲದೇ ಇದಕ್ಕೆ ಸಂಬಂಧಿಸಿದ ಇನ್ನೊಂದು ಲೇಖನ ಅಮೆರಿಕಾ ಸರ್ಕಾರದ ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್​ಫರ್ಮೇಶನ್ – ನ್ಯಾಷನಲ್​ ಇನ್​ಸ್ಟಿಟ್ಯೂಟ್ ಆಫ್ ಹೆಲ್ತ್ ಎಂಬ ಜಾಲತಾಣದಲ್ಲಿಯೂ ಪ್ರಕಟಗೊಂಡಿದೆ.

ಆಯುಧ್ ಅಡ್ವಾನ್ಸ್​ಗೆ ಸಂಬಂಧಿಸಿದ ಮೊದಲ ವೈದ್ಯಕೀಯ ಪ್ರಯೋಗ ಪರೀಕ್ಷೆ 2020ರ ಅಕ್ಟೋಬರ್ ತಿಂಗಳಲ್ಲಿ ಅಹಮದಾಬಾದ್​ನ ಶ್ರೀಮತಿ ನತೀಬಾ ಹರ್ಗೋವಂದಸ್ ಲಕ್ಮಿಚಾಂದ್ ಮುನ್ಸಿಪಲ್ ಮೆಡಿಕಲ್ ಕಾಲೇಜು ಹಾಗೂ ಎಲ್ಲಿಸ್​ಬ್ರಿಡ್ಜ್​ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ವೈದ್ಯಕೀಯ ವಿಜ್ಞಾನ ಮತ್ತು ಅಧ್ಯಯನ ಸಂಸ್ಥೆಯಲ್ಲಿ ನಡೆದಿತ್ತು. ಅದಾದ ನಂತರ ಎರಡನೇ ವೈದ್ಯಕೀಯ ಪರೀಕ್ಷೆಯನ್ನು 2021ರ ಜನವರಿಯಲ್ಲಿ ಅಹಮದಾಬಾದ್​ನ ಸೋಲಾದಲ್ಲಿರುವ ಜಿಎಂಇಆರ್​ಎಸ್​ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಕೈಗೊಳ್ಳಲಾಗಿತ್ತು. ಈ ಎರಡು ವೈದ್ಯಕೀಯ ಪ್ರಯೋಗ ಪರೀಕ್ಷೆಗಳಲ್ಲೂ ಆಯುಧ್ ಅಡ್ವಾನ್ಸ್ ಔಷಧಿಯು ಅತ್ಯುತ್ತಮ ಫಲಿತಾಂಶವನ್ನು ನೀಡಿದೆ.

ಪ್ರಾಯೋಗಿಕ ಹಂತದಲ್ಲಿ 15 ಎಂಎಲ್​ ಆಯುಧ್ ಅಡ್ವಾನ್ಸ್ ಔಷಧಿಯನ್ನು ಕೊರೊನಾ ಸೋಂಕಿತರಿಗೆ ದಿನಕ್ಕೆ ನಾಲ್ಕು ಬಾರಿ ನೀಡಿದಾಗ ಅವರು ಕೇವಲ ನಾಲ್ಕು ದಿನಗಳಲ್ಲಿ ಗುಣಮುಖರಾಗುವ ಹಂತ ತಲುಪಿದ್ದಾರೆ. ಅಲ್ಲದೇ ಭಾರತ ಸರ್ಕಾರದ ಅಧೀನದಲ್ಲಿರುವ ಜೈವಿಕ ತಂತ್ರಜ್ಞಾನ ಇಲಾಖೆಯ ಪರಿವರ್ತನೀಯ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಪ್ರಕಾರ ಆಯುಧ್ ಅಡ್ವಾನ್ಸ್ ಔಷಧಿಯು ರೆಮ್​ಡೆಸಿವರ್​ಗಿಂತಲೂ ಮೂರುಪಟ್ಟು ಹೆಚ್ಚು ಪರಿಣಾಮಕಾರಿ ಎಂಬುದೂ ತಿಳಿದುಬಂದಿದೆ.

ಗುಜರಾತ್​ ರಾಜ್ಯದ ಶುಕ್ಲಾ ಅಶ್ರಲ್​ಎಂಪೆಕ್ಸ್ ಪ್ರೈವೇಟ್ ಲಿಮಿಟಿಡ್ ತಯಾರಿಸಿರುವ ಆಯುಧ್ ಅಡ್ವಾನ್ಸ್ ಔಷಧಿಯಲ್ಲಿ 21 ವಿವಿಧ ಬಗೆಯ ಗಿಡಮೂಲಿಕೆಗಳಿಂದ ಸಂಗ್ರಹಿಸಲಾದ ಅಂಶಗಳಿದ್ದು, ಈ ದ್ರವ ರೂಪದ ಔಷಧಿಯು ದೇಹದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ಆಯುರ್ವೇದಕ್ಕೆ ಸಂಬಂಧಿಸಿದ ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಶುಕ್ಲಾ ಸಂಸ್ಥೆಯ ನಿರ್ವಹಣಾ ನಿರ್ದೇಶಕ ದೀಪ್​ ಶುಕ್ಲಾ ಅವರ ಪ್ರಕಾರ ಲಸಿಕೆ ಏನನ್ನು ಮಾಡದೇ ಉಳಿಸುತ್ತದೋ ಆ ಕೆಲಸವನ್ನು ಆಯುಧ್ ಅಡ್ವಾನ್ಸ್ ಪೂರ್ಣಗೊಳಿಸಲಿದೆ.

ಇದನ್ನೂ ಓದಿ:
ಜನರು ತಾವಾಗಿಯೇ ರೆಮ್‌ಡೆಸಿವಿರ್ ಕೊಳ್ಳಬಾರದು, ಕೃತಕ ಉಸಿರಾಟ ಹೊಂದಿದ ರೋಗಿಗಳಿಗೆ ವೈದ್ಯರು ನೀಡುವ ಔಷಧಿ ಅದು: ಡಾ. ವಿ.ಕೆ.ಪೌಲ್ 

ರೆಮ್​ಡೆಸಿವಿರ್ ಚುಚ್ಚುಮದ್ದಿನ ಉತ್ಪಾದನೆ ಹೆಚ್ಚಳ; ಬೆಲೆ ಇಳಿಕೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ

(Aayudh advance is more effective than Remdesivir to cure Covid 19 says new study)

Follow us on

Related Stories

Most Read Stories

Click on your DTH Provider to Add TV9 Kannada